ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಸಂಸ್ಕರಣೆಗೂ ಬಂತು ಮಿಲ್

Last Updated 19 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಕಾರ್ಮಿಕರ ಕೊರತೆಯಿಂದಾಗಿ ರೈತರಿಗೆ ಅಡಿಕೆ ಸಂಸ್ಕರಣೆ ಮಾಡುವುದೇ ಕಷ್ಟ ಎನಿಸಿದ್ದಾಗ ಅಡಿಕೆ ಸುಲಿಯುವ ಯಂತ್ರಗಳು ಮಾರುಕಟ್ಟೆಗೆ ಕಾಲಿಟ್ಟಿದ್ದವು. ಆಗ ನಿಟ್ಟುಸಿರು ಬಿಟ್ಟಿದ್ದ ರೈತರಿಗೆ ಈಗ ಕೈಯ್ಯಾಳುಗಳನ್ನು ಹೊಂದಿಸಿಕೊಳ್ಳುವುದು ಸವಾಲಾಗಿದೆ. ಈ ಸ್ಥಿತಿಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಹೊಳೇಕೊಪ್ಪದ ಸಿಂಧೂ ರವೀಂದ್ರ ಅವರು ಅಡಿಕೆ ಸಂಸ್ಕರಣೆಗೆ ಕಂಡುಕೊಂಡ ಈ ದಾರಿ ರೈತರಲ್ಲಿ ಆಶಾಭಾವನೆ ಮೂಡಿಸಿದೆ.

ಸಿಂಧೂ ಅವರು ಅಡಿಕೆ ಸುಲಿಯುವ ಯಂತ್ರ ಬಳಸುತ್ತಿದ್ದರೂ ಕಾರ್ಮಿಕರ ಸಮಸ್ಯೆ ಕಾಡಿತ್ತು. ಸಮಸ್ಯೆಯ ತೀವ್ರತೆ ಹೆಚ್ಚಿದಂತೆ, ಅದನ್ನು ಪರಿಹರಿಸಬೇಕಾದ ಅನಿವಾರ್ಯವೂ ಹೆಚ್ಚಾಯಿತು. ಆಗ ಕಂಡುಕೊಂಡಿದ್ದೇ ಈ ತಂತ್ರ.

ಭತ್ತದ ಗಿರಣಿಯಂತೆ ಕೆಲಸ ಮಾಡುವ ಯಂತ್ರ ತಯಾರಿಸುವ ಬಗ್ಗೆ ಆಲೋಚಿಸಿ ಕನಿಷ್ಠ ಕಾರ್ಮಿಕರಿಂದ ಕೆಲಸ ನಿರ್ವಹಿಸುವ ವ್ಯವಸ್ಥೆಯನ್ನು ಅವರು ಈಗ ರೂಪಿಸಿಕೊಂಡಿದ್ದಾರೆ.

ಯಂತ್ರದ ಮೂಲಕ ಗೊನೆಯಿಂದ ಬಿಡಿಸಿದ ಹಸಿ ಅಡಿಕೆಕಾಯಿಯು ಭತ್ತದ ಗಿರಣಿ ಮಾದರಿಯಂತೆ ಅಡಿಕೆ ಸುಲಿಯುವ ಯಂತ್ರಕ್ಕೆ ಪೂರೈಕೆಯಾಗುತ್ತದೆ. ಯಂತ್ರದಿಂದ ಸುಲಿದ ಅಡಿಕೆಯು ದೋಣಿಯಾಕಾರದ ತಗಡಿನ ಮೂಲಕ ತೊಟ್ಟಿಯಲ್ಲಿ ಶೇಖರಣೆಯಾಗಿ, ಚೈನ್ ಪುಲ್ಲಿಯ ಸಹಾಯದಿಂದ ಅಡಿಕೆ ಬೇಯಿಸುವ ತೊಟ್ಟಿಯೊಳಗೆ ಹೋಗುತ್ತದೆ. ಅಲ್ಲಿ ಬೇಯಿಸಿದ ನಂತರ ಚೈನ್ ಪುಲ್ಲಿಯ ಮೂಲಕ ಮೇಲಕ್ಕೆ ಎತ್ತಿ ಕೈಗಾಡಿಯ ಮೂಲಕ ಒಣಗಿಸಲು ಸಾಗಿಸುತ್ತಾರೆ. ಈ ಎಲ್ಲಾ ಕೆಲಸವನ್ನು ಸಿಂಧೂ ಅವರೊಬ್ಬರೇ ನಿರ್ವಹಿಸಲು ಅನುವಾಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ದಿನಕ್ಕೆ 200 ಕೆ.ಜಿ. ಅಡಿಕೆಯನ್ನು ಇದರಿಂದ ಸಂಸ್ಕರಿಸಬಹುದು.

5 ಅಡಿ–5 ಅಡಿ ಆಳದ ಹೊಂಡದ ರೀತಿ ವ್ಯವಸ್ಥೆ ಇರುತ್ತದೆ. ಅದಕ್ಕೆ ಗೊನೆಯಿಂದ ಬೇರ್ಪಡಿಸಿದ, ಅಡಿಕೆ ಉದುರನ್ನು ತುಂಬಲಾಗುತ್ತದೆ. ಅಲ್ಲಿಂದ ಎತ್ತಲು ಎಲಿವೇಟರ್‌ಗಳಂತೆ ವ್ಯವಸ್ಥೆ ಮಾಡಲಾಗಿದೆ. ವೈಬ್ರೇಟರ್‌ಗಳಿದ್ದು, ಕಸ ಬೇರ್ಪಡಿಕೆಯೂ ಆಗುತ್ತದೆ. ಅಡಿಕೆ ಸುಲಿಯುವ ಯಂತ್ರಕ್ಕೆ ಚೆನ್ನಾಗಿರುವುದು ಸೇರುತ್ತದೆ. ಹೆಚ್ಚಾದರೆ ಹಿಂದಕ್ಕೆ ಬೀಳುತ್ತದೆ. ಪುಡಿ ಪ್ರತ್ಯೇಕವಾಗಿ ಸಿಗುವುದರಿಂದ ಆ ಪುಡಿ ಮಾರಿಯೂ ಹಣ ಗಳಿಸಬಹುದು.

‘ಮಲೆನಾಡಿನಲ್ಲಿ ಕಾರ್ಮಿಕರ ಅಭಾವ ತುಂಬಾ ಇದೆ. ಜೊತೆಗೆ ಸಣ್ಣ ರೈತರ ಪ್ರಮಾಣವೂ ಇಲ್ಲಿ ಹೆಚ್ಚು. ಆದ್ದರಿಂದ ಅವರ ಖರ್ಚಿಗೆ ತಕ್ಕಂತೆ ಈ ಯಂತ್ರವು ಕೆಲಸ ಮಾಡುತ್ತದೆ’ ಎಂದು ಮಾಹಿತಿ ನೀಡುತ್ತಾರೆ ಸಿಂಧೂ ಅವರ ಪತಿ ರವೀಂದ್ರ.

ಇದರ ಇನ್ನೂ ಒಂದು ವಿಶೇಷತೆ ಇರುವುದು ಮಹಿಳೆಯರು ಇದನ್ನು ಸುಲಭವಾಗಿ ನಿರ್ವಹಿಸಿಕೊಂಡು ಹೋಗಬಹುದು ಎನ್ನುವುದರಲ್ಲಿ. ಗಂಡಸರನ್ನು ಅವಲಂಬಿಸದೇ ಸುಲಭವಾಗಿ ಇದರಲ್ಲಿ ಅಡಿಕೆಯ ಕೆಲಸವನ್ನು ಮಾಡಿ ಮುಗಿಸಬಹುದು. ಈ ಯಂತ್ರ ನಿರ್ವಹಣೆಗೆ ವಿಶೇಷ ಕೌಶಲವೂ ಬೇಕಿಲ್ಲ.

ಯಂತ್ರಕ್ಕೆ ಪೆಟ್ರೋಲ್ ಎಂಜಿನ್ ಇದ್ದು, ಹೆಚ್ಚಿನ ವಿದ್ಯುತ್ ಅವಶ್ಯಕತೆಯಿಲ್ಲ.

ಈ ಕೆಲಸವನ್ನು ಸಂಪೂರ್ಣ ಕಾರ್ಮಿಕರಿಂದ ಮಾಡುವುದಾದರೆ ಕನಿಷ್ಠ 10 ರಿಂದ 12 ಜನ ಕಾರ್ಮಿಕರ ಅವಶ್ಯಕತೆ ಇತ್ತು. ಅಡಿಕೆ ಸುಲಿಯಲು ಬುಟ್ಟಿಗಳು, ಇನ್ನಿತರ ಪರಿಕರಗಳ ಅಗತ್ಯವೂ ಇತ್ತು ಈಗ ಅದ್ಯಾವುದೂ ಬೇಕಿಲ್ಲ.

ಈ ಯಂತ್ರ ತಯಾರಿಗೆ ಅವಶ್ಯವಿರುವುದು ಒಂದರಿಂದ ಒಂದೂವರೆ ಲಕ್ಷ ರೂಪಾಯಿ. ಇದರಿಂದ ಇರುವ ಲಾಭವನ್ನು ಲೆಕ್ಕಾಚಾರ ಹಾಕಿದರೆ ಈ ಪ್ರಯೋಗವನ್ನು ಯಾರು ಬೇಕಾದರೂ ಅಳವಡಿಸಿಕೊಳ್ಳಬಹುದು.

ಇವರು ಸುತ್ತಮುತ್ತಲಿನ ರೈತರಿಗೆ ಅಡಿಕೆ ಮಿಲ್ ಬಗೆಗೆ ಪ್ರಾತ್ಯಕ್ಷಿತೆ ಮೂಲಕ ಅರಿವನ್ನೂ ಮೂಡಿಸುತ್ತಿದ್ದಾರೆ.
ಮಾಹಿತಿಗೆ: 9448611547.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT