ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯದಲ್ಲಿ 6,850 ಕಿ.ಮೀ. ಹೆದ್ದಾರಿ ನಿರ್ಮಾಣ’

Last Updated 21 ಫೆಬ್ರುವರಿ 2018, 7:16 IST
ಅಕ್ಷರ ಗಾತ್ರ

ಝಳಕಿ (ವಿಜಯಪುರ): ‘ಕೇಂದ್ರ ಸರ್ಕಾರ ಕರ್ನಾಟಕದ ವ್ಯಾಪ್ತಿಯಲ್ಲಿ ₹ 2.50 ಲಕ್ಷ ಕೋಟಿ ವೆಚ್ಚದಲ್ಲಿ 6850 ಕಿ.ಮೀ. ಹೆದ್ದಾರಿ ನಿರ್ಮಿಸುವ ಗುರಿ ಹೊಂದಿದೆ’ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದರು.

ಸೊಲ್ಲಾಪುರ–ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಮಂಗಳವಾರ ಸಂಜೆ ಝಳಕಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ನೆರೆದಿದ್ದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಅವರು, ‘ಉದ್ದೇಶಿತ ಈ ರಸ್ತೆ ಕಾಮಗಾರಿಗಳು ಪೂರ್ಣಗೊಂಡರೆ, ಕರ್ನಾಟಕ ದೇಶದಲ್ಲೇ ಮಾದರಿ ರಸ್ತೆ ಹೊಂದಿದ ರಾಜ್ಯವಾಗಲಿದೆ’ ಎಂದರು.

‘ತಾಂತ್ರಿಕ ಅಡಚಣೆ ಸೇರಿದಂತೆ ಇನ್ನಿತರೆ ಕಾರಣಗಳಿಂದಾಗಿ ವಿಜಯಪುರ-ಸೊಲ್ಲಾಪುರ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ವಿಳಂಬವಾಗಿತ್ತು. ಈ ರಸ್ತೆಗಾಗಿ ಇಲ್ಲಿನ ಜನರು ದಶಕದಿಂದ ಕನಸು ಕಾಣುತ್ತಿದ್ದಾರೆ. ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಗಡ್ಕರಿ ಸೂಚಿಸಿದರು.

‘ನಿಡಗುಂದಿಯಲ್ಲಿ ಆರ್‌ಓಬಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮನವಿ ಸಲ್ಲಿಸಲಾಗಿದೆ. ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲಿಸಿ ಅಲ್ಲಿ ಆರ್‌ಓಬಿ ನಿರ್ಮಿಸಬೇಕೋ ಇಲ್ಲವೇ ಆರ್‌ಯುಬಿ ನಿರ್ಮಿಸಬೇಕೋ ಎಂಬುದರ ಬಗ್ಗೆ ವರದಿ ತಯಾರಿಸಿ. ಕೂಡಲೇ ಅದನ್ನು ಮಂಜೂರು ಮಾಡಲಾಗುವುದು’ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಕೇಂದ್ರ ಸಚಿವ ಅನಂತಕುಮಾರ್‌ ಮಾತನಾಡಿ ‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಭಾರತ ಮಾಲಾ. ಬಂಗಾರದ ಚೌಕಟ್ಟಿನ ಮಾದರಿ ರಸ್ತೆಗಳ ಮಾಲೆಯನ್ನು ಭಾರತ ಮಾತೆಗೆ ಹಾಕುವ ಕಲ್ಪನೆಯ ಮೋದಿ ಅವರದ್ದಾಗಿದೆ. ಇದನ್ನು ಸಾಕಾರಗೊಳಿಸಲು ಗಡ್ಕರಿ ದಿವ್ಯ ಸಂಕಲ್ಪ ಮಾಡಿದ್ದಾರೆ’ ಎಂದರು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ ಮಾತನಾಡಿ ‘ಇದು ನನ್ನ ಪಾಲಿನ ಐತಿಹಾಸಿಕ ದಿನ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅನೇಕ ಜನಪರ ಯೋಜನೆ ಅನುಷ್ಠಾನ
ಗೊಳ್ಳುತ್ತಿವೆ. ಚತುಷ್ಪಥ ಹೆದ್ದಾರಿಯಂತೆ ರಸಗೊಬ್ಬರ ಕಾರ್ಖಾನೆ ನಿರ್ಮಾಣಕ್ಕೂ ಹಸಿರು ನಿಶಾನೆ ತೋರಿ’ ಎಂದು ಸಚಿವ ಅನಂತಕುಮಾರ್‌ಗೆ ಮನವಿ ಮಾಡಿದರು.

ಸಿಂದಗಿ ಶಾಸಕ ರಮೇಶ ಭೂಸನೂರ, ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಪಾಟೀಲ ಯತ್ನಾಳ, ಅರುಣ ಶಹಾಪುರ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ.ಬೆಳ್ಳುಬ್ಬಿ, ವಿಜಯಕುಮಾರ ಪಾಟೀಲ ಉಪಸ್ಥಿತರಿದ್ದರು.

ಮೋದಿ ಮೋದಿ... ಸತ್ಯ ಒಪ್ಕೊಳ್ಳಿ...’

ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಭಾಷಣಕ್ಕೆ ಅಣಿಯಾಗುತ್ತಿದ್ದಂತೆ ಮೋದಿ, ಮೋದಿ ಜೈಕಾರ ಅನುರಣಿಸಿತು. ಇದನ್ನು ಪರಿಗಣಿಸದೆ ಪಾಟೀಲ ಮಾತನಾಡಲು ಮುಂದಾಗುತ್ತಿದ್ದಂತೆ, ಘೋಷಣೆ ಮತ್ತಷ್ಟು ಬಿರುಸಾಯಿತು. ಬಿಜೆಪಿ ಕಾರ್ಯಕರ್ತರ ಘೋಷಣೆಗಳಿಗೆ ಸೆಡ್ಡು ಹೊಡೆದ ಎಂ.ಬಿ. ‘ಸತ್ಯ ಹೇಳಲೇಬೇಕು. ಎಲ್ರೂ ಒಪ್ಕೊಳ್ಳಲೇಬೇಕು. ಈ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಈ ಕಾಮಗಾರಿಗೆ ಅನುಮೋದನೆ ಸಿಕ್ಕಿದ್ದು’ ಎಂದರು.

ಇದೇ ಸಂದರ್ಭ ಸೊಲ್ಲಾಪುರದಲ್ಲಿ 17 ಕಿ.ಮೀ. ಬೈಪಾಸ್‌ ನಿರ್ಮಿಸಲು ಅನುಮತಿ ನೀಡಿರುವಂತೆ ವಿಜಯಪುರದಲ್ಲೂ ಬೈಪಾಸ್‌ ನಿರ್ಮಿಸಿ ಎಂದು ಗಡ್ಕರಿಗೆ ಮನವಿ ಸಲ್ಲಿಸಿದರು.

ಗಡ್ಕರಿ ಅಲ್ಲ ರೋಡ್ಕರಿ..!

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ ‘ಈ ಹಿಂದೆ ತಿಂಗಳಿಗೆ ಎರಡರಿಂದ ಮೂರು ಕಿ.ಮೀ. ಹೆದ್ದಾರಿ ನಿರ್ಮಾಣಗೊಳ್ಳುತ್ತಿದ್ದವು. ವಾಜಪೇಯಿ ಅಧಿಕಾರದ ಚುಕ್ಕಾಣಿ ಹಿಡಿದಾಗ ವೇಗ ದೊರಕಿತು. ಇದೀಗ ಶರವೇಗ ಸಿಕ್ಕಿದೆ. ನಿತ್ಯ 28 ಕಿ.ಮೀ. ರಸ್ತೆ ನಿರ್ಮಾಣಗೊಳ್ಳುತ್ತಿದೆ. ಇದಕ್ಕೆ ಮೂಲ ಕಾರಣ ಗಡ್ಕರಿ. ಮಹಾರಾಷ್ಟ್ರದ ಜನತೆ ಇಂದಿಗೂ ನಿತಿನ್‌ ಅವರನ್ನು ‘ರೋಡ್ಕರಿ’ ಎಂದೇ ಕರೆಯುತ್ತಾರೆ’ ಎಂದು ಹೇಳಿದರು.

‘ಇಥೆನಾಲ್‌ ಪರ್ಯಾಯ ಇಂಧನವಾಗಲಿ’

‘ಪೆಟ್ರೋಲಿಯಂ ಉತ್ಪನ್ನದ ಆಮದು ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ. ಇದನ್ನು ತಪ್ಪಿಸಲು ಇಥೆನಾಲ್‌ ಬಳಸಲು ಮುಂದಾಗಬೇಕಿದೆ. ರೈತರು ಇದಕ್ಕೆ ಪೂರಕವಾಗಿ ಬೆಳೆ ಪದ್ಧತಿ ಬದಲಿಸಿಕೊಂಡು ಆರ್ಥಿಕ ಸದೃಢತೆ ಸಾಧಿಸಲಿ’ ಎಂದು ಗಡ್ಕರಿ ಸಲಹೆ ನೀಡಿದರು.

‘ಜೈವಿಕ ಇಂಧನ ಉತ್ಪಾದನೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಬಂಬೂ ಬೆಳೆಯಿರಿ. ಕಬ್ಬಿಗೆ ನೀಡುವ ದರವನ್ನೇ ನೀಡಲಾಗುವುದು’ ಎಂದು ಇದೇ ಸಂದರ್ಭ ಹೇಳಿದರು.

* * 

ಕಾವೇರಿ ವಿಷಯದಲ್ಲಿ ರಾಜ್ಯ ಸತತ ಅನ್ಯಾಯ ಎದುರಿಸಿತ್ತು. ಕೇಂದ್ರ ಸರ್ಕಾರದ ಪರಿಶ್ರಮದ ಫಲವಾಗಿ ಈಚೆಗೆ ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನಿಂದ ನ್ಯಾಯ ದೊರಕಿದೆ. ಮುಂದೆ ಇನ್ನೂ ಸಿಹಿ ಸುದ್ದಿಯಿದೆ
ಅನಂತಕುಮಾರ್‌, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT