ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಮಾವಿನ ಕೆರೆ ಮಾಯ!

Last Updated 19 ಫೆಬ್ರುವರಿ 2018, 6:41 IST
ಅಕ್ಷರ ಗಾತ್ರ

ರಾಯಚೂರು: ನಗರದ ಐತಿಹಾಸಿಕ ಮಾವಿನ ಕೆರೆ ಒತ್ತುವರಿಗೆ ಕಡಿವಾಣ ಇಲ್ಲದಂತಾಗಿದ್ದು, ನೂರಾರು ಎಕರೆಯ ವಿಸ್ತಾರವಾಗಿದ್ದ ಕೆರೆಯು ದಿನದಿಂದ ದಿನಕ್ಕೆ ಕುಗ್ಗತ್ತಿದೆ. ಕೆಲವೆ ವರ್ಷಗಳಲ್ಲಿ ಕೆರೆ ಸಂಪೂರ್ಣ ಮಾಯವಾಗುವ ಲಕ್ಷಣಗಳಿವೆ!

ನಗರದ ಹೃದಯ ಭಾಗದಲ್ಲಿರುವ ಕೆರೆಯನ್ನು ರಕ್ಷಣೆ ಮಾಡಿ, ಅಭಿವೃದ್ಧಿ ಪಡಿಸಿದ್ದರೆ ನಗರದಲ್ಲಿ ಸುಂದರ ತಾಣವಾಗಿ ಕಂಗೊಳಿಸುತ್ತಿತ್ತು. ಆದರೆ, ಕೆರೆಯ ಮಹತ್ವ ಅರಿತುಕೊಂಡು ರಕ್ಷಣೆ ಮಾಡಬೇಕಾಗಿದ್ದ ಅಧಿಕಾರಿಗಳು ಮಾತ್ರ ಈ ಕಡೆಗೆ ಕೊಂಚವೂ ಗಮನ ಹರಿಸುತ್ತಿಲ್ಲ. ಹೀಗಾಗಿ ಕೆರೆ ಅವಸಾನಕ್ಕೆ ಯಾವುದೇ ಅಡ್ಡಿಯಿಲ್ಲದಂತಾಗಿ, ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ.

ಸಾರ್ವಜನಿಕರ ಆಸ್ತಿಯಾಗಿರುವ ಕೆರೆಯನ್ನು ಒತ್ತುವರಿ ಮಾಡಿದರೆ ಕೇಳುವವರಿಲ್ಲ. ದಿನದಿಂದ ದಿನಕ್ಕೆ ಕೆರೆ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಕೆರೆಯ ಎಲ್ಲ ಭಾಗ ಸುತ್ತಮುತ್ತಲಿನಿಂದ ಒತ್ತುವರಿ ನಿರಂತರವಾಗಿ ನಡೆಯುತ್ತಿದ್ದು, ಇದಕ್ಕೆ ಕೊನೆಯೇ ಇಲ್ಲದಂತಾಗಿದೆ. ಕೆರೆಯ ಸುತ್ತುವರಿದು ಬೃಹತ್ ಕಟ್ಟಡಗಳು ತಲೆ ಎತ್ತಿ ನಿಂತಿದ್ದು, ಕೆರೆಯ ಒತ್ತುವರಿ ತೆರವುಗೊಳಿಸಬೇಕಾದ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಅಲೆದಾಡುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ಒತ್ತುವರಿ ಮಾಡಿಕೊಳ್ಳುವವರಿಗೆ ರಕ್ಷಣೆ ಎಂಬಂತಾಗಿದೆ.

ಅಂತರ್ಜಲ ಕುಸಿತ ಸಮಸ್ಯೆ ಪರಿಹಾರಕ್ಕೆ ಸರ್ಕಾರವು ಕೆರೆ ಹೂಳೆತ್ತುವ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ ಅಸ್ತಿತ್ವದಲ್ಲಿರುವ ಕೆರೆಗೆ ತ್ಯಾಜ್ಯ ಸುರಿದು ಒತ್ತುವರಿಗೆ ತಡೆ ಹಾಕುತ್ತಿಲ್ಲ. ನಗರದ ಹೃದಯ ಭಾಗದಲ್ಲಿ ಇರುವ ಕೆರೆಯ ಕಳೆದುಹೋಗುತ್ತಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಸಂಬಂಧಪಟ್ಟವರು ಗಮನ ಹರಿಸದೇ ಮೌನವಾಗಿಬಿಟ್ಟಿದ್ದಾರೆ. ಪ್ರಮುಖವಾಗಿ, ಕೆರೆ ರಕ್ಷಿಸಬೇಕಿದ್ದ ನಗರಸಭೆ ಸದಸ್ಯರು, ಪರೋಕ್ಷವಾಗಿ ಒತ್ತುವರಿ ಮಾಡಿದವರ ರಕ್ಷಣೆಗೆ ನಿಲ್ಲುತ್ತಿದ್ದಾರೆ ಎನ್ನಲಾಗುತ್ತಿದೆ.

ಕೆರೆ ಒತ್ತುವರಿ ಆಗಿರುವುದು ಮಾತ್ರವಲ್ಲದೇ ತ್ಯಾಜ್ಯ ವಿಲೇವಾರಿ ಸ್ಥಳವಾಗಿ ಪರಿವರ್ತನೆಯಾಗುತ್ತಿದೆ. ಕೆರೆಯ ಸುತ್ತಲೂ ತ್ಯಾಜ್ಯವನ್ನು ತಂದು ಸುರಿಯುತ್ತಿರುವುದರಿಂದ ಕೆರೆಯ ಸೌಂದರ್ಯ ಕಳೆದು ಹೋಗಿದೆ.  ಚರಂಡಿ ನೀರನ್ನು ನೇರವಾಗಿ ಕೆರೆಗೆ ಹರಿಬಿಡಲಾಗಿರುವುದರಿಂದ ಕೆರೆಯ ನೀರಿನ ಬಣ್ಣವೂ ಬದಲಾಗಿದ್ದು, ಕೆರೆಯನ್ನು ಎಷ್ಟು ಸಾಧ್ಯವೋ ಅಷ್ಟೂ ಮಲೀನಗೊಳಿಸಲಾಗುತ್ತಿದೆ. ಇದರಿಂದ ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಸರ ತೀವ್ರತರದಲ್ಲಿ ಮಲೀನಗೊಂಡಿದ್ದು, ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟುಮಾಡಿದೆ.

ಮಳೆಗಾಲದ ಸಂದರ್ಭದಲ್ಲಿ ನಗರ ಹಾಗೂ ನಗರದ ಹೊರವಲಯದಿಂದ ಹರಿದು ಬರುವ ನೀರು ಈ ಕೆರೆ ಸೇರುತ್ತಿತ್ತು. ಮಳೆ ನೀರು ಹರಿದುಬರುತ್ತಿದ್ದ ಸ್ಥಳಗಳಲ್ಲಿ ಕೂಡ ಒತ್ತುವರಿ ಆಗಿರುವುದರಿಂದ ಕಳೆದಬಾರಿಯ ಮಳೆಗಾಲದ ಸಂದರ್ಭದಲ್ಲಿ ಮುಳ್ಳುಕುಂಟೆ ಕೆರೆ ತುಂಬಿದ್ದರಿಂದ ಸುತ್ತಲಿನ ಪ್ರದೇಶಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿತ್ತು.

ಕೆರೆ ಅಭಿವೃದ್ಧಿಗೆ ಅನುದಾನ

ಮಾವಿನ ಕೆರೆಯ ಒಟ್ಟು ವಿಸ್ತೀರ್ಣ 166 ಎಕರೆಯಿದ್ದು, ಕೆರೆ ಅಭಿವೃದ್ಧಿಗಾಗಿ ಸಮೀಕ್ಷೆ ಕೈಗೊಂಡಾಗ 150 ಎಕರೆ ವಿಸ್ತೀರ್ಣ ಉಳಿದಿತ್ತು. ಈಗಾಗಲೇ ಎಡಿಬಿಯ ₹2.5 ಕೋಟಿ ಅನುದಾನದಲ್ಲಿ ಕಾಲುವೆ, ವಾಕಿಂಗ್‌ ಟ್ರಾಕ್‌ ನಿರ್ಮಾಣ ಮಾಡಲಾಗಿದೆ.

ಹೆಚ್ಚಿನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಎಚ್‌ಕೆಆರ್‌ಡಿಬಿ ಅನುದಾನವನ್ನು ಪಡೆಯಲಾಗಿದೆ ಎಂದು ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹಮ್ಮದ್ ಶಫೀ ತಿಳಿಸಿದರು.

* * 

ಮಾವಿನ ಕೆರೆ ಅಭಿವೃದ್ಧಿ ಪಡಿಸುವ ಕಾರ್ಯಗಳು ನಡೆದಿದ್ದು, ಎಡಿಬಿ ಹಾಗೂ ಎಚ್‌ಕೆಆರ್‌ಡಿಬಿ ಅನುದಾನದಲ್ಲಿ ಅಭಿವೃದ್ದಿ ಪಡಿಸಲಾಗುವುದು.
ಮಹಮ್ಮದ್ ಶಫೀ, ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT