ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಂಚನಗಿರಿ ಮಠ ತಾಯಿ ಮನೆ ಇದ್ದಂತೆ

Last Updated 21 ಫೆಬ್ರುವರಿ 2018, 7:23 IST
ಅಕ್ಷರ ಗಾತ್ರ

ನಾಗಮಂಗಲ: ಆದಿ ಚುಂಚನಗಿರಿ ಮಠ ನಮಗೆ ತಾಯಿ ಮನೆ ಇದ್ದಂತೆ. ತಾಯಿ ಸತ್ತ ಮೇಲೆ ತವರಿಗೆ ಹೋಗಬೇಡ ಎನ್ನುತ್ತಾರೆ. ಆದರೆ ನಮಗೆ ಆ ಕೊರತೆಯಿಲ್ಲ. ಬಾಲಗಂಗಾಧರನಾಥ ಶ್ರೀಗಳು ಭೌತಿಕವಾಗಿ ಇಲ್ಲದಿದ್ದರೂ ಶ್ರೀಮಠದಲ್ಲಿ ಮಾನಸಿಕವಾಗಿ ಎಲ್ಲರ ಜೊತೆ ಇದ್ದಾರೆ ಎಂದು ಚಿತ್ರದುರ್ಗದ ತರಳಬಾಳು ಸಿರಿಗೆರೆ ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದ ಬಿಜಿಎಸ್ ಸಭಾ ಭವನದಲ್ಲಿ ಬುಧವಾರ ನಡೆದ ನಿರ್ಮಲಾನಂದನಾಥ ಸ್ವಾಮೀಜಿಗಳ ಐದನೇ ವಾರ್ಷಿಕ ಪಟ್ಟಾಭಿಷೇಕ ವಾರ್ಷಿಕೋತ್ಸವ ಮಹೋತ್ಸವ ಮತ್ತು ವಿಜ್ಞಾತಂ ಪ್ರಶಸ್ತಿ ಪ್ರದಾನ ಮತ್ತು ಜ್ಞಾನ-ವಿಜ್ಞಾನ-ತಂತ್ರಜ್ಞಾನ ಮೇಳದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಧರ್ಮ ಶಾಸ್ತ್ರವು ಜಾತಿ ಆಧಾರದ ಮೇಲೆ ಇಲ್ಲ. ಧರ್ಮ ಎಲ್ಲ ಜಾತಿಗಳಿಗೂ ಒಂದೇ. ನಮ್ಮ ಸಂಸ್ಕೃತಿ ಇಡೀ ವಿಶ್ವದಲ್ಲಿಯೇ ವಿಶಿಷ್ಟವಾದುದು. ಜೀವನದಲ್ಲಿನ ಹೊಗಳಿಕೆ ಮತ್ತು ತೆಗಳಿಕೆ ಎರಡನ್ನೂ ಧನಾತ್ಮಕವಾಗಿ ತೆಗೆದುಕೊಂಡು ಮುಂದೆ ಸಾಗಬೇಕು. ಅದನ್ನು ಹೇಗೆ ಸ್ವೀಕರಿಸುತ್ತೀರಿ ಎಂಬುದರ ಮೇಲೆ ನಿಮ್ಮ ಭವಿಷ್ಯ ನಿರ್ಧರಿತವಾಗುತ್ತದೆ ಎಂದರು.

ವಿಜ್ಙಾತಂ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಧ್ಯಾತ್ಮ ಚಿಂತಕ ಶ್ರೀ ಎಂ (ಮಧುಕರನಾಥ), ಬಾಲಗಂಗಾಧರನಾಥ ಶ್ರೀಗಳು ವಿವಿಧ ಕ್ಷೇತ್ರಗಳಲ್ಲಿನ ತಮ್ಮ ಅದ್ವಿತೀಯ ಸೇವೆಯಿಂದ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದಾರೆ. ಆದಿಚುಂಚನಗಿರಿ ಕ್ಷೇತ್ರ ಬಡವ ಶ್ರೀಮಂತ, ಜಾತಿ ಮತ ಇವೆಲ್ಲವನ್ನೂ ಮೀರಿ ನಿಂತಿರುವ ಮಠ. ಇಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನಡೆಯುತ್ತಿದೆ ಎಂದರು. ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶ್ರೀಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶೇಖರನಾಥ ಸ್ವಾಮೀಜಿ, ಶಂಭೂನಾಥ ಸ್ವಾಮೀಜಿ ಸೇರಿದಂತೆ ಮಠದ ಎಲ್ಲ ಶಾಖೆಗಳ ಸಾಧು-ಸಂತರು, ಐಎಎಸ್ ಅಧಿಕಾರಿ ಸುಧಾಮಯಿ ರಘುನಾಥನ್ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT