ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಾಯಾ ಮೋಹಿ ರಾಘವೇಂದ್ರ

Last Updated 20 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನೋಯುವ ಹೆಗಲಿನ ಬಗ್ಗೆ ಚಿಂತೆಯಿಲ್ಲ, ಉರಿಯುವ ಕಾಲಿನೆಡೆಗೂ ಮನವಿಲ್ಲ. ದೂರದ ಆಗಸದಲ್ಲೆಲ್ಲೋ ರೆಕ್ಕೆಬಿಚ್ಚಿ ಸ್ವಚ್ಛಂದವಾಗಿ ಹಾರಾಡುವ ಬಾನಾಡಿಯದೇ ಆತನಿಗೆ ಧ್ಯಾನ. ಹಾರುತ್ತಾ ವಿವಿಧ ಭಂಗಿಗೆ ಬದಲಾಗುತ್ತಿದ್ದ ಹಕ್ಕಿಗಳ ಚಲನೆಯನ್ನು ಮೊಗೆದು ಕ್ಯಾಮೆರಾ ಕಣ್ಣಿನಲ್ಲಿ ತುಂಬಿಕೊಂಡಾಗ ಮಾತ್ರ ಮನಸಿಗೆ ನೆಮ್ಮದಿ.

ಛಾಯಾಗ್ರಹಣದ ಬಗೆಗೆ ಒಲವು ಬೆಳೆಸಿಕೊಂಡ ಎಲ್ಲರದ್ದೂ ಸರಿಸುಮಾರು ಇದೇ ಕಥೆ. ರಾಯಚೂರು ಮೂಲದ ರಾಘವೇಂದ್ರ ಜೋಶಿ ಕೂಡ ಅಂಥವರಲ್ಲಿ ಒಬ್ಬರು. ಹಾಸನದಲ್ಲಿ ಎಂಜಿನಿಯರಿಂಗ್‌ ಮಾಡಿ ಬೆಂಗಳೂರಿನಲ್ಲಿ ಎರಿಕ್‌ಸನ್‌ ಕಂಪೆನಿಯಲ್ಲಿ ಕೆಲಸವನ್ನೂ ಗಿಟ್ಟಿಸಿಕೊಂಡರು. ಸಾಫ್ಟ್‌ವೇರ್‌ ಜಗತ್ತಿನ ಅದದೇ ಕೆಲಸದಲ್ಲಿ ತೊಡಗಿಸಿಕೊಂಡು ಬೇಸರ ಎನಿಸಿದಾಗ ಅವರನ್ನು ಆಕರ್ಷಿಸಿದ್ದು, ಬರ್ಡ್‌ ವಾಕ್‌.

‘ಬೆಂಗಳೂರಿನಲ್ಲಿ ಬಿಎನ್‌ಜಿ ಬರ್ಡ್‌ ಗ್ರೂಪ್‌ ಇದೆ. ಅವರೊಂದಿಗೆ ನಾನು ಬರ್ಡ್‌ವಾಕ್‌ ಹೋಗುತ್ತಿದ್ದೆ. ಆಗ ಪಕ್ಷಿ ಪ್ರಪಂಚದ ಬಗೆಗೆ ನನಗೆ ಕುತೂಹಲ ಶುರುವಾಯಿತು. ಅವುಗಳ ಛಾಯಾಗ್ರಹಣ ಮಾಡಲಾರಂಭಿಸಿದೆ. ಅಲ್ಲಿಂದ ನನ್ನ ಪಯಣ ವೈಲ್ಡ್‌ಲೈಫ್‌ ಫೊಟೊಗ್ರಫಿಯತ್ತ ಸಾಗಿತು. ಈಗ ನನ್ನದು ಪ್ರಾಣಿ ಪ್ರಪಂಚದೆಡೆಗಿನ ಧ್ಯಾನ’ ಎಂದು ಆಸಕ್ತಿಯ ಹುಟ್ಟಿನ ಬಗೆಗೆ ಹೇಳುತ್ತಾರೆ ರಾಘವೇಂದ್ರ.

ಹಕ್ಕಿ ಪ್ರಪಂಚದಿಂದ ಪ್ರಾಣಿ ಪ್ರಪಂಚ ಅರಸಿ ಹೊರಟ ರಾಘವೇಂದ್ರ ಅವರಿಗೆ ಜೊತೆಯಾದದ್ದು ಕ್ಯಾನನ್‌ 7ಡಿ ಮಾರ್ಕ್‌ 2. ಜೊತೆಗೊಂದಿಷ್ಟು ಬಗೆಯ ಲೆನ್ಸ್‌ ಹಿಡಿದು ದೇಶ ವಿದೇಶ ಸುತ್ತಿ ಕ್ಯಾಮೆರಾ ಕಣ್ಣನ್ನು ಝಳಪಿಸಿದರು. ಕರ್ನಾಟಕದಲ್ಲಿ ಕಬಿನಿ, ಬಂಡಿಪುರ, ಬಿಳಿಗಿರಿ ರಂಗನ ಬೆಟ್ಟ, ಮಹಾರಾಷ್ಟ್ರದಲ್ಲಿ ತಡೋಬಾ, ಮಧ್ಯಪ್ರದೇಶದಲ್ಲಿ ಕನ್ಹಾ, ಪೆಂಚ್‌, ಬಾಂದ್ವಗಡ್‌ ರಾಜಸ್ತಾನದಲ್ಲಿ ರಣತಂಬೋರ್‌, ಝಲಾನಾ, ಪಶ್ಚಿಮ ಬಂಗಾಳದ ಸುಂದರಬನ, ಕೇರಳದ ತಟ್ಟೆಕ್ಕಾಡ್‌ ಸುತ್ತಿ ಪ್ರಾಣಿ ಜಗತ್ತಿನ ವಿಸ್ಮಯಗಳನ್ನು ಮೊಗೆದು ಕ್ಯಾಮೆರಾದಲ್ಲಿ ತುಂಬಿಕೊಂಡರು.

ಇಷ್ಟಕ್ಕೂ ಸಮಾಧಾನಿಸದ ಅವರ ಮನಸ್ಸು ಕೀನ್ಯಾದ ಮಸೈಮರಾಕ್ಕೆ ಹೋಗುವಂತೆ ಮಾಡಿತು. ಅಲ್ಲಿಯ ಕಾಡುಗಳನ್ನು ಸುತ್ತಿ ಚಿರತೆಗಳ ಭಾವ ಭಂಗಿಯನ್ನು ಸೆರೆಹಿಡಿದಿದ್ದಾರೆ. ಆ ನೆನಪುಗಳನ್ನು ಮೊಗೆದು ವಿಸ್ತರಿಸುವಾಗ ರಾಘವೇಂದ್ರ ಅವರ ಕಣ್ಣುಗಳು ಮಿಂಚುತ್ತವೆ. ‘ದೇಶದ ಹುಲಿ ರಕ್ಷಿತಾರಣ್ಯ ಪ್ರದೇಶಗಳಿಗೆಲ್ಲಾ ಭೇಟಿ ನೀಡಿದ್ದೇನೆ. ಹಾಗೆಯೇ ವೈಲ್ಡ್‌ಲೈಫ್‌ ಛಾಯಾಗ್ರಾಹಣವನ್ನು ನೆಚ್ಚಿಕೊಂಡವರಿಗೆ ಕೀನ್ಯಾಸ ಮಸೈಮರಾ ಅರಣ್ಯ ಬಹುಮೆಚ್ಚಿನ ಪ್ರದೇಶ. ಪ್ರಾಣಿಗಳ ಬೇಟೆ, ಅವುಗಳ ಬದುಕನ್ನು ತೀರಾ ಸಮೀಪದಿಂದ ಅಲ್ಲಿ ಆಸ್ವಾದಿಸಬಹುದು. ಸಫಾರಿಗೆ ಸಾಗುವ ನಮ್ಮ ಗಾಡಿಗಳ ಸಮೀಪದಲ್ಲೇ ಅವು ಬರುತ್ತವೆ. ಸದ್ದು ಮಾಡದೆ ಚಿತ್ರ ತೆಗೆಯುವ ಜಾಣ್ಮೆ ಮೆರೆಯಬೇಕಷ್ಟೆ’ ಎನ್ನುತ್ತಾರೆ ಅವರು.

ಹೀಗೆ ತಮ್ಮ ಅನುಭವ ಬುತ್ತಿಯನ್ನು ಬಿಚ್ಚಿಡುವ ರಾಘವೇಂದ್ರ ‘ವೈಲ್ಡ್‌ಲೈಫ್‌ ಛಾಯಾಗ್ರಹಣ ಎಂದರೆ ಜೀವಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ ಎನ್ನುವ ತಪ್ಪು ಕಲ್ಪನೆ ಅನೇಕರಿಗಿದೆ. ಆದರೆ ಸತ್ಯಾಂಶ ಹಾಗಿಲ್ಲ. ಯಾವ ಸಮಸ್ಯೆಯೂ ಇಲ್ಲದೆ ನಿರಾಳವಾಗಿ ಛಾಯಾಗ್ರಹಣ ಮಾಡಲು ಇಲ್ಲಿಯೂ ಅವಕಾಶವಿದೆ. ಕ್ಯಾಮೆರಾ ಬೇಡುವ ಅತ್ಯದ್ಭುತ ಸನ್ನಿವೇಶ ಸೆರೆಹಿಡಿಯಲು ಕಾಯುವ ತಾಳ್ಮೆ ಇರಬೇಕಷ್ಟೇ’ ಎಂದು ವಾಸ್ತವವನ್ನು ಕಟ್ಟಿಕೊಡುತ್ತಾರೆ.

ಸದ್ಯ ಗ್ಲೋಬಲ್‌ ಲಾಜಿಕ್‌ ಇಂಡಿಯಾ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಿರುವ ಅವರು ವಾರಾಂತ್ಯದಲ್ಲಿ ಯಾವುದಾದರೊಂದು ಕಾಡಿಗೆ ತಲುಪಿರುತ್ತಾರೆ. ಛಾಯಾಗ್ರಾಹಣವನ್ನು ಮನಸ್ಸಿನ ಖುಷಿಗಾಗಿಯೇ ಮಾಡುತ್ತೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅವರು ಕ್ಯಾಮೆರಾವನ್ನು ಪ್ರಾಯೋಗಿಕ ನೆಲೆಯಲ್ಲಿ ಸ್ವತಂತ್ರವಾಗಿ ಕಲಿತವರು. ಇನ್ನು ಕ್ಯಾಮೆರಾ ಹಿಡಿದು ಕಾಡಿನ ದಾರಿ ಹಿಡಿದಾಗ ಜೊತೆಯಾಗುವ ಛಾಯಾಗ್ರಾಹಕ ಸ್ನೇಹಿತರಿಂದಲೂ ಕೆಲವು ವಿಷಯಗಳನ್ನು ತಿಳಿದುಕೊಳ್ಳುತ್ತಾರಂತೆ.

ಯಾವುದೇ ಕಾಡು ಪ್ರವೇಶಿಸುವ ಮೊದಲು ಆ ಕುರಿತ ಅಧ್ಯಯನ ಅತ್ಯಂತ ಮುಖ್ಯ ಎನ್ನುವ ನಿಲುವು ಅವರದು. ‘ವೈಲ್ಡ್‌ಲೈಫ್‌ ಫೊಟೊಗ್ರಫಿ ಮಾಡುವಾಗ ಛಾಯಾಗ್ರಹಣದ ಬಗೆಗೆ ಅರಿತಿರುವುದಷ್ಟೇ ಅಲ್ಲ, ಪ್ರಾಣಿಗಳ ನಡವಳಿಕೆ, ಅವುಗಳ ಜೀವನ ಶೈಲಿಯ ಬಗೆಗೂ ಅರಿತಿರಬೇಕು. ಅನೇಕ ಸಲ ಕಾಡಿನಲ್ಲಿ ಎರಡು ದಿನ ಇದ್ದು, ಅವುಗಳ ಬಗೆಗೆ ಅರಿತು ನಂತರ ಛಾಯಾಗ್ರಹಣ ಕುತೂಹಲ ತಣಿಸಿಕೊಂಡಿದ್ದಿದೆ’ ಎಂದು ಮಾಹಿತಿ ನೀಡುತ್ತಾರೆ.

ಈ ಕ್ಷೇತ್ರದಲ್ಲಿ ತಾನು ಕಲಿಯುವುದಿನ್ನೂ ಬೇಕಾದಷ್ಟಿದೆ ಎನ್ನುತ್ತಾ ವಿನಯವಂತಿಕೆ ಮೆರೆಯುವ ರಾಘವೇಂದ್ರ ಕ್ಲಿಕ್ಕಿಸಿದ ಚಿತ್ರಗಳಿಗೆ ಸಾಕಷ್ಟು ಪ್ರಶಸ್ತಿಗಳೂ ಬಂದಿವೆ. ಅವರ ಸೆರೆಹಿಡಿದಿರುವ ಗೂಬೆಯ ಚಿತ್ರ ನೆಟ್‌ ಜಿಯೊ ಇಂಡಿಯಾ ನಿಯತಕಾಲಿಕೆಗೆ ಆಯ್ಕೆಯಾಗಿದೆ. ಅಖಿಲ ಭಾರತ ಛಾಯಾಗ್ರಹಣ ಸ್ಪರ್ಧೆಗಳಲ್ಲಿ ಬಹುಮಾನಗಳೂ ಸಿಕ್ಕಿದ್ದು, ಚಿತ್ರ ಪ್ರದರ್ಶನಗಳಲ್ಲಿಯೂ ಇವರ ಚಿತ್ರಗಳು ಪ್ರದರ್ಶನ ಕಂಡಿವೆ.

ಕೋಟ್‌

ವೈಲ್ಡ್‌ಲೈಫ್‌ ಫೊಟೊಗ್ರಫಿ ಆಯ್ದುಕೊಂಡವರು ಅಸ್ತಿತ್ವ ಕಂಡುಕೊಳ್ಳಲು, ಜನಪ್ರಿಯತೆ ಗಳಿಸಲು ಹತ್ತು ವರ್ಷವಾದರೂ ಕಾಯಬೇಕು. ದುಡ್ಡು ಮಾಡಬೇಕು ಎನ್ನುವವರಿಗೆ ಈ ಕ್ಷೇತ್ರ ಹೇಳಿಮಾಡಿಸಿದ್ದಲ್ಲ.

–ರಾಘವೇಂದ್ರ ಜೋಶಿ, ವೈಲ್ಡ್‌ಲೈಫ್‌ ಛಾಯಾಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT