ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಲ್ಯಡ್ಕ ಸೇತುವೆ ಮುಳುಗಡೆ; ಗುಡ್ಡ ಕುಸಿತ

ಪುತ್ತೂರಿನಲ್ಲಿ ಭಾರಿ ಮಳೆ
Last Updated 7 ಜುಲೈ 2018, 14:10 IST
ಅಕ್ಷರ ಗಾತ್ರ

‌ಪುತ್ತೂರು: ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಪುತ್ತೂರು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಹಾನಿಯಾಗಿದೆ. ಪುತ್ತೂರು ಪಾಣಾಜೆ ರಸ್ತೆಯ ಚೆಲ್ಯಡ್ಕ ಸೇತುವೆ ಮತ್ತೆ ಮುಳುಗಡೆಯಾಗಿದ್ದು, ಈ ರಸ್ತೆಯ ಸಂಪರ್ಕ ಕಳೆದುಕೊಂಡಿದೆ.

ಪುತ್ತೂರಿನಲ್ಲಿ ಶುಕ್ರವಾರ ಬೆಳಗ್ಗಿನಿಂದ ಶನಿವಾರ ಬೆಳಗ್ಗಿನ ತನಕ ದಾಖಲೆಯ ಮಳೆಯಾಗಿದ್ದು, ಮಳೆಯ ಅಬ್ಬರ ಮುಂದುವರಿದಿದೆ. ಪುತ್ತೂರು ನಗರದ ಮಹಾಲಿಂಗೇಶ್ವರ ದೇವಾಲಯ ಸಮೀಪದ ಹೊಳೆಯಲ್ಲಿ ನೆರೆಕಾಣಿಸಿಕೊಂಡು ಪಕ್ಕದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ, ಕಂಬಳಕೋಡಿ ನಿವಾಸಿ ಮೋನಪ್ಪ ಸಫಲ್ಯ ಎಂಬವರ ಮನೆಗೆ ನೀರು ನುಗ್ಗಿ ಹಾನಿಯಾಗಿದೆ.

ಪುತ್ತೂರು ಬೈಪಾಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ನೂಜಿ-ತೆಂಕಿಲ ರಸ್ತೆಯಲ್ಲಿರುವ ಪಿ.ಎಸ್.ಅಮುದಾ ಎಂಬವರ ಮನೆಯ ಪಕ್ಕದ ಧರೆ ಕುಸಿದಿದ್ದು, ರಸ್ತೆಗೋಡೆಯೂ ಕುಸಿಯಲಾರಂಭಿಸಿದೆ. ಇದರಿಂದಾಗಿ ಈ ಮನೆ ಕುಸಿದು ಬೀಳುವ ಭೀತಿ ಎದುರಾಗಿದೆ. ಧರೆ ಕುಸಿತದಿಂದಾಗಿ ಅಮುದಾ ಅವರ ಪುತ್ರ ಅಂಗವಿಕಲರಾದ ಟಿ.ಪ್ರಮೋದ್ ಅವರನ್ನೊಳಗೊಂಡ ಸಂಸಾರ ಭಯದ ವಾತಾವರಣದಲ್ಲಿ ಕಾಲ ಕಳೆಯಬೇಕಾಗಿ ಬಂದಿದೆ. ವಾಸದ ಬಗ್ಗೆ ಸೂಕ್ತವ್ಯವಸ್ಥೆ ಮತ್ತು ಪ್ರಕೃತಿ ವಿಕೋಪ ನಿಧಿಯಿಂದ ನೆರವು ನೀಡುವಂತೆ ಈ ಕುಟುಂಬ ಶನಿವಾರ ಪುತ್ತೂರು ಉಪವಿಭಾಗಾಧಿಕಾರಿಗಳಿಗೆ, ತಹಶೀಲ್ದಾರರಿಗೆ ಹಾಗೂ ನಗರಸಭೆಯ ಆಯುಕ್ತರಿಗೆ ಮನವಿ ಮಾಡಿದ್ದಾರೆ. ‌‌

ಪುತ್ತೂರು ಕುಂಜೂರುಪಂಜ-ಪಾಣಾಜೆ ರಸ್ತೆಯ ಚೆಲ್ಯಡ್ಕದಲ್ಲಿರುವ ಸೇತುವೆ ಶುಕ್ರವಾರ ರಾತ್ರಿಯಿಂದಲೇ ಸಂಪೂರ್ಣ ಜಲಾವೃತಗೊಂಡಿದ್ದು, ಈ ಭಾಗದ ಮಂದಿ ಸಂಚಾರಕ್ಕಾಗಿ ಪರ್ಯಾಯ ರಸ್ತೆಯನ್ನು ಬಳಸಬೇಕಾದ ಅನಿವಾರ್ಯತೆ ಬಂದಿದೆ. ಪುತ್ತೂರು -ಈಶ್ವರಮಂಗಲ-ಸುಳ್ಯಪದವು ರಸ್ತೆಯಲ್ಲಿ ಮೀನಾವು ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡವಾಗಿ ಉರುಳಿ ಬಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಬಾರೀ ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT