ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಕ ಝಳ: ಹಣ್ಣು ವ್ಯಾಪಾರ ಹೆಚ್ಚಳ

Last Updated 19 ಫೆಬ್ರುವರಿ 2018, 9:35 IST
ಅಕ್ಷರ ಗಾತ್ರ

ಹಾವೇರಿ: ಮಳೆ ಬಂದರೆ ಹಸಿರು, ಚಳಿಯಲ್ಲಿ ಇಬ್ಬನಿ, ಬೇಸಿಗೆಯಲ್ಲಿ ಬಾಡಿದ ನೆಲದ ಚಿತ್ರಣಗಳು ಸಾಮಾನ್ಯ. ಹೀಗೆ ಪ್ರಕೃತಿಗೆ ತಕ್ಕಂತೆ ಪರಿಸರ ಮಾತ್ರವಲ್ಲ, ಮಾರುಕಟ್ಟೆಯೂ ಬದಲಾಗುತ್ತದೆ. ಮನುಷ್ಯರ ಅವಶ್ಯಕತೆಗೆ ತಕ್ಕಂತೆ ‘ಬಣ್ಣ’ ಬದಲಾಯಿಸಿಕೊಳ್ಳುತ್ತದೆ.

ಶಿವರಾತ್ರಿ ಕಳೆದರೆ ಸಾಕು. ‘ಹರ ಹರಾ ಎನ್ನುವ ಬಿಸಿಲು’, ಎಲ್ಲೆಡೆ ಝಳ, ಬೆವರು, ಬಾಯಾರಿಕೆ, ದಣಿವು, ಸುಸ್ತು... ಎನ್ನುವುದು ಹಿರಿಯರು ಹಾಗೂ ಅನುಭವಿಗಳ ಮಾತು. ಅವರ ಅರಿವಿನ ಮಾತಿನಂತೆಯೇ ಬಿಸಿಲಿನ ಝಳವೂ ಹೆಚ್ಚುತ್ತಿದೆ.ಈ ಪ್ರಕೃತಿ ಸಹಜ ಬದಲಾವಣೆಗೆ ತಕ್ಕಂತೆ ನಗರದ ವ್ಯಾಪಾರವೂ ಬದಲಾಗುತ್ತಿದೆ. ಡಿಸೆಂಬರ್‌–ಜನವರಿಯಲ್ಲಿ ಚಳಿಗೆ ಪೂರಕ ಆಹಾರ ಪದಾರ್ಥಗಳು ಮಾರಾಟಗೊಳ್ಳುತ್ತಿದ್ದರೆ, ಈಗ ತರಹೇವಾರಿ ಹಣ್ಣುಗಳು ಲಗ್ಗೆ ಇಟ್ಟಿವೆ. ಎಲ್ಲೆಡೆ ಜ್ಯೂಸ್, ಮಜ್ಜಿಗೆ, ಐಸ್‌ಕ್ರೀಂ ಸವಿಯುವವರೇ ಹೆಚ್ಚಾಗಿದ್ದಾರೆ.

ಸತತ ಬರದ ಕಾರಣ ಹಣ್ಣುಗಳ ಆವಕ ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸುತ್ತಾರೆ. ಆದರೂ ನಗರದ ಬಸ್‌ ನಿಲ್ದಾಣ, ಜೆ.ಪಿ ವೃತ್ತ, ಲಾಲ್‌ ಬಹುದ್ದೂರ್‌ ಶಾಸ್ತ್ರಿ ಮಾರುಕಟ್ಟೆ, ಎಂ.ಜಿ ರಸ್ತೆ, ನಗರಸಭೆ ರಸ್ತೆ, ಕಾಗಿನೆಲೆ ರಸ್ತೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಹಣ್ಣು, ಜ್ಯೂಸ್‌ಗಳ ಮಾರಾಟದ ಅಂಗಡಿಗಳು ತೆರೆದುಕೊಂಡಿವೆ.

ರಸ್ತೆ ಬದಿಗಳಲ್ಲಿ ಸಣ್ಣದೊಂದು ಟೆಂಟ್ ಇಲ್ಲವೇ, ಛತ್ರಿ ಹಾಕಿ ಹಣ್ಣಿನ ಮಾರಾಟ ಮಾಡುವ ದೃಶ್ಯಗಳು ಸಾಮಾನ್ಯವಾಗಿವೆ. ಕಲ್ಲಂಗಡಿ, ಅಂಜೂರಾ, ಸೇಬು, ಬಾಳೆಹಣ್ಣು, ಕರ್ಬೂಜಾ, ಚಿಕ್ಕು ಸೇರಿದಂತೆ ತರಹೇವಾರಿ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಏರುಗತಿ ಕಾಣುತ್ತಿರುವ ತಾಪಮಾನವು ವ್ಯಾಪಾರ ವೃದ್ಧಿಗೆ ಪೂರಕವಾಗಿದೆ.

‘15 ವರ್ಷಗಳಿಂದ ರಸ್ತೆ ಬದಿಯಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ಹಣ್ಣಿನ ಹೊಲವನ್ನು ಗುತ್ತಿಗೆ ಪಡೆದುಕೊಳ್ಳುತ್ತೇವೆ. ಶಿವರಾತ್ರಿ ಬಳಿಕ ವ್ಯಾಪಾರ ಆರಂಭಿಸುತ್ತೇವೆ. ಜನರ ದಣಿವು ನಿವಾರಿಸುವುದೇ ನಮ್ಮ ಕಾಯಕ’ ಎಂದು ವ್ಯಾಪಾರಿ ಜಿಲಾನಿ ಹೊಸರಿತ್ತಿ ತಿಳಿಸಿದರು.

‘ನಾವು ಋತುವಿಗೆ ತಕ್ಕಂತೆ ಸ್ಥಳೀಯ, ದೇಶೀಯ, ವಿದೇಶಿ ಹಣ್ಣುಗಳನ್ನು ತರಿಸುತ್ತೇವೆ. ಕೆ.ಜಿಗೆ ₹ 30ರಿಂದ ₹ 400ರ ತನಕದ ವೈವಿಧ್ಯಮಯ ಹಣ್ಣುಗಳಿವೆ. ಇವು ಕೇವಲ ರುಚಿಗೆ ಮಾತ್ರವಲ್ಲ, ಬಿಸಿಲಿಗೆ ದೇಹದ ರಕ್ಷಣೆ ಮಾಡುತ್ತವೆ’ ಎನ್ನುತ್ತಾರೆ ನಗರದ ಎಚ್.ಕೆ.ಜಿ.ಎನ್ ಅಂಗಡಿಯ ಹಣ್ಣಿನ ವ್ಯಾಪಾರಿ ಔರಂಗ್ ಮುನ್ನಾ ಅಬ್ದುಲ್ ವಾಹಬ್ ಸಾಹೇಬ್.

ಪಾನೀಯ: ಬಿಸಿಲಿನ ಪರಿಣಾಮ ಹಣ್ಣಿನ ರಸ, ಪಾನೀಯ, ಮಜ್ಜಿಗೆ ವ್ಯಾಪಾರವೂ ದುಪ್ಪಟ್ಟಾಗಿದೆ. ಮಧ್ಯಾಹ್ನದ ಬಿಸಿಲಿನ ಝಳದಲ್ಲಿ ಮಾರುಕಟ್ಟೆಗೆ ಬಂದವರು ಜ್ಯೂಸ್, ಕೋಲ್ಡ್ರಿಂಕ್ಸ್, ಕಬ್ಬಿನ ಹಾಲು, ಮಜ್ಜಿಗೆ, ಲಸ್ಸಿ ಮತ್ತಿತರ ಪಾನೀಯದ ಮೊರೆ ಹೋಗುತ್ತಿದ್ದಾರೆ.

ಅದಕ್ಕೆ ತಕ್ಕಂತೆ ರಸ್ತೆ ಬದಿಯಲ್ಲಿ ಮುಸುಂಬಿ, ಕಲ್ಲಂಗಡಿ, ಕಬ್ಬಿನ ಜ್ಯೂಸ್‌ ಅಂಗಡಿಗಳು ಆರಂಭಗೊಂಡಿವೆ. ಇನ್ನೂ ಕೆಲವರು ಮಜ್ಜಿಗೆ, ಶರಬತ್ತು ಮೊರೆ ಹೋಗುತ್ತಿದ್ದಾರೆ. ವಿಭಿನ್ನ ಐಸ್‌ಕ್ರೀಂಗಳಿಗೂ ಬೇಡಿಕೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಋತುಮಾನಕ್ಕೆ ತಕ್ಕಂತೆ ವ್ಯಾಪಾರ ತೆರೆದುಕೊಳ್ಳುತ್ತಿದೆ.

‘ಚಿಕಿತ್ಸೆಗಿಂತ ಮುಂಜಾಗ್ರತೆ ವಹಿಸಿ’

‘ಆರೋಗ್ಯಕ್ಕೆ ಚಿಕಿತ್ಸೆಗಿಂತ ಮುಂಜಾಗ್ರತೆ ಮುಖ್ಯ. ಬಿಸಿಲಿಗೆ ದೇಹದಲ್ಲಿ ನೀರಿನ ಅಂಶದ ಕೊರತೆ (ಡಿಹೈಡ್ರೇಶನ್) ಆಗದಂತೆ ಎಚ್ಚರಿಕೆ ವಹಿಸಬೇಕು. ಅದಕ್ಕೆ ಹಣ್ಣುಗಳ ಸೇವನೆ ಉತ್ತಮ. ಅವುಗಳಲ್ಲಿ ನೀರಿನ ಅಂಶದ ಜೊತೆಗೆ ಸೂಕ್ಷ್ಮ ಪೌಷ್ಟಿಕಾಂಶಗಳು, ಲವಣಾಂಶಗಳಿವೆ’ ಎನ್ನುತ್ತಾರೆ ಹಾವೇರಿಯ ಮಕ್ಕಳ ತಜ್ಞ ಡಾ.ವಿನಾಯಕ ಪಾಟೀಲ್.

‘ಪ್ರಖರ ಬಿಸಿಲಿಗೆ ಹೋಗುವುದನ್ನು ತಪ್ಪಿಸಬೇಕು. ಆದರೆ, ದೇಹದಲ್ಲಿ ನಿರೋಧಕತೆಯೂ ಹೆಚ್ಚಬೇಕು. ಹೀಗಾಗಿ ಸಾಮಾನ್ಯ ಬಿಸಿಲಿಗೆ ಹೋದರೆ ತಪ್ಪಲ್ಲ. ಆಗ ದೇಹದ ನೀರಿನಾಂಶ ಕಾಯ್ದುಕೊಳ್ಳಲು ಹಣ್ಣು, ಆರೋಗ್ಯಕರವಾದ ದ್ರವ ಪದಾರ್ಥಗಳನ್ನು ಮಕ್ಕಳಿಗೆ ನೀಡುವುದು ಉತ್ತಮ’ ಎನ್ನುತ್ತಾರೆ ಅವರು. ಕಾಯಿಸಿ ಆರಿಸಿ ಮಣ್ಣಿನ ಮಡಕೆಯಲ್ಲಿಟ್ಟ ನೀರು, ಖಾದಿ, ಹತ್ತಿ ಬಟ್ಟೆ, ಚರ್ಮದ ಚಪ್ಪಲಿಗಳ ಬಳಕೆ ಉತ್ತಮ ಎಂಬುದು ಹಿರಿಯ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT