ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಕೋ ಟೂರಿಸಂ- ಇಕೋ ಟೆರರಿಸಂ!

Last Updated 7 ಜುಲೈ 2018, 20:31 IST
ಅಕ್ಷರ ಗಾತ್ರ

ಅಂವ ಕೊಂಡ ಎಂದೊಡನೇ ನಾನೂ ಕೊಳ್ಳಬೇಕು. ಎಲ್ಲಾ ರೀತಿಯ ಐಷಾರಾಮಿ ಸವಲತ್ತುಗಳು ನನಗೂ ಬೇಕು. ನನಗಲ್ಲದೆ, ನನ್ನ ಮಕ್ಕಳಿಗೆ, ಸಾಧ್ಯವಾದರೆ ಅವರ ಮಕ್ಕಳಿಗೆ ಬೇಕು ಎಂಬ ಹಪಾಹಪಿ, ಕೂಡಿಡುವ ದುರ್ಬುದ್ಧಿ ಮನುಷ್ಯನಿಗೆ ಮಾತ್ರ ಸಾಧ್ಯ.

ಕಷ್ಟಪಟ್ಟು ಓದಿ ದೊಡ್ಡ ಕೆಲಸ ಹಿಡಿದು ಮಹಾನಗರಗಳಿಗೆ ವಲಸೆ ಹೋಗುವುದು; ಅಲ್ಲಿನ ವೀಕೆಂಡ್, ಮಾಲ್‌ಗಳ ಮಜಾ ತಾತ್ಕಾಲಿಕವಾಗಿದ್ದು ಎಂದು ಅರಿವಾಗಿ ಹಳ್ಳಿಯಲ್ಲಿ ನೈಸರ್ಗಿಕವಾಗಿ ಸಿಗುವ ನೀರು, ಗಾಳಿಗಳಿಂದ ಸಿಗುವ ಆರೋಗ್ಯ- ನೆಮ್ಮದಿಗಾಗಿ ಮತ್ತೆ ಮರಳಿ ಬರುವುದು. ಹಾಗೆ ಬರುವಾಗ ಇನ್ನಷ್ಟು ಜನಸಾಗರವನ್ನು ಎಳೆದು ತರುವುದು– ಈ ಪ್ರಕ್ರಿಯೆಯಿಂದಾಗಿ ಮಲೆನಾಡು ನಲುಗುತ್ತಿದೆ.

ಹೀಗೆ ಪೇಟೆಯ ಜಂಜಾಟದಿಂದ ಅಸಹನೆಗೊಂಡ ಜನಪ್ರವಾಹ ಮತ್ತೆ ಹಳ್ಳಿಗಾಡುಗಳ ಗುಡ್ಡ- ಬೆಟ್ಟಕ್ಕೆ ಹರಿದು ಬರುವ ಪ್ರಕ್ರಿಯೆ ಮತ್ತಷ್ಟು ಅಭಿವೃದ್ಧಿ ಬೇಡುತ್ತದೆ. ಬರಲು ಅಗಲವಾದ ರಸ್ತೆ ಬೇಕು. ಅವರಿಗೆ ತಂಗಲು ರೆಸಾರ್ಟ್‌ಗಳು, ಹೋಟೆಲ್‌ಗಳು ಇತ್ಯಾದಿ. ಹಸಿರಿಗೆ ಮರುಳಾಗಿ ಬರುವ ಈ ಪ್ರಕ್ರಿಯೆ ಮತ್ತಷ್ಟು ಹಸಿರನ್ನು ನಾಶ ಮಾಡುತ್ತದೆ. ಇದಕ್ಕೊಂದು ಸುಲಭದ ದಾರಿಯನ್ನು ದೊಡ್ಡಮಟ್ಟದ ಅಧಿಕಾರಿಗಳು ಹಾಗೂ ಸರ್ಕಾರಗಳು ಕಂಡುಕೊಂಡು ಅದಕ್ಕೊಂದು ಸೆಳೆಯುವ ಹೆಸರನ್ನೂ ಇಟ್ಟಿದ್ದಾರೆ. ಅದೇ ಇಕೋ ಟೂರಿಸಂ ಅಥವಾ ಪರಿಸರ ಪ್ರವಾಸೋದ್ಯಮ.

ಈ ನವಕಾಲದ ಉದ್ಯಮದಿಂದಾಗಿ ಹಳ್ಳಿಗಳ ಆರ್ಥಿಕ ಅಭಿವೃದ್ಧಿ ಆಗುತ್ತದೆ. ಉದ್ಯೋಗ ಸೃಷ್ಟಿಯಾಗುತ್ತದೆ. ರೈತರ ಬೆಳೆಗೆ ಒಳ್ಳೆಯ ಬೆಲೆ ಬರುತ್ತದೆ ಎಂಬ ಮೇಕಪ್ ಮಾಡುತ್ತಾರೆ. ಕಪ್ಪಗಿದ್ದದ್ದನ್ನು ಬೆಳ್ಳಗೆ ಮಾಡುವ ಅಥವಾ ಬೆಳ್ಳಗಿದ್ದದ್ದನ್ನು ಕರ್ರಗೆ ಮಾಡುವ ಹಾಗೂ ಇದರಿಂದಾಗಿ ಪರೋಕ್ಷ ಲಾಭ ಪಡೆಯುವ ಹೊಸ ಬಗೆಯ ಹುನ್ನಾರ ಇದು.

ಪರಿಶುದ್ಧವಾಗಿದ್ದ ಕೊಡಚಾದ್ರಿ ಗುಡ್ಡದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಗೂ ಗಾಜಿನ ಬಾಟಲುಗಳು, ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳು, ಬಿಯರ್ ಬಾಟಲಿನ ಮುಚ್ಚಳಗಳು, ಹರಿದ ಬೂಟುಗಳು, ಹರಕು ಬಟ್ಟೆಗಳು, ಮುರುಕು ಕೊಡೆಗಳು ಜಮೆಯಾಗಿದ್ದು ಹೇಗೆ ಎಂದರೆ ಇದಕ್ಕೆ ಇಕೋ ಟೂರಿಸಂ ಕಾರಣ ಯಾವುದೇ ಅನುಮಾನವಿಲ್ಲದೇ ಹೇಳಬಹುದು. ಪರಿಸರ ಪ್ರವಾಸೋದ್ಯಮದಲ್ಲಿ ಹೇರಳ ಹಣವಿದೆ ಎಂದರಿತ ಸರ್ಕಾರಗಳು ಹಾಗೂ ಆಡಳಿತ ಯಂತ್ರಗಳು ಯಾವುದೇ ನಿಯಂತ್ರಣವಿಲ್ಲದ- ನಿರ್ಬಂಧವಿಲ್ಲದ ಅಥವಾ ಕಠಿಣವಾದ ನೀತಿ- ನಿಯಮಗಳಿಲ್ಲದ ನವೋದ್ಯಮಗಳಿಗೆ ರತ್ನಗಂಬಳಿಗಳನ್ನು ಹಾಕಿಯೇ ಸ್ವಾಗತಿಸಿದರು.

ಪಶ್ಚಿಮಘಟ್ಟಗಳ ಪರಿಶುದ್ಧ ಅರಣ್ಯದ ನಡುವೆ ಗಾಜಿನ ಬಾಟಲಿಗಳ ಠಳ್ ಶಬ್ದ ಇಲ್ಲಿನ ವನ್ಯಜೀವಿಗಳ ಬದುಕಿಗೆ ಧಕ್ಕೆ ತಂದಿತು. ಕೇರಳದಲ್ಲಿ ಕಾಡಾನೆಯ ಲದ್ದಿಯಲ್ಲಿ ಪ್ಲಾಸ್ಟಿಕ್ ಕಂಡು ಬಂದಿದೆಯೆಂದರೆ, ನಮ್ಮ ಮನೋಭಾವ ಎಷ್ಟು ಅನೈತಿಕತೆಯಿಂದ ಕೂಡಿದೆ ಎಂದು ಲೆಕ್ಕ ಹಾಕಬಹುದು. ನೀವೊಮ್ಮೆ ಆಗುಂಬೆ ಘಾಟಿಯತ್ತ ಕಣ್ಣು ಹಾಯಿಸಿದರೆ ಸಾಕು, ಅಲ್ಲೊಂದು ವಿಚಿತ್ರ ಸನ್ನಿವೇಶ ಕಾಣಸಿಗುತ್ತದೆ. ಕ್ಯಾಮೆರಾಗಳನ್ನು ಹೊತ್ತುಕೊಂಡ ವನ್ಯಜೀವಿ ಛಾಯಾಗ್ರಾಹಕರು ಪಶ್ಚಿಮಘಟ್ಟಗಳಿಗೆ ಸೀಮಿತವಾಗಿರುವ ಸಿಂಹಬಾಲದ ಸಿಂಗಳೀಕಗಳ ಚಿತ್ರ ತೆಗೆಯುವುದನ್ನೂ ಹಾಗೂ ಅವುಗಳಿಗೆ ಹಣ್ಣು ನೀಡುವ ಪ್ರವಾಸಿಗರನ್ನೂ ಕಾಣಬಹುದು.

ಅಳಿವಿನಂಚಿನಲ್ಲಿರುವ ಈ ವಾನರ ಪೀಳಿಗೆ ಇಷ್ಟು ಸುಲಭವಾಗಿ ನಿಮಗೆ ನೋಡಲಿಕ್ಕೆ ಸಿಕ್ಕಿದರೆ ನೀವೇ ಧನ್ಯರು ಎಂದು ಅಂದುಕೊಳ್ಳಬಹುದು. ಆದರೆ, ಇದರ ಹಿಂದಿನ ದುರಂತ ಕತೆ ಬೇರೆಯೇ ಇದೆ. ಸಾಮಾನ್ಯವಾಗಿ ಜನವಸತಿಯಿಲ್ಲದ ದಟ್ಟಾರಣ್ಯ ಪ್ರದೇಶದಲ್ಲಿ ಕಂಡು ಬರುವ ಈ ಸಿಂಹಬಾಲದ ಸಿಂಗಳೀಕಗಳು ಅತ್ಯಂತ ನಾಚಿಕೆ ಹಾಗೂ ಹೆದರಿಕೆ ಸ್ವಭಾವ ಹೊಂದಿವೆ. ಸುಮಾರು 80–90 ಜಾತಿಯ ಮರಗಳ ಹಣ್ಣು, ಎಲೆ, ಚಿಗುರು ಇವುಗಳ ಬದುಕಿಗೆ ಅವಶ್ಯಕ.

ಆಗುಂಬೆ ಭಾಗದಲ್ಲಿ ಈ ಕುಟುಂಬದ ಸದಸ್ಯರ ಸಂಖ್ಯೆ 35. ಈ ಕುಟುಂಬದ ಎಲ್ಲಾ ಸದಸ್ಯರೂ ಪರಿಸರ ಪ್ರವಾಸಿಗರ ಮೋಜಿಗೆ ಸಿಲುಕಿ ತಮ್ಮತನವನ್ನು ಕಳೆದುಕೊಂಡು ಆಹಾರಕ್ಕಾಗಿ ಭಿಕ್ಷೆ ಬೇಡುವ ಸ್ಥಿತಿಗೆ ಬಂದಿವೆ. ತಮ್ಮ ಸ್ವಾಭಾವಿಕವಾದ ಗುಣವನ್ನು ಕಳೆದುಕೊಂಡು ಸುಲಭವಾಗಿ ಸಿಗುವ ಕುರುಕಲು ತಿಂಡಿ, ವಿಷಪೂರಿತ ಅನಾನಸ್, ಪಪ್ಪಾಯಿ ಹಣ್ಣಿನ ದಾಸರಾಗಿವೆ. ಇಕೋ ಟೂರಿಸಂ ಪರಿವರ್ತನೆಯಾಗಿ ಇಕೋ ಟೆರರಿಸಂ ಆದ ಕತೆಯಿದು!

1977ರಲ್ಲಿ ಅಮೆರಿಕದಲ್ಲಿ ಮರ ಕಡಿಯುವವರ ವಿರುದ್ಧ ಒಂದು ಹೊಸ ತರಹದ ಚಳವಳಿ ಪ್ರಾರಂಭವಾಯಿತು. ಮರದ ಕಾಂಡಗಳಿಗೆ ದೊಡ್ಡ ಮೊಳೆಯನ್ನು ಹೊಡೆದಿಡುವುದು. ಮರ ಕಡಿತ ಮಾಡುವಾಗ ಅವರ ಯಾಂತ್ರೀಕೃತ ಗರಗಸಗಳು ತುಂಡಾಗಿ ಮರ ಕಡಿಯುವವರನ್ನು ತೀವ್ರವಾಗಿ ಗಾಯಗೊಳಿಸುತ್ತಿದ್ದವು. ಇದರಿಂದ ಗುತ್ತಿಗೆದಾರರಿಗೆ ಲುಕ್ಸಾನಿನ ಜೊತೆ ಕಿರಿಕಿರಿಯಾಗುತ್ತಿತ್ತು. ಅರ್ಥ್ ಫಸ್ಟ್ ಅಥವಾ ಭೂಮಿ ಮೊದಲು ಎನ್ನುವ ಈ ಸಂಘಟನೆಯ ಸದಸ್ಯರು ಪರಿಸರ ನಾಶ ಮಾಡುವವರ ವಿರುದ್ಧ ಈ ತರಹದ ಹೋರಾಟ ಪ್ರಾರಂಭಿಸಿದರು.

ಪರಿಸರ ಉಳಿಸುವ ಪಾರಂಪರಿಕ ಅಥವಾ ಗ್ರೀನ್‌ಪೀಸ್ ಮಾದರಿಯ ಅಹಿಂಸಾ ಮಾರ್ಗದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಪರಿಸರ ಹಾಳು ಮಾಡುವ ರಾಜಕಾರಣಿಗಳನ್ನು ಹಾಗೂ ಕಂಪನಿಗಳನ್ನು ಬಗ್ಗಿಸಲು ಹಿಂಸಾತ್ಮಕ ಮಾದರಿಯೇ ಸರಿಯಾದ ರೀತಿ ಎಂಬುದು ಈ ಪರಿಸರ ಮೂಲಭೂತವಾದಿಗಳ ಖಚಿತವಾದ ನಿಲುವು.

ಯಾರ ಮೇಲೆಯೂ ವೈಯಕ್ತಿಕವಾದ ದ್ವೇಷವಿರದ ಈ ಸಂಘಟನೆಗಳು ರಸ್ತೆಯನ್ನು ಅಗೆಯುವುದು, ಮನೆಗಳನ್ನು ಸುಡುವುದು, ಸತ್ತ ಪ್ರಾಣಿಗಳನ್ನು ಕಚೇರಿಯಲ್ಲಿ ಎಸೆಯುವುದು, ಕೊಳಚೆ ನೀರು ಹೋಗುವ ಪೈಪ್‌ಗಳನ್ನು ತಿರುಗಿಸುವುದು ಇತ್ಯಾದಿಗಳನ್ನು ಮಾಡುತ್ತವೆ. 40 ವರ್ಷಗಳಲ್ಲಿ 1100 ಇಂತಹ ಘಟನೆಗಳು ಅಮೆರಿಕದಲ್ಲಿ ನಡೆದಿವೆ.

ಇಕೋಟೆರರಿಸಂ ಎಂದು ಗೂಗಲ್ ಮಾಡಿದರೆ ಇಂತಹ ಅನೇಕ ಸಂಗತಿಗಳು ನಿಮಗೆ ಸಿಗುತ್ತವೆ. ಅಂತೆಯೇ ಮಲೆನಾಡಿನ ಅಲ್ಪಪ್ರಮಾಣದ ಯುವಪೀಳಿಗೆಯಲ್ಲಿ ಪರಿಸರ ಚೇತನ- ಚಿಂತನೆ ಜಾಗೃತವಾಗುತ್ತಿದೆ. ಮೇಲ್ನೋಟಕ್ಕೆ ಇದು ಎದ್ದು ಕಾಣದಿದ್ದರೂ, ಹೇಗಾದರೂ ಮಾಡಿ ಅಮೂಲ್ಯವಾದ ಪಶ್ಚಿಮಘಟ್ಟಗಳ ಜೀವವೈವಿಧ್ಯವನ್ನು ಉಳಿಸಲೇಬೇಕೆಂಬ ಪಣ ತೊಟ್ಟ ಯುವಕರಿದ್ದಾರೆ.

ಪರಿಸರ ಹಾಗೂ ಜೀವವೈವಿಧ್ಯ ರಕ್ಷಣೆ ಮಾಡುವ ಹಟ ಹೊತ್ತ ಯುವಕರನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಯಜಮಾನರ ಕೊರತೆ ಇದೆ. ಹಗಲೂ, ರಾತ್ರಿ ಕಾಡಿನ ಕುರಿತಾಗಿಯೇ ಚಿಂತಿಸುವ ಈ ಯುವಕರಲ್ಲಿ ಅಸಹನೆಯ ಮಟ್ಟ ಹೆಚ್ಚುತ್ತಿದೆ. ಕಾರ್ಯನಿರ್ವಹಿಸಬೇಕಾದ ಇಲಾಖೆಗಳು ಮಲಗಿಕೊಂಡಿದ್ದು ಅವರಿಗೆ ಸಿಟ್ಟು ತರಿಸುವ ವಿಷಯವಾಗಿದೆ. ಸದ್ಯಕ್ಕೆ ಇವರ ಕೈಯಲ್ಲಿ ಪೆನ್ನು- ಕ್ಯಾಮೆರಾಗಳಂತಹ ಸಾತ್ವಿಕ ಆಯುಧಗಳಿವೆ.

ಸಕಾಲದಲ್ಲಿ ಪಶ್ಚಿಮಘಟ್ಟಗಳನ್ನು ಆಳುವ ಆಡಳಿತ ಎಚ್ಚೆತ್ತುಕೊಳ್ಳದಿದ್ದಲ್ಲಿ ಈ ಅಂತರ್ಗತವಾಗಿ ಹರಿಯುತ್ತಿರುವ ಪರಿಸರ ಸಂರಕ್ಷಣೆ ಹಿಂಸೆಗೆ ತಿರುಗುವುದರಲ್ಲಿ ಯಾವುದೇ ಸಂಶಯ ಬೇಡ. ಬೆಂಗಳೂರಿನಿಂದ ಅಥವಾ ಇನ್ಯಾವುದೇ ಮಹಾನಗರಗಳಿಂದ ಬಂದು ಇಲ್ಲಿನ ಪರಿಸರ ಹಾಳು ಮಾಡುವ ಯುವಕರ ತಂಡದ ಆಟಾಟೋಪವನ್ನು ಸಹಿಸುವ ಸ್ಥಿತಿಯಲ್ಲಿ ಮಲೆನಾಡು ಈಗಿಲ್ಲ. ಬರೀ ಬುದ್ಧಿಮಾತು, ಜಾಗೃತಿ ಕೆಲಸಕ್ಕೆ ಬರುತ್ತಿಲ್ಲವೆಂಬ ಗೊಣಗು ಮುಂದೊಂದು ದಿನ ಇವರನ್ನು ಹಿಂಸೆಗೆ ಪ್ರಚೋದಿಸಬಹುದು. ನಾಶವಾಗುತ್ತಿರುವ ಸಿಂಗಳೀಕಗಳ ಗೋಳಿಗೆ ಇವರ ಉತ್ತರ ಸಾತ್ವಿಕವಾಗಿ ಇರುವುದಿಲ್ಲವೆಂಬುದನ್ನು ಈಗಲೇ ಗ್ರಹಿಸುವುದು ಒಳಿತು.

ಸರ್ಕಾರಗಳ ಮತಪ್ರಿಯ ಯೋಜನೆಗಳನ್ನು ಹಾಗೂ ಮತ್ತುಪ್ರಿಯ ಪ್ರವಾಸಿಗರ ಧೋರಣೆಯನ್ನು ವಿರೋಧಿಸುವ ಯುವಪಡೆ ಭ್ರಷ್ಟ ರಾಜಕಾರಣಿಗಳಿಗೆ ಮತ ಹಾಕದ್ದಿದ್ದರಾಯಿತು ಎಂಬ ಮನೋಭಾವನೆಗಿಂತ ಮುಂದೆ ಸಾಗುತ್ತಿದ್ದಾರೆ. ಅಳಿಯುತ್ತಿರುವ ಜೀವವೈವಿಧ್ಯದ ಕುರಿತಾಗಿ ಮಾತ್ರ ಅವರ ಕಾಳಜಿ ಸೀಮಿತವಾಗುತ್ತಿದೆ. ಜನಕೇಂದ್ರಿತ ಅಭಿವೃದ್ಧಿಯತ್ತ, ಪಶ್ಚಿಮಘಟ್ಟದ ಸಂಪತ್ತನ್ನು ಲೂಟಿ ಮಾಡುತ್ತಿರುವ ಸರ್ಕಾರಗಳ ಧೋರಣೆಯತ್ತ ಅವರ ಅಹಿಂಸಾವಾದದ ಪೊರೆ ಹರಿಯುತ್ತಿದೆ. ಒಮ್ಮೆ ಅಹಿಂಸಾವಾದದಿಂದ ಹಿಂಸೆಯತ್ತ ತಿರುಗಿದರೆ, ಯಾರೂ ಊಹಿಸಲೂ ಆಗದ ಪ್ರಕ್ರಿಯೆಗಳು ಇಲ್ಲಿ ನಡೆಯಲಿವೆ.

ದುಡ್ಡು ಮಾಡುವ ಇಕೋ ಟೂರಿಸಂ ಎಂಬ ಬ್ರಹ್ಮರಾಕ್ಷಸನ ದಾರುಣ ಅಂತ್ಯಕ್ಕೆ ಮುನ್ನುಡಿಯಾಗಲಿದೆ.ಸರ್ಕಾರಗಳು ಸಕಾಲದಲ್ಲಿ ಎಚ್ಚೆತ್ತುಕೊಳ್ಳಬೇಕು. ಹಾಲಿ ಇರುವ ಪರಿಸರ ಸಂರಕ್ಷಣೆಯ ಎಲ್ಲಾ ಕಾನೂನುಗಳ ಸರಿಯಾದ ಅನುಷ್ಠಾನವಾಗಬೇಕು. ಸಂದರ್ಭ ಬಂದಲ್ಲಿ ಇರುವ ಕಾನೂನುಗಳನ್ನು ಇನ್ನೂ ಬಿಗಿಯಾಗಿಸಬೇಕು. ರಕ್ಷಣೆಗಾಗಿಯೇ ಇನ್ನಷ್ಟು ಜನರನ್ನು ಅರಣ್ಯ ಇಲಾಖೆಯೇ ನೇಮಕ ಮಾಡಬೇಕು. ಮಾಲಿನ್ಯ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ಸಿಗಬೇಕು. ಪಶ್ಚಿಮಘಟ್ಟವನ್ನು ಒಂದು ಹೃದಯದಂತೆ ಕಾಪಾಡಬೇಕು. ಇಲ್ಲಿನ ಇರುವೆಗೂ ಭಂಗ ಬರದಂತೆ ನಡೆದುಕೊಳ್ಳಬೇಕು. ಶರಾವತಿ ಅಂತರ್ಗತ ವಿದ್ಯುತ್ ಯೋಜನೆಯಾಗಲಿ, ಜೋಗದ ಸೌಂದರ್ಯವನ್ನೇ ನುಂಗುವ ಸರ್ವಋತು ಜಲಪಾತವಾಗಲಿ, ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಮೂರ್ಖ ಯೋಜನೆಯಾಗಲಿ ನಮಗೆ ಬೇಡ.

ನಮಗೆ ಸಿಂಹಬಾಲದ ಸಿಂಗಳೀಕನ ಗೂಕ್... ಗೂಕ್... ಕೂಗು ಬೇಕು. ಮಂಗಟ್ಟೆಯ ಮಹಾನಾದ ಬೇಕು. ಕ್ಯಾಸಳಿನ ಚಂಡೆಯಂತಹ ಕೂಗು ಇರಬೇಕು. ನಮ್ಮ ಶರಾವತಿ ಹಿನ್ನೀರಿನಲ್ಲಿ ನೀರುನಾಯಿಗಳಿರಬೇಕು. ಇಲ್ಲಿಗೇ ಸೀಮಿತವಾದ ಹತ್ತು ಹಲವು ತರಹದ ಮೀನುಗಳಿರಬೇಕು ಎಂಬೆಲ್ಲಾ ಬೇಡಿಕೆ ಈ ಬಿಸಿರಕ್ತದ ಯುವಕರದ್ದು. ಪೆನ್ನು, ಕ್ಯಾಮೆರಾ ಇತ್ಯಾದಿ ಸಾತ್ವಿಕ ಆಯುಧಗಳ ಬದಲಿಗೆ ದೊಣ್ಣೆ- ಕತ್ತಿ- ಕುಡುಗೋಲು- ಬಂದೂಕುಗಳು ಬೇಡ ಎಂಬುದೂ ನಮ್ಮ ಆಶಯ. ಇವರ ಪರಿಸರ ಉಳಿಸುವ ಸಾತ್ವಿಕ ಬೇಡಿಕೆಗೆ ಆಳುವವರು ಸ್ಪಂದಿಸಬೇಕು. ಪರಿಸರ ಸಂರಕ್ಷಣೆಯಂತಹ ಉನ್ನತ ಆಲೋಚನೆಯುಳ್ಳ ಪ್ರಕ್ರಿಯೆಗಳು ಇಕೋ ಟೆರರಿಸಂ ಹೆಸರಿನಲ್ಲಿ ಸಂಭಾವ್ಯ ಹಿಂಸಾರೂಪ ಪಡೆಯದಂತೆ ತಡೆಯುವುದು ಈಗಿನ ತುರ್ತು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT