ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ಹೋರಾಟ ತೀವ್ರಗೊಳಿಸಲು ನಿರ್ಧಾರ

Last Updated 20 ಫೆಬ್ರುವರಿ 2018, 8:48 IST
ಅಕ್ಷರ ಗಾತ್ರ

ಸವದತ್ತಿ: ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಎಲ್ಲ ಪಕ್ಷದವರೂ ಬೇರೆಯವರತ್ತ ಬೆರಳು ತೋರುತ್ತಿದ್ದಾರೆ. ಕಾಲಹರಣ ಮಾಡುತ್ತಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ಹೋರಾಟ ಮಾಡಲಾಗುವುದು ಎಂದು ರೈತ ಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

ಪಾದಯಾತ್ರೆ ಯಶಸ್ಸಿನಿಂದಾಗಿ ಇಲ್ಲಿನ ರೈತ ಮುಖಂಡ ಪಂಚನಗೌಡ ದ್ಯಾಮನಗೌಡರ ನಿವಾಸದ ಎದುರು ಸೋಮವಾರ ಆಯೋಜಿಸಿದ್ದ  ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು.

‘ದೆಹಲಿಯಲ್ಲಿರುವ ರಾಜ್ಯದ ನೂರಾರು ವಕೀಲರು ಮಹದಾಯಿ ವಿಚಾರದಲ್ಲಿ ಸಾರ್ವಜನಿಕ ಹಿತಸಕ್ತಿ ಅರ್ಜಿ ಸಲ್ಲಿಸಲು ಸಹಕರಿಸಿದ್ದಲ್ಲದೆ, ಅಲ್ಲಿನ ಕನ್ನಡಿಗರು ಧರಣಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಹೀಗಾಗಿ, ಹೋರಾಟ ತೀವ್ರಗೊಳಿಸಲಾಗುವುದು’ ಎಂದರು.

‘ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪಟ್ಟಣಕ್ಕೆ ಆಗಮಿಸಲಿದ್ದು, ಅವರಿಗೆ ಮನವಿ ಸಲ್ಲಿಸಲಾಗುವುದು. ಅವರು ಬರುವುದರಲ್ಲಿಯೇ ಒಂದೆಡೆ ಹಗಲು ರಾತ್ರಿ ಎನ್ನದೆ ಧರಣಿ ನಡೆಸೋಣ. ಅವರೇ ನಮ್ಮ ಬಳಿ ಬರುತ್ತಾರೆ. ತಮ್ಮ ಅಭಿಪ್ರಾಯ ಹೇಳುತ್ತಾರೆ’ ಎಂದು ತಿಳಿಸಿದರು.

ಮುಖಂಡ ಪಂಚನಗೌಡ ದ್ಯಾಮನಗೌಡರ ಮಾತನಾಡಿ, ‘22 ದಿನ 78 ಹಳ್ಳಿಗಳಿಗೆ ಪಾದಯಾತ್ರೆ ನಡೆಸಿದ್ದೇನೆ. ಪ್ರತಿ ಗ್ರಾಮದ ಜನರು ನನ್ನನ್ನು ಅತ್ಯಂತ ಪ್ರೀತಿಯಿಂದ ಕಂಡು ಬೆಂಬಲಿಸಿ, ಊಟ, ತಿಂಡಿ ಕೊಟ್ಟಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವುದು ನನ್ನ ಧರ್ಮ. ನಮ್ಮ ಬದುಕು ನಾವೇ ಕಟ್ಟಿಕೊಳ್ಳಬೇಕಾಗಿದೆ. ಇದಕ್ಕಾಗಿ ಹೋರಾಟ ಅಗತ್ಯ’ ಎಂದರು.

ರೈತ ಸೇನಾ ರಾಜ್ಯ ಸಲಹಾ ಸಮಿತಿ ಸದಸ್ಯ ಜಯಸಿಂಗ ರಜಪೂತ, ಮುಖಂಡರಾದ ಶ್ರೀಕಾಂತ ಹಟ್ಟಿಹೊಳಿ, ಪಂಚಪ್ಪ ಹನಸಿ, ಹೇಮನಗೌಡ ಪಾಟೀಲ, ಸೋಮು ರೈನಾಪೂರ ಅಲಿಸಾಬ ನಿಲೂಗಿ ಮಾತನಾಡಿದರು. ಲಿಂಗಾನಂದ ಸ್ವಾಮೀಜಿ, ಮುಖಂಡರಾದ ಮಲ್ಲಿಕಾರ್ಜುನ ಉಪ್ಪಿನ, ಅರುಣ ಇನಾಮದಾರ, ಆರ್‌.ಎಸ್‌. ಹಿರೇಮಠ, ಎಸ್‌.ಪಿ. ಇನಾಮದಾರ ಭಾಗವಹಿಸಿದ್ದರು. ಜಯಶಂಕರ ವನ್ನೂರ ವಂದಿಸಿದರು.

ರೈತರ ದನಿಯಾಗಿದ್ದ ಪುಟ್ಟಣ್ಣಯ್ಯ

ಸವದತ್ತಿ: ಆರು ಕೋಟಿ ಬಡ ರೈತರ ದನಿಯಾಗಿದ್ದ ಕೆ.ಎಸ್‌. ಪುಟ್ಟಣ್ಣಯ್ಯ, ಸಂವಿಧಾನ ಬದ್ಧ ಚರ್ಚೆಯಲ್ಲಿ ತೊಡಗುತ್ತಿದ್ದರು. ಅವರ ನಿಧನದಿಂದ ರಾಜ್ಯಕ್ಕೆ ಅಪಾರ ಹಾನಿಯಾಗಿದೆ ಎಂದು ವೀರೇಶ ಸೊಬರದಮಠ ಹೇಳಿದರು. ರೈತ ಸೇನಾದಿಂದ ಸೋಮವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

‘ಅವರು ನಮ್ಮ ಹೋರಾಟಕ್ಕೆ ಸದಾ ಬೆಂಬಲ ನೀಡಿದ್ದರು. ಮಾರ್ಗದರ್ಶನ ನೀಡಿದ್ದರು. ಎದುರಾಗುವ ಸಂಕಷ್ಟಗಳನ್ನು ಶಕ್ತಿಯಾಗಿಸಿಕೊಂಡು, ಹೋರಾಡಬೇಕು ಎನ್ನುವುದನ್ನು ತಿಳಿಸಿಕೊಟ್ಟ ಅವರು ಆಶಾಕಿರಣವಾಗಿದ್ದರು’ ಎಂದು ಸ್ಮರಿಸಿದರು. ಮುಖಂಡ ಹೇಮನಗೌಡ ಪಾಟೀಲ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT