ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರುಗಳಿಗೆ ಕಂಟಕ ಚದರಂಗಿ ವಿಷಬಾಧೆ

ಅಕ್ಷರ ಗಾತ್ರ

ಹಸು-ಕುರಿಗಳಂತಹ ಜಾನುವಾರುಗಳಿಗೆ ಚದರಂಗಿ ಗಿಡದ ಸೊಪ್ಪು ಮಾರಣಾಂತಿಕವಾಗಿದೆ. ಸುಮಾರು ಒಂದೂವರೆ ಸಾವಿರ ಕುರಿಗಳ ಮಾಲೀಕರಾದ ಚಿಕ್ಕೋಡಿಯ ನಾಗರಾಳ ಊರಿನ ಮಾದೇವ ಬೀರಪ್ಪ ಹೆಗ್ಗಣ್ಣವರ್ ಅಂದು ತುಂಬ ಚಿಂತೆಯಲ್ಲಿದ್ದರು. ಕಾರಣವಿಷ್ಟೆ. ಬೆಳೆದ ಕುರಿಗಳು ನಿರಂತರವಾಗಿ ಸಾವನ್ನಪ್ಪತೊಡಗಿದ್ದವು.

ಅವರು ತಮ್ಮ ವಾರ್ಷಿಕ ರೂಢಿಯಂತೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ನ್ಯಾಸರ್ಗಿಯ ಹೊಲದಲ್ಲಿ ಎಂಟು ತಿಂಗಳಿನಿಂದ ಕ್ಯಾಂಪ್ ಹಾಕಿದ್ದರು. ರಾತ್ರಿಯೆಲ್ಲ ಊರ ಹೊಲದಲ್ಲಿ ವಾಸ. ಹಗಲಿನಲ್ಲಿ ಸುತ್ತಲ ಕುರುಚಲು ಅರಣ್ಯ ಪ್ರದೇಶದಲ್ಲಿ ಕುರಿಮಂದೆಗೆ ಸಮೃದ್ಧ ಮೇವು. ಈ ಗ್ರಾಮವು ಧರ್ಮಾ ಜಲಾಶಯದ ಸುತ್ತಲ ಪ್ರದೇಶವಾದ್ದರಿಂದ ಮೇವಿಗೆ ಮತ್ತು ನೀರಿಗೆ ಕೊರತೆಯೇನೂ ಇರಲಿಲ್ಲ. ಅದರಲ್ಲೂ ಆಗಾಗ ಸ್ವಲ್ಪ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಭೂಮಿಯಲ್ಲಿ ಹೊಸ ದಾಗಿ ಹಸಿರು ಮೂಡತೊಡಗಿತ್ತು. ಆಗಲೇ ಕುರಿಗಳ ಸಾವಿನ ಸರಣಿ ಆರಂಭವಾಗಿದ್ದು.

ಬಹುತೇಕವಾಗಿ ಮಾದೇವರಂತಹ ನುರಿತ ರೈತರಿಗೆ ತಮ್ಮ ಕುರಿಗಳಲ್ಲಿ ಕಂಡುಬರುವ ಸಾಮಾನ್ಯ ರೋಗಗಳ ಪರಿಚಯವಿರುತ್ತದೆ. ಗಂಟಲುಬೇನೆ, ಕರುಳುಬೇನೆ, ನರಡಿರೋಗ ಇತ್ಯಾದಿ ರೋಗಗಳನ್ನು ಅವರು ತಾವಾಗಿಯೇ ಗುರುತು ಹಿಡಿದು ಪಶುವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಮಾಡಿಕೊಳ್ಳುವಷ್ಟು ಅನುಭವ ಹೊಂದಿರುತ್ತಾರೆ. ಸಮಯಕ್ಕೆ ಸರಿಯಾಗಿ ಇಂತಹ ರೋಗಗಳ ವಿರುದ್ಧ ಲಸಿಕೆ ಕೂಡ ಕೈಗೊಳ್ಳುತ್ತಾರೆ.

ಈ ಬಾರಿ ಕಂಡುಬಂದ ರೋಗವನ್ನು ಅವರು ಈ ತನಕ ಕಂಡಿರಲಿಲ್ಲ. ದಿನಕ್ಕೆ ಐದಾರು ಬಲಿತ ಕುರಿಗಳು ಸಾಯತೊಡಗಿದ್ದರೂ ವಿಶೇಷವಾದ ಯಾವುದೇ ರೋಗಲಕ್ಷಣಗಳಿರಲಿಲ್ಲ. ಪ್ರಾರಂಭದಲ್ಲಿ ಕೊಂಚ ನಿತ್ರಾಣವಾದಂತೆ ತೋರುವ ಕುರಿಗಳು ಹತ್ತು ಹನ್ನೆರಡು ಗಂಟೆ ಕಳೆದ ಮೇಲೆ ಅಸ್ವಸ್ಥಗೊಂಡು ನಡುಗುತ್ತಿದ್ದವು. ಕೆಲವಂತೂ ಹಗ್ಗ ಹರಿದುಕೊಂಡು ಎತ್ತೆತ್ತಲೋ ಓಡಿಹೋಗಿದ್ದವು! ಮೂರ್ನಾಲ್ಕು ಕುರಿಗಳಲ್ಲಿ ಕಿವಿಗಳು ನೀರು ತುಂಬಿದಂತೆ ಊದಿದ್ದವು. ಕೊನೆಗೆ ಆಮೂಲಾಗ್ರವಾಗಿ ರೋಗಪರಿಶೀಲನೆ ಕೈಗೊಂಡ ಪಶುವಿಜ್ಞಾನಿಗಳಿಗೆ ಕಂಡುಬಂದಿದ್ದು ಈ ಕುರಿಗಳು ಚದರಂಗಿ ಸೊಪ್ಪು ತಿಂದು ಸಾವನ್ನಪ್ಪುತ್ತಿವೆ ಎಂಬುದು! ಈ ಮಹತ್ವದ ವಿಷಬಾಧೆ ಬೆಳಕಿಗೆ ಬಂದದ್ದು ರಾಜ್ಯದಲ್ಲಿ ಜಾನುವಾರು ರೋಗನಿರ್ಧರಣೆಯ ಜವಾಬ್ದಾರಿ ಹೊತ್ತ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ವಿಜ್ಞಾನಿಗಳ ಮೂಲಕ. ಆಮೇಲೆ ಪಶುವೈದ್ಯರ ಸತತ ಚಿಕಿತ್ಸೆಯಿಂದಾಗಿ ಈಗ ಸದರಿ ಕುರಿಮಂದೆಯಲ್ಲಿ ಸಾವಿನ ಸರಣಿ ನಿಂತಿದೆ.

ಏನಿದು ಚದರಂಗಿಯ ವಿಷಬಾಧೆ?

ಚದರಂಗಿ (lantana camara) ಮೂಲತಃ ಆಸ್ಟ್ರೇಲಿಯಾ ದೇಶದ ಪೊದೆಯ ರೂಪದ ಗಿಡ. ಆಲಂಕಾರಿಕ ಸಸ್ಯವಾಗಿ 19ನೇ ಶತಮಾನದಲ್ಲಿ ನಮ್ಮಲ್ಲಿಗೆ ಬಂದು ಇದೀಗ ಈ ಸಸ್ಯವು ಕಳೆಯೋಪಾದಿಯಲ್ಲಿ ಎಲ್ಲೆಡೆ ಕಂಡುಬರುತ್ತಿದೆ. ಸದಾ ಹಸಿರಿನ ಮತ್ತು ಬರಸಹಿಷ್ಣು ಗುಣ ಹೊಂದಿರುವ ಈ ಗಿಡದ ಹೂಗಳು ವಿವಿಧ ಬಣ್ಣಗಳಲ್ಲಿ ಕಂಡುಬರುತ್ತವೆ. ಈ ಕಾರಣಕ್ಕಾಗಿ ಇದನ್ನು ಆಲಂಕಾರಿಕ ಸಸ್ಯವಾಗಿಯೂ ಬೆಳೆಸಲಾಗುತ್ತಿದೆ. ಕಾಂಡವು ಒತ್ತೊತ್ತಾಗಿ ಸಣ್ಣ ಮುಳ್ಳುಗಳನ್ನು ಹೊಂದಿದ್ದು ಪೊದೆಯ ರೂಪದಲ್ಲಿ ಶೀಘ್ರವಾಗಿ ಬೆಳೆಯುವುದರಿಂದ ಇದು ಹೊಲಗಳಲ್ಲಿ ಬೇಲಿ ಸಸ್ಯವಾಗಿಯೂ ಜನಪ್ರಿಯವಾಗಿದೆ. ಚದರಂಗಿ ಗಿಡದಲ್ಲಿ ಕಡುನೀಲಿ ಬಣ್ಣದ ಹಣ್ಣುಗಳಾಗುತ್ತವೆ. ಇದರ ಸೊಪ್ಪನ್ನು ಕುರಿ ಮತ್ತು ದನಗಳು ಹೆಚ್ಚು ಪ್ರಮಾಣದಲ್ಲಿ ತಿಂದರೆ ವಿಷವಾಗಿ ಪರಿಣಮಿಸುತ್ತದೆ.

‘ಮಳೆಗಾಲದ ಪ್ರಾರಂಭದಲ್ಲಿ ಹೊಸದಾಗಿ ಚಿಗುರೊಡೆ ಯುವ ಚದರಂಗಿ ಸಸ್ಯದ ಎಲೆಗಳು ಕುರಿಗಳಿಗೆ ವಿಷಕಾರಿ’ ಎನ್ನುತ್ತಾರೆ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಹಿರಿಯ ವಿಜ್ಞಾನಿಗಳು. ಹೀಗಾಗಿ ಈ ಗಿಡದ ಸೊಪ್ಪನ್ನು ಕುರಿಗಳು ಮೇಯದಿರುವಂತೆ ನೋಡಿಕೊಳ್ಳಬೇಕೆಂಬುದು ಅವರ ಸಲಹೆ.

ವಿಷಬಾಧೆಯ ಲಕ್ಷಣಗಳು

ಹೆಚ್ಚಿನ ಪ್ರಮಾಣದಲ್ಲಿ ಚದರಂಗಿ ಸೊಪ್ಪು ತಿಂದ ಹಸು ಕುರಿಗಳಂತಹ ಜಾನುವಾರುಗಳಿಗೆ ಸೂರ್ಯನ ಬೆಳಕನ್ನು ಸಹಿಸಲು ಆಗುವುದಿಲ್ಲ. ಇದಕ್ಕೆ ಫೋಟೊ ಸೆನ್ಸಿಟೈಸೇಶನ್ ಎನ್ನುತ್ತಾರೆ. ಇಂತಹ ಜಾನುವಾರುಗಳು ಬೆಳಕಿಗೆ ಕಣ್ಣು ತೆರೆಯಲಾಗದೇ ತೀವ್ರ ಬಾಧೆ ಅನುಭವಿಸುತ್ತವೆ. ಜಾನುವಾರುಗಳಲ್ಲಿ ಮೈನಡುಕ ಮತ್ತು ಗೊತ್ತುಗುರಿಯಿಲ್ಲದಂತೆ ಓಡುವ ಲಕ್ಷಣಗಳು ಕಂಡು ಬರುತ್ತವೆ. ಎಲ್ಲಾ ವಿಷಕಾರಕ ಪದಾರ್ಥಗಳನ್ನು ಪರಿಷ್ಕರಿಸುವ ಅಂಗವಾದ ಯಕೃತ್ತು ಸ್ವತಃ ಚದರಂಗಿಯ ವಿಷದಿಂದ ಹಾನಿಗೊಳಗಾಗಿ ಕಾಮಾಲೆಯಾಗಿ ಚರ್ಮ ಮತ್ತು ಲೋಳ್ಪದರಗಳು ಹಳದಿಯಾಗುತ್ತವೆ. ಮೂತ್ರಪಿಂಡಗಳೂ ತೀವ್ರ ಹಾನಿಗೊಳ್ಳುತ್ತವೆ. ತಲೆ, ಕಿವಿ ಮತ್ತು ಮುಖಭಾಗಗಳು ನೀರು ತುಂಬಿದಂತಾಗಿ ಊದಿಕೊಳ್ಳುತ್ತವೆ. ಆಹಾರ ನೀರು ತ್ಯಜಿಸಿ ಒಂದೆರಡು ದಿನದಲ್ಲಿಯೇ ಜಾನುವಾರುಗಳು ಸಾವನ್ನಪ್ಪುತ್ತವೆ.

ಪರಿಹಾರೋಪಾಯಗಳು

ಚದರಂಗಿಯ ವಿಷಬಾಧೆಗೆ ಯಾವುದೇ ನಿರ್ದಿಷ್ಟ ಔಷಧವಿಲ್ಲ. ರೋಗಪೀಡಿತ ಜಾನುವಾರುಗಳನ್ನು ಶಾಂತವಾದ ಮತ್ತು ಕತ್ತಲೆ ಕೋಣೆಗಳಲ್ಲಿ ಸೇರಿಸಬೇಕು. ಚದರಂಗಿ ಸೊಪ್ಪನ್ನು ತಿಂದು ಒಂದೆರಡು ಗಂಟೆಯೊಳಗಾದರೆ ಉದ್ದೀಪಿತ ಇದ್ದಿಲು (ಆಕ್ಟ್ಟಿವೇಟೆಡ್ ಚಾರ್ಕೋಲ್) ದ್ರಾವಣವನ್ನು ಕುಡಿಸುವುದರಿಂದ ವಿಷವು ರಕ್ತ ಸೇರದಂತೆ ತಡೆಯಬಹುದು. ಏನೇ ಇದ್ದರೂ ತಕ್ಷಣ ಪಶುವೈದ್ಯರ ಸೇವೆ ಪಡೆಯ ಬೇಕು. ಪಶುವೈದ್ಯರು ಯಕೃತ್ ಉತ್ತೇಜಕ ಔಷಧಗಳ ಜೊತೆಗೆ ಇತರ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ಕೈಗೊಳ್ಳುತ್ತಾರೆ.

‘ಈ ಥರದ್ ರೋಗ ನಾವ್ ಇನ್ನೂ ತನ್ಕಾ ಕಂಡಿದ್ದಿಲ್ರಿ. ಇನ್ ಮುಂದೆ ನಮ್ ಕುರಿಗಳು ಈ ಚದರಂಗಿ ಸೊಪ್ಪು ಮೇಯ್ದಿರೋಹಂಗೆ ನೋಡ್ಕೋತೀವಿ’ ಎನ್ನುತ್ತಾರೆ ಕುರಿಗಳ ಮಾಲೀಕರಾದ ಮಾದೇವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT