ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದ ಪೈಲ್ವಾನರ ಪದಕದ ಸಾಧನೆ...

Last Updated 18 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕದಲ್ಲಿ ಕುಸ್ತಿಯ ಸದ್ದು ಜೋರಾಗಿದೆ. ಈ ಭಾಗದಲ್ಲಿರುವ ವಿವಿಧ ಸಂಘಸಂಸ್ಥೆಗಳು, ಊರಿನವರು ಜಾತ್ರೆಯ ಸಂದರ್ಭಗಳಲ್ಲಿ ಕುಸ್ತಿ ಸ್ಪರ್ಧೆಗಳನ್ನು ಹೆಚ್ಚಾಗಿ ಆಯೋಜಿಸುತ್ತಿದ್ದಾರೆ. ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಪೈಲ್ವಾನರು ಸಾಕಷ್ಟು ಸಂಖ್ಯೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಧಾರವಾಡದಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ (ಎಸ್‌ಎಐ) ತರಬೇತಿ ಪಡೆದ ಕುಸ್ತಿಪಟುಗಳು ಕೂಡ ರಾಜ್ಯ ಮತ್ತು ರಾಷ್ಟ್ರಮಟ್ಟದ ‘ಅಖಾಡ’ಗಳಲ್ಲಿ ಪದಕ ಗೆಲ್ಲುತ್ತಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಖೇಲೊ ಇಂಡಿಯಾ ರಾಷ್ಟ್ರೀಯ ಶಾಲಾ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕ್ರೀಡಾ ಪ್ರಾಧಿಕಾರದ ಐವರು ಪೈಲ್ವಾನರು ಭಾಗವಹಿಸಿದ್ದರು. ಅದರಲ್ಲಿ ಸುನೀಲ ಫಡತಾರೆ (54 ಕೆ.ಜಿ. ಫ್ರೀಸ್ಟೈಲ್‌), ಸಿ. ಸುನೀಲ (85 ಕೆ.ಜಿ. ಫ್ರೀಸ್ಟೈಲ್‌) ಮತ್ತು ಶಿವಾನಂದ ಭಂಗಿ (69 ಕೆ.ಜಿ. ಗ್ರೀಕೊ ರೋಮನ್‌) ಕಂಚಿನ ಪದಕಗಳನ್ನು ಜಯಿಸಿದ್ದಾರೆ. 2018 ಆರಂಭವಾಗಿ ಒಂದು ತಿಂಗಳಷ್ಟೇ ಪೂರ್ಣಗೊಂಡಿದೆ. ಈಗಾಗಲೇ ವಿವಿಧ ಕುಸ್ತಿ ಸ್ಪರ್ಧೆಗಳಲ್ಲಿ ನಾಲ್ಕು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳು ಪ್ರಾಧಿಕಾರದ ಮಡಿಲು ಸೇರಿವೆ.

ಬಾಗಲಕೋಟೆ ಜಿಲ್ಲೆ ಮುಧೋಳದ ಸುನೀಲ ಫಡತಾರೆ ಹೋದ ವರ್ಷ ನವದೆಹಲಿಯಲ್ಲಿ ನಡೆದ ವಿಶ್ವ ಶಾಲಾ ಕ್ರೀಡಾಕೂಟದ 84 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಸೋನೆಪತ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ತಂಡದ ಆಯ್ಕೆ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಇತ್ತೀಚೆಗೆ ಪುಣೆಯಲ್ಲಿ ನಡೆದಿದ್ದ ಅಖಿಲ ಭಾರತ ಆಹ್ವಾನಿತ ಕುಸ್ತಿ ಚಾಂಪಿಯನ್‌ಷಿಪ್‌ನ 76 ಕೆ.ಜಿ. ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಚಿತ್ತೂರಿನಲ್ಲಿ ಸಬ್‌ ಜೂನಿಯರ್‌ ಕುಸ್ತಿಯಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದರು.

ಮೊದಲ ಸ್ಪರ್ಧೆಯಲ್ಲೇ ಪದಕ

ದಾವಣಗೆರೆಯ ಸಿ. ಸುನೀಲ ಮೂರು ವರ್ಷಗಳಿಂದ ಧಾರವಾಡದ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮೊದಲ ಬಾರಿಗೆ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ 54 ಕೆ.ಜಿ. ವಿಭಾಗದಲ್ಲಿ ಕಂಚು ಗೆದ್ದರು.

‘ರಾಷ್ಟ್ರಮಟ್ಟದ ಕೂಟಗಳಲ್ಲಿ ಸ್ಪರ್ಧೆ ಹೇಗೆ ಇರುತ್ತದೆ ಎನ್ನುವುದು ಗೊತ್ತಿರಲಿಲ್ಲ. ಈ ಬಾರಿ ಉತ್ತಮ ಅನುಭವವಾಯಿತು. ಪಾಲ್ಗೊಂಡ ಮೊದಲ ಕೂಟದಲ್ಲಿಯೇ ಪದಕ ಜಯಿಸಿದ್ದಕ್ಕೆ ಖುಷಿಯಾಗಿದೆ. ಮುಂದೆ ಇನ್ನಷ್ಟು ಪದಕಗಳನ್ನು ಗೆಲ್ಲಲು ಈ ಸಾಧನೆ ಸ್ಫೂರ್ತಿಯಾಗಿದೆ’ ಎಂದು ಸಿ. ಸುನೀಲ ಖುಷಿ ಹಂಚಿಕೊಂಡರು.

ಶಿವಾನಂದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಜಯಿಸಿದ ಎರಡನೇ ಪದಕ ಇದು. 2017ರಲ್ಲಿ ಮಹಾರಾಷ್ಟ್ರದಲ್ಲಿ ನಡೆದಿದ್ದ ರಾಷ್ಟ್ರೀಯ ಶಾಲಾ ಕ್ರೀಡಾಕೂಟದ 63 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು. ಕ್ರೀಡಾ ಪ್ರಾಧಿಕಾರದ ಧಾರವಾಡ ಕೇಂದ್ರದಲ್ಲಿ ಈಗ 20 ಜನ ಕುಸ್ತಿ ಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಶಂಕರಪ್ಪ ಮತ್ತು ಕೆ.ಎ. ಶ್ರೀನಿವಾಸ ಗೌಡ ಅವರು ಕುಸ್ತಿ ತರಬೇತುದಾರರಾಗಿದ್ದಾರೆ.

ಪ್ರಾಯೋಜಕತ್ವದ ಅವಕಾಶ

ಕಟ್ಟುಮಸ್ತು ದೇಹ, ಫಿಟ್‌ನೆಸ್‌ ಹೊಂದಿರುವ ಮತ್ತು ಕುಸ್ತಿ ಕೌಶಲಗಳನ್ನು ಚೆನ್ನಾಗಿ ಕಲಿತಿರುವ ಪೈಲ್ವಾನರಿಗೆ ಮೊದಲಿಗಿಂತ ಈಗ ಹೆಚ್ಚು ಬೇಡಿಕೆಯಿದೆ. ಪ್ರಾಯೋಜಕರೂ ಸಿಗುತ್ತಿದ್ದಾರೆ. ಭಾರತದಲ್ಲಿ ಕುಸ್ತಿ ಲೀಗ್‌ ಆರಂಭವಾಗಿರುವುದರಿಂದ ಆರ್ಥಿಕವಾಗಿ ಸಬಲರಾಗಲು ಅವರಿಗೆ ಸಾಧ್ಯವಾಗುತ್ತಿದೆ.

ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕುಸ್ತಿಗೆ ಮಹತ್ವ ನೀಡಲಾಗುತ್ತದೆ. ಪ್ರತಿ ಮನೆಗೆ ಒಬ್ಬ ಪೈಲ್ವಾನ ಇರಲೇಬೇಕು ಎಂದು ಬಯಸುತ್ತಾರೆ. ಕುಟುಂಬದವರೇ ಪ್ರೋತ್ಸಾಹ ಕೊಡುತ್ತಾರೆ.

ಇದರ ಬಗ್ಗೆ ಮಾತನಾಡಿರುವ ಶಂಕರಪ್ಪ ಅವರು ‘ಸತತ ಮೂರ್ನಾಲ್ಕು ವರ್ಷ ತರಬೇತಿ ಪಡೆದವರು ಪದಕ ಜಯಿಸುತ್ತಾರೆ. ಹಳೆಯ ಕುಸ್ತಿಪಟುಗಳೇ ಹೆಚ್ಚು ಪದಕ ಗೆಲ್ಲುತ್ತಾರೆ. ನಮ್ಮ ಪ್ರಾಧಿಕಾರದಲ್ಲಿ ತರಬೇತಿ ಪಡೆದವರು 2017ರಲ್ಲಿ ಒಂದು ಚಿನ್ನ ಸೇರಿದಂತೆ ಒಟ್ಟು ಏಳು ಪದಕಗಳನ್ನು ಪಡೆದಿದ್ದರು. ಗ್ರಿಕೊ ರೋಮನ್‌ ಮತ್ತು ಫ್ರೀಸ್ಟೈಲ್‌ ಎರಡೂ ವಿಭಾಗದಲ್ಲಿ ತರಬೇತಿ ನೀಡಲಾಗುತ್ತದೆ. ಫ್ರೀಸ್ಟೈಲ್‌ ವಿಭಾಗಕ್ಕೆ ಮಹತ್ವ ಹೆಚ್ಚು’ ಎಂದರು.

‘ಖೇಲೊ ಇಂಡಿಯಾ, ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ ಹೀಗೆ ವಿವಿಧ ಕ್ರೀಡಾಕೂಟಗಳಲ್ಲಿ ಪದಕ ಪಡೆದವರು ಇದ್ದಾರೆ. ಸುನೀಲ ಫಡತಾರೆ, ಈಶ್ವರ, ಅನಿಲ ದಳವಾಯಿ, ಪಾಲಾಕ್ಷಗೌಡ, ಪ್ರಶಾಂತಗೌಡ ಹೀಗೆ ಅನೇಕ ಕುಸ್ತಿಪಟುಗಳು ನಮ್ಮ ಬಳಿ ತರಬೇತಿ ಪಡೆದಿದ್ದಾರೆ. ಅವರು ಇನ್ನೂ ಉತ್ತಮ ಸಾಮರ್ಥ್ಯ ತೋರಬೇಕು’ ಎಂದು ಹೇಳಿದರು.

‘ನಮ್ಮಲ್ಲಿ ತರಬೇತಿ ಪಡೆದ ಕುಸ್ತಿಪಟುಗಳು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪದಕ ಜಯಿಸಿರುವುದರಿಂದ ಹೆಮ್ಮೆ ಎನಿಸುತ್ತಿದೆ. ಮುಂದಿನ ಕ್ರೀಡಾಕೂಟಗಳಲ್ಲಿ ಇನ್ನಷ್ಟು ಎತ್ತರದ ಸಾಧನೆ ಮಾಡಬೇಕು. ಅವರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡುತ್ತೇವೆ’ ಎಂದು ಪ್ರಾಧಿಕಾರದ ಧಾರವಾಡ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಈಶ್ವರ ಅಂಗಡಿ ಹೇಳುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT