ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ ದೂಳಿನ ಕಣಗಳ ಪ್ರಮಾಣ ಹೆಚ್ಚಳ

ಕೋ ಮೀಡಿಯಾ ಲ್ಯಾಬ್‌ ಮತ್ತು ಕ್ಲೈಮೆಟ್‌ ಟ್ರೆಂಡ್‌ ಸಂಸ್ಥೆಗಳು ಫೆ.5ರಿಂದ 15ರವರೆಗೆ ನಡೆಸಿದ ಸಮೀಕ್ಷೆಯಲ್ಲಿ ದೃಢ
Last Updated 20 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಲ್ಲಿ ದೂಳಿನ ಕಣಗಳ ಪ್ರಮಾಣ (ಪಿಎಂ) ಹೆಚ್ಚಾಗಿರುವುದು ಕೋ ಮೀಡಿಯಾ ಲ್ಯಾಬ್‌ ಮತ್ತು ಕ್ಲೈಮೆಟ್‌ ಟ್ರೆಂಡ್‌ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ದೃಢಪಟ್ಟಿದೆ.

ಈ ಸಂಸ್ಥೆಗಳು ಫೆಬ್ರುವರಿ 5ರಿಂದ 15ರವರೆಗೆ ನಗರದ ಆಯ್ದ ಸ್ಥಳಗಳಲ್ಲಿ ವಾಯುಮಾಲಿನ್ಯವನ್ನು ಮಾಪನ ಮಾಡಿವೆ. ಜಿಪಿಎಸ್‌ ವ್ಯವಸ್ಥೆ ಹೊಂದಿದ ಮಾಲಿನ್ಯ ಮಾಪಕವನ್ನು ಅಳವಡಿಸಿದ್ದ ಆಟೊರಿಕ್ಷಾವು ಮಾಲಿನ್ಯ ಹೆಚ್ಚಾಗಿರುವ ಕೂಡು ರಸ್ತೆಗಳು, ಸೂಕ್ಷ್ಮ ಪ್ರದೇಶಗಳಲ್ಲಿ ವಾಹನ ದಟ್ಟಣೆ ಅವಧಿಯಲ್ಲಿ ಸಂಚರಿಸಿತ್ತು. ಜಯನಗರ, ಬನಶಂಕರಿ, ಸಿಲ್ಕ್‌ಬೋರ್ಡ್‌, ಎಲೆಕ್ಟ್ರಾನಿಕ್‌ ಸಿಟಿ, ವೈಟ್‌ಫೀಲ್ಡ್‌, ಮಾರತ್ತಹಳ್ಳಿ, ಎಂ.ಜಿ.ರಸ್ತೆ ಹಾಗೂ ಮೇಖ್ರಿ ವೃತ್ತ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಆಟೊರಿಕ್ಷಾ ಓಡಾಡಿತ್ತು.

ಐಕಾನ್‌ ಸೆಂಟ್ರಲ್‌ ಲ್ಯಾಬ್‌, ಮಾರೇನಹಳ್ಳಿ ರಸ್ತೆಯ ಅಂಗಡಿ ಸಿಲ್ಕ್‌, ವೈಟ್‌ಫೀಲ್ಡ್‌ನ ನಲ್ಲೂರಹಳ್ಳಿ, ಅರೇಹಳ್ಳಿ, ಜಲ ಭವನ ಮತ್ತು ಎಂ.ಜಿ.ರಸ್ತೆ ಬಳಿ ದೂಳಿನ ಕಣಗಳ ಪ್ರಮಾಣ ರಾಷ್ಟ್ರೀಯ ಮಿತಿಯನ್ನು ಮೀರಿದೆ. ಕೆಲ ಪ್ರದೇಶಗಳಲ್ಲಿ 800 ಮೈಕ್ರೊ ಗ್ರಾಂನಷ್ಟು ದೂಳಿನ ಕಣಗಳು ಕಂಡುಬಂದಿವೆ. ಆದರೆ, ಇವುಗಳ ಪ್ರಮಾಣ 100 ಮೈಕ್ರೊ ಗ್ರಾಂಗಿಂತ ಕಡಿಮೆ ಇರಬೇಕು.

ನಗರದ ವಾಯು ಗುಣಮಟ್ಟವು ಉತ್ತರ ಭಾರತದ ನಗರಗಳಂತೆ ಸುದ್ದಿ ಮಾಡುವುದಿಲ್ಲ. ನಗರದ ಗಾಳಿಯ ಗುಣಮಟ್ಟವನ್ನು ಮಾಪನ ಮಾಡುವ ಸಂಸ್ಥೆಗಳೂ ಸ್ಪಷ್ಟ ಚಿತ್ರಣ ನೀಡುವುದಿಲ್ಲ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಒದಗಿಸುತ್ತಿರುವ ದತ್ತಾಂಶಗಳಿಗೆ ಹೋಲಿಸಿದರೆ ನಾಗರಿಕರು ಉಸಿರಾಡುವ ಗಾಳಿಯಲ್ಲಿರುವ ದೂಳಿನ ಕಣಗಳಿಗೂ ಭಿನ್ನವಾಗಿದೆ ಎಂದು ಕೋ ಮೀಡಿಯಾ ಲ್ಯಾಬ್‌ ಅಭಿಪ್ರಾಯಪಟ್ಟಿದೆ.

‘ಸಂಚಾರ ದಟ್ಟಣೆ ಅವಧಿಯಲ್ಲಿ ಆಟೊ ಒಳಗೆ ಕುಳಿತುಕೊಳ್ಳುವುದು ಕಷ್ಟದ ಕೆಲಸ. ಬಿಎಂಟಿಸಿ ಬಸ್‌ಗಳು, ಎರಡು ಸ್ಟ್ರೋಕ್‌ ಆಟೊ ಸೇರಿದಂತೆ ಡೀಸೆಲ್‌ ವಾಹನಗಳು ಉಗುಳುವ ಹೊಗೆಯನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನಾನು ಎಲ್ಲ ದಿನಗಳಲ್ಲಿ ಮುಖಗವಸು ಧರಿಸುತ್ತೇನೆ’ ಎಂದು ಆಟೊ ಚಾಲಕ ಶ್ರೀಧರ್‌ ಗೌಡ ತಿಳಿಸಿದ್ದಾರೆ.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ತಜ್ಞವೈದ್ಯ ಡಾ.ರಾಹುಲ್‌ ಪಾಟೀಲ್‌, ‘ನಗರದಲ್ಲಿ ಆಟೊ ಹಾಗೂ ಕ್ಯಾಬ್‌ ಚಾಲಕರಲ್ಲಿ ಹೃದಯಾಘಾತ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸಂಚಾರ ದಟ್ಟಣೆ ವೇಳೆ ವಾಹನಗಳು ಆಮೆಗತಿಯಲ್ಲಿ ಸಾಗುವುದರಿಂದ ಗಾಳಿಯಲ್ಲಿರುವ ದೂಳಿನ ಕಣಗಳು ಅಪಧಮನಿಗಳಿಗೆ ಸೇರಿ ರಕ್ತಸಂಚಾರಕ್ಕೆ ಅಡ್ಡಿ ಉಂಟುಮಾಡುತ್ತವೆ. ನಾಗರಿಕರಿಗೆ ಈ ಬಗ್ಗೆ ಅರಿವು ಮೂಡಿಸಬೇಕು. ಪಾದಚಾರಿ ಮಾರ್ಗಗಳಲ್ಲಿ ಓಡಾಡ
ಬಾರದು ಎಂದು ಸಲಹೆ ನೀಡಿದರು.

ಏನಿದು ಪಿಎಂ2.5, ಪಿಎಂ10?

ಗಾಳಿಯಲ್ಲಿ ತೇಲಾಡುವ ಸೂಕ್ಷ್ಮ ಕಣಗಳನ್ನು ಪರ್ಟಿಕ್ಯುಲೇಟ್‌ ಮ್ಯಾಟರ್‌ (ಪಿಎಂ) ಎಂದು ಕರೆಯಲಾಗುತ್ತದೆ. ಮನುಷ್ಯರಿಗೆ ಹಾಗೂ ಪರಿಸರಕ್ಕೆ ಹಾನಿ ಮಾಡಬಲ್ಲ ಗಾಳಿಯಲ್ಲಿನ ಘನರೂಪದ ಕಣಗಳು ಹಾಗೂ ದ್ರವರೂಪದ ಸಣ್ಣ ಹನಿಗಳಿವು. 2.5 ಮೈಕ್ರೊ ಮೀಟರ್‌ಗಿಂತ ಸಣ್ಣದಾದ ಕಣಗಳನ್ನು ಪಿಎಂ2.5 ಹಾಗೂ 10 ಮೈಕ್ರೊ ಮೀಟರ್‌ಗಿಂತ ಸಣ್ಣದಾದ ಕಣಗಳನ್ನು ಪಿಎಂ10 ಎಂದು ಕರೆಯಲಾಗುತ್ತದೆ. ದೇಶದಲ್ಲಿ ಪಿಎಂ2.5 ಅಪಾಯಕಾರಿ ಹಾಗೂ ಪಿಎಂ10 ಸಾಮಾನ್ಯ ಮಾಲಿನ್ಯಕಾರಕ ಎಂದು
ಪರಿಗಣಿಸಲಾಗಿದೆ.

ತರಕಾರಿ ಹಾಗೂ ಹಣ್ಣುಗಳಲ್ಲಿ ವಿಷಕಾರಿ ಅಂಶ ಪತ್ತೆ

ಬೆಂಗಳೂರು: ನಗರಕ್ಕೆ ಪೂರೈಕೆಯಾಗುವ ತರಕಾರಿ ಹಾಗೂ ಹಣ್ಣುಗಳಲ್ಲಿ ಯಥೇಚ್ಛ ವಿಷಕಾರಿ ಅಂಶಗಳಿವೆ. ನಗರದ ಹೊರವಲಯದ ಅಂತರ್ಜಲ ಕಲುಷಿತಗೊಂಡಿರುವುದೇ ಇದಕ್ಕೆ ಕಾರಣ.

ಈ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಪ್ರೊ.ಟಿ.ವಿ.ರಾಮಚಂದ್ರ ಹಾಗೂ ಅವರ ತಂಡವು ‘ವೃಷಭಾವತಿ ಕಣಿವೆಯ ಕೆರೆಗಳ ಪುನಶ್ಚೇತನದ ನೀಲನಕ್ಷೆ’ ಶೀರ್ಷಿಕೆಯಡಿ ವರದಿ ನೀಡಿದೆ.

ತಂಡದಲ್ಲಿ ಎಸ್‌.ವಿನಯ್‌, ಕೆ.ಎಸ್‌.ಅಶುಲಾಭ, ವಿ.ಸಿನ್ಸಿ, ಸುದರ್ಶನ್‌ ಭಟ್‌, ದುರ್ಗಾ ಎಂ.ಮಹಾಪಾತ್ರ ಮತ್ತು ಭರತ್‌ ಎಚ್‌. ಐತಾಳ್‌ ಇದ್ದಾರೆ.

ಕೈಗಾರಿಕೆಗಳ ಪರಿಣಾಮದಿಂದ ವೃಷಭಾವತಿ ಕಣಿವೆ ಪ್ರದೇಶದ ಕೆರೆಗಳು ಮತ್ತು ಜಲಮೂಲಗಳು ಅತಿಹೆಚ್ಚಿನ ಪ್ರಮಾಣದಲ್ಲಿ ಕಲುಷಿತಗೊಂಡಿವೆ. ರೈತರು ಈ ನೀರನ್ನು ಬಳಸಿ ತರಕಾರಿ ಬೆಳೆಯುತ್ತಿದ್ದಾರೆ.

ರಾಮನಗರ ಹಾಗೂ ಆನೇಕಲ್‌ ಭಾಗದಿಂದ ಸಾಕಷ್ಟು ತರಕಾರಿಗಳು ಬೆಂಗಳೂರಿಗೆ ಬರುತ್ತವೆ. ಆನೇಕಲ್‌ನಲ್ಲಿ ಗ್ರಾನೈಟ್‌ ಹಾಗೂ ಕಲ್ಲು ಕತ್ತರಿಸುವ ಘಟಕಗಳಿಂದಾಗಿ ಹೆಚ್ಚಿನ ಮಾಲಿನ್ಯ ಉಂಟಾಗುತ್ತಿದೆ. ಕೋರಮಂಗಲ ಹಾಗೂ ಚಲ್ಲಘಟ್ಟ ಕಣಿವೆಯ ನೀರನ್ನು ಆನೇಕಲ್‌ಗೆ ತಿರುಗಿಸಲು ಸರ್ಕಾರ ನಿರ್ಧರಿಸಿದೆ. ಇದು ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

ವೃಷಭಾವತಿ ಕಣಿವೆ ಹಾಗೂ ಜಲಮೂಲಗಳ ಸುತ್ತಲೂ ಕಸ ಸುಡುವುದರಿಂದ ವಿಷಾನಿಲ ಹೆಚ್ಚುತ್ತದೆ. ಇದು ಸುತ್ತಲಿನ ಜನರ ಮೇಲೆ ಪರಿಣಾಮ ಬೀರುತ್ತದೆ.

ಕೈಗಾರಿಕೆಗಳು ಸಂಸ್ಕರಿಸದ ತ್ಯಾಜ್ಯ ನೀರು ಹಾಗೂ ಕೊಳಚೆ ನೀರನ್ನು ಬಿಡುತ್ತಿರುವುದು, ಜಲಮೂಲಕ್ಕೆ ಕಸ ಹಾಗೂ ಕಟ್ಟಡದ ಅವಶೇಷಗಳನ್ನು ಸುರಿಯುತ್ತಿರುವುದು ಜೀವ ವೈವಿಧ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮೀನುಗಳು ಹಾಗೂ ಕಳೆಯ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಕಣಿವೆ ನೀರು, ಇದರ ವ್ಯಾಪ್ತಿಯ 35 ಕೆರೆಗಳ ನೀರು ಹಾಗೂ ಅಂತರ್ಜಲದ ಗುಣಮಟ್ಟವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯೂ ಪರೀಕ್ಷಿಸಿದೆ. ಈ ನೀರಿನ ನೇರ ಬಳಕೆಗೆ ಯೋಗ್ಯವಲ್ಲ ಎಂಬ ಅಂಶವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

***

ಸಂಸ್ಕರಿಸದ ತ್ಯಾಜ್ಯದ ನೀರನ್ನು ಹೊರಬಿಡುತ್ತಿರುವ ಕಾರ್ಖಾನೆಗಳಿಗೆ ನೋಟಿಸ್‌ ನೀಡಲಾಗುತ್ತಿದೆ.
– ಲಕ್ಷ್ಮಣ್‌, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT