ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಟಿ ಮಾಡಿದ ಕೆನಡಾ ಪ್ರಧಾನಿ

Last Updated 21 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಅಮೃತಸರ: ಬಿಳಿ ಕುರ್ತಾ–ಪೈಜಾಮ ತೊಟ್ಟು, ತಲೆಗೆ ಕೇಸರಿ ಬಣ್ಣದ ಬಟ್ಟೆ ಸುತ್ತಿಕೊಂಡು ಸಾಂಪ್ರದಾಯಿಕ ದಿರಿಸಿನಲ್ಲಿ ಇಲ್ಲಿನ ಸ್ವರ್ಣಮಂದಿರಕ್ಕೆ ಬುಧವಾರ ಭೇಟಿ ನೀಡಿದ ಕೆನಡಾ ಪ್ರಧಾನಿ, ತಮ್ಮ ಕುಟುಂಬದ ಪೂಜೆ ಸಲ್ಲಿಸಿದರು.

ಪತ್ನಿ ಸೋಫಿ ಗ್ರಗೋರಿ ಮತ್ತು ಮೂವರು ಮಕ್ಕಳೂ ಸಾಂಪ್ರದಾಯಿಕ ಪಂಜಾಬಿ ಶೈಲಿಯ ಬಟ್ಟೆ ಧರಿಸಿ ಒಂದು ಗಂಟೆಗೂ ಹೆಚ್ಚು ಕಾಲ ಮಂದಿರದಲ್ಲಿ ಕಳೆದರು.

ಮಂದಿರಕ್ಕೆ ಬರುವ ಭಕ್ತರು ಅಡುಗೆ ಕೋಣೆಯಲ್ಲಿ ಸ್ವಯಂಪ್ರೇರಿತರಾಗಿ ಕೆಲಸ ಮಾಡುವ ಪರಿಪಾಠ ಇಲ್ಲಿದೆ. ಟ್ರುಡೊ ದಂಪತಿ ಕೂಡಾ ರೋಟಿ ಮಾಡಲು ಯತ್ನಿಸಿದರು. ಭಕ್ತರಿಗೆ ಎರಡೂ ಕೈ ಮುಗಿದು ನಮಸ್ಕರಿಸಿದರು.

ಬೆಳಗ್ಗೆ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದ ಟ್ರುಡೊ ಹಾಗೂ ಅವರ ಸಂಪುಟ ಸಹೋದ್ಯೋಗಿಗಳಿಗೆ ಶಿರೋಮಣಿ ಗುರುದ್ವಾರ ಸಮಿತಿಯು ಸ್ವಾಗತ ನೀಡಿತು. ಪತ್ನಿ, ಮಕ್ಕಳ ಜೊತೆ ಟ್ರುಡೊ ಅವರು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿದರು. ಮಂದಿರದ ಆವರಣದಲ್ಲಿ ಅವರಿಗೆ ಸಾಂಪ್ರದಾಯಿಕ ಗೌರವ ನೀಡಲಾಯಿತು.

ಟ್ರುಡೊ ಅವರ ಸಂಪುಟದ ರಕ್ಷಣಾ ಸಚಿವ ಹರ್ಜಿತ್ ಸಜ್ಜನ್ ಕೂಡಾ ಇದ್ದರು. ಇವರ ಜೊತೆ ಕೇಂದ್ರ ಸಚಿವ ಹರ್ದೀಪ್‌ಸಿಂಗ್ ಪುರಿ, ಪಂಜಾಬ್ ಸಚಿವ ನವ್‌ಜೋತ್ ಸಿಂಗ್ ಸಿಧು ಇದ್ದರು. ದೇಶ ವಿಭಜನೆಗೆ ಸಂಬಂಧಿಸಿದ ಮ್ಯೂಸಿಯಮ್‌ಗೂ ಅವರು ಭೇಟಿ ನೀಡಿದರು.

ಪ್ರತ್ಯೇಕತಾವಾದಿಗಳಿಗೆ ಬೆಂಬಲವಿಲ್ಲ: ಟ್ರುಡೊ

ಕೆನಡಾದಲ್ಲಿ ಸಿಖ್‌ ಸಮುದಾಯದವರು ಹೆಚ್ಚಾಗಿ ನೆಲೆಸಿದ್ದಾರೆ. ಟ್ರುಡೊ ಸಂಪುಟದಲ್ಲಿರುವ ಸಿಖ್ ಸಚಿವರಿಗೂ ಹಾಗೂ ಪ್ರತ್ಯೇಕತಾವಾದಿಗಳಿಗೂ ನಂಟು ಇದೆ ಎಂಬ ವಿವಾದವೂ ಅವರ ಪಂಜಾಬ್ ಭೇಟಿ ವೇಳೆ ಉಂಟಾಯಿತು.

ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಜೊತೆ ಮಾತುಕತೆ ನಡೆಸಿದ ಟ್ರುಡೊ, ಭಾರತ ಸೇರಿದಂತೆ ಎಲ್ಲಿಯೇ ಪ್ರತ್ಯೇಕತಾವಾದಿ ಚಳವಳಿಗಳು ನಡೆದರೂ ತಾವು ಅವುಗಳನ್ನು  ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪಂಜಾಬ್‌ನಲ್ಲಿ ತೀವ್ರಗಾಮಿ ಚಟುವಟಿಕೆ ಪ್ರಚೋದಿಸಿ ಜನಾಂಗೀಯ ದ್ವೇಷ ಬಿತ್ತುತ್ತಿರುವ ಹಾಗೂ ಅದಕ್ಕಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ಕೆನಡಾ ಮೂಲದ ‘ಎ’ ದರ್ಜೆಯ ಒಂಬತ್ತು ಮಂದಿಯ ಪಟ್ಟಿಯನ್ನು ಅಮರೀಂದರ್ ಸಿಂಗ್ ಅವರು ಟ್ರುಡೊ ಅವರಿಗೆ ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT