ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ಸದ್ಗುರು ವಿಶ್ವಾರಾಧ್ಯರ ರಥೋತ್ಸವ

Last Updated 21 ಫೆಬ್ರುವರಿ 2018, 7:19 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ಧಿ ಪುರುಷ ಸದ್ಗುರು ವಿಶ್ವಾರಾಧ್ಯರ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಭ್ರಮದಿಂದ ಜರುಗಿತು.

ಇಳಿಹೊತ್ತು ಸಮೀಪಿಸುತ್ತಿದ್ದಂತೆ ಸಿದ್ಧ ಸಂಸ್ಥಾನದ ಮಠದ ಆವರಣದಲ್ಲಿ ಲಕ್ಷಾಂತರ ಭಕ್ತ ಸಮ್ಮುಖದಲ್ಲಿ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ರಥವನ್ನೇರಿ ಚಾಲನೆ ನೀಡುತ್ತಿದ್ದಂತೆ ಭಕ್ತ ವೃಂದ ವಿಶ್ವಾರಾಧ್ಯ ಮಹಾರಾಜ ಕೀ ಜೈ, ಗಂಗಾಧರ ಮಹಾರಾಜ ಕೀ ಜೈ ಎಂಬ ಮುಗಿಲು ಮುಟ್ಟುವ ಜಯಘೋಷ ಹಾಕುತ್ತಾ ರಥ ಎಳೆದು ಸಂಭ್ರಮಿಸಿದರು. ನೆರೆದ ಭಕ್ತ ಸಮೂಹ ಉತ್ತತ್ತಿ, ಬಾಳೆಹಣ್ಣು ರಥದ ಮೇಲೆ ಎಸೆದು ಆರಾಧ್ಯದೈವಕ್ಕೆ ನಮಿಸಿ ಭಕ್ತಿ ಅರ್ಪಿಸಿದರು.

ಸೋಮವಾರ ಸಂಜೆ ಮಠದ ಕೈಲಾಸ ಕಟ್ಟೆಯ ಹತ್ತಿರ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ನೂರಾರು ಸಾಧು ಸಂತರ ಮಧ್ಯೆ ಪೂಜೆ ನೆರವೇರಿಸುವುದರೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದರು. ಉತ್ಸವದಲ್ಲಿ ನೆರೆದ ಎಲ್ಲ ಸಾಧು ಸಂತರಿಗೆ ಶ್ರೀಗಳು ಕಪನಿಗಳನ್ನು ವಿತರಿಸಿದ್ದರು.

ಮಂಗಳವಾರ ಬೆಳಿಗ್ಗೆ ಸೂರ್ಯೋದಯವಾಗುತ್ತಲೇ ಸದ್ಗುರು ವಿಶ್ವಾರಾಧ್ಯರ ಕರ್ತೃಗದ್ದುಗೆಗೆ ಗೋರಟಾ ಸಂಗೀತ ಬಳಗದವರಿಂದ ವಿಶೇಷ ರುದ್ರಾಭಿಷೇಕ ನಡೆಯಿತು. ನಂತರ ಹನ್ನೊಂದು ದಿವಸಗಳಿಂದ ಸಾಗಿಬಂದ ವಿಶ್ವಾರಾಧ್ಯ ಪುರಾಣ, ಪಲ್ಲಕ್ಕಿ ಉತ್ಸವ ಮೆರವಣಿಗೆ ಮಂಗಲವಾದ್ಯಗಳೊಂದಿಗೆ ಪುರವಂತರ ಸೇವೆ ಕೂಡ ಜರುಗಿತು.

ಪ್ರವಚನಕಾರರಾದ ಸಿದ್ದೇಶ್ವರ ಶಾಸ್ತ್ರಿಗಳು ಪೀಠಾಧಿಪತಿ ಅವರ ನೇತೃತ್ವದಲ್ಲಿ ವಿಶ್ವಾರಾಧ್ಯರ ಪುರಾಣವನ್ನು ಮಂಗಲಗೊಳಿಸಿದರು. ತರುವಾಯ ಶ್ರೀಗಳು ತೇರಿಗೆ ವಿಶೇಷ ಪೂಜೆ ನೆರವೇರಿಸಿ, ಕಳಸಾರೋಹಣ ಮಾಡಿದರು. ಮಠದ ಭಕ್ತರಾದ ವಿಶ್ವಾರಾಧ್ಯ ಸೋಮನಾಥ ಪಾಟೀಲ ದಿಗ್ಗಾಂವ್, ಠಾಣಗುಂದಿಯ ವಿಶ್ವಪ್ರಸಾದ ಅವರು ಪೀಠಾಧಿಪತಿ ಗಂಗಾಧರ ಶ್ರೀಗಳ ತುಲಾಭಾರ ನೆರವೇರಿಸಿದರು.

ಹಲಗೆ, ಬಾಜಾಭಜಂತ್ರಿ, ಡೊಳ್ಳು , ಮಂಗಲವಾದ್ಯಗಳ ಸದ್ದು, ಭಕ್ತರ ಸಂಭ್ರಮ, ಪುರವಂತರ ಸೇವೆ ಇಡೀ ಅಬ್ಬೆತುಮಕೂರು ಗ್ರಾಮವನ್ನು ಭಕ್ತಿಯ ಬೀಡನ್ನಾಗಿಸಿತ್ತು. ಶಹಬಾದ ಮತ್ತು ನಾಯ್ಕಲ್ ಭಕ್ತರ ದಾಸೋಹಗಳು ಜಾತ್ರೆಗೆ ಬಂದಿದ್ದ ಭಕ್ತರಿಗೆ ವಿವಿಧ ಬಗೆಯ ತಿಂಡಿ ತಿನಿಸುಗಳ ಊಟದ ವ್ಯವಸ್ಥೆ ಮಾಡಿದ್ದರು. ರುಚಿ-ರುಚಿ ಮಾಲದಿ, ಸಜ್ಜಿ ಮತ್ತು ಜೋಳದ ರೊಟ್ಟಿ, ವಿವಿಧ ಪಲ್ಯಗಳು, ಅನ್ನ-ಸಾರಿನ ದಾಸೋಹ ನಿರಂತರ ಸಾಗಿತ್ತು.

ತೇರಿನ ಉತ್ಸವ ಮುಗಿಯುತ್ತಲೇ ಭಕ್ತರ ದಂಡು ಉಪವಾಸ ವ್ರತ ಮುಗಿಸಿ ದಾಸೋಹ ಮಹಾಮನೆಯಲ್ಲಿ ಪ್ರಸಾದ ಸ್ವೀಕರಿಸಿತು. ಅನೇಕರು ಜಾತ್ರೆಯಲ್ಲಿನ ಅಂಗಡಿಗಳಿಗೆ ಖರೀದಿಗಾಗಿ ಮುಗಿಬಿದಿದ್ದರು.

ಫಳಾರ ಮತ್ತು ಬೆಂಡು ಬತ್ತಾಸ್‌ ಕೊಳ್ಳುವವರ ಭರಾಟೆ ಹೆಚ್ಚಿತ್ತು. ವಿಶ್ವಾರಾಧ್ಯರ ಜಾತ್ರೆಯೆಂದರೆ ಸುಸುಲಾ ಮತ್ತು ಭಜಿಯದೆ ವಿಶೇಷ. ಅಂತೆಯೇ ಹಲವು ಭಕ್ತರು ಭಜಿ ಮತ್ತು ಸುಸುಲಾ ತಿನ್ನುವಲ್ಲಿ ಮಗ್ನರಾಗಿದ್ದರು. ಮದುವೆಯಾದ ಹೊಸ ಜೋಡಿಗಳು ಜಾತ್ರೆಯಲ್ಲಿ ಕೈ-ಕೈ ಹಿಡಿದು ಓಡಾಡಿ ಸಂತಸ ಪಟ್ಟರು. ವಿಶ್ವಾರಾಧ್ಯರ ಜಾತ್ರೆಯಲ್ಲಿನ ಜನರಲ್ಲಿ ಭಕ್ತಿ, ಸಡಗರ ಮನೆ ಮಾಡಿತ್ತು. ಭಕ್ತರ ದಂಡನ್ನು ನಿಯಂತ್ರಿಸಲು ಪೊಲೀಸರು ಬಿಗಿಬಂದೋಬಸ್ತ್‌ ಕೈಗೊಂಡಿದ್ದರು.

ಆರೋಗ್ಯ ಇಲಾಖೆ ಸಿಬ್ಬಂದಿ ಭಕ್ತರಿಗೆ ಪ್ರಥಮ ಚಿಕಿತ್ಸೆಗಾಗಿ ಸಿದ್ಧತೆ ಮಾಡಿಕೊಂಡಿದ್ದರು. ವಾಹನ ನಿಲುಗಡೆ ವ್ಯವಸ್ಥೆಗೆ ಸ್ವಯಂಸೇವಕರು ಶ್ರಮಿಸಿದ್ದರಿಂದ ಜಾತ್ರೆಯಲ್ಲಿ ವಾಹನಗಳ ಕಿರಿಕಿರಿ ಹೆಚ್ಚಿರಲಿಲ್ಲ.

ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಚಂದ್ರಶೇಖರ ಸ್ವಾಮೀಜಿ, ಶಾಸಕ ಡಾ.ಎ.ಬಿ.ಮಾಲಕರೆಡ್ಡಿ, ಗುರು ಪಾಟೀಲ್ ಶಿರವಾಳ್, ಡಾ.ವೀರಬಸವಂತರೆಡ್ಡಿ ಮುದ್ನಾಳ, ದೊಡ್ಡಪ್ಪಗೌಡ ಪಾಟೀಲ್ ನರಬೋಳ್, ವಾಲ್ಮಿಕಿ ನಾಯಕ್, ಚೆನ್ನಾರೆಡ್ಡಿ ತುನ್ನೂರು, ನಾಗನಗೌಡ ಕಂದಕೂರ, ಸುಭಾಶ್ಚಂದ್ರ ಕೌಲಗಿ, ರಾಜಪ್ಪ ಗೌಡ, ನಿರ್ದೇಶಕ ಓಂ ಸಾಯಿಪ್ರಕಾಶ, ಚಿತ್ರನಟರಾದ ರಾಮಕುಮಾರ, ನಟಿ ಶ್ರುತಿ, ಚಿತ್ರಾಶೆಣೈ, ಹಾಸ್ಯ ನಟ ಸಾಧು ಕೋಕಿಲ, ವೆಂಕಟರಡ್ಡಿಗೌಡ ಅಬ್ಬೆತುಮಕೂರ, ನರಸಣಗೌಡ ರಾಯಚೂರು, ನಾಗರೆಡ್ಡಿ ಕರದಾಳ್, ಮಹೇಶ ಪಾಟೀಲ್, ವೆಂಕಟ್‌ರೆಡ್ಡಿ ಮಾಲಿಪಾಟೀಲ, ರಾಜುಮಾಳಿಕೇರಿ ಬಾಂಬೆ, ಚನ್ನಪ್ಪಗೌಡ ಮೊಸಂಬಿ, ವಿಶ್ವಾನಾಥ ಶಿರವಾಳಕರ್, ಸಿದ್ದು ಪಾಟೀಲ ಮಳಗಿ ರಥೋತ್ಸವದಲ್ಲಿ ಭಾಗವಹಿಸಿದ್ದರು.

ಸಂಚಾರ ದಟ್ಟಣೆ; ಭಕ್ತರಿಗೆ ಕಿರಿಕಿರಿ

ರಾತ್ರಿ 7.30ಕ್ಕೆ ರಥೋತ್ಸವದ ಮುಗಿಯುತ್ತಿದ್ದಂತೆ ಗುರುಸಣಗಿ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಅಬ್ಬೆ ತುಮಕೂರು ತಲುಪಲು ಹೆಡಗಿಮದ್ರಾ– ಅಬ್ಬೆತುಮಕೂರು, ಮುದ್ಲಾಳ– ಅಬ್ಬೆತುಮಕೂರು, ಗುರುಸಣಗಿ– ಅಬ್ಬೆ ತುಮಕೂರು ಒಟ್ಟು ಮೂರು ಸಂಪರ್ಕ ಮಾರ್ಗಗಳಿಗೆ. ಮಂಗಳವಾರ ಗುರುಸಣಗಿ ಮಾರ್ಗದ ಏಕಮುಖ ರಸ್ತೆಯಲ್ಲಿ ದ್ವಿಪಥವಾಗಿ ವಾಹನಗಳ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿ ಭಕ್ತರು ಸಂಕಷ್ಟ ಅನುಭವಿಸಿದರು. ಜನರು ಪೊಲೀಸರಿಗೆ ಹಿಡಿಶಾಪ ಹಾಕುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT