ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಕುಲ ಮಾದರಿಯ ಅಂಗನವಾಡಿ ಪ್ರಾರಂಭಿಸಿ

ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಒತ್ತಾಯ
Last Updated 7 ಜುಲೈ 2018, 13:45 IST
ಅಕ್ಷರ ಗಾತ್ರ

ಶಿರಸಿ: ಭಾರತದ ಶ್ರೇಷ್ಠ ಸನಾತನ ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಯುವ ಪೀಳಿಗೆಯನ್ನು ಸಂಸ್ಕಾರವಂತವನ್ನಾಗಿ ಮಾಡಲು ಗುರುಕುಲ ಮಾದರಿಯ ಅಂಗನವಾಡಿ ಪ್ರಾರಂಭಿಸಲು ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ಸೆ.3ರಂದು ಧರ್ಮಸ್ಥಳದಲ್ಲಿ ಶ್ರೀಗಳ ಪಟ್ಟಾಭಿಷೇಕ ದಶಮಾನೋತ್ಸವ ಮತ್ತು ಧರ್ಮ ಸಂಸದ್ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ವರ್ತಮಾನದ ಶಿಕ್ಷಣ ಪದವಿ ಹಾಗೂ ಹಣ ಗಳಿಕೆಗೆ ಸೀಮಿತವಾಗುತ್ತಿದೆ. ಶಿಕ್ಷಣದ ಮೂಲ ಆಶಯವಾಗಿರುವ ವ್ಯಕ್ತಿತ್ವ ವಿಕಸನ ಬದಿಗೆ ಸರಿದು, ದ್ವೇಷ ಹೆಚ್ಚಿಸುವ ಜೀವನ ಕ್ರಮ ಪ್ರಸ್ತುತ ಶಿಕ್ಷಣದಿಂದ ದೊರೆಯುತ್ತಿದೆ. ಈ ಕಾರಣ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ರಾಮಾಯಣ, ಮಹಾಭಾರತ, ವೇದ, ಉಪನಿಷತ್‌, ಬ್ರಹ್ಮಸೂತ್ರಗಳ ಸತ್ವವನ್ನು ತಿಳಿಸಬೇಕಾಗಿದೆ. ಸಂಸ್ಕೃತದಲ್ಲಿರುವ ಇವನ್ನು ಪ್ರಾದೇಶಿಕ ಭಾಷೆಗೆ ಅನುವಾದಿಸಿ, ಎಲ್ಲ ಕಡೆಗಳಲ್ಲಿ ಕಲಿಸಬೇಕು ಎಂದರು.

ಭೌತಿಕ ಸಂಗತಿಗಳು ಶಾಶ್ವತವಲ್ಲ. ಸನಾತನ ಧರ್ಮ ಮತ್ತು ಸತ್ಯ ಶಾಶ್ವತ. ಇವೆರಡೂ ಸೂರ್ಯ–ಚಂದ್ರರಷ್ಟೇ ಎತ್ತರದಲ್ಲಿರಬೇಕು. ಅವುಗಳ ಅಡಿಯಲ್ಲಿ ಸಮಾಜ ನಡೆಯಬೇಕು. ಧರ್ಮಕ್ಕೆ ವಿಶಾಲ ವಿಶ್ಲೇಷಣೆಯಿದೆ. ಸ್ವೀಕಾರಾರ್ಹ ಎಲ್ಲ ಸಂಗತಿಗಳು ಧರ್ಮವೇ ಆಗಿವೆ. ಸನಾತನ ಧರ್ಮಕ್ಕೆ ಮನುಷ್ಯನನ್ನು ಮಾನವನನ್ನಾಗಿ ರೂಪಿಸುವ ಶಕ್ತಿಯಿದೆ ಎಂದು ಹೇಳಿದರು.

ಲೋಕ ಕಲ್ಯಾಣಕ್ಕೆ ಧರ್ಮ ಸಂಸದ್‌:

ಲೋಕ ಕಲ್ಯಾಣಕ್ಕಾಗಿ ಸೆ.3ರಂದು ರಾಮಕ್ಷೇತ್ರದಲ್ಲಿ ಧರ್ಮ ಸಂಸದ್ ನಡೆಲಾಗುತ್ತಿದೆ. ದೇಶದ ಸುಮಾರು 2000 ಸಂತರು, 100ರಷ್ಟು ಮಠಾಧೀಶರು ಭಾಗಹಿಸಲಿದ್ದಾರೆ. ಎಲ್ಲ ಅಖಾಡಗಳು, ನಾಗ ಸಾಧುಗಳು, ಸೀತಾರಾಮ ಪರಂಪರೆ, ನಾಥ ಪಂಥ, ತ್ಯಾಗಿ, ಭೈರಾಗಿ ಇನ್ನಿತರ ಸನಾತನ ಹಿಂದೂ ಧರ್ಮದ ವಿವಿಧ ಪರಂಪರೆಗಳ ಆಚಾರ್ಯರು, ಮಹಾಮಂಡಲಾಧೀಶ್ವರರನ್ನು ಒಗ್ಗೂಡಿಸಿ, ರಾಷ್ಟ್ರೀಯ ಲೋಕ ಕಲ್ಯಾಣ ಮಂಚ್ ಸಂಸ್ಥೆ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂದು ಸ್ವಾಮೀಜಿ ಹೇಳಿದರು. ಸಮುದಾಯದ ಪ್ರಮುಖರಾದ ಭೀಮಣ್ಣ ನಾಯ್ಕ, ಆರ್.ಜಿ.ನಾಯ್ಕ, ಶ್ರೀನಿವಾಸ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT