ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಪ್ಯ ಸಭೆಯಲ್ಲಿ ಬೆಂಬಲ ಯಾಚನೆ

Last Updated 21 ಫೆಬ್ರುವರಿ 2018, 7:03 IST
ಅಕ್ಷರ ಗಾತ್ರ

ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಮಠಗಳ ಸ್ವಾಮೀಜಿಗಳೊಂದಿಗೆ ಮಂಗಳವಾರ ರಾತ್ರಿ ಇಲ್ಲಿ ಸಭೆ ನಡೆಸಿದರು. ಸುಮಾರು 45 ನಿಮಿಷ ನಡೆದ ಸಭೆಯಲ್ಲಿ ಬಿಜೆಪಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು ಎಂದು ತಿಳಿದು ಬಂದಿದೆ.

ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ‘ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ರಾಜ್ಯದ ಜನರಿಗೆ ಅನುಕೂಲ ಮಾಡಿಕೊಡಬೇಕು. ಒಂದು ವೇಳೆ ಕಾಂಗ್ರೆಸ್‌ ಸಹಕಾರ ನೀಡದಿದ್ದರೆ ಅದು ಅವರ ದೋಷವಾಗುತ್ತದೆ. ಎಲ್ಲ ಧರ್ಮಗಳನ್ನು ಒಂದೇ ರೀತಿ ನೋಡಬೇಕು. ಅಲ್ಪಸಂಖ್ಯಾತರಿಗೆ ಒಂದು ಬಹು ಸಂಖ್ಯಾತರಿಗೆ ಒಂದೆಂಬಂತೆ ವ್ಯತ್ಯಾಸ ಮಾಡಬಾರದು. ಮಠಗಳನ್ನು ನಿಯಂತ್ರಿಸುವ ಬಗ್ಗೆ, ಬಿದಾಯಿ ಭಾಗ್ಯ ಮುಂತಾದ ಯೋಜನೆ ಹೀಗೆ ಯಾವುದೇ ವಿಷಯದಲ್ಲಿಯೂ ತಾರತಮ್ಯ ಇರಬಾರದು’ ಎಂದು ಹೇಳಿದರು ಎನ್ನಲಾಗಿದೆ.

‘ಮಾತನಾಡಬೇಕು ಎಂದು ಅವರು ಬಯಸಿದ ಕಾರಣ ಅವಕಾಶ ನೀಡಲಾಯಿತು. ನಾಳೆ ರಾಹುಲ್ ಗಾಂಧಿ ಅವರು ಬಂದರೂ ಸಹ ಅವರೊಂದಿಗೆ ಚರ್ಚೆ ನಡೆಸುತ್ತೇನೆ’ ಎಂದು ಶ್ರೀಗಳು ಹೇಳಿದರು.

ಪೇಜಾವರ ಮಠಕ್ಕೆ ಭೇಟಿ ನೀಡಿದ ಶಾ ಪೇಜಾವರ ಸ್ವಾಮೀಜಿ ಅವರ ಯೋಗಕ್ಷೇಮ ವಿಚಾರಿಸಿದರು. ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೆ ಪೇಜಾವರ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಅವರು ನಡೆಸುತ್ತಿರುವ ಗೋ ಶಾಲೆಗಳ ಬಗ್ಗೆಯೂ ಮಾಹಿತಿ ಪಡೆದರು.

ಪರ್ಯಾಯ ಮಠದ ವಿದ್ಯಾಧೀಶ ಸ್ವಾಮೀಜಿ, ಪುತ್ತಿಗೆ ಮಠದ ಸುಗುಣೇಂದ್ರ ಸ್ವಾಮೀಜಿ, ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ, ಬಾಳಕುದ್ರು ಮಠದ ನೃಸಿಂಹಾಶ್ರಮ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಬಾಳೆಕೋಡು ಶಶಿಕಾಂತ್ ಮಣಿ ಸ್ವಾಮೀಜಿ, ಇಸ್ಕಾನ್‌ನ ನಾಮನಿಷ್ಠದಾಸ್, ಶ್ರೀವಾಸ ದಾಸ, ಕರಿಂಜೆ ಕ್ಷೇತ್ರದ ಮುಕ್ತನಾಂದ ಸ್ವಾಮೀಜಿ, ನರೇಂದ್ರನಾಥ ಸ್ವಾಮೀಜಿ, ಬೈಲೂರು ರಾಮಕೃಷ್ಣ ಆಶ್ರಮದ ವಿನಾಯಕಾನಂದ ಮಹಾರಾಜ್, ವಿಖ್ಯಾತನಂದ ಸ್ವಾಮೀಜಿ ಚರ್ಚೆಯಲ್ಲಿ ಭಾಗವಹಿಸಿದ್ದರು.

ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮುಖಂಡರಾದ ಬಿ.ಎಲ್. ಸಂತೋಷ್, ಆರ್‌ಎಸ್‌ಎಸ್‌ ಮುಖಂಡ ಶಂಭು ಶೆಟ್ಟಿ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ಶಾಸಕರಾದ ಸಿ.ಟಿ. ರವಿ, ಸುನೀಲ್ ಕುಮಾರ್, ಬೈಕಾಡಿ ಸುಪ್ರಸಾದ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ್ ಹೆಗ್ಡೆ, ಮಾಜಿ ಶಾಸಕ ಕೆ. ರಘಪತಿ ಭಟ್, ಲಾಲಾಜಿ ಆರ್. ಮೆಂಡನ್ ಸಹ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT