ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಬ್ಜ ಗಿಡಗಳ ದೊಡ್ಡ ಪಂಡಿತ

Last Updated 21 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಪೆಡ್ರೊ ಜೈ ಮೊರಾಲೆಸ್ ಅವರು ಪೋರ್ಟೊರಿಕೊ ದ್ವೀಪದವರು. ಅಂತರರಾಷ್ಟ್ರೀಯ ಬೊನ್ಸಾಯ್ ಮಾಸ್ಟರ್ ಆಗಿ ಖ್ಯಾತರಾಗಿದ್ದಾರೆ. ಜಗತ್ತಿನ ಬಹುತೇಕ ದೇಶಗಳನ್ನು ಸುತ್ತಿದ್ದಾರೆ. ತಮಗೆ ಸಿದ್ಧಿಸಿರುವ ಬೊನ್ಸಾಯ್ ಕಲೆಯನ್ನು ಎಲ್ಲೆಡೆ ಪಸರಿಸುವುದು ಅವರ ಅದಮ್ಯ ಬಯಕೆ. ಬೆಂಗಳೂರಿನ ‘ವೃಕ್ಷ ಬೊನ್ಸಾಯ್ ಸರ್ಕಲ್ ಸಂಸ್ಥೆ’ಯು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರದರ್ಶನದಲ್ಲಿ ಭಾಗಿಯಾಗಲು ಬಂದಿದ್ದ ಪೆಡ್ರೊ , ‘ಮೆಟ್ರೊ’ ಜೊತೆ ಮಾತನಾಡಿದರು

*ಬೊನ್ಸಾಯ್ ಬಗ್ಗೆ ನಿಮಗೆ ಆಸಕ್ತಿ ಬೆಳೆದದ್ದು ಹೇಗೆ?

1981ರ ಸಮಯ. ನಾನು ಪೋರ್ಟೊರಿಕೊ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ನನ್ನ ಸ್ಪ್ಯಾನಿಷ್ ಗುರುಗಳು ಬೊನ್ಸಾಯ್ ಅನ್ನು ನನಗೆ ಪರಿಚಯಿಸಿದರು. ಅದು ನನ್ನ ಆಸಕ್ತಿಯನ್ನು ಇಮ್ಮಡಿಸಿತು. ಪದವಿ ಮುಗಿದ ಮೇಲೆ ಬೊನ್ಸಾಯಿ ಕಲೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡೆ.

*ಬೊನ್ಸಾಯ್ ಕಲೆ ನಿಮ್ಮ ಹವ್ಯಾಸವೇ ಅಥವಾ ವೃತ್ತಿಯೇ?
ಇದು ಆರಂಭವಾಗಿದ್ದು ಹವ್ಯಾಸವಾಗಿ. ಆದರೆ ಈಗ ಇದೇ ವೃತ್ತಿಯಾಗಿದೆ. ವರ್ಷದಲ್ಲಿ ಏನಿಲ್ಲವೆಂದರೂ ಎಂಟು ತಿಂಗಳು ನಾನು ವಿದೇಶ ಪ್ರವಾಸದಲ್ಲಿರುತ್ತೇನೆ. ಬೊನ್ಸಾಯ್ ಕಲೆಯನ್ನು ಹೇಳಿಕೊಡುತ್ತೇನೆ. ನಾನು ಪೋರ್ಟೊರಿಕೊ ಸರ್ಕಾರದ ಲ್ಯಂಡ್‍ಸ್ಕೇಪ್ ಡಿಪಾರ್ಟ್‍ಮೆಂಟ್ ಜೊತೆ ಕೆಲಸ ಮಾಡುತ್ತಿದ್ದೇನೆ. ರಾಜಧಾನಿಯ ಎಲ್ಲ ಉದ್ಯಾನಗಳ ಉಸ್ತುವಾರಿ ನನ್ನದೇ. ನನ್ನದೇ ಸ್ವಂತ ಬೊನ್ಸಾಯ್ ಸ್ಟುಡಿಯೊ ಹಾಗೂ ಬೊನ್ಸಾಯ್ ನರ್ಸರಿ ಇದೆ.

*ನಿಮ್ಮ ಬೊನ್ಸಾಯ್ ಸ್ಟುಡಿಯೊ ಬಗ್ಗೆ ಹೇಳಿ?
ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ಬೊನ್ಸಾಯ್ ಕಲೆ ಕಲಿಯಲು ನನ್ನ ಬಳಿ ಬರುತ್ತಾರೆ. ಪ್ರತಿ ವಾರ ಅಲ್ಲಿ ತರಗತಿಗಳನ್ನು ನಡೆಸುತ್ತೇನೆ. ಕಲಿಯಲು ಬಂದವರು ಮೂರ್ನಾಲ್ಕು ತಿಂಗಳ ಕಾಲ ಉಳಿದುಕೊಳ್ಳಲು ಸ್ಟುಡಿಯೊದಲ್ಲಿ ವಸತಿ ವ್ಯವಸ್ಥೆಯೂ ಇದೆ.

*ಬೊನ್ಸಾಯ್ ಮೂಲ ಯಾವುದು?
ಬೊನ್ಸಾಯ್ ಮೂಲ ಇರುವುದು ಚೀನಾದಲ್ಲಿ. ಆದರೆ ಸಾಕಷ್ಟು ಅಧ್ಯಯನಗಳು ಇದರ ಮೂಲ ಭಾರತ ಎಂದು ಹೇಳಿವೆ. ಆದರೆ ಇದನ್ನು ವೃತ್ತಿಪರವಾಗಿ ತೆಗೆದುಕೊಂಡಿದ್ದು ಜಪಾನ್ ದೇಶ. ಅಲ್ಲಿಯ ಜನರು ಬೊನ್ಸಾಯ್ ಕಲೆ ಎಂದು ಹೆಸರಾಗುವ ಮಟ್ಟಿಗೆ ಅದನ್ನು ಅಭಿವೃದ್ಧಿಪಡಿಸಿದ್ದಾರೆ.

*ಈ ಕಲೆ ಹುಟ್ಟಿದ್ದು ಹೇಗೆ? ಏಕೆ ಅದು ಪ್ರಮುಖ?
ಜನರ ವಲಸೆ ಪ್ರವೃತ್ತಿಯೇ ಇದರ ಹುಟ್ಟಿಗೆ ಕಾರಣ ಎನ್ನಬಹುದು. ಜನರು ತಮಗೆ ಇಷ್ಟವಾದ ಮರಗಳು ಹಾಗೂ ಅಮೂಲ್ಯ ತಳಿಗಳನ್ನು ಕುಂಡಗಳಲ್ಲಿ ಸಂರಕ್ಷಿಸಲು ಈ ವಿಧಾನವನ್ನು ಕಂಡುಕೊಂಡರು. ಕುಂಡಗಳಲ್ಲಿ ಬೆಳೆಸಿದ ಬೊನ್ಸಾಯ್ ತಂತ್ರಜ್ಞಾನದ ಮರಗಳು ನೂರಾರು ವರ್ಷ ಬದುಕಬಲ್ಲವು. ಪುನಃ ಅವುಗಳನ್ನು ಭೂಮಿಯಲ್ಲಿ ನೆಟ್ಟರೆ ಮೊದಲಿನ ರೀತಿ ಬೃಹತ್ ರೂಪದಲ್ಲಿ ಅವು ಬೆಳೆಯುತ್ತವೆ. ಇದೇ ಬೊನ್ಸಾಯ್ ವೈಶಿಷ್ಟ್ಯತೆ.

*ಬೊನ್ಸಾಯ್ ಕಲೆಯ ಸವಾಲು ಏನು?
ಕುಂಡಗಳಲ್ಲಿ ಅವುಗಳಿಗೆ ಒಳ್ಳೆಯ ಮಣ್ಣು, ಗೊಬ್ಬರ ಹಾಗೂ ನೀರು ನೀಡಬೇಕು. ಮರದ ಮೂಲ ವಿನ್ಯಾಸವನ್ನು ಹಾಗೆಯೇ ಉಳಿಸಿಕೊಳ್ಳುವುದು ಇಲ್ಲಿರುವ ಸವಾಲು. ಹೀಗಾಗಿಯೇ ಇದು ಕಲೆ ಎಂದು ಎನಿಸಿಕೊಂಡಿದೆ. ಕುಂಡದಲ್ಲಿ ಬೆಳೆಯುವ ಬೊನ್ಸಾಯ್ ತಂತ್ರಜ್ಞಾನದ ಮರಗಳಿಗೂ ನೆಲದಲ್ಲಿ ಬೆಳೆಯುವ ಮರಗಳಿಗೂ ಗಾತ್ರವೊಂದನ್ನು ಹೊರತುಪಡಿಸಿದರ ಬೇರೆ ಏನೂ ವ್ಯತ್ಯಾಸವಿಲ್ಲ. ನೆಲದ ಮೇಲೆ ಸಹಜವಾಗಿ ಬೆಳೆಯುವ ಮರ ಹೇಗೆ ಕಾಣುತ್ತದೆಯೋ ಅದು ಕುಂಡದಲ್ಲಿ ಹಾಗೆಯೇ ಕಾಣಬೇಕು ಎಂಬುದು ಇದರ ತತ್ವ. ಬಾಳೆ, ತೆಂಗಿನ ಮರಗಳನ್ನು ಹೊರತುಪಡಿಸಿ, ಚಿಕ್ಕ ಎಲೆಗಳಿರುವ ಯಾವುದೇ ಮರವನ್ನಾದರೂ ಬೊನ್ಸಾಯ್‍ಗೆ ಪರಿವರ್ತಿಸಬಹುದು. ಸರಿಯಾದ ಪೋಷಣೆ ಇದ್ದರೆ ಸಾವಿರಾರು ವರ್ಷ ಅವು ಬದುಕುತ್ತವೆ. ಜಪಾನ್, ಚೀನಾದಲ್ಲಿ ಇಂತಹವನ್ನು ಹೆಚ್ಚಾಗಿ ನೋಡಬಹುದು.

*ಭಾರತದಲ್ಲಿ ಬೊನ್ಸಾಯ್ ಕಲೆ ಬಗ್ಗೆ ಆಸಕ್ತಿ ಹೇಗಿದೆ?
ಭಾರತದಲ್ಲಿ ಬೊನ್ಸಾಯ್ ಬಹಳ ವರ್ಷಗಳಿಂದ ಇದೆ. ಮೊದಲು ಇದು ಕೆಲವರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ವಿವಿಧ ದೇಶಗಳಿಂದ ಬೊನ್ಸಾಯ್ ಮಾಸ್ಟರ್‍ಗಳು ಬಂದು ಇಲ್ಲಿ ಕಲೆಯನ್ನು ದೇಶವ್ಯಾಪಿಗೊಳಿಸಿದ್ದಾರೆ. ನಾನು ಸುಮಾರು 15 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಇಲ್ಲಿರುವ ಮರಗಳ ಪ್ರಭೇದ ಹಾಗೂ ನನ್ನ ದೇಶದ ಪ್ರಭೇದಗಳ ನಡುವೆ ಹೋಲಿಕೆಯಿರುವ ಕಾರಣ ಇಲ್ಲಿ ಕಲಿಸುವುದು ನನಗೆ ಸುಲಭವೂ ಆಗಿದೆ. ಮುಂಬೈನಲ್ಲಿ 3 ವರ್ಷದ ಹಿಂದೆ ಟ್ರೊಪಿಕಲ್ ಬೊನ್ಸಾಯ್ ಕೋರ್ಸ್ ಆರಂಭಿಸಿದೆ. ಈ ವರ್ಷ ಬೆಂಗಳೂರಿನ ಜನರಿಗೂ ಈ ಕೋರ್ಸ್ ಪರಿಚಯಿಸುವ ಉದ್ದೇಶವಿದೆ.

***

ಪೆಡ್ರೊ ಒಬ್ಬ ಅದ್ಭುತ ಗುರು. ಬೊನ್ಸಾಯ್ ಕಲಿಯಲೆಂದೇ ಪೋರ್ಟೊರಿಕೊಗೆ ಹೋಗಿ ಪೆಡ್ರೊ ಅವರ ಸ್ಟುಡಿಯೊದಲ್ಲಿ ಎರಡು ವಾರ ಅಭ್ಯಾಸ ಮಾಡಿದೆ. ಅವರ ನರ್ಸರಿಯಲ್ಲಿ ದೊಡ್ಡ ದೊಡ್ಡ ಮರಗಳಿದ್ದು, ಅವುಗಳ ಮೇಲೆ ಅದ್ಭುತ ಕಲೆ ಅರಳಿಸಿದ್ದಾರೆ. ಅಲ್ಲಿ ಕಲಿತಿದ್ದರಿಂದ ನಮ್ಮ ಆತ್ಮವಿಶ್ವಾಸ ವೃದ್ಧಿಸಿದೆ. ಪ್ರತಿ ಅಂಶವನ್ನೂ ಅವರು ಆಸಕ್ತಿಯಿಂದ ಕಲಿಸುತ್ತಾರೆ.
ಅನುಪಮಾ, ಪೆಡ್ರೊ ಅವರ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT