ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬಿಸೋಡ್‌: ಹಣ ಇದೆ... ಹೂರಣ?

Last Updated 7 ಜುಲೈ 2018, 20:31 IST
ಅಕ್ಷರ ಗಾತ್ರ

ವೆಬ್‌ ಮೂಲಕ ಪ್ರಸಾರ ಆಗುವ ಧಾರಾವಾಹಿ ಎಂಬುದು ಇಂಟರ್ನೆಟ್‌ನ ವ್ಯಾಪ್ತಿ ವಿಸ್ತಾರವಾಗುತ್ತಿರುವ ಹೊತ್ತಿನಲ್ಲೇ ಹುಟ್ಟಿಕೊಂಡಿರುವ ಮನರಂಜನಾ ಮಾಧ್ಯಮ. ಸಿದ್ಧಸೂತ್ರಗಳಿಗೆ ಹೊರತಾದ ಕಥೆಗಳನ್ನು ಪುಟ್ಟ ಪುಟ್ಟ ಕಂತುಗಳಲ್ಲಿ ವೀಕ್ಷಕರಿಗೆ ತಲುಪಿಸುವ ಅವಕಾಶವನ್ನು ವೆಬ್‌ ಧಾರಾವಾಹಿಗಳು ಸೃಜನಶೀಲ ನಿರ್ದೇಶಕರಿಗೆ ಕೊಡುತ್ತಿವೆ. ಎಲ್ಲೆಡೆ ಜನಪ್ರಿಯ ಆಗುತ್ತಿರುವ ಇವುಗಳ ಸೊಗಸನ್ನು ಕನ್ನಡದ ವೀಕ್ಷಕ ಎಷ್ಟರಮಟ್ಟಿಗೆ ಅನುಭವಿಸಬಹುದು? ಇಲ್ಲಿದೆ ಒಂದು ಹುಡುಕಾಟ...

ನಾ ನು ಹೀರೊ ಆಗುವ (ಅಂದರೆ ಸಿನಿಮಾಗಳಲ್ಲಿ ನಾಯಕ ನಟ ಆಗುವ) ಉದ್ದೇಶದಿಂದ ಕನ್ನಡ ಚಿತ್ರರಂಗಕ್ಕೆ ಬಂದೆ. ಆದರೆ ನಾನು ಅಂದುಕೊಂಡಿದ್ದು ಸಾಧ್ಯವಾಗಲಿಲ್ಲ. ನಾವು ಸಾಮಾನ್ಯವಾಗಿ ಹಿರಿತೆರೆ ಎಂದು ಕರೆಯುವಲ್ಲಿ ಮಾಡಲು ಸಾಧ್ಯವಾಗದ್ದನ್ನು ಇಂಟರ್ನೆಟ್‌ ಮೂಲಕವೇ ಪ್ರಸಾರ ಆಗುವ ವೆಬಿಸೋಡ್‌ಗಳಲ್ಲಿ ಪ್ರಾಯೋಗಿಕವಾಗಿಯಾದರೂ ಮಾಡುವ ಅವಕಾಶ ಇದೆ. ಹಾಗಾಗಿ ನಾನು ಹಣ ಹೂಡಿಕೆ ಮಾಡಿ, ಇಂಟರ್ನೆಟ್‌ ಮೂಲಕ ಪ್ರಸಾರ ಆಗುವ ಮನರಂಜನಾ ಕಾರ್ಯಕ್ರಮ ರೂಪಿಸಿದೆ. ಒಂದಿಷ್ಟು ಜನ ಇದನ್ನು ಇಷ್ಟಪಟ್ಟಿದ್ದಾರೆ ಕೂಡ. ಅಷ್ಟು ಸಾಕು...

ಈ ಸಾಲುಗಳು ಕನ್ನಡದ ಕಲಾವಿದರೊಬ್ಬರು ಹೇಳಿದ್ದು...

***

‘ಆನ್‌ಲೈನ್‌ ಮೂಲಕ ಮನರಂಜನಾ ಕಾರ್ಯಕ್ರಮಗಳನ್ನು ಬಿತ್ತರಿಸುವ ದೈತ್ಯ ಕಂಪನಿ ನೆಟ್‌ಫ್ಲಿಕ್ಸ್‌ ಕಾರ್ಯಕ್ರಮಗಳನ್ನು ರೂಪಿಸುವುದಕ್ಕೆ ಈ ವರ್ಷ ₹ 54 ಸಾವಿರ ಕೋಟಿ (8 ಬಿಲಿಯನ್ ಅಮೆರಿಕನ್ ಡಾಲರ್) ವೆಚ್ಚ ಮಾಡಲಿದೆ ಎಂಬ ಮಾತು ಇದೆ. ಭಾರತದ ಆನ್‌ಲೈನ್‌ ಮನರಂಜನಾ ಮಾರುಕಟ್ಟೆಯ ಬೇಡಿಕೆ ಪೂರೈಸುವುದು ಕೂಡ ನೆಟ್‌ಫ್ಲಿಕ್ಸ್‌ನ ಪ್ರಮುಖ ಉದ್ದೇಶಗಳಲ್ಲಿ ಒಂದು.’

ಮೇಲಿನ ಸಾಲುಗಳು ನೆಟ್‌ಫ್ಲಿಕ್ಸ್‌ ಕಂಪನಿಯ ಹಿರಿಯ ಅಧಿಕಾರಿ ಟೆಡ್‌ ಸರಂಡೊಸ್ ಅವರು ಆಡಿರುವ ಮಾತುಗಳು ಎಂದು ಪತ್ರಿಕೆಯೊಂದರಲ್ಲಿ ವರದಿಯಾಗಿವೆ.

***

ಕನ್ನಡದ ಕಲಾವಿದರೊಬ್ಬರು ಆಡಿದ ಮಾತುಗಳನ್ನು ಹಾಗೂ ಜಾಗತಿಕ ಮಟ್ಟದ ದೈತ್ಯ ಕಂಪನಿಯೊಂದು ಹೂಡಿಕೆ ಮಾಡಲು ಉದ್ದೇಶಿಸಿರುವ ಹಣದ ಮೊತ್ತದ ವಿವರವನ್ನು ಒಂದಾದ ನಂತರ ಒಂದರಂತೆ ಉಲ್ಲೇಖಿಸಿರುವುದಕ್ಕೆ ಕಾರಣಗಳಿವೆ. ವೆಬಿಸೋಡ್‌ ಕ್ಷೇತ್ರ ಹಣಕಾಸಿನ ದೃಷ್ಟಿಯಿಂದ ಎಷ್ಟು ಬೃಹತ್ ಆಗಿದೆ ಎಂಬುದನ್ನು ಉದ್ದೇಶಿತ ಹೂಡಿಕೆಯ ಮೊತ್ತವು ತಿಳಿಸುತ್ತಿದೆ. ಹಾಗೆಯೇ, ಮೇಲೆ ಹೇಳಿದ ಕಲಾವಿದ ಆಡಿದ ಮಾತುಗಳು ಕಾರ್ಯಕ್ರಮಗಳನ್ನು ಭಿನ್ನವಾಗಿ ರೂಪಿಸುವ ಸಾಧ್ಯತೆಗಳನ್ನು ಸೂಚಿಸುತ್ತದೆ. ಅತ್ತೆ– ಸೊಸೆ ಜಗಳವನ್ನೇ ಕೇಂದ್ರವಾಗಿಟ್ಟುಕೊಂಡು ಹೊಸೆದ ಧಾರಾವಾಹಿಗಳನ್ನು, ನೂರೆಂಟು ಅಡೆತಡೆಗಳನ್ನು ಮೀರಿಯೂ ನಾಯಕ– ನಾಯಕಿಯ ವಿವಾಹ ಸಾಧ್ಯವಾಗುತ್ತದೆಯಾ ಎಂಬ ಪ್ರಶ್ನೆಯನ್ನೇ ಒಂದಾದ ನಂತರ ಒಂದು ಕಂತುಗಳಲ್ಲಿ ತೋರಿಸುವ ಧಾರಾವಾಹಿಗಳನ್ನು ನೋಡಿ ನೋಡಿ ಸುಸ್ತಾದ ವೀಕ್ಷಕರಿಗೆ ಹೊಸದೇನೋ ಬೇಕಾಗಿದೆ. ಹೊಸ ಕಾಲದ ವೀಕ್ಷಕ (ಅಥವಾ ವೆಬ್‌ ಕಂಟೆಂಟ್‌ ಕಂಪನಿಗಳ ಭಾಷೆಯಲ್ಲಿ ಕರೆಯುವುದಾದರೆ ‘ಗ್ರಾಹಕ’) ಆ ಹೊಸದನ್ನು ಈಗ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಂ ವಿಡಿಯೊ, ವೂಟ್‌, ಆಲ್ಟ್‌ ಬಾಲಾಜಿಯಂತಹ ಆನ್‌ಲೈನ್‌ ಮನರಂಜನಾ ವೇದಿಕೆಗಳಲ್ಲಿ ಕಂಡುಕೊಂಡಿದ್ದಾನೆ.

ಟಿ.ವಿ. ಮೂಲಕ ಪ್ರಸಾರ ಆಗುವ ಮನರಂಜನಾ ಕಾರ್ಯಕ್ರಮಗಳು ನಿರ್ದಿಷ್ಟ ಸಮಯಕ್ಕೆ, ನಿರ್ದಿಷ್ಟ ವಾಹಿನಿಯಲ್ಲಿ ಮಾತ್ರ ಸಿಗುತ್ತವೆ– ಹಲವು ಕಾರ್ಯಕ್ರಮಗಳನ್ನು ವೀಕ್ಷಕರು ವೂಟ್‌ನಂತಹ ಆನ್‌ಲೈನ್‌ ವೇದಿಕೆಗಳ ಮೂಲಕ ತಾವು ಬಯಸಿದಾಗ ನೋಡುವ ಅವಕಾಶವೂ ಇದೆ. ಆದರೆ, ವೆಬಿಸೋಡ್‌ಗಳು (ವೆಬ್‌ ಮೂಲಕ ಪ್ರಸಾರ ಆಗುವ ಎಪಿಸೋಡ್‌ಗಳು) ಲಭ್ಯವಿರುವುದು ಆನ್‌ಲೈನ್‌ ವೇದಿಕೆಗಳಲ್ಲಿ ಮಾತ್ರ. ತಮಗೆ ಬೇಕಾದಾಗ, ಬೇಕಾದ ಕಾರ್ಯಕ್ರಮವನ್ನು, ತಾವು ಬಯಸಿದ ಸ್ಥಳದಲ್ಲೇ, ತಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್‌ ಬಳಸಿ ವೀಕ್ಷಿಸುವ ಅವಕಾಶವನ್ನು ಇವು ‘ಗ್ರಾಹಕ’ನಿಗೆ ಒದಗಿಸಿವೆ. ಕಾರ್ಯಕ್ರಮ ನಿರ್ಮಾಣ ಮಾಡಿದ ಸಂಸ್ಥೆಗೆ ತನ್ನ ‘ಬ್ರ್ಯಾಂಡ್‌’ ಅನ್ನು ಆನ್‌ಲೈನ್‌ನಲ್ಲಿ ಶಾಶ್ವತವಾಗಿ ಉಳಿಸುವ ಅವಕಾಶವೂ ಇದರಲ್ಲಿ ಇದೆ. ಅಂದಹಾಗೆ, ವೆಬಿಸೋಡ್‌ಗಳ ವಿಚಾರದಲ್ಲಿ ‘ಡಬ್ಬಿಂಗ್‌ ಬೇಡ’ ಎನ್ನುವಂತಿಲ್ಲ! ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವ ಮುನ್ನ ‘ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ’ಯಿಂದ ಪ್ರಮಾಣಪತ್ರ ಪಡೆಯಬೇಕು. ಆದರೆ, ವೆಬ್‌ ಆಧಾರಿತ ಕಾರ್ಯಕ್ರಮಗಳಿಗೆ ಸಿನೆಮಾಟೊಗ್ರಾಫಿ ಕಾಯ್ದೆ ಅನ್ವಯವೇ ಆಗುವುದಿಲ್ಲ. ಹಾಗಾಗಿ ಪ್ರಮಾಣಪತ್ರಕ್ಕೆ ಕಾಯುವ ಜರೂರತ್ತೇ ಇಲ್ಲ!

ಕನ್ನಡ ಎಲ್ಲಿದೆ, ಎಷ್ಟಿದೆ?

ವೆಬಿಸೋಡ್‌ಗಳನ್ನು ಒದಗಿಸುವ ವೇದಿಕೆಗಳಿಗೆ ಭೇಟಿ ನಿಡಿ ‘Kannada’ ಎಂದು ಟೈಪ್‌ ಮಾಡಿದರೆ ಸದ್ಯಕ್ಕೆ ಎದುರಾಗುವುದು ತುಸು ಮಟ್ಟಿಗಿನ ನಿರಾಸೆಯೇ. ದಕ್ಷಿಣ ಭಾರತ ಇತರ ಭಾಷೆಗಳ ವೆಬಿಸೋಡ್‌ಗಳು ಹಿಂದಿ ಮತ್ತು ಇಂಗ್ಲಿಷ್‌ ವೆಬಿಸೋಡ್‌ಗಳ ಜೊತೆಯಲ್ಲೇ ಕಾಣಿಸಿಕೊಳ್ಳಲು ಆರಂಭಿಸಿವೆ. ಆದರೆ, ಜಗತ್ತಿನ ಬಹುಪಾಲು ವಿಡಿಯೊಗಳನ್ನು ತನ್ನೊಡಲಲ್ಲಿ ಹೊತ್ತುಕೊಂಡಿರುವ ಯೂಟ್ಯೂಬ್‌ಗೆ ಭೇಟಿ ನೀಡಿದರೆ ಕನ್ನಡದ ಒಂದೆರಡು ವೆಬಿಸೋಡ್‌ಗಳು ಕಾಣಿಸುತ್ತವೆ ಎಂಬುದನ್ನು ಉಲ್ಲೇಖಿಸದೆ ಇರುವಂತಿಲ್ಲ.

ದಕ್ಷಿಣ ಭಾರತದ ಇತರ ಭಾಷೆಗಳಿಗೆ ಹೋಲಿಸಿದರೆ ವೆಬಿಸೋಡ್‌ ವಿಚಾರದಲ್ಲಿ ಕನ್ನಡಿಗರು ಐದಾರು ವರ್ಷಗಳಷ್ಟು ಹಿಂದುಳಿದಿದ್ದಾರೆ ಎನ್ನುವುದು ನಿರ್ದೇಶಕ ಬಿ.ಎಂ. ಗಿರಿರಾಜ್‌ ಅವರ ಮಾತು. ಅವರು ಈಗ ‘ರಕ್ತಚಂದನ’ ಎನ್ನುವ ವೆಬಿಸೋಡ್‌ ರೂಪಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

‘ವೆಬಿಸೋಡ್‌ ನಿರ್ಮಾಣದ ವಿಚಾರದಲ್ಲಿ ನಾವು ಉದ್ಯಮಿಯಾಗಿ ಆಲೋಚಿಸಬೇಕು. ವ್ಯಾಪಾರಿಯಾಗಿ ಮಾತ್ರ ಆಲೋಚಿಸಿದರೆ ಸಾಕಾಗುವುದಿಲ್ಲ. ಉದ್ಯಮಿಯು ಮಾರುಕಟ್ಟೆಯನ್ನು ಶಿಸ್ತಾಗಿ ಅಧ್ಯಯನ ಮಾಡಿ, ಅಲ್ಲಿ ಹೂಡಿಕೆ ಮಾಡುತ್ತಾನೆ. ಆದರೆ ವ್ಯಾಪಾರಿಯು, ಒಂದು ವಸ್ತು ಚೆನ್ನಾಗಿ ಮಾರಾಟ ಆಗುತ್ತಿರುವ ಕಡೆ ಹೋಗಿ ಅಲ್ಲಿ ಆ ವಸ್ತುವನ್ನು ಮಾರುವ ಕೆಲಸವನ್ನಷ್ಟೇ ಮಾಡುತ್ತಾನೆ. ಕನ್ನಡದಲ್ಲಿ ವೆಬ್‌ ಆಧಾರಿತ ಮನರಂಜನಾ ಕಾರ್ಯಕ್ರಮಗಳ ಮೇಲೆ ದೊಡ್ಡ ಮಟ್ಟದಲ್ಲಿ ಹೂಡಿಕೆ ನನಗೆ ತಿಳಿದಿರುವಂತೆ ಆದಂತಿಲ್ಲ. ಆದರೆ ನಾನು ಗಳಿಸಿದ್ದನ್ನೆಲ್ಲಾ ಇಲ್ಲಿ ಹೂಡಿಕೆ ಮಾಡುತ್ತಿದ್ದೇನೆ’ ಎನ್ನುತ್ತಾರೆ ಗಿರಿರಾಜ್‌. ವೆಬ್‌ ಆಧಾರಿತ ಕಾರ್ಯಕ್ರಮಗಳು ಹೊಸ ಹುಡುಗರಿಗೂ ಒಂದು ವೇದಿಕೆ ಕಲ್ಪಿಸುತ್ತವೆ. ಹೂರಣ ಚೆನ್ನಾಗಿದ್ದರೆ ಸಾಕು. ಭಾಷೆಯ ಬೇಲಿ ಇಲ್ಲಿಲ್ಲ ಎಂದು ಹೇಳುವ ಅವರು, ‘ಹಣ ಹೂಡಿಕೆ ಮಾಡಿ ಐದು ವರ್ಷ ಕಾಯಬೇಕು’ ಎನ್ನುತ್ತಾರೆ.

ಈ ಮಾತಿಗೆ ಸಿನಿಮಾ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಕೂಡ ದನಿಗೂಡಿಸುತ್ತಾರೆ. ‘ಡಿಜಿಟಲ್‌ ವೇದಿಕೆಯಲ್ಲಿ ಮುಂದೆ ದೊಡ್ಡ ಅವಕಾಶ ತೆರೆದುಕೊಳ್ಳಲಿದೆ. ಸಿನಿಮಾ ಹೊರತುಪಡಿಸಿ ನಾವು ಹೆಚ್ಚಾಗಿ ವೀಕ್ಷಿಸುವುದು ಟಿ.ವಿ.ಯನ್ನು. ಆದರೆ ವಾಹಿನಿಗಳಲ್ಲಿ ಪ್ರಸಾರ ಆಗುವ ಕೆಲವು ಸಿದ್ಧ ಮಾದರಿಯ ಕಾರ್ಯಕ್ರಮಗಳು ಜನರಲ್ಲಿ ಬೇಸರ ತರಿಸಿವೆ. ಹಾಗಾಗಿ ಅವರು ಮೊಬೈಲ್‌, ಲ್ಯಾಪ್‌ಟಾಪ್‌ ಮೂಲಕ ವಿಶೇಷ ಕಾರ್ಯಕ್ರಮಗಳನ್ನು ನೋಡುತ್ತಿದ್ದಾರೆ. ಬೇರೆ ಭಾಷೆಗಳಲ್ಲಿ ವೆಬಿಸೋಡ್‌ಗಳು ಸಾಕಷ್ಟಿವೆ. ಕನ್ನಡದಲ್ಲಿ ಸದ್ಯಕ್ಕೆ ಇವು ಬಹಳ ಕಡಿಮೆ ಇವೆ’ ಎನ್ನುತ್ತಾರೆ ಮಲ್ಲಿಕಾರ್ಜುನಯ್ಯ.

ಕಲಾವಿದರಿಗೆ ಇರುವ ಅವಕಾಶ, ಲಾಭ ಗಳಿಕೆಯ ಸಾಧ್ಯತೆ ಮಾತ್ರವಲ್ಲದೆ ಮಲ್ಲಿಕಾರ್ಜುನಯ್ಯ ಅವರು ಇನ್ನೊಂದು ಆಯಾಮವನ್ನೂ ತೆರೆದಿಟ್ಟರು. ‘ವೆಬಿಸೋಡ್‌ ಮಾಡಿ ತಕ್ಷಣದ ಲಾಭ ಮಾಡುವುದು ಎಲ್ಲ ಸಂದರ್ಭಗಳಲ್ಲೂ ಆಗಲಿಕ್ಕಿಲ್ಲ ಎಂಬುದು ನಿಜ. ಆದರೆ, ಈ ಕ್ಷೇತ್ರದಲ್ಲಿ, ಮನರಂಜನಾ ಕಾರ್ಯಕ್ರಮ ನಿರ್ಮಾಣ ಮಾಡುವ ಕಂಪನಿಗಳಿಗೆ ಬ್ರ್ಯಾಂಡ್‌ ಗಟ್ಟಿಗೊಳಿಸಿಕೊಳ್ಳಲು ಕೂಡ ಅವಕಾಶ ಇದೆ. ಬ್ರ್ಯಾಂಡ್‌ ಗಟ್ಟಿಗೊಂಡ ನಂತರ, ದೊಡ್ಡ ಆನ್‌ಲೈನ್‌ ವೇದಿಕೆಗಳು ಕಾರ್ಯಕ್ರಮ ಸಿದ್ಧಪಡಿಸಿಕೊಡುವಂತೆ ನಮ್ಮನ್ನು ಕೇಳುತ್ತವೆ. ನಾವು ಒಳ್ಳೆಯ ಹೆಸರು ಸಂಪಾದಿಸಬೇಕು (Brand building) ಎಂದಾದರೆ, ನಾವಾಗಿಯೇ ಮೊದಲು ಒಂದಿಷ್ಟು ವೆಬಿಸೋಡ್‌ಗಳನ್ನು ರೂಪಿಸಬೇಕು. ನಾವು ಸಿದ್ಧಪಡಿಸುವ ವೆಬಿಸೋಡ್‌ಗಳನ್ನು ಅಮೆಜಾನ್‌, ನೆಟ್‌ಫ್ಲಿಕ್ಸ್‌ನಂಥ ಕಂಪನಿಗಳು ಖರೀದಿ ಮಾಡಿದರೆ ಹೂಡಿದ ಬಂಡವಾಳದ ಎರಡು ಪಟ್ಟು ಹಣ ನಮಗೆ ಮರಳಿ ಸಿಗುವ ಸಾಧ್ಯತೆ ಇರುತ್ತದೆ. ವೆಬಿಸೋಡ್‌ ಮಾಡಿ ಹಣ ಮಾಡುವ ಕಾಲ ಬಂದಿರುವುದಂತೂ ನಿಜ’ ಎಂದರು ಮಲ್ಲಿಕಾರ್ಜುನಯ್ಯ.

ಮಲ್ಲಿಕಾರ್ಜುನಯ್ಯ ಅವರು ಈಗ ಕನ್ನಡದಲ್ಲಿ ವೆಬಿಸೋಡ್‌ಗಳನ್ನು ರೂಪಿಸಲು ತಮ್ಮದೇ ಆದ ತಂಡವೊಂದನ್ನು ಕಟ್ಟಿ, ಕೆಲಸ ಶುರು ಮಾಡಿದ್ದಾರೆ. ‘ವೆಬ್‌ ಆಧಾರಿತ ಮನರಂಜನೆ ನೀಡುವ ದೊಡ್ಡ ದೊಡ್ಡ ಕಂಪನಿಗಳು ತಾವೇ ಹೊಸ ಸಲಹೆಗಳನ್ನು ನೀಡಿ, ನಮ್ಮಿಂದ ಕಾರ್ಯಕ್ರಮ ಸಿದ್ಧಪಡಿಸುವುದೂ ಇದೆ. ಹಾಗೆಯೇ, ನಾವೇ ಹಣ ಹೂಡಿಕೆ ಮಾಡಿ, ಒಳ್ಳೆಯ ಕಾರ್ಯಕ್ರಮ ಸಿದ್ಧಪಡಿಸಿ, ಆ ಕಂಪನಿಗಳಿಗೆ ಅವುಗಳನ್ನು ಮಾರಾಟ ಮಾಡುವ ಅವಕಾಶ ಕೂಡ ಇದೆ’ ಎಂದರು ಅವರು. ‘ಆದರೆ, ನಾವೇ ಕಾರ್ಯಕ್ರಮ ಸಿದ್ಧಪಡಿಸಿ, ಅವರಿಗೆ ಅದನ್ನು ಕೊಡಬೇಕು ಎಂಬುದು ನನ್ನ ಮನಸ್ಸಿನಲ್ಲಿ ಇದೆ. ನಾವೇ ಕಾರ್ಯಕ್ರಮ ಸಿದ್ಧಪಡಿಸುವಾಗ ಸೃಜನಶೀಲ ಸ್ವಾತಂತ್ರ್ಯ ನಮ್ಮ ಕೈಯಲ್ಲೇ ಇರುತ್ತದೆ’ ಎಂಬ ವಿವರಣೆಯನ್ನು ಅವರು ನೀಡಿದರು.

ಯೂಟ್ಯೂಬ್‌ ಮೂಲಕ ಕನ್ನಡದ ವೆಬಿಸೋಡ್‌ ಪ್ರಸಾರ ಮಾಡಿ, ಕಿರು ಅವಧಿಯಲ್ಲಿ ಲಾಭದ ನಿರೀಕ್ಷೆ ಮಾಡಲು ಆಗದು. ಯೂಟ್ಯೂಬ್‌ನಲ್ಲಿ ಪ್ರಸಾರ ಆಗುವ ಪ್ರತಿ ಸಂಚಿಕೆಯನ್ನು ಐದೋ, ಹತ್ತೋ ಲಕ್ಷ ಜನ ವೀಕ್ಷಿಸಿದರೆ ಒಳ್ಳೆಯ ಆದಾಯ ಸಿಗಬಹುದು. ಆದರೆ, ಐದು ವರ್ಷಗಳ ನಂತರ ವೆಬಿಸೋಡ್‌ಗಳೇ ಪ್ರಧಾನ ಮನರಂಜನೆಯ ಮಾಧ್ಯಮ ಆಗಿರುತ್ತವೆ. ಅದಕ್ಕಾಗಿ ಈಗಿನಿಂದಲೇ ಒಳ್ಳೆಯ ವೆಬ್‌ ಕಾರ್ಯಕ್ರಮ ರೂಪಿಸಲು ಆರಂಭಿಸಬೇಕು. ಭಾರತದ ಬೇರೆ ಕೆಲವು ಭಾಷೆಗಳವರು ಕೂಡ ಯೂಟ್ಯೂಬ್‌ ಮೂಲಕವೇ ವೆಬಿಸೋಡ್‌ ಪ್ರಸಾರ ಆರಂಭಿಸಿದರು. ನಂತರದ ದಿನಗಳಲ್ಲಿ ದೊಡ್ಡ ಕಂಪನಿಗಳ ಕಣ್ಣು ಈ ಭಾಷೆಗಳಲ್ಲಿ ತಯಾರಾಗುತ್ತಿದ್ದ ವೆಬ್‌ ಹೂರಣದತ್ತ ತಿರುಗಿತು. ಕನ್ನಡಿಗರು ಕೂಡ ಒಳ್ಳೆಯ ಕಾರ್ಯಕ್ರಮಗಳನ್ನು ಸಿದ್ಧಪಡಿಸಿಟ್ಟುಕೊಂಡು, ದೈತ್ಯ ಕಂಪನಿಗಳನ್ನು ಆಕರ್ಷಿಸುವಂತೆ ಆಗಬೇಕು ಎಂಬ ವಿವರಣೆ ನೀಡುತ್ತಾರೆ ಗಿರಿರಾಜ್‌.

ಪ್ರಾದೇಶಿಕ ಭಾಷೆಗಳಿಗೆ ಬೇಡಿಕೆ

ಇಂಗ್ಲಿಷ್‌, ಹಿಂದಿ ಮಾತ್ರವಲ್ಲದೆ ವೆಬಿಸೋಡ್‌ಗಳನ್ನು ತಮ್ಮ ಪ್ರದೇಶದ ಭಾಷೆಯಲ್ಲಿ ವೀಕ್ಷಿಸುವವರ ಸಂಖ್ಯೆ ಮುಂದಿನ ದಿನಗಳಲ್ಲಿ ಖಂಡಿತ ಹೆಚ್ಚಲಿದೆ ಎನ್ನುವ ಮಾತನ್ನು ಮಾರುಕಟ್ಟೆ ತಜ್ಞರು ಈಗಾಗಲೇ ಹೇಳಿಯಾಗಿದೆ. ಬಂಗಾಳಿ ಭಾಷೆಯಲ್ಲಿ ವೆಬಿಸೋಡ್‌ಗಳನ್ನು, ಇತರ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ‘ಹೊಯ್‌ಚೊಯ್‌’ (Hoichoi) ವೆಬ್‌ ವೇದಿಕೆ ಆರಂಭವಾದ ಹದಿನೈದೇ ದಿನಗಳಲ್ಲಿ 60 ಸಾವಿರ ಡೌನ್‌ಲೋಡ್‌ಗಳು ಅಲ್ಲಿಂದ ಆಗಿದ್ದವಂತೆ. ಈಗ ಈ ವೇದಿಕೆಯ ಆ್ಯಂಡ್ರಾಯ್ಡ್‌ ಆ್ಯಪ್‌ಅನ್ನು ಐದು ಲಕ್ಷಕ್ಕೂ ಹೆಚ್ಚು ಜನ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ಭಾರತದಲ್ಲಿ ಹೊಸದಾಗಿ ಇಂಟರ್ನೆಟ್‌ ಬಳಕೆ ಆರಂಭಿಸುತ್ತಿರುವವರಲ್ಲಿ ಬಹುತೇಕರು ಎರಡನೆಯ ಹಾಗೂ ಮೂರನೆಯ ಹಂತದ ನಗರ– ಪಟ್ಟಣಗಳಿಗೆ ಸೇರಿದವರು. ಇವರಲ್ಲಿ ಮುಕ್ಕಾಲು ಪಾಲು ಮಂದಿ ತಮ್ಮ ಭಾಷೆಯಲ್ಲೇ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸಲು ಬಯಸುತ್ತಾರೆ. ಹಾಗಾಗಿ ಪ್ರಾದೇಶಿಕ ಭಾಷೆಗಳಲ್ಲಿ ವೆಬ್‌ ಆಧರಿತ ಕಾರ್ಯಕ್ರಮ ಒದಗಿಸುವವರಿಗೆ ಹೆಚ್ಚು ಅವಕಾಶಗಳು ಇವೆ ಎಂಬುದನ್ನು ವಿವಿಧ ವೆಬ್‌ ಮನರಂಜನಾ ವೇದಿಕೆಗಳ ಪ್ರಮುಖರೂ ಹೇಳಿದ್ದಾರೆ.

‘ಗ್ರಾಹಕ’ ದೊಡ್ಡ ಸಂಖ್ಯೆಯಲ್ಲಿ ಇರುವೆಡೆ ಲಾಭ ಕೂಡ ದೊಡ್ಡ ಮಟ್ಟದಲ್ಲೇ ಇರುತ್ತದೆ ಎಂಬುದು ಸಾಮಾನ್ಯ ಅರಿವು. ಆದರೆ, ‘ಗ್ರಾಹಕ’ನಿಗೆ ಬೇಕಿರುವ ಹೂರಣ ಈಗ ಸಿಗುತ್ತಿದೆಯೇ, ಸಿಗುತ್ತಿಲ್ಲ ಎಂದಾದರೆ ಅದು ಸಿಗುವಂತೆ ಆಗುವುದು ಯಾವಾಗ ಎಂಬುದು ಕನ್ನಡದ ಸಂದರ್ಭದಲ್ಲಿ ವೆಬಿಸೋಡ್‌ ವಿಚಾರವಾಗಿ ಈಗಿರುವ ಪ್ರಶ್ನೆ.

ಬಾಲಾಜಿ ಅಂಕಿ– ಅಂಶ ಹೇಳುವ ಕಥೆ

ಟಿ.ವಿ. ವಾಹಿನಿಗಳಿಗೆ ಮನರಂಜನಾ ಕಾರ್ಯಕ್ರಮಗಳನ್ನು ಮಾಡಿಕೊಡುವ ಬಾಲಾಜಿ ಟೆಲಿಫಿಲಂಸ್‌ ಒಡೆತನಕ್ಕೆ ಸೇರಿದ ವೆಬ್‌ ವೇದಿಕೆ ‘ಆಲ್ಟ್‌ ಬಾಲಾಜಿ’. ಈ ವೇದಿಕೆ ಚಾಲನೆ ಪಡೆದುಕೊಂಡಿದ್ದು 2015ರಲ್ಲಿ.

2017–18ನೇ ಹಣಕಾಸು ವರ್ಷದಲ್ಲಿ ಈ ವೇದಿಕೆಯ ಆದಾಯ ₹ 6.8 ಕೋಟಿ ಆಗಿತ್ತು. ಪ್ರಸಕ್ತ ಹಣಕಾಸು ವರ್ಷದ (2018–19) ಅಂತ್ಯದ ವೇಳೆಗೆ ₹ 85 ಕೋಟಿಯಿಂದ ₹ 90 ಕೋಟಿಯಷ್ಟು ಆದಾಯ ಗಳಿಸುವ ನಿರೀಕ್ಷೆ ‘ಆಲ್ಟ್ ಬಾಲಾಜಿ’ಗೆ ಇದೆ. ಈ ವಿಷಯವನ್ನು ಇದರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ನಚಿಕೇತ್ ಪಂತ್‌ವೈದ್ಯ ಇತ್ತೀಚೆಗೆ ಹೇಳಿದ್ದಾರೆ ಎಂದು ವರದಿಯಾಗಿದೆ. ಅಂದರೆ, ತನ್ನ ಆದಾಯದಲ್ಲಿ 13 ಪಟ್ಟು ಹೆಚ್ಚಳ ಆಗುತ್ತದೆ ಎಂಬುದು ‘ಆಲ್ಟ್‌ ಬಾಲಾಜಿ’ಯ ಲೆಕ್ಕಾಚಾರ (http://www.televisionpost.com/altbalaji-eyeing-rs-85-90-cr-rev-in-fy19/).

ಸ್ಥಳೀಯ ಭಾಷೆಗಳ ಬೇಡಿಕೆ...

ಈ ವರ್ಷದ ಜೂನ್‌ ವೇಳೆಗೆ ಭಾರತದಲ್ಲಿ ಇಂಟರ್ನೆಟ್‌ ಬಳಕೆದಾರರ ಸಂಖ್ಯೆ 50 ಕೋಟಿಗೆ ತಲುಪುವ ನಿರೀಕ್ಷೆ ಇದೆ ಎಂದು ‘ಭಾರತದ ಇಂಟರ್ನೆಟ್‌ ಹಾಗೂ ಮೊಬೈಲ್‌ ಒಕ್ಕೂಟ’ ಇದೇ ಫೆಬ್ರುವರಿ ತಿಂಗಳಲ್ಲಿ ಹೇಳಿತ್ತು.

2011ನೆಯ ಸಾಲಿನ ಜನಗಣತಿ ಅನ್ವಯ ದೇಶದ ನಗರ ಪ್ರದೇಶಗಳಲ್ಲಿ 45.5 ಕೋಟಿ ಜನ ವಾಸಿಸುತ್ತ ಇದ್ದಾರೆ. ಇವರಲ್ಲಿ 29.5 ಕೋಟಿ ಜನ ಇಂಟರ್ನೆಟ್‌ ಬಳಸುತ್ತಿದ್ದಾರೆ. ದೇಶದ ಗ್ರಾಮೀಣ ‍ಪ್ರದೇಶಗಳಲ್ಲಿ 91.8 ಕೋಟಿ ಜನ ವಾಸಿಸುತ್ತಿದ್ದಾರೆ. ಇವರಲ್ಲಿ 18.6 ಕೋಟಿ ಜನ ಮಾತ್ರ ಇಂಟರ್ನೆಟ್‌ ಸಂಪರ್ಕ ಹೊಂದಿದ್ದಾರೆ. ಅಂದರೆ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ 73.2 ಕೋಟಿ ಜನ ಹೊಸದಾಗಿ ಇಂಟರ್ನೆಟ್‌ ಸಮುದಾಯವನ್ನು ಸೇರಿಕೊಳ್ಳಬೇಕಿದೆ ಎಂದೂ ಈ ಸಂಸ್ಥೆ ಹೇಳಿತ್ತು.

ಗ್ರಾಮೀಣ ಪ್ರದೇಶಗಳ ಜನ ಪರಭಾಷೆಗಳ ಬದಲು ತಮ್ಮ ಭಾಷೆಯಲ್ಲೇ ವೆಬಿಸೋಡ್‌ಗಳನ್ನು ನೋಡಲು ಇಷ್ಟಪಡುತ್ತಾರೆ ಎಂದು ಭಾವಿಸುವುದಾದರೆ, ಈ ಮಾದರಿಯ ಮನರಂಜನಾ ಕಾರ್ಯಕ್ರಮಗಳ ಮುಂದೆ ಇರುವ ಅವಕಾಶಗಳು ಅದೆಷ್ಟು ಅಗಾಧ ಎಂಬುದನ್ನು ಅಂಕಿ– ಅಂಶವೇ ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT