ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿ.. ಎಂದಾಗ ಬಾಟಲಿಯಿಂದ ಬಾಯಿಗೇ ಹೊಡೆದರು: ವಿದ್ವತ್‌

ಅಣ್ಣನ ಬಳಿ ಘಟನೆಯನ್ನು ವಿವರಿಸಿರುವ ವಿದ್ವತ್ * ಮಹಡಿಯಿಂದ ಎಳೆದು ತಂದು ಹಲ್ಲೆ
Last Updated 20 ಫೆಬ್ರುವರಿ 2018, 19:34 IST
ಅಕ್ಷರ ಗಾತ್ರ

ಬೆಂಗಳೂರು‌: ‘ಕಾಲು ಚಾಚಿಕೊಂಡು ಕುಳಿತಿದ್ದಕ್ಕೆ ಕ್ಷಮೆ ಕೋರುವಂತೆ ಹೇಳಿದರು. ತಪ್ಪಿಲ್ಲದ ಕಾರಣಕ್ಕೆ ನಾನು ಆರಂಭದಲ್ಲಿ ಅವರ ಮಾತನ್ನು ಕೇಳಲಿಲ್ಲ. ಆದರೆ, ಏಕಾಏಕಿ ಹೊಡೆಯಲು ಶುರು ಮಾಡಿದ್ದರಿಂದ ಸಾರಿ.. ಸಾರಿ.. ಎನ್ನಲಾರಂಭಿಸಿದೆ. ಆಗ ಬಿಯರ್ ಬಾಟಲಿಯಿಂದ ಬಾಯಿಗೇ ಹೊಡೆದುಬಿಟ್ಟರು...’‌

ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಹಾಗೂ ಆತನ ಸಹಚರರು ನಡೆಸಿದ ಗೂಂಡಾಗಿರಿಯನ್ನು ವಿದ್ವತ್ ಅಣ್ಣ ಸಾತ್ವಿಕ್ ಬಳಿ ಎಳೆ ಎಳೆಯಾಗಿ ವಿವರಿಸಿದ್ದಾರೆ.

‘ನಲಪಾಡ್ ಜತೆ ಸುಮಾರು 15 ಸ್ನೇಹಿತರು ಇದ್ದರು. ಅವರಲ್ಲಿ ಆರೇಳು ಮಂದಿ ಬೌನ್ಸರ್‌ಗಳು. ಎಲ್ಲರೂ ಸೇರಿಕೊಂಡು ಮನಸೋ ಇಚ್ಛೆ ಹೊಡೆದರು. ಮೈಮೇಲೆ ಕುರ್ಚಿಗಳನ್ನು ಎಸೆದರು. ‘ಕ್ಷಮೆ ಕೇಳು’ ಎಂದರು. ಕ್ಷಮೆಯಾಚಿಸಿದರೂ ಹೊಡೆದರು’ ಎಂದಿದ್ದಾರೆ.

ಸಾಯಿಸಿಬಿಡುತ್ತಿದ್ದರು: ‘ನಟ ರಾಘವೇಂದ್ರ ರಾಜ್‌ಕುಮಾರ್ ಮಗ ಗುರು ಅವರು ಮಲ್ಯ ಆಸ್ಪತ್ರೆಗೆ ಬರದಿದ್ದರೆ, ನನ್ನ ತಮ್ಮನನ್ನು ಹೊಡೆದು ಸಾಯಿಸಿಬಿಡುತ್ತಿದ್ದರು’ ಎಂದು ವಿದ್ವತ್ ಅಣ್ಣ ಸಾತ್ವಿಕ್ ಹೇಳಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಶನಿವಾರ ರಾತ್ರಿ ವಿದ್ವತ್, ಸ್ನೇಹಿತರೊಂದಿಗೆ ಊಟಕ್ಕೆ ಹೋಗಿದ್ದ. ಗಲಾಟೆ ವಿಚಾರ ತಿಳಿದು ‘ಫರ್ಜಿ ಕೆಫೆ’ಗೆ ತೆರಳಿದೆ. ಅಷ್ಟರಲ್ಲಾಗಲೇ ತಮ್ಮನನ್ನು ಮಲ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಕ್ಷಣ ನಾನೂ ಅಲ್ಲಿಗೆ ಹೋದೆ’ ಎಂದು ವಿವರಿಸಿದರು.

‘ವಿದ್ವತ್‌ಗೆ ನರ್ಸ್‌ವೊಬ್ಬರು ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದರು. ಆತನ ಜತೆ ನಾನು, ಗುರು ಹಾಗೂ ನಾಲ್ವರು ಸ್ನೇಹಿತರು ಮಾತ್ರ ಇದ್ದೆವು. ಸ್ವಲ್ಪ ಸಮಯದಲ್ಲೇ ಎರಡು ಕಾರುಗಳಲ್ಲಿ ಆಸ್ಪತ್ರೆಗೂ ಬಂದ ನಲಪಾಡ್‌ ಹಾಗೂ ಸಹಚರರು, ಕೊಠಡಿಯ ಬಾಗಿಲು ಒದ್ದುಕೊಂಡೇ ಒಳನುಗ್ಗಿ ಪುನಃ ವಿದ್ವತ್ ಮೇಲೆ ಹಲ್ಲೆ ಮಾಡಲು ಮುಂದಾದರು. ರಕ್ಷಣೆಗೆ ಹೋದ ನನ್ನ ಮೇಲೂ ಹಲ್ಲೆ ನಡೆಸಿ, ಕೊರಳಪಟ್ಟಿ ಹರಿದರು. ಈ ಸಂದರ್ಭದಲ್ಲಿ ಗುರುವನ್ನು ನೋಡಿದ ನಲಪಾಡ್, ಸಹಚರರನ್ನು ಕರೆದುಕೊಂಡು ಸುಮ್ಮನೆ ಹೊರಟು ಹೋದ.’

‘ಆ ನಂತರ ಹೋಟೆಲ್‌ನಲ್ಲಿ ನಡೆದ ಘಟನೆ ಬಗ್ಗೆ ತಮ್ಮನನ್ನು ವಿಚಾರಿಸಿದಾಗ, ‘ಮೂಳೆ ಮುರಿದಿದ್ದರಿಂದ ಕಾಲನ್ನು ಇನ್ನೊಂದು ಕುರ್ಚಿಯ ಮೇಲಿಟ್ಟುಕೊಂಡಿದ್ದೆ. ಆಗ ನಲಪಾಡ್ ಬಂದು ಕಾಲು ಕೆಳಗಿಳಿಸುವಂತೆ ಹೇಳಿದ. ನನ್ನ ಪರಿಸ್ಥಿತಿ ಹೇಳಿಕೊಂಡಾಗ, ಎಂಎಲ್‌ಎ ಹ್ಯಾರಿಸ್ ಮಗನಿಗೇ ಎದುರು ಮಾತನಾಡುತ್ತೀಯಾ ಎನ್ನುತ್ತಾ ಹೊಡೆಯಲಾರಂಭಿಸಿದ. ಬಾಟಲಿಯಿಂದಲೂ ಮುಖಕ್ಕೆ ಹೊಡೆದ’ ಎಂದು ವಿವರಿಸಿದ. ಮುಂದಿನ ದಿನಗಳಲ್ಲೂ ಅವರಿಂದ ನಮಗೆ ತೊಂದರೆ ತಪ್ಪಿದ್ದಲ್ಲ ಎನಿಸುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಮಹಡಿಗೂ ಬಂದ: ‘15 ಮಂದಿ ಸುತ್ತುವರಿದು ನಿರ್ದಯವಾಗಿ ಹಲ್ಲೆ ಮಾಡಿದರು. ತಕ್ಷಣ ನಾನು, ವಿದ್ವತ್‌ನನ್ನು ರಕ್ಷಿಸಿಕೊಂಡು ಹೋಟೆಲ್‌ನ ಮಹಡಿಗೆ ಕರೆದೊಯ್ದೆ. ನಲಪಾಡ್ ಸಹಚರನೊಬ್ಬ ಅಲ್ಲಿಗೆ ಬಂದು ನಮ್ಮಿಬ್ಬರನ್ನೂ ಪುನಃ ಕೆಳಗೆ ಎಳೆದುಕೊಂಡು ಹೋದ. ಅಲ್ಲಿ ‘ಅಣ್ಣನ (ನಲಪಾಡ್‌ನ) ಕಾಲಿಗೆ ಬಿದ್ದು ಕ್ಷಮೆ ಕೇಳು’ ಎಂದು ಗದರಿದ. ವಿದ್ವತ್ ನಿರಾಕರಿಸಿದಾಗ ಪುನಃ ಹಲ್ಲೆ ಮಾಡಿದರು’ ಎಂದು ಗಾಯಾಳುವಿನ ಸ್ನೇಹಿತ ಪ್ರವೀಣ್ (ದೂರುದಾರ) ಹೇಳಿದರು.

ವಿದ್ವತ್ ತಂದೆ ಲೋಕನಾಥ್ ಉದ್ಯಮಿಯಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಒಡನಾಟ ಇಟ್ಟುಕೊಂಡಿದ್ದಾರೆ. ಗೆಳೆಯರಲ್ಲಿ ಒಬ್ಬರಾದ ಭ್ರಷ್ಟಾಚಾರ ನಿಗ್ರಹ ದಳದ ಐಜಿಪಿ ಎಂ.ಚಂದ್ರಶೇಖರ್ ಅವರು ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ವಿದ್ವತ್‌ನ ಯೋಗಕ್ಷೇಮ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT