ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಗೆಲುವಿಗೆ ಇಬ್ಬರ ಹಣಾಹಣಿ

ಕ್ರಿಕೆಟ್: ಭಾರತ–ಇಂಗ್ಲೆಂಡ್ ನಡುವಣ ಮೂರನೇ ಟ್ವೆಂಟಿ–20
Last Updated 7 ಜುಲೈ 2018, 17:58 IST
ಅಕ್ಷರ ಗಾತ್ರ

ಬ್ರಿಸ್ಟಲ್ ’ತಿರುಗೇಟು ನೀಡುವುದೆಂದರೆ ಹೀಗಿರಬೇಕು’–

ಶುಕ್ರವಾರ ತಡರಾತ್ರಿ ನಡೆದ ಟ್ವೆಂಟಿ–20 ಕ್ರಿಕೆಟ್ ಪಂದ್ಯದ ಫಲಿತಾಂಶಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳಿವು.

ಮೊದಲ ಪಂದ್ಯದಲ್ಲಿ ಸೋತಿದ್ದ ಆತಿಥೇಯ ಇಂಗ್ಲೆಂಡ್ ತಂಡವು ಎರಡನೇ ಪಂದ್ಯದಲ್ಲಿ ಭಾರತಕ್ಕೆ ತಿರುಗೇಟು ನೀಡಿದ ರೀತಿ ಹಾಗಿತ್ತು. 5 ವಿಕೆಟ್‌ಗಳ ಗೆಲುವು ಸಾಧಿಸಿದ ಇಂಗ್ಲೆಂಡ್ 1–1ರ ಸಮಬಲ ಸಾಧಿಸಿತ್ತು.

ಸರಣಿಯ ಮೊದಲ ಪಂದ್ಯದಲ್ಲಿ ಐದು ವಿಕೆಟ್ ಗಳಿಸಿ ಮಿಂಚಿದ್ದ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಅವರ ಮಣಿಕಟ್ಟಿನ ಮೋಡಿಯು ಎರಡನೇ ಪಂದ್ಯದಲ್ಲಿ ನಡೆಯಲಿಲ್ಲ. ಉಳಿದ ಬೌಲರ್‌ಗಳಿಗಿಂತ ಇವರಿಬ್ಬರೂ ದುಬಾರಿಯಾದರು.

ಇದರಿಂದಾಗಿ ಭಾನುವಾರ ನಡೆಯುವ ಸರಣಿಯ ಕೊನೆಯ ಪಂದ್ಯವು ಕುತೂಹಲದ ಕಣಜವಾಗಿದೆ.

ಭಾರತವು ಚುಟುಕು ಕ್ರಿಕೆಟ್‌ನಲ್ಲಿ ಕಳೆದ ಐದು ಟೂರ್ನಿಗಳಲ್ಲಿ ಸತತ ಗೆಲುವು ದಾಖಲಿಸಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಇಂಗ್ಲೆಂಡ್ ಕೂಡ ಭರ್ಜರಿ ಜಯ ಸಾಧಿಸಿತ್ತು. ವೇಗಿ ಉಮೇಶ್ ಯಾದವ್ ಎರಡು ವಿಕೆಟ್ ಕಬಳಿಸಿದರು.

ಭಾರತ ತಂಡವು ಬ್ಯಾಟಿಂಗ್ ವಿಭಾಗದಲ್ಲಿಯೂ ಹಿನ್ನಡೆ ಕಂಡಿತ್ತು. ಆರಂಭಿಕ ಜೋಡಿ ಶಿಖರ್ ಧವನ್, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾದರು. ನಾಯಕ ವಿರಾಟ್ ಕೊಹ್ಲಿ ಮತ್ತು 500ನೇ ಅಂತರರಾಷ್ಟ್ರೀಯ ಪಂದ್ಯ ಆಡಿದ ಮಹೇಂದ್ರಸಿಂಗ್ ದೋನಿ ಅವರ ತಾಳ್ಮೆಯ ಬ್ಯಾಟಿಂಗ್‌ನಿಂದಾಗಿ ತಂಡವ ಸಾಧಾರಣ ಮೊತ್ತ ಗಳಿಸಿತು.ಇಲ್ಲದಿದ್ದರೆ 100ರೊಳಗಿನ ಮೊತ್ತಕ್ಕೆ ಆಲೌಟ್‌ ಆಗುವ ಅಪಾಯ ಇತ್ತು.

ಇದರಿಂದಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಹತ್ವದ ಸುಧಾರಣೆಗಳನ್ನು ಮಾಡಿಕೊಳ್ಳಬೇಕಾದ ಸವಾಲು ವಿರಾಟ್ ಬಳಗಕ್ಕೆ ಇದೆ. ಎರಡೂ ಪಂದ್ಯಗಳಲ್ಲಿ ವಿಫಲರಾಗಿರುವ ಶಿಖರ್ ಧವನ್ ಅವರನ್ನು ಕೈಬಿಡುವ ಸಾಧ್ಯತೆ ಇದೆ.

ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ರಾಹುಲ್ ಅವರನ್ನು ರೋಹಿತ್ ಜೊತೆಗೆ ಇನಿಂಗ್ಸ್‌ ಆರಂಭಿಸಲು ಕಳಿಸಬಹುದು. ವಿರಾಟ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು, ಮಧ್ಯಮ ಕ್ರಮಾಂಕದಲ್ಲಿ ಮನೀಷ್ ಪಾಂಡೆಗೆ ಅವಕಾಶ ಕೊಡಬಹುದು. ಆಲ್‌ರೌಂಡರ್‌ ಕೃಣಾಲ್ ಪಾಂಡ್ಯ ಅವರಿಗೂ ಕಣಕ್ಕಿಳಿಯುವ ಅವಕಾಶ ಸಿಗಬಹುದು.

ಇಂಗ್ಲೆಂಡ್ ತಂಡದ ಆಟಗಾರರು ಈಗ ಲಯಕ್ಕೆ ಮರಳಿರುವುದರಿಂದ ತುಂಬು ಆತ್ಮವಿಶ್ವಾಸದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿದ್ದ ತಂಡವನ್ನೇ ಉಳಿಸಿಕೊಳ್ಳಬಹುದು.

2ನೇ ಟ್ವೆಂಟಿ–20 ಪಂದ್ಯದ ಸಂಕ್ಷಿಪ್ತ ಸ್ಕೋರು
ಭಾರತ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 148. ಇಂಗ್ಲೆಂಡ್: 19.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 149 (ಅಲೆಕ್ಸ್‌ ಹೇಲ್ಸ್‌ 58, ಇಯಾನ್ ಮಾರ್ಗನ್ 17, ಜಾನಿ ಬೆಸ್ಟೊ 28, ಉಮೇಶ್ ಯಾದವ್ 36ಕ್ಕೆ2, ಭುವನೇಶ್ವರ್ ಕುಮಾರ್ 19ಕ್ಕೆ1, ಹಾರ್ದಿಕ್ ಪಾಂಡ್ಯ 28ಕ್ಕೆ1)
ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 5 ವಿಕೆಟ್‌ಗಳ ಜಯ. ಸರಣಿಯಲ್ಲಿ 1–1 ಸಮಬಲ.

ತಂಡಗಳು ಇಂತಿದೆ
ಭಾರತ:
ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಸುರೇಶ್ ರೈನಾ, ಮನೀಷ್ ಪಾಂಡೆ, ಮಹೇಂದ್ರಸಿಂಗ್ ದೋನಿ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಕೃಣಾಲ್ ಪಾಂಡ್ಯ, ಭುವನೇಶ್ವರ ಕುಮಾರ್, ದೀಪಕ್ ಚಾಹರ್, ಹಾರ್ದಿಕ್ ಪಾಂಡ್ಯ, ಸಿದ್ಧಾರ್ಥ್ ಕೌಲ್, ಉಮೇಶ್ ಯಾದವ್, ರವಿಶಾಸ್ತ್ರಿ (ಮುಖ್ಯ ಕೋಚ್).

ಇಂಗ್ಲೆಂಡ್: ಇಯಾನ್ ಮಾರ್ಗನ್ (ನಾಯಕ), ಮೋಯಿನ್ ಅಲಿ, ಜಾನಿ ಬೆಸ್ಟೋ, ಜೇಕ್ ಬಾಲ್, ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಸ್ಯಾಮ್ ಕುರ್ರನ್, ಅಲೆಕ್ಸ್‌ ಹೇಲ್ಸ್‌, ಕ್ರಿಸ್ ಜೋರ್ಡನ್, ಲಿಯಾಮ್ ಪ್ಲಂಕೆಟ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಡೇವಿಡ್ ವಿಲ್ಲಿ, ಡೇವಿಡ್ ಮಲಾನ್, ಬೆನ್ ಸ್ಟೋಕ್ಸ್‌,

ಪಂದ್ಯ ಆರಂಭ: ಸಂಜೆ 6.30
ನೇರಪ್ರಸಾರ: ಸೋನಿ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT