ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ರಿಗೋಲ್ಡ್‌ ಸಂಪತ್ತು ಸ್ವಾಧೀನ ಮತ್ತೆ ಒಲವು ತೋರಿದ ಝೀ

Last Updated 20 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ಲಕ್ಷಾಂತರ ಠೇವಣಿದಾರರು ಮತ್ತು ಏಜೆಂಟರಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಅಗ್ರಿಗೋಲ್ಡ್‌ನ ಸಂಪತ್ತು ಖರೀದಿಸುವ ತನ್ನ ನಿಲುವನ್ನು ಝೀ ಎಸ್ಸೆಲ್‌ ಸಮೂಹವು ಪುನರುಚ್ಚರಿಸಿದೆ.

ಅಗ್ರಿಗೋಲ್ಡ್‌ ಸಂಪತ್ತು ಖರೀದಿಸುವ ಪೂರ್ವ ಷರತ್ತಿನಂತೆ ಈಗಾಗಲೇ ಅಗತ್ಯ ಪ್ರಮಾಣ ಮೊತ್ತವನ್ನು ಕೋರ್ಟ್‌ನಲ್ಲಿ ಠೇವಣಿ ಇರಿಸಲಾಗಿದೆ. ಹೆಚ್ಚುವರಿಯಾಗಿ ಇನ್ನೂ ₹ 1,000 ಕೋಟಿ ಮೊತ್ತವನ್ನು ಮಾರ್ಚ್‌ 5ರಂದು ಠೇವಣಿ ಮಾಡುವುದಾಗಿ ಝೀ ಎಸ್ಸೆಲ್‌ ಸಮೂಹವು ಹೈಕೋರ್ಟ್‌ ಪೀಠಕ್ಕೆ ತಿಳಿಸಿತು. ಠೇವಣಿದಾರರು ಮತ್ತು ಏಜೆಂಟರು ಅಗ್ರಿಗೋಲ್ಡ್‌ ವಿರುದ್ಧ ದಾಖಲಿಸಿರುವ ಮೊಕದ್ದಮೆಯ ವಿಚಾರಣೆ ನಡೆಸುತ್ತಿರುವ ಪೀಠಕ್ಕೆ ಎಸ್ಸೆಲ್‌ ಸಮೂಹದ ವಕೀಲರು ಈ ಮಾಹಿತಿ ನೀಡಿದರು.

ಠೇವಣಿದಾರರಿಗೆ ವಂಚನೆ ಎಸಗಿರುವ ಕಳಂಕಿತ ಅಗ್ರಿಗೋಲ್ಡ್‌  ಸ್ವಾಧೀನಕ್ಕೆ ಮುಂದಾಗಿದ್ದ ಝೀ ಎಸ್ಸೆಲ್‌ ಸಮೂಹವು  ಡಿಸೆಂಬರ್‌ ತಿಂಗಳಲ್ಲಿ ತನ್ನ ವಾಗ್ದಾನದಿಂದ ಹಿಂದೆ ಸರಿದಿತ್ತು. ಅಗ್ರಿಗೋಲ್ಡ್‌ನ ಸಂಪತ್ತನ್ನಷ್ಟೇ ಖರೀದಿಸಲಾಗುವುದು. ಸಂಸ್ಥೆಯ ಆಡಳಿತ ಮಂಡಳಿಯನ್ನಲ್ಲ ಎಂದು ತಿಳಿಸಿತ್ತು. ಈಗ ಅದರ ಧೋರಣೆ ಬದಲಾಗಿರುವುದು ಠೇವಣಿದಾರರಲ್ಲಿ ತಮ್ಮ ಹಣ ಮರಳಿ ಬರುವ ವಿಶ್ವಾಸ ಮೂಡಿಸಿದೆ.

ಝೀ ಎಸ್ಸೆಲ್‌ ಸಮೂಹದ ಈ ಬದಲಾದ ನಿಲುವಿನ ಕಾರಣಕ್ಕೆ, ಅಗ್ರಿಗೋಲ್ಡ್‌ ಸಂಸ್ಥೆಯು ತನ್ನ ಒಡೆತನದಲ್ಲಿ ಇರುವ ಆಸ್ತಿಗಳ ನೋಂದಣಿ ದಾಖಲೆ ಪತ್ರಗಳು ಮತ್ತು ಬ್ಯಾಂಕ್‌ ಹೇಳಿಕೆಯನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ಪೀಠವು ಸೂಚಿಸಿದೆ. ಝೀ ಸಮೂಹವು ಅಂತಿಮ ನಿರ್ಧಾರಕ್ಕೆ ಬರಲು ಈ ದಾಖಲೆಗಳು ನೆರವಾಗಲಿವೆ. ವಿಚಾರಣೆಯನ್ನು ಮಾರ್ಚ್‌ 5ಕ್ಕೆ ಮುಂದೂಡಲಾಗಿದೆ.

ಬಜೆಟ್‌ ನೆರವಿಗೆ ಒತ್ತಾಯ: ವಂಚನೆ ಒಳಗದಾದವರಿಗೆ ಹಣ ಮರಳಿಸಲು  ಆಂಧ್ರಪ್ರದೇಶ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ₹ 4,000 ಕೋಟಿ ತೆಗೆದು ಇರಿಸಬೇಕು ಎಂದು ಠೇವಣಿದಾರರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಾಕಿನಾಡದ ಪೂರ್ವ ಗೋದಾವರಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಠೇವಣಿದಾರರು ಈ ಒತ್ತಾಯ ಮಾಡಿದ್ದಾರೆ.

ಝೀ ಎಸ್ಸೆಲ್‌ ಸಮೂಹದಿಂದ ಅಗ್ರಿಗೋಲ್ಡ್‌ ಸಂಸ್ಥೆಯ ಆಸ್ತಿ ಸ್ವಾಧೀನ ಪ್ರಕ್ರಿಯೆ ವಿಳಂಬವಾಗಲಿದೆ. ಹೀಗಾಗಿ ರಾಜ್ಯ ಸರ್ಕಾರವು ಈ ಬಜೆಟ್‌ ನೆರವಿನ ಮೂಲಕ ಠೇವಣಿದಾರರಿಗೆ ಬರಬೇಕಾದ ಹಣ ಮರಳಿಸಲು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂಬುದು ಠೇವಣಿದಾರರ ಬೇಡಿಕೆಯಾಗಿದೆ.

ಠೇವಣಿದಾರ ಸಂಘಟನೆಗಳ ಬಳಿ ಇರುವ ವಿವರಗಳ ಪ್ರಕಾರ, ವಿವಿಧ ರಾಜ್ಯಗಳಲ್ಲಿನ 32 ಲಕ್ಷಕ್ಕೂ ಹೆಚ್ಚು ಠೇವಣಿದಾರರಿಗೆ ಅಗ್ರಿಗೋಲ್ಡ್‌ ಸಂಸ್ಥೆಯು ₹ 6,380 ಕೋಟಿ ಪಾವತಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT