ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ವಸ್ತುಗಳು ಮನುಕುಲಕ್ಕೆ ಮಾರಕ

ಜಿಲ್ಲಾ ವಿಜ್ಞಾನ ಪರಿಷತ್ ಅಧ್ಯಕ್ಷ ಶಿವಣ್ಣ ಅಭಿಪ್ರಾಯ
Last Updated 7 ಜುಲೈ 2018, 13:44 IST
ಅಕ್ಷರ ಗಾತ್ರ

ಕೋಲಾರ: ‘ಪ್ಲಾಸ್ಟಿಕ್ ವಸ್ತುಗಳು ಮನುಕುಲಕ್ಕೆ ಹಾಗೂ ಪ್ರಾಣಿ ಪಕ್ಷಿ ಸಂಕುಲಕ್ಕೆ ಮಾರಕ’ ಎಂದು ಜಿಲ್ಲಾ ವಿಜ್ಞಾನ ಪರಿಷತ್ ಅಧ್ಯಕ್ಷ ಡಾ.ಶಿವಣ್ಣ ಅಭಿಪ್ರಾಯಪಟ್ಟರು.

ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ‘ಅತಿಯಾಗಿ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸುತ್ತಿರುವುದರಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ’ ಎಂದರು.

‘ಬಳಸಿ ಎಸೆದ ಪ್ಲಾಸ್ಟಿಕ್‌ ವಸ್ತುಗಳು ಮಣ್ಣಿನಲ್ಲಿ ಬೇಗನೆ ಕರಗುವುದಿಲ್ಲ. ಕಸದ ರಾಶಿ ಅಥವಾ ರಸ್ತೆ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ ಉತ್ಪನ್ನಗಳು ಜಾನುವಾರುಗಳ ಪ್ರಾಣವನ್ನೇ ತೆಗೆಯುತ್ತಿವೆ. ಪ್ಲಾಸ್ಟಿಕ್ ತೊಲಗಿಸಿ ಎಂಬುದು ವಿಶ್ವಸಂಸ್ಥೆಯ ಧ್ಯೇಯವಾಗಿದೆ. ಪ್ಲಾಸ್ಟಿಕ್‌ ವಸ್ತುಗಳ ಬಳಕೆಗೆ ಸಾರ್ವಜನಿಕರು ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಂಕಲ್ಪ ಮಾಡಿ: ‘ವಿದ್ಯಾರ್ಥಿಗಳು ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಸಂಕಲ್ಪ ಮಾಡಬೇಕು. ಪ್ಲಾಸ್ಟಿಕ್‌ ದುಷ್ಪರಿಣಾಮಗಳ ಬಗ್ಗೆ ಮನೆಯಲ್ಲಿ ಪೋಷಕರಿಗೆ ಜಾಗೃತಿ ಮೂಡಿಸಬೇಕು. ಆ ಮೂಲಕ ಪರಿಸರ ರಕ್ಷಣೆಗೆ ಕೈಜೋಡಿಸಬೇಕು. ಮಾರುಕಟ್ಟೆಗೆ ಹೋಗುವಾಗ ಕಡ್ಡಾಯವಾಗಿ ಬಟ್ಟೆ ಬ್ಯಾಗ್‌ ತೆಗೆದುಕೊಂಡು ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಈ ಸಂಬಂಧ ಪೋಷಕರಿಗೂ ಅರಿವು ಮೂಡಿಸಬೇಕು. ಅಂಗಡಿಯವರು ಪ್ಲಾಸ್ಟಿಕ್ ಬ್ಯಾಗ್‌ ಕೊಟ್ಟರೆ ತಿರಸ್ಕರಿಸಬೇಕು’ ಎಂದು ಸಲಹೆ ನೀಡಿದರು.

ಮೂಲ ಉದ್ದೇಶ: ‘ಮಕ್ಕಳಲ್ಲಿ ಕುತೂಹಲ ಹುಟ್ಟಿಸುವುದು ವಿಜ್ಞಾನದ ಮೂಲ ಉದ್ದೇಶ. ಮಕ್ಕಳಲ್ಲಿ ವೈಜ್ಞಾನಿಕ ದೃಷ್ಟಿಕೋನ ಬೆಳೆಸುವುದು ಪರಿಷತ್ತಿನ ಮೂಲ ಆಶಯ. ಈ ನಿಟ್ಟಿನಲ್ಲಿ ನಾಲ್ಕು ದಶಕದಿಂದ ವಿಜ್ಞಾನಕ್ಕೆ ಸಂಬಂಧಪಟ್ಟ ಸ್ಪರ್ಧೆ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದು ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಚಾಲಕಿ ಮಂಜುಳಾ ಭೀಮರಾವ್ ವಿವರಿಸಿದರು.

‘ಮಕ್ಕಳು ಕಲಿಕೆಗೆ ಪೂರಕವಾದ ಚಟುವಟಿಕೆಗಳನ್ನು ಪರಿಷತ್ ನಡೆಸುತ್ತಿರುವುದರಿಂದ ಅವರಲ್ಲಿ ಜ್ಞಾನ ವೃದ್ಧಿಯಾಗುತ್ತದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ರಾಜಣ್ಣ ತಿಳಿಸಿದರು.

ರಾಜ್ಯ ಮಟ್ಟಕ್ಕೆ ಆಯ್ಕೆ: ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ಜಿಲ್ಲೆಯ ಕೆಜಿಎಫ್‌ನ ಮಹಾವೀರ್ ಜೈನ್ ಕಾಲೇಜಿನ ವಿದ್ಯಾರ್ಥಿ ಬಿ.ಶಿವಶಂಕರ್ ಪ್ರಥಮ ಬಹುಮಾನ, ತಾಲ್ಲೂಕಿನ ಬೆಗ್ಲಿ ಹೊಸಹಳ್ಳಿ ಗ್ರಾಮದ ಗ್ರೀನ್ ವ್ಯಾಲಿ ಶಾಲೆಯ ಕೆ.ಎಂ.ಮೇಘನಾ ದ್ವಿತೀಯ ಹಾಗೂ ಅದೇ ಶಾಲೆಯ ವಿದ್ಯಾರ್ಥಿನಿ ಎಸ್.ತ್ರಿಶಾಲಾ ತೃತೀಯ ಬಹುಮಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.

ಶಿಕ್ಷಣ ತಜ್ಞ ಭೀಮರಾವ್, ಬೆಮಲ್‌ ನಿವೃತ್ತ ನೌಕರ ಜಯಸಿಂಹ ಭಾರದ್ವಾಜ್, ಮೊರಾರ್ಜಿ ದೇಸಾಯಿ ಶಾಲೆ ಪ್ರಾಂಶುಪಾಲ ವೆಂಕಟರಮಣಪ್ಪ, ಶಿಕ್ಷಕ ಪ್ರವೀಣ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT