ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿ ಅಳಿಯ, ಕುಲಸಚಿವರ ಮಗ ಹಾಜರು

ವಿಎಸ್‌ಕೆ ವಿಶ್ವವಿದ್ಯಾಲಯದ ನೇಮಕಾತಿ ಪರೀಕ್ಷೆಯ ಮೇಲೆ ಅನುಮಾನದ ನೆರಳು?
Last Updated 7 ಜುಲೈ 2018, 13:43 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಗೆ ಕುಲಪತಿ ಪ್ರೊ.ಎಂ.ಎಸ್.ಸುಭಾಷ್‌ ಅವರ ಅಳಿಯ ರಮೇಶ್‌ ಚಂದ್ರಹಾಸ ಮತ್ತು ಕುಲಸಚಿವ ಪ್ರೊ.ಎಸ್‌.ಎ.ಪಾಟೀಲ ಅವರ ಮಗ ಸಂತೋಷ್‌ ಸಂಗಮೇಶ ಪಾಟೀಲ ಹಾಜರಾಗಿರುವುದು ಪರೀಕ್ಷೆಯ ಪಾರದರ್ಶಕತೆಯ ಕುರಿತು ಅನುಮಾನದ ದನಿಗಳನ್ನು ಮೂಡಿಸಿದೆ.

‘ತಮ್ಮ ಹತ್ತಿರದ ಸಂಬಂಧಿಕರು ಹಾಜರಾಗುವ ಸನ್ನಿವೇಶದಲ್ಲಿ ಕುಲಪತಿ ಮತ್ತು ಕುಲಸಚಿವರು ಪರೀಕ್ಷಾ ವ್ಯವಸ್ಥೆಯಿಂದ ದೂರ ಉಳಿಯದಿರುವುದು ಮತ್ತು ಅದನ್ನು ಬಹಿರಂಗಪಡಿಸದೇ ಇರುವುದು ಪರೀಕ್ಷೆಯ ಪಾರದರ್ಶಕತೆಯಲ್ಲಿನ ಲೋಪ’ ಎಂದು ವಿಶ್ವವಿದ್ಯಾಲಯದ ಮೂಲಗಳೇ ಆರೋಪಿಸಿವೆ.

ರಮೇಶ್‌ ಚಂದ್ರಹಾಸ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ವಿಭಾಗಕ್ಕೆ ಹಾಗೂ ಸಂಗಮೇಶ ಅವರು ಕಂಪ್ಯೂಟರ್‌ ಸೈನ್ಸ್‌ ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದರು.

ಒಎಂಆರ್‌ ಪ್ರತಿ ಇಲ್ಲ:

‘ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಇಂದು ನಡೆಸಿದ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಅವರ ಉತ್ತರಪತ್ರಿಕೆಗಳ ಕಾರ್ಬನ್‌ ಪ್ರತಿಯನ್ನೂ ನೀಡಿಲ್ಲ. ಇದು ಅಕ್ರಮಕ್ಕೆ ದಾರಿ ಮಾಡುವುದರಲ್ಲಿ ಅನುಮಾನವೇ ಇಲ್ಲ’ ಎಂದು ವಿಶ್ವವಿದ್ಯಾಲಯದ ವಿದ್ಯಾವಿಧಾಯಕ ಪರಿಷತ್‌ ಸದಸ್ಯ ವೆಂಕಟೇಶ್‌ ಆರೋಪಿಸಿದ್ದಾರೆ.

‘ತಮಗೆ ಬೇಕಾದವರಿಗೆ ಹುದ್ದೆ ನೀಡಲು ಅನುಕೂಲವಾಗುವಂತೆ ಉತ್ತರ ಪತ್ರಿಕೆಗಳನ್ನು ತಿದ್ದುವ ಎಲ್ಲ ಸಾಧ್ಯತೆಗಳೂ ಇವೆ. ಈ ರೀತಿ ಪರೀಕ್ಷೆ ನಡೆಸುವುದರಿಂದ ಅರ್ಹ ಅಭ್ಯರ್ಥಿಗಳಿಗ ಅನ್ಯಾಯವಾಗುತ್ತದೆ’ ಎಂದು ಅಭ್ಯರ್ಥಿಯೊಬ್ಬರು ಅಳಲು ತೋಡಿಕೊಂಡರು.

ಈ ಕುರಿತು ಪ್ರತಿಕ್ರಿಯಿಸಿದ ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್‌, ‘ನೇಮಕಾತಿ ಪ್ರಕ್ರಿಯೆಯ ಎಲ್ಲ ಗೌಪ್ಯ ಕಾರ್ಯಗಳನ್ನೂ ಡೀನ್‌ಗಳ ಸಮಿತಿಯೇ ಮಾಡುತ್ತಿದೆ. ಅವರಿರುವಲ್ಲಿಗೆ ನಾವು ಹೋಗುವುದಿಲ್ಲ. ಪ್ರಶ್ನೆಪತ್ರಿಕೆಗಳನ್ನೂ ನೋಡಿಲ್ಲ’ ಎಂದರು.

‘ನನ್ನ ಮತ್ತು ಕುಲಸಚಿವರ ಸಂಬಂಧಿಕರ ನೇಮಕಾತಿ ಪ್ರಕ್ರಿಯೆಯ ಭಾಗವಾದ ಸಂದರ್ಶನ ಸೇರಿದಂತೆ ಯಾವುದೇ ಕಾರ್ಯದಲ್ಲೂ ನಾವು ಭಾಗಿಯಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಅಭ್ಯರ್ಥಿಗಳಿಗೆ ತಮ್ಮ ಉತ್ತರಪತ್ರಿಕೆಯ ಕಾರ್ಬನ್‌ ಪ್ರತಿ ಕೊಟ್ಟಿಲ್ಲ. ಅದರಿಂದ ಅಕ್ರಮ ನಡೆಯುವ ಸಾಧ್ಯತೆ ಇದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಪರೀಕ್ಷೆಯಲ್ಲಿ ಗಳಿಸಿದ ಅಂಕ, ಮೆರಿಟ್‌ ಪಟ್ಟಿಯ ಪ್ರಕಟಣೆ ಬಳಿಕ ಅನುಮಾನವಿದ್ದವರಿಗೆ ಅವರ ಉತ್ತರ ಪತ್ರಿಕೆಗಳನ್ನು ಕೊಡುತ್ತೇವೆ’ ಎಂದರು.

ಲಿಖಿತ ಮಾಹಿತಿ ನೀಡಿದ್ದೇನೆ

‘ನನ್ನ ಮತ್ತು ಕುಲಸಚಿವರ ಸಂಬಂಧಿಕರು ಪರೀಕ್ಷೆಗೆ ಹಾಜರಾಗುತ್ತಿರುವ ಬಗ್ಗೆ ರಾಜ್ಯಪಾಲರಿಗೆ ಲಿಖಿತ ಮಾಹಿತಿ ನೀಡಿದ್ದೇವೆ. ಪರೀಕ್ಷೆ ವ್ಯವಸ್ಥೆಯ ಯಾವುದೇ ಗೌಪ್ಯ ಕಾರ್ಯದಲ್ಲೂ ನಾವಿಬ್ಬರೂ ಪಾಲ್ಗೊಳ್ಳುತ್ತಿಲ್ಲ. ನೇಮಕಾತಿ ಸಮಿತಿಯೇ ಎಲ್ಲವನ್ನೂ ಮಾಡುತ್ತಿದೆ’ ಎಂದು ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT