ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗರೇಟ್‌ ಲಾಬಿಗೆ ಮಣಿದು ಅಡಿಕೆ ನಿಷೇಧಕ್ಕೆ ಹುನ್ನಾರ

Last Updated 20 ಫೆಬ್ರುವರಿ 2018, 6:54 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಕೇಂದ್ರ ಸರ್ಕಾರ ಸೀಗರೇಟ್‌ ಲಾಬಿಗೆ ಮಣಿದು ಅಡಿಕೆ ನಿಷೇಧ ಮಾಡಲು ಹೊರಟಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಜ್ಯದ ಅಡಿಕೆ ಬೆಳೆಗಾರರ ಹಿತ ಕಾಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ಸೋಮವಾರ ರೈತರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ನರೇಂದ್ರ ಮೋದಿ ಸರ್ಕಾರ ನೀಡಿದ ಅಚ್ಛೇದಿನ್‌ ಭರವಸೆ ಹುಸಿಯಾಗಿದೆ. ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್‌, ಬಿಹಾರದ ಸಂಸದ ಓಂಪ್ರಕಾಶ್‌ ಯಾದವ್‌ ಅವರ ಪ್ರಶ್ನೆಗೆ ಸಂಸತ್ತಿನಲ್ಲಿ ಉತ್ತರಿಸುವಾಗ ಅಡಿಕೆ ತಿನ್ನುವುದರಿಂದ ಕ್ಯಾನ್ಸರ್‌ ಬರುವುದು ಎಂದು ಲಿಖಿತ ಹೇಳಿಕೆ ನೀಡಿದ್ದಾರೆ. ಇದು ಅಡಿಕೆ ಬೆಳೆಗಾರರ ಪಾಲಿಗೆ ಆಘಾತ ತಂದಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಔಷಧೀಯ ಗುಣ ಹೊಂದಿರುವ ಅಡಿಕೆಯನ್ನು ಮೈಸೂರಿನ ಸಿಎಫ್‌ಟಿಆರ್‌ಐ ಹಾಗೂ ಜೆಎನ್‌ಯು ಸಂಶೋಧನಾ ಸಂಸ್ಥೆಗಳು ಅಧ್ಯಯನ ನಡೆಸಿ ಅಡಿಕೆ ಹಾನಿಕರವಲ್ಲ ಎಂಬ ವರದಿಯನ್ನು ನೀಡಿದ್ದರೂ ಸುಪ್ರಿಂಕೋರ್ಟ್‌ಗೆ ಸಲ್ಲಿಸಿಲ್ಲ. ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಪಾಡುವ ಸಲುವಾಗಿ ಯಾವ ಸರ್ಕಾರಗಳು ಮುಂದಾಗದಿರುವುದು ಅಡಿಕೆ ಬೆಳೆಗಾರರ ಬಗ್ಗೆ ಇರುವ ತಾತ್ಸಾರ ಮನೋಭಾವ ತೋರಿಸುತ್ತದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಕೂಡಲೇ ಸುಪ್ರಿಂ ಕೋರ್ಟ್‌ಗೆ ಅಡಿಕೆ ಹಾನಿಕರವಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸುವುದರ ಜೊತೆಗೆ ಅಡಿಕೆ ತಿನ್ನುವುದರಿಂದ ಕ್ಯಾನ್ಸರ್‌ ಬರುತ್ತದೆ ಎಂಬ ಹೇಳಿಕೆಯನ್ನು ನೀಡಿರುವ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆ ಅನುಪ್ರಿಯಾ ಪಟೇಲ್‌ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಅಡಿಕೆ ಬೆಳೆಗಾರರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಬದುಕಿನ ಬೆಳೆಯಾಗಿ ಅವಲಂಬಿತವಾಗಿರುವ ಕೋಟ್ಯಂತರ ಅಡಿಕೆ ಬೆಳೆಗಾರರ ಹಿತಾಸಕ್ತಿಗೆ ಅಡಿಕೆ ನಿಷೇಧ ಪ್ರಸ್ತಾವ ಧಕ್ಕೆ ಉಂಟು ಮಾಡಿದೆ. ಬೆಳೆಗಾರರು ದಿಕ್ಕುಕಾಣದ ಪರಿಸ್ಥಿತಿ ತಲುಪಿದ್ದಾರೆ. ಸರ್ಕಾರ ಕೂಡಲೇ ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಲು ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕಾಂಗ್ರೆಸ್‌ ಜಿಲ್ಲಾ ವಕ್ತಾರ ಬಿ.ಎ.ರಮೇಶ್‌ ಹೆಗ್ಡೆ, ತೀರ್ಥಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರ್‌ ಮಂಜುನಾಥ್‌, ಎಪಿಎಂಸಿ ಅಧ್ಯಕ್ಷ ಕೇಳೂರು ಮಿತ್ರ, ಪಟ್ಟಣ ಆಶ್ರಯ ಸಮಿತಿ ಅಧ್ಯಕ್ಷ ಡಿ.ಎಸ್‌.ವಿಶ್ವನಾಥ್‌ ಶೆಟ್ಟಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಕೆಳಕೆರೆ ಪ್ರದೀಪ್‌, ಮೇಲಿನಕೊಪ್ಪ ದೇವರಾಜ್‌, ಹುಲ್ಲತ್ತಿ ದಿನೇಶ್‌,ಪಡುವಳ್ಳಿ ಕಿಟ್ಟಪ್ಪ, ಸಂದೀಪ್‌ ಕುಡುಮಲ್ಲಿಗೆ, ಜಗದೀಶ್‌  ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT