ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ದಶಕದ ಸಂಭ್ರಮ

Last Updated 20 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಪಯಣದ ದಣಿವಾರಿಸಿಕೊಳ್ಳಲು ಮಹಾತ್ಮ ಗಾಂಧಿ ನದಿಯ ದಂಡೆ ಬಳಿ ಬಂದು ಬೊಗಸೆಯಲ್ಲಿ ನೀರು ಕುಡಿಯಬೇಕೆನ್ನುವಷ್ಟರಲ್ಲಿ ಎದುರಿಗೆ ಅರೆಬೆತ್ತಲೆಯಲ್ಲೇ ಬಟ್ಟೆ ತೊಳೆಯುತ್ತಿರುವ ಹೆಂಗಸು ಕಾಣಿಸುತ್ತಾಳೆ. ಮಾನವಷ್ಟೇ ಮುಚ್ಚುವಷ್ಟು ಬಟ್ಟೆ ಹೊದ್ದ ಆಕೆ ಉಳಿದ ಬಟ್ಟೆಯನ್ನು ತೊಳೆಯುತ್ತಿರುತ್ತಾಳೆ. ಗಾಂಧಿಯನ್ನು ನೋಡಿದ ತಕ್ಷಣ ಅವಳಿಗೆ ನಾಚಿಕೆ–ಅವಮಾನ ಒಟ್ಟಿಗೇ ಆಗಿ ತಲೆ ತಗ್ಗಿಸುತ್ತಾಳೆ. ಆಕೆಯ ಭಾವವನ್ನು ಅರ್ಥಮಾಡಿಕೊಂಡ ಗಾಂಧಿ ತಕ್ಷಣವೇ ತಮ್ಮ ಹೆಗಲ ಮೇಲಿದ್ದ ಬಟ್ಟೆಯನ್ನು ನೀರಿನ ಮೂಲಕ ಆಕೆಯೆಡೆಗೆ ಸಾಗಿಬಿಡುತ್ತಾರೆ. ಆ ಬಟ್ಟೆ ಅವಳ ಹತ್ತಿರ ಬರುತ್ತಿದ್ದಂತೆ ಅದನ್ನು ಬಾಚಿ ತಬ್ಬಿಕೊಳ್ಳುತ್ತಾಳೆ ಆ ಹೆಂಗಸು.

–ಇದು ರಿಚರ್ಡ್ ಅಟೆನ್‌ಬರ್ಗ್ ನಿರ್ದೇಶನದ ‘ಗಾಂಧಿ’ ಸಿನಿಮಾದ ದೃಶ್ಯ. ಸಿನಿಮಾವೊಂದು ಮಾನವೀಯತೆ ಮತ್ತು ಸಾಮಾಜಿಕ ಕಳಕಳಿಯನ್ನು ನೋಡುಗರಿಗೆ ಹೇಗೆ ತಲುಪಿಸಬಹುದು ಎಂಬುದಕ್ಕೆ ಈ ದೃಶ್ಯವೊಂದು ಉತ್ತಮ ಉದಾಹರಣೆ. ಇಂಥ ಮಾನವೀಯ ಸಂಪರ್ಕ ಸೇತುವನ್ನು ಬೆಸೆಯುವ ಉದ್ದೇಶವಿಟ್ಟುಕೊಂಡು ಈ ಬಾರಿಯ ಹತ್ತನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಆಯೋಜನೆಯಾಗಿದೆ.

ಫೆಬ್ರುವರಿ 22ರಿಂದ ಮಾರ್ಚ್ 1ರವರೆಗೆ ನಗರದಲ್ಲಿ ನಡೆಯಲಿರುವ ಈ ಸಿನಿಮೋತ್ಸವದಲ್ಲಿ ಒಟ್ಟು 200 ಸಿನಿಮಾಗಳು ಪ್ರದರ್ಶನವಾಗಲಿವೆ. ವಿಶ್ವದೆಲ್ಲೆಡೆ ಇಂದು ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ ಕುರಿತು ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಸಿನಿಮಾ ಮಾಧ್ಯಮವೂ ಹೊರತಲ್ಲ. ದೇಶ, ಭಾಷೆ ಭಿನ್ನವಾಗಿದ್ದರೂ ನೋವು–ನಲಿವಿನ ಕುರಿತು ಮನುಷ್ಯರ ಭಾಷೆ ಒಂದೇ. ಈ ಬಾರಿ ಡಾಕ್ಯುಮೆಂಟರಿ ವಿಭಾಗದಲ್ಲಿ ಮಾನವ ಹಕ್ಕುಗಳ ಕುರಿತು ಸಿನಿಮಾಗಳು ಪ್ರದರ್ಶನವಾಗಲಿವೆ ಎನ್ನುತ್ತಾರೆ 10ನೇ ಅಂತರರಾಷ್ಟ್ರೀಯ ಸಿನಿಮೋತ್ಸವದ ನಿರ್ದೇಶಕ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು.

‘ಫ್ರಾನ್ಸ್, ಚೀನಾ, ಜರ್ಮನಿ, ಅಮೆರಿಕ, ಇಂಗ್ಲೆಂಡ್ ಹೀಗೆ ಪ್ರಪಂಚದ ನಾನಾ ಭಾಗಗಳಿಂದ 120ಕ್ಕೂ ಹೆಚ್ಚು ಸಿನಿಮಾಗಳು ಸಿನಿಮೋತ್ಸವಕ್ಕೆ ಬಂದಿವೆ. ಅದರಲ್ಲಿ 50 ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ಸ್ಪರ್ಧಿಸಿರುವ ಚಿತ್ರಗಳು. ಅಷ್ಟೇ ಕಾನ್ ಸಿನಿಮೋತ್ಸವ ಸೇರಿದಂತೆ ವಿಶ್ವದ ಇತರ ಸಿನಿಮೋತ್ಸವಗಳಲ್ಲಿ ಪಾಲ್ಗೊಂಡ ಸಿನಿಮಾಗಳನ್ನು ನೋಡುವ ಅವಕಾಶವೂ ಸಿನಿಪ್ರಿಯರಿಗೆ ದಕ್ಕಲಿದೆ. ಇದರ ಜತೆಗೆ ಭಾರತೀಯ ಭಾಷೆಯ ಸಿನಿಮಾಗಳು ಪ್ರದರ್ಶನವಾಗಲಿವೆ. ಇತ್ತೀಚೆಗೆ ಅಗಲಿದ ಚಿತ್ರರಂಗದ ಗಣ್ಯರ ಸ್ಮರಣೆಯ ಜತೆಗೆ ಅವರ ಸಿನಿಮಾಗಳನ್ನು ಪ್ರದರ್ಶಿಸಲಾಗುವುದು. ‘ಸಂಸ್ಕಾರ’ ಸಿನಿಮಾದ ಐವತ್ತನೇ ವರ್ಷದ ನೆನಪಿಗಾಗಿ ವಿಶೇಷ ಗೋಷ್ಠಿ ಸೇರಿದಂತೆ ಹತ್ತು ಹಲವು ವಿಷಯಗಳ ಕುರಿತು ವೈವಿಧ್ಯಮಯ ಗೋಷ್ಠಿ, ಸಂವಾದ ಕಾರ್ಯಕ್ರಮಗಳು ಎಂದು ಮಾಹಿತಿ ನೀಡುತ್ತಾರೆ ಅವರು.

ಈ ಬಾರಿಯ ಸಿನಿಮೋತ್ಸವದಲ್ಲಿ ಜರ್ಮನ್ ನಿರ್ದೇಶಕಿ ಕ್ಲಾರಾ ಲಾಬಿನ್ ಅವರ ನೇತೃತ್ವದಲ್ಲಿ ಚಲನಚಿತ್ರ ಸ್ಕ್ರಿಪ್ಟ್ ಕಾರ್ಯಾಗಾರ ಆಯೋಜಿಸಲಾಗಿದೆ. ಕನ್ನಡದ ಚಿತ್ರಕಥೆಗಾರರು ಮತ್ತು ನಿರ್ದೇಶಕರು ಇದರಲ್ಲಿ ಭಾಗವಹಿಸುತ್ತಾರೆ. ಇಲ್ಲಿ ವಿಭಿನ್ನ ನೆಲೆಯಲ್ಲಿ ಸ್ಕ್ರಿಪ್ಟ್ ರಚಿಸುವ ಬಗ್ಗೆ ತರಬೇತಿ ನೀಡಲಾಗುವುದು. ಇಲ್ಲಿ ರೂಪುಗೊಂಡ ಕಥೆಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕಳಿಸಲಾಗುವುದು. ಅದು ಯಾರಿಗೇ ಇಷ್ಟವಾದರೂ ಅವರು ಸಹ ಚಿತ್ರದ ಸಹ ನಿರ್ಮಾಣದಲ್ಲಿ ಪಾಲ್ಗೊಳ್ಳಬಹುದು. ಈ ಮೂಲಕ ಕನ್ನಡ ಸಿನಿಮಾ ಜಾಗತಿಕವಾಗಿ ತೆರೆದುಕೊಳ್ಳುವ ಪ್ರಯತ್ನ ಇದಾಗಿದೆ ಎಂದು ಬಾಬು ವಿವರಿಸುತ್ತಾರೆ.

ಇದೇ ಮೊದಲ ಬಾರಿಗೆ ದೇಶದ ಇತರ ಭಾಗಗಳ ಪತ್ರಕರ್ತರನ್ನೂ ಸಿನಿಮೋತ್ಸವಕ್ಕೆ ಆಹ್ವಾನಿಸಲಾಗಿದೆ. ಗೋವಾ ಸಿನಿಮೋತ್ಸವಕ್ಕಿಂತಲೂ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಜನಪ್ರಿಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ವಿವಿಧ ದೇಶಗಳ ಸಿನಿಮಾ ಗಣ್ಯರನ್ನು ಆಹ್ವಾನಿಸಲಾಗಿದೆ. ಈ ಬಾರಿ ಹಿಂದಿಯ ಖ್ಯಾತ ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ, ನಿರ್ದೇಶಕ ಭರತ್ ಬಾಲಾ, ಇರಾನಿಯನ್ ನಟಿ ಫತೇಮೇ ಮೋಟಮೆಡ್ ಆರ್ಯ, ಖ್ಯಾತ ಫ್ರೆಂಚ್ ನಿರ್ದೇಶಕ ಹಾಗೂ ಅಕಾಡೆಮಿ (ಆಸ್ಕರ್‌) ಪ್ರಶಸ್ತಿ ಪುರಸ್ಕೃತ ಮಾರ್ಕ್ ಭಾಷೆಟ್ ಸಿನಿಮೋತ್ಸವದ ಮುಖ್ಯ ಆಕರ್ಷಣೆಯಾಗಿದ್ದಾರೆ. ಅಲ್ಲದೇ ಈ ಬಾರಿ ಸಿನಿಮೋತ್ಸವಕ್ಕೆ ದಶಕದ ಸಂಭ್ರಮ. ಇದರ ನೆನಪಿಗಾಗಿ ಸ್ಮರಣಿ ಸಂಚಿಕೆ ಹೊರತರಲಾಗುವುದು ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಅವರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ಒಟ್ಟಾರೆ 8 ಸಿನಿಮೋತ್ಸವಕ್ಕೆ ₹ 600 ಪ್ರವೇಶ ದರ ಮಾತ್ರ ಇಟ್ಟಿದ್ದೇವೆ. ಕಡಿಮೆ ದುಡ್ಡಿನಲ್ಲಿ ಸಿನಿಪ್ರಿಯರು ಅಂತರರಾಷ್ಟ್ರೀಯ ಮಟ್ಟದ ಸಿನಿಮಾಗಳನ್ನು ವೀಕ್ಷಿಸಬೇಕೆಂಬುದು ನಮ್ಮ ಉದ್ದೇಶ. ಈ ಬಾರಿ ಓರಾಯನ್ ಮಾಲ್‌ನಲ್ಲಿ 11 ಸ್ಕ್ರೀನ್‌ಗಳಲ್ಲಿ ಸಿನಿಮಾಗಳು ಪ್ರದರ್ಶನವಾಗಲಿವೆ. ಚಾಮರಾಜಪೇಟೆಯ ಕರ್ನಾಟಕ ಕಲಾವಿದರ ಸಂಘದ ಕಟ್ಟಡದ ಸಭಾಂಗಣದಲ್ಲಿ ಕಲಾವಿದರಿಗೆ ಚಿತ್ರ ವೀಕ್ಷಣೆಗೆ ಸೌಲಭ್ಯ ಕಲ್ಪಿಸಲಾಗಿದೆ. ಇದೇ ಮೊದಲ ಬಾರಿಗೆ ಜನಪ್ರತಿನಿಧಿಗಳಿಗೆ (ವಿಧಾನಸಭೆ ಮತ್ತು ಪರಿಷತ್ ಸದಸ್ಯರಿಗೆ) ಪ್ರತ್ಯೇಕವಾಗಿ ಸಿನಿಮಾ ವೀಕ್ಷಣೆಗೆ ಅನುಕೂಲ ಮಾಡಿಕೊಡಲಾಗಿದೆ. ಸಿನಿಮೋತ್ಸವಕ್ಕೆ ಸರ್ಕಾರ ₹ 6 ಕೋಟಿ ಅನುದಾನ ನೀಡಿದೆ ಎನ್ನುತ್ತಾರೆ ಅವರು.

**

10ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ: ಉದ್ಘಾಟನೆ– ಮುಖ್ಯಮಂತ್ರಿ ಸಿದ್ದರಾಮಯ್ಯ, ಅತಿಥಿ– ಡಿ.ಎಚ್. ಶಂಕರಮೂರ್ತಿ, ಕೆ.ಬಿ.ಕೋಳಿವಾಡ, ವಿಶೇಷ ಆಹ್ವಾನಿತರು– ನಟರಾದ ಶಿವರಾಜ್ ಕುಮಾರ್, ಸುದೀಪ್, ದರ್ಶನ್. ಅಧ್ಯಕ್ಷತೆ–ಆರ್.ರೋಷನ್ ಬೇಗ್. ಆಯೋಜನೆ– ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ. ಸ್ಥಳ–ವಿಧಾನಸೌಧದ ಮುಂಭಾಗ (ಪೂರ್ವದ್ವಾರದ ಮೆಟ್ಟಿಲು), ಗುರುವಾರ ಸಂಜೆ 6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT