ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಾಮಾನ್ಯ ಅಸಭ್ಯರು

Last Updated 19 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಮಾಮೂಲಿಯಾಗಿಬಿಟ್ಟಿರುವ ಸುದ್ದಿಯೊಂದು ಹೊಸದಾಗಿ ನೆನ್ನೆ ಮತ್ತೊಮ್ಮೆ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದೆ. ಬೆಂಗಳೂರಿನ ಪ್ರಸಿದ್ಧ ಶಾಸಕರೊಬ್ಬರ ಮಗನೂ ಪ್ರಮುಖ ರಾಜಕೀಯ ಪಕ್ಷವೊಂದರ ಯುವ ನಾಯಕನೂ ಆಗಿರುವ ಒಬ್ಬಾತನು ಈ ಬಾರಿ ಸುದ್ದಿಯಾಗಿದ್ದಾನೆ. ಯುವನಾಯಕ ಯುಬಿ ಸಿಟಿ ಬಾರಿನಲ್ಲಿದ್ದಾಗ, ಎದುರಿಗೆ ಕುಳಿತಿದ್ದಾತ ಕಾಲು ಮಡಿಚಿಕೊಂಡು ಯುವ ನಾಯಕನಿಗೆ ಮರ್ಯಾದೆ ಕೊಡಲಿಲ್ಲ ಎಂಬ ಏಕೈಕ ಕಾರಣದಿಂದ, ಎರ್ರಾಬಿರ್ರಿ ಥಳಿಸಿ ತಲೆಯ ಮೇಲೆ ಮದ್ಯದ ಬಾಟಲಿ ಒಡೆದು ಸುದ್ದಿ ಮಾಡಿದ್ದಾನೆ. ಇಂತಹ ನಡವಳಿಕೆ ಸಾಮಾನ್ಯರಲ್ಲಿ ಕಂಡಿದ್ದರೆ ಆಶ್ಚರ್ಯವಾಗುತ್ತಿರಲಿಲ್ಲ. ಅರ್ಥಾತ್‌, ಪೊಲೀಸು ದಾಸ್ತಾವೇಜುಗಳಲ್ಲಿ ರೌಡಿಶೀಟರ್‌ಗಳೆಂದು ದಾಖಲಾಗಿರುವವರಲ್ಲಿ ಕಂಡಿದ್ದರೆ ಆಶ್ಚರ್ಯವಾಗುತ್ತಿರಲಿಲ್ಲ.

ಆದರೆ ಸುದ್ದಿ ಮಾಡಿದವರು ಅಸಾಮಾನ್ಯ ಅಸಭ್ಯರು, ದೇಶದ ನಾಯಕರು. ಅಸಾಮಾನ್ಯ ಶ್ರೀಮಂತಿಕೆ, ಅಸಾಮಾನ್ಯ ಶಿಕ್ಷಣ, ಅಸಾಮಾನ್ಯ ಅಧಿಕಾರಗಳನ್ನು ಪಡೆದಿರುವವರು ಇವರು. ಬುದ್ಧ, ಬಸವ, ಅಂಬೇಡ್ಕರ್‌, ಗಾಂಧಿ, ಕುವೆಂಪು ಇತ್ಯಾದಿ ಸಭ್ಯ ಮಾದರಿಗಳನ್ನೆಲ್ಲ ಹಿಂದಿಕ್ಕಿ ಹೊಸತೇ ಆದ ನೈತಿಕ ಮಾದರಿಯೊಂದನ್ನು ನಿರ್ಮಿಸುತ್ತಿರುವ ನಾಯಕ ಮಣಿಗಳಿವರು. ಇವರು ಎಲ್ಲ ರಾಜಕೀಯ ಪಕ್ಷಗಳಲ್ಲೂ ತುಂಬಿಕೊಂಡಿದ್ದಾರೆ. ಎಲ್ಲ ಶ್ರೀಮಂತ ಧಾರ್ಮಿಕ ಕ್ಷೇತ್ರಗಳಲ್ಲಿ, ಎಲ್ಲ ಶ್ರೀಮಂತ ಉದ್ಯಮ ಕ್ಷೇತ್ರಗಳಲ್ಲಿ ತುಂಬಿಕೊಂಡಿದ್ದಾರೆ ಇವರು. ಸಾವಿರಾರು ಕೋಟಿ ರೂಪಾಯಿಗಳ ವಂಚನೆ ಮಾಡಿ ಹೀರೊಗಳಾಗಿ ಉಳಿಯಬಲ್ಲವರು ಇವರು. ಜೈಲಿನಲ್ಲಿದ್ದುಕೊಂಡೇ ಚುನಾವಣೆ ಗೆಲ್ಲಬಲ್ಲವರು. ಕೊಲೆ, ಸುಲಿಗೆ, ಹಾದರ ಮಾಡಿಯೂ ರಾಜಾರೋಷವಾಗಿ ತಿರುಗಾಡಿಕೊಂಡಿರಬಲ್ಲವರು.

ಇವರನ್ನು ನಾಯಕರನ್ನಾಗಿ ಮಾಡಿರುವವರು ಮತ್ತಾರೂ ಅಲ್ಲ, ನಾವೇ ಸರಿ. ಇವರ ‘ಯುಬಿ ಸಿಟಿ’ ಸಂಸ್ಕೃತಿಯನ್ನು ತಲೆಯ ಮೇಲೆ ಹೊತ್ತು ತಿರುಗುತ್ತಿರುವವರು ಮತ್ತಾರೂ ಅಲ್ಲ ನಾವೇ ಸರಿ. ಬಡಪಾಯಿ ಗ್ರಾಮಸ್ಥರು, ನಗರಗಳ ಬಡವರು, ಮಧ್ಯಮ ವರ್ಗದವರು ಎಲ್ಲರೂ ಸೇರಿ ನಿರ್ಮಿಸಿರುವ ನಾಯಕರಿವರು. ಅಸಭ್ಯತೆಯನ್ನು ಇಲ್ಲಿಯವರೆಗೆ ಸಾಮಾನ್ಯವಾಗಿ ಜಮೀನುದಾರಿ ಅತಿರೇಕವಾಗಿ ನೋಡಲಾಗುತ್ತಿತ್ತು. ಜಮೀನುದಾರಿ ಅಸಭ್ಯತೆಯನ್ನು ಸಾವಿರಾರು ಕತೆ, ಕಾದಂಬರಿಗಳಲ್ಲಿ ರಚಿಸಿರುವ ನಮ್ಮ ಲೇಖಕರು ಬಗ್ಗೆ ತಮಗೆ ತಿಳಿದೇ ಇದೆ. ಈಗ ಅಸಭ್ಯತೆಯೆಂಬುದು ಗ್ರಾಮೀಣ ಪಾಳೆಯಗಾರಿ ಪದ್ಧತಿಯನ್ನು ನಾಚಿಸುವಂತೆ ಬೆಳೆದಿದೆ ಹಾಗೂ ನಗರೀಕರಣಗೊಂಡಿದೆ. ವಿಧಾನಸೌಧ, ಯುಬಿ ಸಿಟಿ, ಸ್ಮಾರ್ಟ್‌ಸಿಟಿ ಇತ್ಯಾದಿಗಳಲ್ಲಿ ಮೆರೆದಾಡತೊಡಗಿದೆ ಅದು. ಹಳೆಯ ಮದ್ಯವು ಹೊಸ ಬಾಟಲಿಯಲ್ಲಿ ರಾರಾಜಿಸಿದಂತೆ.

ಇತ್ತ ನಾವು ದನಿ ಸತ್ತವರಾಗಿದ್ದೇವೆ ಅಥವಾ ಪ್ರತ್ಯೇಕ ಪ್ರತ್ಯೇಕವಾಗಿ ಕ್ಷೀಣ ದನಿ ಎತ್ತಿ ಹುತಾತ್ಮರಾಗುತ್ತಿದ್ದೇವೆ. ‘ಸ್ವಾಮಿ! ನೀವೂ ಸಹ ನಮ್ಮಷ್ಟೆ ಸರಳವಾಗಿ, ನಮ್ಮಷ್ಟೆ ವಿನಯಪೂರ್ವಕವಾಗಿ ಬದುಕಬೇಕು’ ಎಂದು ಧೈರ್ಯದಿಂದ ಹೇಳಲಾರದವರಾಗಿದ್ದೇವೆ ನಾವು. ‘ನಿಮ್ಮ ವರಮಾನವು ನಮ್ಮಗಳ ವರಮಾನಕ್ಕಿಂತ ಹೆಚ್ಚಿಗೆ ಇರಬೇಕಾದ ಅಗತ್ಯವಿಲ್ಲ, ನಿಮ್ಮ ಪಕ್ಷಗಳ ವರಮಾನವು ನಮ್ಮ ಪಂಚಾಯಿತಿಗಳ ವರಮಾನಕ್ಕಿಂತ ಹೆಚ್ಚಿಗೆ ಇರಬೇಕಾದ ಅಗತ್ಯವಿಲ್ಲ... ಸೀಜರನ ಹೆಂಡತಿಯಿರಲಿ ಅಥವಾ ಶ್ರೀರಾಮಚಂದ್ರನ ಮಕ್ಕಳಿರಲಿ, ಯಾರೇ ಇರಲಿ, ಅವರಿಗಾಗಿ ಪ್ರತ್ಯೇಕ ನೈತಿಕತೆಯೆಂಬುದಿಲ್ಲ’ ಎಂದು ಹೇಳುವ ಧೈರ್ಯ ಕಳೆದುಕೊಂಡಿದ್ದೇವೆ ನಾವು.

ಅವರು ‘ಗೌಡ್ರ ಗದ್ಲ’ ಮಾಡಿ ರಂಪ ಎಬ್ಬಿಸಿದಾಗ ಅವರ ಗಂಡಸುತನವನ್ನು ಮೆಚ್ಚುವಂತೆ, ಅವರು ಭ್ರಷ್ಟರಾದಾಗ, ಅತ್ಯಾಚಾರ ನಡೆಸಿದಾಗ ಅಥವಾ ರಸ್ತೆಬದಿಯಲ್ಲಿ ಮಲಗಿದ್ದ ಕೃಷಿ ಕಾರ್ಮಿಕರ ಮೇಲೆ ಕಾರು ಹಾಯಿಸಿದಾಗ ಅವರ ಕಾರನ್ನು ಕಂಡು ಕರುಬುವಂತೆ ಹೇಳಿಕೊಡಲಾಗುತ್ತಿದೆ ನಮಗೆ. ಅವರು ಮತೀಯ ಗಲಭೆ ನಡೆಸಿದಾಗ, ಹಫ್ತಾ ವಸೂಲಿ ಮಾಡಿದಾಗ ಅಥವಾ ಹಫ್ತಾ ಕೊಡದವರ ಮೇಲೆ ಹಲ್ಲೆ ಮಾಡಿದಾಗ, ಹಾಗೆ ಮಾಡಿದವರನ್ನು ನಮ್ಮ ರಕ್ಷಕರೆಂದು ತಿಳಿಯುವಂತೆ ತರಬೇತು ಮಾಡಲಾಗಿದೆ ನಮಗೆ.

ನಾಯಿಗಳಿಗೆ ಮೂಳೆಯ ತುಂಡು ಎಸೆಯುವಂತೆ, ಅವರು ಹಾಗೂ ಅವರ ಸರ್ಕಾರಗಳು ನಮ್ಮತ್ತ ಪುಡಿಗಾಸು ಎಸೆಯುತ್ತವೆ. ನಾವು ಬಾಲ ಆಡಿಸುತ್ತೇವೆ. ನಾವು ಅಕೃತ್ಯ ನಡೆಸಿದಾಗ ಅವರ ಬೆಂಬಲವಿರಲಿ ಎಂದು ನಮಗೆ ಕಿವಿಮಾತು ಹೇಳಿಕೊಡಲಾಗುತ್ತಿದೆ. ಈ ದೇಶದ ಮಧ್ಯಮ ವರ್ಗ ಕೂಡ ಇಂತಹ ನಡವಳಿಕೆಯಿಂದ ಹೊರತಾಗಿಲ್ಲ.

ನಟನೆಯನ್ನು ನಿಜವೆಂದು ನಂಬುವ ಜನರು ನಾವು. ಮುಂದಿನ ಎರಡು ತಿಂಗಳ ಕಾಲ ಚುನಾವಣೆಯೆಂಬ ಹೆಸರಿನಲ್ಲಿ ನಡೆಯಲಿರುವ ದೊಡ್ಡಾಟವನ್ನು ನಾವು ನಿರ್ವಹಿಸಲಿರುವ ಪರಿಯನ್ನೇ ಗಮನಿಸಿ. ಅವರು ಸಭ್ಯತೆಯ ನಟನೆ ಮಾಡುತ್ತಾರೆ. ನಾವು ನಂಬುತ್ತೇವೆ. ಅವರು ತಗ್ಗಿ ಬಗ್ಗಿ ನಡೆಯುವ ನಟನೆ ಮಾಡುತ್ತಾರೆ. ನಾವು ನಂಬುತ್ತೇವೆ. ಅವರು ಅತಿ ವಿನಯ ತೋರುತ್ತಾರೆ. ತಮ್ಮ ತಾತ ಮುತ್ತಾತಂದಿರು ಅದೆಂತಹ ಘನ ಘೋರ ಬಡತನವನ್ನು ಅನುಭವಿಸಿದ್ದರು, ಅದೆಂತಹ ಜಾತಿ ಪದ್ಧತಿಯನ್ನು ಹೊತ್ತು ನರಳಿದ್ದರು ಎಂದು ಕಣ್ಣೀರು ಕರೆಯುತ್ತಾರೆ. ಡಾಕ್ಟರ್‌ ರಾಜ್‌ಕುಮಾರರ ‘ಭಕ್ತ ಕನಕದಾಸ’ ಚಿತ್ರ ನೋಡಿದಷ್ಟೇ ಭಯ– ಭಕ್ತಿಯಿಂದ, ಪ್ರೀತಿ–ಆದರಗಳಿಂದ ಈ ಕಳ್ಳ ನಟರಿಗೆ ವೋಟು ನೀಡಿಬರುತ್ತೇವೆ ನಾವು.

ಅಹಂಕಾರಿಗಳು, ಅಸಹಿಷ್ಣುಗಳು, ಡೊಳ್ಳು ಹೊಟ್ಟೆಯ ಶ್ರೀಮಂತ ರಾಜಕಾರಣಿಗಳು ಏದುಬ್ಬಸ ಪಟ್ಟುಕೊಂಡು ಕೊಳೆಗೇರಿಗಳಿಗೆ ತೆರಳಿ, ಅಲ್ಲಿ ಜರ್ಜರಿತ ಮುದುಕ ಮುದುಕಿಯರನ್ನು ಹುಡುಕಿ ಹುಡುಕಿ ಹಿಡಿದು ಹಿಡಿದು ಕಣ್ಣೀರ್‌ಗರೆದಾಗ, ರೋಗಿಗಳತ್ತ ತೆರಳಿ ಹಾಲು, ಹಣ್ಣು ಹಂಚಿದಾಗ, ಶ್ರಮಜೀವಿಗಳಿಗಿಂತ ಮಿಗಿಲಾಗಿ ಶ್ರಮಜೀವನದ ಬಗ್ಗೆ ಭಾಷಣ ಬಿಗಿದಾಗ ನಾವು ನಂಬಿಬಿಡುತ್ತೇವೆ.

ನಿಜವಾದ ವಿನಯಕ್ಕೂ ವಿನಯದ ನಟನೆಗೂ ವ್ಯತ್ಯಾಸ ತಿಳಿಯದೆ ನಮಗೆ? ಸರಳ ಬದುಕಿಗೂ ಎಲೆಕ್ಷನ್‌ ಸ್ಟಂಟಿಗೂ ವ್ಯತ್ಯಾಸ ತಿಳಿಯದೆ ನಮಗೆ? ಒಬ್ಬ ಕಾರ್ಯಕರ್ತನಿಗೂ ದಾರಿ ತಪ್ಪಿದ ಮಂತ್ರಿಯ ಮಗನಿಗೂ ವ್ಯತ್ಯಾಸ ತಿಳಿಯದೆ ನಮಗೆ? ನಮ್ಮ ಜಾತಿ ನಮ್ಮ ಧರ್ಮದ ಎಲ್ಲರೂ ಯೋಗ್ಯರು, ಇತರೆ ಜಾತಿ ಇತರೆ ಧರ್ಮಗಳ ಎಲ್ಲರೂ ಅಯೋಗ್ಯರು ಎಂದು ತಿಳಿಯುವಷ್ಟು ಹುಂಬರೇ ನಾವು?

ಅಥವಾ, ರಾಮನ ಹೆಸರೆತ್ತಿದ ತಕ್ಷಣ ಅಥವಾ ಬುದ್ಧ, ಬಸವ, ಅಂಬೇಡ್ಕರ್‌, ಗಾಂಧಿ ಯಾವುದೇ ಹೆಸರೆತ್ತಿದ ತಕ್ಷಣ ಅಷ್ಟೊಂದು ಭಾವುಕರಾಗಿ ಬಿಡುವ ಅಗತ್ಯವಿದೆಯೆ ನಮಗೆ? ಹೆಸರೆತ್ತುತ್ತಿರುವ ಬಾಯಿಯ ಹೊಲಸು ದುರ್ನಾತ ನಮ್ಮ ಮೂಗಿಗೆ ಬಡಿಯುತ್ತಿಲ್ಲವೇ? ನುಡಿದಂತೆ ನಡೆಯದಿರುವ ಭಂಡರ ಮಾತನ್ನು ಪಾಲಿಸೆಂದು ಯಾವ ಧರ್ಮ ಗುರುಗಳು ಹೇಳಿದ್ದಾರೆ ನಮಗೆ? ದೇಶಭಕ್ತಿ, ಹಿಂದುತ್ವ, ಅಹಿಂದ ಇತ್ಯಾದಿ ಆಕರ್ಷಕ ಪದಗಳನ್ನು ಕೇಳಿದಾಕ್ಷಣ, ಅವುಗಳ ಹಿಂದು ಮುಂದು ಗಮನಿಸದೆ ಮೈ ಬಿಸಿ ಮಾಡಿಕೊಳ್ಳುವ ಅಗತ್ಯವಿದೆಯೆ ನಮಗೆ?

ಕೊಂಚ ಯೋಚಿಸಿರಿ! ನಿಮಗೆ ಎಲ್ಲವೂ ತಿಳಿಯುತ್ತಿದೆ. ಎಲ್ಲವೂ ಅನುಭವಕ್ಕೆ ಬರುತ್ತಿದೆ. ಒಳಿತನ್ನು ಒಳಿತೆಂದೂ ಕೆಡುಕನ್ನು ಕೆಡುಕೆಂದೂ ತೀರ್ಮಾನಿಸುವ ಯೋಗ್ಯತೆಯಿದೆ ನಿಮಗೆ. ಯುಬಿ ಸಿಟಿ ಬಾರುಗಳಲ್ಲಿ ಕುಳಿತು ರಾಜ್ಯಭಾರ ನಡೆಸುತ್ತಿರುವವರು, ರಾಮರಾಜ್ಯವೆನ್ನಲಿ ಶ್ರಮದ ರಾಜ್ಯವೆನ್ನಲಿ, ವಾಸ್ತವತೆ ಯುಬಿ ಸಿಟಿಯ ಬಾರುಗಳು ಮಾತ್ರ ಎಂದು ತಿಳಿಯುತ್ತದೆ ನಿಮಗೆ. ಪ್ರಶ್ನೆ ಮಾಡಿರಿ!  ತಾಳ್ಮೆಗೆಡದೆ, ಕೋಪ ಮಾಡಿಕೊಳ್ಳದೆ ಶಾಂತ ರೀತಿಯಿಂದ ಪ್ರಶ್ನೆ ಮಾಡಿರಿ!

ಸ್ವಾಮಿ, ಸಿದ್ದರಾಮಯ್ಯನವರೇ! ನೀವು ಶ್ರಮಿಕ ವರ್ಗಗಳ ಪರವಾಗಿ ಮಾತನಾಡಿತ್ತಿದ್ದೀರಿ. ಸಂತೋಷ! ನಿಮ್ಮ ಪಕ್ಷದ ನಾಯಕರನ್ನು ಮೊದಲು ಯುಬಿ ಸಿಟಿ ಬಾರುಗಳಿಂದ ಕೆಳಗಿಳಿಸಿ ತನ್ನಿರಿ. ಅವರೂ ನಮ್ಮಂತೆ ಸರಳ ಜೀವನ ನಡೆಸಲಿ. ಆಗ ವೋಟು ಕೊಡೋಣ ಅನ್ನಿ. ಸಿದ್ದರಾಮಯ್ಯನವರು ಒಂದೇ ಬಾರಿಗೆ ಯುಬಿ ಸಿಟಿ ಬಾರಿನ ಬಹುಮಹಡಿ ಕಟ್ಟಡದ ಎಲ್ಲ ಮೆಟ್ಟಿಲುಗಳನ್ನೂ ಇಳಿಯಲಾರರು ಅಥವಾ ಇಳಿಸಲಾರರು ನಿಜ. ಆದರೆ ಕೆಲವು ಮೆಟ್ಟಿಲಾದರೂ ಇಳಿಯಲಿ ಅಥವಾ ಇಳಿಸಲಿ. ಸಾಕಲ್ಲವೇ? ಮತ್ತೆ ಮುಂದೆ ಸತ್ಯ ನುಡಿಯಲು ಹೇಗೂ ನೀವಿರುತ್ತೀರಿ ತಾನೆ?

ಇತ್ತ ಮಾನ್ಯ ಯಡಿಯೂರಪ್ಪನವರಿಗೆ ಹೀಗೆ ಹೇಳಿ: ‘ಸ್ವಾಮಿ! ನೀವು ಪರಂಪರೆಯನ್ನು ಸಂರಕ್ಷಿಸುವ ಮಾತನ್ನಾಡುತ್ತಿದ್ದೀರಿ. ಧರ್ಮ ಯುದ್ಧ ನಡೆಸುತ್ತಿದ್ದೀರಿ, ಸಂತೋಷ! ಎರಡು ಪರಂಪರೆಗಳಿವೆ ನಮಗೆ ಎಂಬ ಸಂಗತಿ ತಿಳಿದಿದೆಯೆ ನಿಮಗೆ? ನೀವು ಹೇಳುವ ಸನಾತನ ಧರ್ಮವು ವೈದಿಕ ಪರಂಪರೆಯಾಗಿದೆ, ಪುರೋಹಿತಶಾಹಿ ಪರಂಪರೆಯಾಗಿದೆ. ಬುದ್ಧ, ಬಸವ, ಕಬೀರ, ಕನಕದಾಸರು ಹೇಳುವ ಶ್ರಮಿಕ ಪರಂಪರೆಯೊಂದಿದೆಯಲ್ಲವೇ! ಕಾಯಕ ಧರ್ಮವೊಂದಿದೆಯಲ್ಲವೇ? ನೀವಲ್ಲಿಗೇಕೆ ತಲುಪುತ್ತಿಲ್ಲ? ಅಥವಾ ನೀರವ್‌ ಮೋದಿಯಿಂದ ಹಿಡಿದು ಅಂಬಾನಿ, ಅದಾನಿಯವರೆಗೆ ಎಲ್ಲರೂ ಹಿಂದೂಗಳು ಎನ್ನುತ್ತೀರಿ, ಅವರ ರಕ್ಷಣೆ ಮಾಡಿ ಎಂದು ನಮಗೆ ಕರೆ ಕೊಡುತ್ತೀರಿ ನೀವು. ನನ್ನ ಪಕ್ಕ ನಿಂತಿರುವ ಶ್ರಮಿಕ ಮುಸಲ್ಮಾನನ ಕೈಬಿಟ್ಟು ನಾನು ಅಂಬಾನಿ, ಅದಾನಿ, ನೀರವ್‌ ಮೋದಿಗಳ ಕೈ ಹಿಡಿಯಬೇಕೆ? ಅದು ಸಾಧುವೆ ಎಂದು ಕೇಳಿ?

ಹಿಂದೊಮ್ಮೆ ರೈತರು ಹಾಗೂ ಶರಣರೂ ಎರಡೂ ಆಗಿದ್ದ ಯಡಿಯೂರಪ್ಪನವರು ನಿಮ್ಮ ಮಾತನ್ನು ಖಂಡಿತವಾಗಿ ಕೇಳಿಸಿಕೊಂಡಾರು. ಒಟ್ಟು ಕತೆಯ ನೀತಿಯೆಂದರೆ ಭಾರತೀಯ ರಾಜಕಾರಣವನ್ನು ಯುಬಿ ಸಿಟಿ ಬಾರುಗಳಿಂದ ಕೆಳಗಿಳಿಸಿ ತರಬೇಕಾದ ಜರೂರು ತುಂಬ ಇದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT