ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಣಾಟಕ ಬ್ಯಾಂಕ್‌ ಸಂಸ್ಥಾಪಕರ ದಿನಾಚರಣೆ: ‘ಬೇಸರ ಮೂಡಿಸುವ ಬ್ಯಾಂಕಿಂಗ್‌ ವ್ಯವಸ್ಥೆ’

Last Updated 18 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ‘ಒಂದು ದೇಶದ ಯಶಸ್ಸು ಅಲ್ಲಿನ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಅವಲಂಬಿಸಿರುತ್ತದೆ. ಸದ್ಯಕ್ಕೆ ನಮ್ಮಲ್ಲಿನ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಗಮನಿಸಿದರೆ ಬೇಸರ ಪಡುವಂತಹ ಪರಿಸ್ಥಿತಿ ಇದೆ’ ಎಂದು ಇಶಾ ಫೌಂಡೇಷನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಹೇಳಿದರು.

ಕರ್ಣಾಟಕ ಬ್ಯಾಂಕ್‌ನ ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ಭಾನುವಾರ ಇಲ್ಲಿನ ಬ್ಯಾಂಕ್‌ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ‘ಲೈಫ್‌ ಆಡಿಟ್‌’ ಎಂಬ ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು.

‘ಉದ್ಯಮ ಕ್ಷೇತ್ರದ ಸಾಮರ್ಥ್ಯ ಮತ್ತು ಹಣಕಾಸು ಕ್ಷೇತ್ರದ ಸ್ವಾಸ್ಥ್ಯವು ಬ್ಯಾಂಕಿಂಗ್‌ ವ್ಯವಸ್ಥೆ ಅವಲಂಬಿಸಿರುತ್ತದೆ. ಆದರೆ ಈಗ ಬೆಳಕಿಗೆ ಬರುತ್ತಿರುವ ಈ ಕ್ಷೇತ್ರದಲ್ಲಿನ ಹಗರಣಗಳನ್ನು ನೋಡಿದರೆ ಈ ಬ್ಯಾಂಕ್‌ಗಳೇ ದೇಶವನ್ನು ಲೂಟಿ ಮಾಡುತ್ತಿರುವ ಅನುಮಾನ ಮೂಡಿಸುತ್ತವೆ’ ಎಂದರು.

‘ಹಣವನ್ನು ಹೇಗೆ ನಿಭಾಯಿಸು
ವುದು ಮತ್ತು ಯಾರು ಅದನ್ನು ನಿಭಾಯಿಸಬೇಕು ಎನ್ನುವುದು ಸಾಮಾಜಿಕ ವ್ಯವಸ್ಥೆಯ ಮುಖ್ಯ ಅಂಶ. ಈ ವ್ಯವಸ್ಥೆಯನ್ನು ನಿರೂಪಿಸುವಾಗ ‘ಹಣ’ದ ಸ್ವಭಾವವನ್ನು ಅರಿತಿರಬೇಕು. ನಮಗೆ ಬೇಕಾದ್ದನ್ನು ಪಡೆಯಲು ಹಣ ಒಂದು ಮಾಧ್ಯಮ ಅಷ್ಟೆ. ಆದರೆ ಹಣವೇ ಸಂಪತ್ತು ಎನ್ನುವ ಭಾವನೆ ಜನರಲ್ಲಿ ಮೂಡುತ್ತಿದೆ. ಆದ್ದರಿಂದಲೇ ಅವರು ಹಣವನ್ನು ಬೃಹತ್‌ ಗೋದಾಮುಗಳಲ್ಲಿ ತುಂಬಿಡುತ್ತಿದ್ದಾರೆ.

‘ಹಣವನ್ನು ಖರ್ಚು ಮಾಡಿ ಸಂಪತ್ತನ್ನು ಗಳಿಸಬೇಕು. ದುರದೃಷ್ಟವೆಂದರೆ ಜನರು ಹಣವನ್ನು ಗೋದಾಮುಗಳಲ್ಲಿ ತುಂಬಿಡಲು ಶುರು ಮಾಡಿದ್ದಾರೆ. ಗೋದಾಮುಗಳಲ್ಲಿ ವಸ್ತುಗಳಿರಬೇಕು. ಈ ತಪ್ಪು ತಿಳಿವಳಿಕೆಯೇ ಜನರನ್ನು ದುಃಖದೆಡೆಗೆ ದೂಡುತ್ತಿದೆ.

‘ಯಾರಿಗೂ ಸೇರದ ಹಣ ಸುರಕ್ಷಿತವಲ್ಲ. ಆದ್ದರಿಂದ ಹಣವು ಯಾರಿಗಾದರೂ ಸೇರಿದರೆ ಮಾತ್ರ ಅದನ್ನು ರಕ್ಷಿಸಲಾಗುತ್ತದೆ. ಹೀಗೆ ರಕ್ಷಿಸುವುದಕ್ಕೂ ಸಾಮರ್ಥ್ಯ ಬೇಕಾಗುತ್ತದೆ. ಇತ್ತೀಚೆಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗಿಂತ ಖಾಸಗಿ ಕ್ಷೇತ್ರದ ಬ್ಯಾಂಕ್‌ಗಳೇ ಹಣವನ್ನು ಕಾಪಿಡಲು ಹೆಚ್ಚು ಸಜ್ಜಾಗಿರುವಂತೆ ಭಾಸವಾಗುತ್ತಿದೆ. ಮುಂದಿನ 20 ವರ್ಷಗಳ ಅವಧಿಯಲ್ಲಿ ಸರ್ಕಾರಿ ಒಡೆತನದ ಬ್ಯಾಂಕ್‌ಗಳನ್ನು ಹಿಂದಿಕ್ಕಿ ಖಾಸಗಿ ಬ್ಯಾಂಕ್‌ಗಳೇ ಮುಂಚೂಣಿಗೆ ಬಂದರೂ ಅಚ್ಚರಿಯಿಲ್ಲ.

‘ಕಳೆದ 70 ವರ್ಷಗಳ ಅವಧಿಯಲ್ಲಿ ಹಣವಂತ ಜನರ ಸೃಷ್ಟಿಗಿಂತ ಹಣಕ್ಕಾಗಿ ಆಸೆಪಡುವ ಜನರನ್ನೇ ಹೆಚ್ಚು ಕಾಣುತ್ತಿದ್ದೇವೆ. ಹಣವಂತರು ಈ ಸಮಾಜಕ್ಕೆ ಅಗತ್ಯ. ಆದರೆ ಹಣಕ್ಕಾಗಿ ಬಾಯ್ಬಿಡುವ ಜನರಿದ್ದರೆ ಅವರನ್ನು ನಿಭಾಯಿಸುವುದು ಕಷ್ಟ. ಸಮಾಜದಲ್ಲಿ ಹಣಕಾಸಿನ ಲೆಕ್ಕ ಪರಿಶೋಧನೆ ಹೇಗೆ ಸ್ಪಷ್ಟವಾಗಿ ಇರಬೇಕೋ ಅದೇ ರೀತಿಯ ವ್ಯಕ್ತಿಯ ಅಂತರಂಗದ ಲೆಕ್ಕ ಪರಿಶೋಧನೆಯನ್ನೂ ಮಾಡಿಕೊಳ್ಳುವುದು ಅಗತ್ಯ’ ಎಂದರು.

ಬ್ಯಾಂಕ್‌ನ ಸಿಇಒ ಮಹಾಬಲೇಶ್ವರ ಎಂ.ಎಸ್‌. ಮಾತನಾಡಿ, ‘ಬ್ಯಾಂಕ್‌ನ ವ್ಯವಹಾರ ಒಂದು ಲಕ್ಷ ಕೋಟಿ ಮೀರಿದೆ’ ಎಂದರು. ಬ್ಯಾಂಕ್‌ನ ಅಧ್ಯಕ್ಷ ಪಿ. ಜಯರಾಂ ಭಟ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT