ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸಸಾಹಿತ್ಯ ಪ್ರಚಾರಕ್ಕೆ ಭಜನೆಯ ಮಾರ್ಗ

Last Updated 20 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಸಾಹಿತ್ಯ ಮತ್ತು ಸಂಗೀತ ಲೋಕಕ್ಕೆ ದಾಸಸಾಹಿತ್ಯದ ಕೊಡುಗೆ ಅಪಾರವಾದುದು. ಇಂತಹ ಸಾಹಿತ್ಯ ಜನರ ಸ್ಮೃತಿ ಪಟಲದಿಂದ ದೂರವಾಗದಂತೆ ಜೋಪಾನ ಮಾಡುವ ಕಾರ್ಯವನ್ನು ಸಪ್ತಗಿರಿ ಭಜನಾ ಮಂಡಳಿ ಮಾಡುತ್ತಿದೆ. 1994ರಲ್ಲಿ ಆರಂಭವಾದ ಭಜನಾ ಮಂಡಳಿಗೆ ಈಗ ಬೆಳ್ಳಿಹಬ್ಬದ ಸಂಭ್ರಮ. ಮಂಡಳಿಯ ಅಧ್ಯಕ್ಷರಾಗಿರುವ ವಾರಿಣಿ ಜಯತೀರ್ಥಾಚಾರ್, ದಾಸ ಸಾಹಿತ್ಯ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪಿಎಚ್.ಡಿ. ಪಡೆದಿದ್ದಾರೆ. ಮಂತ್ರಾಲಯದ ಗುರು ಸಾರ್ವಭೌಮ ಸಾಹಿತ್ಯ ಸಂಘದ ಸಂಯೋಜಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಭಜನಾ ಮಂಡಳಿಯಲ್ಲಿ 30 ಸದಸ್ಯರಿದ್ದು, ವಾರಿಣಿ ಅವರು ಭಜನೆಗಳನ್ನು ಕಲಿಸುತ್ತಾರೆ. ಮಲ್ಲೇಶ್ವರ 8ನೇ ಅಡ್ಡರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿ ಮಠ ಈ ಮಂಡಳಿಯ ಕೇಂದ್ರ ಕಚೇರಿ.

24 ವರ್ಷಗಳ ಮಂಡಳಿಯ ಇತಿಹಾಸದಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ಸಂಘ ನೀಡಿದೆ. ಸದಸ್ಯರು ಉಡುಪಿ, ಮಂತ್ರಾಲಯಗಳಿಗೆ ತೆರಳಿ ಕಾರ್ಯಕ್ರಮ ನೀಡುತ್ತಿರುತ್ತಾರೆ. ಜೊತೆಗೆ ಪ್ರತಿವರ್ಷ ವೈಕುಂಠ ಏಕಾದಶಿಯಂದು ತಿರುಪತಿಯಲ್ಲಿಯೂ ಭಜನೆ ಕಾರ್ಯಕ್ರಮ ನೀಡುವ ಹೆಗ್ಗಳಿಕೆ ಈ ಮಂಡಳಿಯದು. ಶ್ರೀಪಾದರಾಜರು, ವ್ಯಾಸರಾಜರು, ವಾದಿರಾಜರು, ಪುರಂದರದಾಸರು, ವಿಜಯದಾಸರು, ಗೋಪಾಲ ದಾಸರ, ಜಗನ್ನಾಥ, ಪ್ರಾಣೇಶ ದಾಸರು, ಹೆಳವನಕಟ್ಟೆ ಗಿರಿಯಮ್ಮ... ಹೀಗೆ ದಾಸಪರಂಪರೆಯ ಕೀರ್ತನೆಗಳಿಗೆ ಭಜನೆಯ ಮಾರ್ಗದಲ್ಲಿ ಮಂಡಳಿಯ ಸದಸ್ಯರು ದನಿಯಾಗುತ್ತಾರೆ.

‘ತಾರತಮ್ಯ ಪ್ರಕಾರದಲ್ಲಿ ಭಜನೆ ಮಾಡುತ್ತೇವೆ. ನಮ್ಮ ಪರಂಪರೆಯಲ್ಲಿ ದೇವರನ್ನು ಸ್ಮರಿಸುವ ಮೊದಲು ಗುರುಗಳನ್ನು ನೆನಪಿಸಿಕೊಳ್ಳುವುದು ವಾಡಿಕೆ’ ಎಂದು ಭಜನೆ ಶೈಲಿಯ ಮಾಹಿತಿ ನೀಡುತ್ತಾರೆ ವಾರಿಣಿ.

ನಗರದ ವಿವಿಧ ಸ್ಥಳಗಳಲ್ಲಿ ನಡೆಯುವ ರಥೋತ್ಸವ, ಸ್ವಾಮಿಗಳ ಪುರಪ್ರವೇಶ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಜನೆ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಕಾರ್ಯಕ್ರಮಗಳಿಗೆ ಹೊಂದುವ ದಾಸರ ಪದಗಳು ದೇವರನಾಮಗಳನ್ನು ಹಾಡುವುದು ಭಜನಾ ಮಂಡಳಿಯ ವಿಶೇಷ.

ಶಿವರಾತ್ರಿಯಲ್ಲಿ ಶಿವನನ್ನು ನೆನೆಸುವ ಭಜನೆಗಳು ಮೇಳೈಸಿದರೆ, ವೈಕುಂಠ ಏಕಾದಶಿಯಂದು ಹರಿನಾಮಸ್ಮರಣೆಯೇ ಪ್ರಧಾನವಾಗಿರುತ್ತದೆ. ಜಗನ್ನಾಥದಾಸರು ಬರೆದಿರುವ ಮಧ್ವನಾಮ, ಹರಿಕಥಾಮೃತಸಾರವನ್ನು ನಿತ್ಯ ಪಾರಾಯಣ ಮಾಡುತ್ತಾರೆ. ಪ್ರತಿ ಶುಕ್ರವಾರ ವಾದಿರಾಜರು ಬರೆದಿರುವ ಲಕ್ಷ್ಮಿ ಶೋಭಾನೆ ಕಳೆಗಟ್ಟಿರುತ್ತದೆ.

‘ಅವಕಾಶ ದೊರೆತರೆ ನಾಲ್ಕರಿಂದ ಐದು ಗಂಟೆಗಳ ಕಾಲ ನಿರಂತರವಾಗಿ, ನಿರರ್ಗಳವಾಗಿ ಭಜನೆ ಮಾಡುವ ಸಾಮರ್ಥ್ಯ ನಮ್ಮ ತಂಡಕ್ಕಿದೆ. ಕೀರ್ತನೆಗಳನ್ನು ಲಯಬದ್ಧವಾಗಿ, ಸುಶ್ರಾವ್ಯವಾಗಿ ಹಾಡುತ್ತೇವೆ. ಹಾಗಾಗಿಯೇ ಅವಕಾಶಗಳು ಸಾಕಷ್ಟು ಒಲಿದು ಬರುತ್ತಿವೆ. ಧಾರ್ಮಿಕ, ಸಾಂಸ್ಕೃತಿಕ ಯಾವುದೇ ರೀತಿಯ ಕಾರ್ಯಕ್ರಮವಾದರೂ ಅದಕ್ಕೆ ಸೂಕ್ತ ಎನಿಸುವಂತೆ ಭಜನೆ ಮಾಡುತ್ತೇವೆ’ ಎನ್ನುತ್ತಾರೆ ವಾರಿಣಿ.

ಜನಪದ ಗೀತೆಗಳ ಗಾಯನದಲ್ಲಿಯೂ ಪ್ರಾವೀಣ್ಯ ಪಡೆದಿರುವ ಈ ಮಂಡಳಿ ಸದಸ್ಯರು ನಗರದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೋಲಾಟದ ಹಾಡುಗಳನ್ನು ಹಾಡುತ್ತಾರೆ. ಅಧಿಕಮಾಸದಲ್ಲಿ ನಗರದ ಯಾರೇ ಆಹ್ವಾನಿಸಿದರೂ ಅವರ ಮನೆಗಳಿಗೆ ತೆರಳಿ ಉಚಿತ ಶ್ರೀನಿವಾಸ ಕಲ್ಯಾಣ ಕುರಿತು ಭಜನೆ, ಉಪನ್ಯಾಸ ನೀಡುತ್ತಾರೆ.

ದಾಸಸಾಹಿತ್ಯವನ್ನು ಯುವಜನರಿಗೆ ಪರಿಚಯಿಸುವ ಉದ್ದೇಶದಿಂದ  ಮಂಡಳಿಯು ಆಸಕ್ತರಿಗೆ ಭಜನೆಗಳನ್ನು ಕಲಿಸಿಕೊಡುತ್ತಾರೆ. ವಾರಿಣಿಯವರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿಯೂ ವಿದ್ವತ್ ಪಡೆದಿರುವುದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಬೋಧನೆಯಲ್ಲಿ ತೊಡಗಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT