ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿಯಲ್ಲಿ ಗೌಡರ ಸದ್ದು: ಹಣಾಹಣಿಗೆ ಸಿದ್ಧತೆ

Last Updated 19 ಫೆಬ್ರುವರಿ 2018, 10:02 IST
ಅಕ್ಷರ ಗಾತ್ರ

ಕುಷ್ಟಗಿ: ಈ ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮೆ ಆಯ್ಕೆಯಾದವರು ಮತ್ತೊಂದು ಚುನಾವಣೆಯಲ್ಲಿ ಎರಡನೇ ಅವಧಿಗೆ ಮರುಆಯ್ಕೆಯಾದ ಉದಾಹರಣೆ ಇಲ್ಲ. ಈ ಮಾತು ಕಾಂಗ್ರೆಸ್‌ನಿಂದ ಸ್ಪರ್ಧೆ ಬಯಸಿರುವ ಅಮರೇಗೌಡ ಬಯ್ಯಾಪುರ ಪಾಲಿಗೆ ವಿಶ್ವಾಸ ಇಮ್ಮಡಿಸಿದರೆ, ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಸ್ವಲ್ಪ ಕಸಿವಿಸಿ ಉಂಟು ಮಾಡಿದೆ.

ಬಿಜೆಪಿಯಿಂದ ದೊಡ್ಡನಗೌಡರಿಗೆ ಟಿಕೆಟ್‌ ಕೊಡುವುದು ಖಾತ್ರಿಯಾಗಿದೆ. ಬಯ್ಯಾಪುರ ಅವರ ಹೆಸರನ್ನು  ಡಿಸೆಂಬರ್‌ನಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅದುವರೆಗೆ ಕ್ಷೇತ್ರದಲ್ಲಿ ತಾವೂ ಕಾಂಗ್ರೆಸ್‌ ಹುರಿಯಾಳುಗಳು ಎಂದು ಆಕಾಂಕ್ಷೆ ವ್ಯಕ್ತಪಡಿಸಿದವರನ್ನು ಬದಿಗೆ ಸರಿಸಲಾಯಿತು. ಇಬ್ಬರ ಹೋರಾಟಕ್ಕೆ ಪಕ್ಷದ ಕಡೆಯಿಂದ ಹಸಿರು ನಿಶಾನೆ ಸಿಕ್ಕಿದೆ. ಇಬ್ಬರಿಗೂ ತಮ್ಮ ಗೆಲುವಿನ ಬಗ್ಗೆ ವಿಶ್ವಾಸ ಮೂಡಿದೆ. ತಮ್ಮದೇ ಆದ ರೀತಿಯಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. 

‘ವಿರೋಧ ಪಕ್ಷದ ಶಾಸಕನಾಗಿದ್ದರೂ ₹ 900 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿರುವೆ. ನೀರಾವರಿ ವಿಷಯದಲ್ಲಿನ ಹೋರಾಟದ ಜತೆಗೆ ಕೇಂದ್ರ ಸರ್ಕಾರದ ಸಾಧನೆ ಮತ್ತು ನರೇಂದ್ರ ಮೋದಿ ಅವರ ವರ್ಚಸ್ಸು ನೆರವಿಗೆ ಬರಲಿದೆ’ ಎಂಬ ವಿಶ್ವಾಸ ದೊಡ್ಡನಗೌಡ ಅವರದ್ದು.

‘2013ರ ಚುನಾವಣೆಯಲ್ಲಿ ನನ್ನದು ಸೋಲೇ ಅಲ್ಲ. ಬಿಎಸ್‌ಆರ್‌ ಪಕ್ಷದಿಂದ ಸ್ಪರ್ಧಿಸಿದ್ದ ರಾಜಶೇಖರಗೌಡ ಅವರು ಮತ ಸೆಳೆದುಕೊಂಡ ಪರಿಣಾಮವಾಗಿ ಕಡಿಮೆ ಅಂತರದಲ್ಲಿ ಪರಾಭವಗೊಳ್ಳು ವಂತಾಯಿತು. ಈ ಬಾರಿ ಅಂಥ ಪರಿಸ್ಥಿತಿ ಇಲ್ಲ. ಮಾಜಿಯಾದರೂ ಜನರ ಸಮಸ್ಯೆಗೆ ಸ್ಪಂದಿಸಿದ್ದೇನೆ. ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಸಾಧನೆಗಳೂ ನೆರವಿಗೆ ಬರಲಿವೆ’ ಎನ್ನುತ್ತಾರೆ ಅಮರೇಗೌಡ ಬಯ್ಯಾಪುರ.

ನೀರಾವರಿ ಅಭ್ಯರ್ಥಿ, ಜೆಡಿಎಸ್‌ ಗೊಂದಲ ಅಂತ್ಯ: ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮತ್ತು ಇದೇ ತಾಲ್ಲೂಕಿನವರಾದ ಎಚ್‌.ಸಿ.ನೀರಾವರಿ ಅವರನ್ನು ಈ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪಕ್ಷ ತೀರ್ಮಾನಿಸುವ ಮೂಲಕ ಅಭ್ಯರ್ಥಿಯ ಆಯ್ಕೆ ಕುರಿತಂತೆ ಜೆಡಿಎಸ್‌ನಲ್ಲಿದ್ದ ಗೊಂದಲ, ಅಸಮಾಧಾನಕ್ಕೆ ಅಂತ್ಯ ಹಾಡಲಾಗಿದೆ.

ಕ್ಷೇತ್ರದಲ್ಲಿ ಸಿ.ಎಂ.ಹಿರೇಮಠ ಪಕ್ಷವನ್ನು ಸಂಘಟಿಸಿ ತಾವೇ ಅಭ್ಯರ್ಥಿ ಎಂದು ಪ್ರಚಾರವನ್ನೂ ಕೈಗೊಂಡಿದ್ದರು. ಆದರೆ ಕೆಲ ದಿನಗಳ ನಂತರ ಶಿವಪ್ಪ ನೀರಾವರಿ ಅವರನ್ನು ಅಭ್ಯರ್ಥಿ ಎಂದು ಸ್ವತಃ ಎಚ್‌.ಡಿ.ದೇವೇಗೌಡರೆ ಹೇಳಿದ್ದಾರೆ ಎಂದೆ ಶಿವಪ್ಪ ಪ್ರಚಾರ ನಡೆಸಿದ್ದು ಹಿರೇಮಠ ಅವರಲ್ಲಿ ಅಸಮಾಧಾನ ತಂದಿತ್ತು. ಎರಡು ಪ್ರತ್ಯೇಕ ಗುಂಪುಗಳಾಗಿದ್ದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿತ್ತು.

ಆದರೆ, ಈಗ ಶಿವಪ್ಪ ಅವರ ಬದಲಾಗಿ ಅವರ ಅಣ್ಣ ಹುಲ್ಲಪ್ಪ ನೀರಾವರಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿರುವುದು ಕಾರ್ಯಕರ್ತರು, ಮುಖಂಡರಲ್ಲಿ ಸದ್ಯ ಸಂತಸ ತಂದಿದೆ. ತಮ್ಮನಿಗಿಂತ ಅಣ್ಣನ ಬಗ್ಗೆ ಪಕ್ಷದ ಕಾರ್ಯಕರ್ತರು ಮುಖಂಡರಲ್ಲಿ ಒಲವು ಇರುವುದು ಕಂಡುಬಂದಿದೆ.

ಕುಷ್ಟಗಿ ವಿಧಾನಸಭಾ ಕ್ಷೇತ್ರ

ಒಟ್ಟು ಮತದಾರರು– 2,19,560
ಮಹಿಳಾ ಮತದಾರರು– 1,08,133
ಪುರುಷ ಮತದಾರರು– 1,11,427
ಒಟ್ಟು ಮತಗಟ್ಟೆಗಳು – 269

ಜುಗಲ್‌ಬಂದಿಯ ಕ್ಷೇತ್ರ

2004ರ ವಿಧಾನಸಭೆ ಚುನಾವಣೆಯಲ್ಲಿ ಸುಮಾರು ಹತ್ತು ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ದೊಡ್ಡನಗೌಡ 2008ರಲ್ಲಿ 3ನೇ ಸ್ಥಾನಕ್ಕೆ ಕುಸಿದು ಒಂದು ಅವಧಿಯ ನಂತರ 2013ರಲ್ಲಿ 3,037 ಮತಗಳ ಅಂತರದಿಂದ ಎರಡನೇ ಬಾರಿ ಶಾಸಕರಾದರು.

ಲಿಂಗಸೂಗೂರು ಮೀಸಲು ಕ್ಷೇತ್ರವಾದ ನಂತರ ಈ ಕ್ಷೇತ್ರಕ್ಕೆ ಬಂದ ಅಮರೇಗೌಡ ಬಯ್ಯಾಪುರ 2008ರಲ್ಲಿ ಜೆಡಿಎಸ್‌ನ ಕೆ.ಶರಣಪ್ಪ ಅವರ
ವಿರುದ್ಧ ಕೇವಲ 1,770 ಮತಗಳ ಅಂತರದಲ್ಲಿ ಗೆದಿದ್ದರು.

ಕಳೆದ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಕೆ.ಶರಣಪ್ಪ ಈ ಬಾರಿ ಬಿಜೆಪಿಯ ದೊಡ್ಡನಗೌಡ ಪಾಟೀಲರೊಂದಿಗೆ ರಾಜಕೀಯ ಜುಗಲ್‌ಬಂದಿಯಲ್ಲಿ ತೊಡಗಿದ್ದಾರೆ. ಇದೂ ತಮಗೆ ಪ್ಲಸ್‌ಪಾಯಿಂಟ್‌ ಎಂಬ ವಿಶ್ವಾಸ ಶಾಸಕ ದೊಡ್ಡನಗೌಡ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT