ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆಯಲ್ಲಿ ಉಂಟು: ಪ್ರಾತಿನಿಧ್ಯದಲ್ಲಿ ಇಲ್ಲ

ಮತ ಬ್ಯಾಂಕ್ ಮರ್ಮ: ಮುಸ್ಲಿಮರು
Last Updated 21 ಫೆಬ್ರುವರಿ 2018, 20:20 IST
ಅಕ್ಷರ ಗಾತ್ರ

ಕರ್ನಾಟಕದಲ್ಲೊಂದು ಮುಸ್ಲಿಂ ಮತ ಬ್ಯಾಂಕ್ ಇದೆಯೇ? ಇದಕ್ಕೆ ಉತ್ತರಿಸುವುದಕ್ಕೆ ಮತ್ತೊಂದು ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗುತ್ತದೆ. ಕರ್ನಾಟಕದಲ್ಲೊಂದು ಮುಸ್ಲಿಂ ನಾಯಕತ್ವ ಎಂಬುದಿದೆಯೇ? ಕಳೆದ ಏಳು ದಶಕಗಳ ರಾಜಕೀಯವನ್ನು ನೋಡಿದರೆ, ಇಲ್ಲಿಯತನಕವೂ ಕರ್ನಾಟಕದ ಎಲ್ಲೆಡೆಗಳಲ್ಲಿಯೂ ಇರುವ ಮುಸ್ಲಿಮರಿಗೆ ತಮ್ಮ ನಾಯಕ ಎನ್ನುವ ಒಬ್ಬ ನಾಯಕ ಯಾವುದೇ ಪಕ್ಷದಿಂದಲೂ ಬಂದಿಲ್ಲ.

ಒಕ್ಕಲಿಗರು ದೇವೇಗೌಡರನ್ನು ತಮ್ಮ ನಾಯಕ ಎಂದುಕೊಂಡಂತೆ, ಲಿಂಗಾಯತರು ಯಡಿಯೂರಪ್ಪನವರನ್ನು ತಮ್ಮ ನಾಯಕ ಎಂದುಕೊಂಡು ಚುನಾವಣೆಯಲ್ಲಿ ಬೆಂಬಲಿಸಿದಂತೆ, ಮುಸ್ಲಿಮರ ಮತಗಳನ್ನು ಒಂದು ನಿರ್ದಿಷ್ಟ ಪಕ್ಷದತ್ತ ಎಳೆದು ತರಬಲ್ಲ ಒಬ್ಬ ನಾಯಕನೂ ರಾಜ್ಯದ ರಾಜಕೀಯ ದಿಗಂತದಲ್ಲಿ ಈ ತನಕ ಉದಯಿಸಿಲ್ಲ. ಪರಿಸ್ಥಿತಿ ಹೀಗಿರುವುದರಿಂದ ಮುಸ್ಲಿಂ ಮತ ಬ್ಯಾಂಕ್ ಎಂಬುದಕ್ಕೆ ಸ್ಪಷ್ಟ ವ್ಯಾಖ್ಯೆಯನ್ನು ಕಂಡುಕೊಳ್ಳಲು ಕಷ್ಟವಾಗುತ್ತದೆ.

ಕರ್ನಾಟಕದ ಮುಸ್ಲಿಮರ ರಾಜಕೀಯ ಒಲವನ್ನು ಗಮನಿಸಿದರೆ ಅದರಲ್ಲಿ ಎರಡು ಹಂತಗಳನ್ನು ಗುರುತಿಸಬಹುದು. 1992ರಲ್ಲಿ ಬಾಬರಿ ಮಸೀದಿ ನಾಶದ ತನಕವೂ ಮುಸ್ಲಿಮರು ಹೆಚ್ಚಾಗಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದರು. 1992ರ ನಂತರ ಭಾರತದಾದ್ಯಂತ ಸಂಭವಿಸಿದಂತೆ ಕರ್ನಾಟಕದಲ್ಲಿಯೂ ಮುಸ್ಲಿಮರ ಮತಗಳು ವಿಭಜನೆಯಾದವು. ಇದು 1994ರ ಚುನಾವಣೆಯಲ್ಲಿ ಸ್ಪಷ್ಟವಾಗಿಯೇ ಗೋಚರಿಸಿತು. ಕಾಂಗ್ರೆಸ್ ತಾನು ದುರ್ಬಲವಾದ ಸಂದರ್ಭದಲ್ಲಿ ನೆಚ್ಚಿಕೊಳ್ಳಬಹುದು ಎಂದುಕೊಂಡಿದ್ದ ಮುಸ್ಲಿಂ ಸಮುದಾಯ, ಮೊದಲ ಬಾರಿಗೆ ಅದರಿಂದ ಸ್ಪಷ್ಟವಾಗಿ ಕೈಬಿಟ್ಟು ಹೋಯಿತು. ಅಲ್ಲಿಂದೀಚೆಗೆ 2004ರವರೆಗೂ ಇದು ಹೀಗೆಯೇ ಮುಂದುವರಿದಿತ್ತು. ಜನತಾ ದಳದ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿಯ ಜೊತೆ ಸೇರಿ ಸರ್ಕಾರ ರಚಿಸಿದ ನಂತರ ಮುಸ್ಲಿಮರ ರಾಜಕೀಯ ಒಲವು ಮತ್ತೆ ಕಾಂಗ್ರೆಸ್‌ನತ್ತ ತಿರುಗಿರುವಂತೆ ಕಾಣಿಸುತ್ತದೆ. ಮುಸ್ಲಿಮರ ಈ ರಾಜಕೀಯ ಒಲವಿನ ಹಿಂದೆ ಮುಖ್ಯ ಪಾತ್ರ ವಹಿಸುವುದು ಅವರಲ್ಲಿರುವ ಅಭದ್ರತೆ. ತಥಾಕಥಿತ ಜಾತ್ಯತೀತ ಪಕ್ಷಗಳು ಇದನ್ನು ಬಳಸಿಕೊಳ್ಳುತ್ತಾ ಬಂದಿರುವುದು ವಾಸ್ತವ.

ಜನಸಂಖ್ಯೆಯ ದೃಷ್ಟಿಯಿಂದ ನೋಡಿದರೆ ಕರ್ನಾಟಕದ ಅತಿ ದೊಡ್ಡ ಸಮುದಾಯ ಎಂಬ ಹೆಗ್ಗಳಿಕೆ ಮುಸ್ಲಿಮರಿಗೆ ಇದೆ. ಹಾಗೆ ನೋಡಿದರೆ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಮುಸ್ಲಿಮರಿರುವ ರಾಜ್ಯ ಕರ್ನಾಟಕವೇ. ಆದರೆ ಇಲ್ಲಿ ಮುಸ್ಲಿಮರು ರಾಜಕೀಯ ಶಕ್ತಿ ಅಲ್ಲ. ಕ್ಷೇತ್ರ ಪುನರ್‌ವಿಂಗಡಣೆಗೂ ಮೊದಲು ನಗರ ಕೇಂದ್ರಿತ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ವಲ್ಪಮಟ್ಟಿಗೆ ಮುಸ್ಲಿಮರು ನಿರ್ಣಾಯಕ ಶಕ್ತಿಯಾಗಿದ್ದರು. ಮುಸ್ಲಿಮರೇ ಪ್ರಧಾನ ಪಾತ್ರ ವಹಿಸಬಹುದಾದ ಕ್ಷೇತ್ರಗಳು ಇಲ್ಲ ಎನ್ನುವಷ್ಟು ಕಡಿಮೆಯಾಗಿವೆ. ಅಭ್ಯರ್ಥಿಯ ಗೆಲುವನ್ನು ನಿರ್ಧರಿಸುವುದಕ್ಕೆ ಮುಸ್ಲಿಮರ ಜೊತೆಗೆ ಮತ್ತೊಂದು ಪ್ರಬಲ ಸಮುದಾಯವೂ ಇರಬೇಕಾಗುತ್ತದೆ.

ಇದನ್ನು ಅತ್ಯಂತ ಸಕಾರಾತ್ಮಕವಾಗಿ ಬಳಸಿಕೊಳ್ಳುವುದಕ್ಕೆ ಮುಸ್ಲಿಂ ರಾಜಕಾರಣಿಗಳಿಗೆ ಸಾಧ್ಯವಿತ್ತು. ಆ ಮೂಲಕ ಮುಸ್ಲಿಂ ಸಮುದಾಯಕ್ಕೆ ನಾಯಕತ್ವ ನೀಡುವುದರ ಜೊತೆಗೇ ಪ್ರಮುಖ ರಾಜಕೀಯ ನಾಯಕನಾಗಿ ಬೆಳೆಯುವ ಅವಕಾಶವಿತ್ತು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದವರ ಸಂಖ್ಯೆಯೇ ಬಹಳ ಕಡಿಮೆ. ಇಂದಿಗೂ ಇಡೀ ಕರ್ನಾಟಕ ಅರಿತಿರುವ ಮುಸ್ಲಿಂ ನಾಯಕರ ಪಟ್ಟಿ ಮಾಡಲು ಹೊರಟರೆ ಸಿಗುವುದು ಮೂರು ಹೆಸರುಗಳು ಮಾತ್ರ. ಅಬ್ದುಲ್ ನಜೀರ್ ಸಾಬ್, ಅಜೀಜ್ ಸೇಠ್ ಮತ್ತು ಜಾಫರ್ ಷರೀಫ್ ಎಂಬ ಈ ಮೂವರಲ್ಲಿ ಅಬ್ದುಲ್ ನಜೀರ್ ಸಾಬ್ ಅವರನ್ನು ಮುಸ್ಲಿಮರು ತಮ್ಮ ಸಮುದಾಯದ ನಾಯಕನೆಂದು ಪರಿಗಣಿಸುವುದಿಲ್ಲ. ಅವರ ಆ ಬಗೆಯ ನಾಯಕನಾಗಿ ಬೆಳೆಯುವುದಕ್ಕೆ ಬೇಕಿರುವಷ್ಟು ಸುದೀರ್ಘವಾದ ಆಯಸ್ಸೂ ಅವರಿಗೆ ದೊರೆಯಲಿಲ್ಲ.

ಅಜೀಜ್ ಸೇಠ್ ಅಖಿಲ ಕರ್ನಾಟಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರಾದರೂ ಸಮುದಾಯವನ್ನು ನಿರ್ದಿಷ್ಟ ರಾಜಕೀಯ ಕಾರ್ಯಸೂಚಿಯಲ್ಲಿ ಸಂಘಟಿಸುವಲ್ಲಿ ಸೋತರು. ಜಾಫರ್ ಷರೀಫ್ ಅವರು ಕೇಂದ್ರ ಸಚಿವ ಸ್ಥಾನಕ್ಕೇರಿದ್ದು ಅವರಿಗೆ ನಾಯಕತ್ವವನ್ನು ತಂದುಕೊಟ್ಟಿತು. ಆದರೆ ಅವರು ಅದನ್ನು ಬಹಳ ಸೀಮಿತವಾದ ವ್ಯಾಪ್ತಿಯಲ್ಲಷ್ಟೇ ಬಳಸಿಕೊಂಡರು.

ಮುಸ್ಲಿಮರು ಒಂದು ಸಮುದಾಯವಾಗಿ ತೋರಿಸುವ ರಾಜಕೀಯ ಒಲವುಗಳು ಹೆಚ್ಚಿನ ಸಂದರ್ಭಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಕಂಡುಬರುವ ಒಲವುಗಳನ್ನೇ ಹೋಲುತ್ತವೆ. ಕೇರಳ, ಪಶ್ಚಿಮ ಬಂಗಾಳ, ಅಷ್ಟೇಕೆ ನೆರೆಯ ತೆಲಂಗಾಣದಂಥ ರಾಜ್ಯಗಳಲ್ಲಿರುವಂತೆ ಎರಡು ಅಥವಾ ಮೂರನೇ ಆಯ್ಕೆಗಳೂ ಕರ್ನಾಟಕದ ಮುಸ್ಲಿಮರಿಗೆ ಇರುವುದಿಲ್ಲ. 1992ರ ನಂತರ ಅಂಥದ್ದೊಂದು ಎರಡನೇ ಆಯ್ಕೆಯ ಸಾಧ್ಯತೆಯೊಂದು ಕರ್ನಾಟಕದಲ್ಲಿ ಗೋಚರಿಸಿತ್ತು. 1994ರಲ್ಲಿ ಜನತಾದಳ ಒಂದಾಗಿ ಸ್ಪರ್ಧಿಸಿದಾಗ ಕರ್ನಾಟಕದ ಮುಸ್ಲಿಮರು ದೊಡ್ಡ ಪ್ರಮಾಣದಲ್ಲಿಯೇ ಅದರ ಜೊತೆಗೆ ಗುರುತಿಸಿಕೊಂಡದ್ದು ಇದೇ ಕಾರಣದಿಂದ. ಹತ್ತೇ ವರ್ಷಗಳಲ್ಲಿ ಆ ಕನಸೂ ಮುರುಟಿ ಹೋಯಿತು.

2004ರಲ್ಲಿ ಜಾತ್ಯತೀತ ಜನತಾದಳ ಪಡೆದುಕೊಂಡ ಗರಿಷ್ಠ ಸಂಖ್ಯೆಯ ಸ್ಥಾನಗಳ ಹಿಂದೆಯೂ ಸ್ವಲ್ಪ ಈ ವೋಟುಗಳು ಕೆಲಸ ಮಾಡಿದ್ದವು. ಕುಮಾರಸ್ವಾಮಿಯವರು ಬಿಜೆಪಿ ಜೊತೆಗೆ ಮಾಡಿಕೊಂಡ ಮೈತ್ರಿಯಿಂದಾಗಿ ಮುಸ್ಲಿಮರ ಎದುರು ಇದ್ದ ಎರಡನೇ ಆಯ್ಕೆ ಇಲ್ಲವಾಯಿತು. 2013ರ ಚುನಾವಣೆಯ ಹೊತ್ತಿಗೆ ಮುಸ್ಲಿಮರ ಮತ ಮತ್ತೆ ಕಾಂಗ್ರೆಸ್‌ನ ಕಡೆಯೇ ಹರಿಯಿತು. ದಕ್ಷಿಣ ಕನ್ನಡದಲ್ಲಿ ಮುಸ್ಲಿಮರ ಮತಗಳ ಜೊತೆಗೆ ಕ್ರೈಸ್ತರ ಮತಗಳೂ ಸೇರಿಕೊಂಡು ಬಿಜೆಪಿಯ ಕೈಯಲ್ಲಿದ್ದ ಅನೇಕ ಸ್ಥಾನಗಳನ್ನು ಕಿತ್ತುಕೊಳ್ಳುವಲ್ಲಿಯೂ ಕಾಂಗ್ರೆಸ್ ಯಶಸ್ವಿಯಾಯಿತು.

2011ರ ಜನಗಣತಿಯ ಅಂಕಿ ಅಂಶಗಳು ಹೇಳುವಂತೆ ಕರ್ನಾಟಕದಲ್ಲಿರುವ ಮುಸ್ಲಿಮರ ಜನಸಂಖ್ಯೆ ಪ್ರಮಾಣ ಶೇ 12.9. ಈ ಪ್ರಮಾಣಕ್ಕೆ ಅನುಗುಣವಾಗಿ ನೋಡಿದರೆ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುವ ಕನಿಷ್ಠ 28 ಶಾಸಕರು ಕರ್ನಾಟಕ ವಿಧಾನಸಭೆಯಲ್ಲಿ ಇರಬೇಕಾಗಿತ್ತು. ಕರ್ನಾಟಕದಲ್ಲಿ ಗರಿಷ್ಠ ಸಂಖ್ಯೆಯ ಮುಸ್ಲಿಂ ಶಾಸಕರಿದ್ದದ್ದು ಆರನೇ ವಿಧಾನಸಭೆಯಲ್ಲಿ (1978-83). ಒಟ್ಟು 15 ಮಂದಿ ಶಾಸಕರಿದ್ದರು. ಉಪ ಚುನಾವಣೆಯೊಂದರ ನಂತರ ಈ ಸಂಖ್ಯೆ 17ಕ್ಕೆ ಏರಿತು. ಇದರ ಹೊರತಾಗಿ ಈ ತನಕದ 14 ವಿಧಾನಸಭೆಗಳಲ್ಲಿ ಐದು ವಿಧಾನಸಭೆಗಳಲ್ಲಷ್ಟೇ ಮುಸ್ಲಿಂ ಶಾಸಕರ ಸಂಖ್ಯೆ ಎರಡಂಕೆಯಷ್ಟಿತ್ತು. ಉಳಿದಂತೆ ಎಲ್ಲಾ ವಿಧಾನಸಭೆಗಳಲ್ಲಿ ಸಂಖ್ಯೆ ಒಂದಂಕೆಯನ್ನು ದಾಟುವುದಿಲ್ಲ. ಏಳನೇ ವಿಧಾನಸಭೆಯಂತೂ (1983-85) ಕೇವಲ ಇಬ್ಪರು ಮುಸ್ಲಿಂ ಶಾಸಕರನ್ನು ಹೊಂದಿತ್ತು.

ಜನಸಂಖ್ಯೆಯ ಪ್ರಮಾಣ ಮತ್ತು ಶಾಸಕರ ಸಂಖ್ಯೆ ನಡುವಣ ಅನುಪಾತದಲ್ಲಿ ಇರುವ ಈ ವ್ಯತ್ಯಾಸಕ್ಕೆ ಅನೇಕ ಕಾರಣಗಳಿವೆ. ಮುಸ್ಲಿಂ ರಾಜಕಾರಣಿಗಳು ತಮ್ಮ ನಾಯಕತ್ವದ ಪರಿಧಿಯನ್ನು ವಿಸ್ತರಿಸಿಕೊಳ್ಳದೇ ಇರುವುದು ಬಹುಮುಖ್ಯ ಕಾರಣ. ಗೆಲ್ಲುವ ಕುದುರೆಗಳು ಎಂದು ರಾಜಕೀಯ ಪಕ್ಷಗಳು ಪರಿಗಣಿಸುವ ಮುಸ್ಲಿಂ ರಾಜಕಾರಣಿಗಳ ವ್ಯಾಪ್ತಿ ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ಕ್ಷೇತ್ರವನ್ನು ಮೀರುವುದಿಲ್ಲ. ಬಹಳ ಸ್ಥಳೀಯವಾದ ಒಲವುಗಳನ್ನು ಬಳಸಿಕೊಂಡೇ ಇವರು ಗೆಲ್ಲುತ್ತಾರೆ.

ಅಬ್ದುಲ್ ನಜೀರ್ ಸಾಬ್ ಅವರಂತೆ ದೊಡ್ಡ ಮಟ್ಟದ ನಾಯಕನಾಗಿ ಬೆಳೆದವರನ್ನು ಮುಸ್ಲಿಂ ಸಮುದಾಯವೇ ತನ್ನ ನಾಯಕನೆಂದು ಸ್ವೀಕರಿಸುವುದಿಲ್ಲ. ಮೇಲ್ಮನೆಯ ಸದಸ್ಯರಾಗಿ ಜೆ.ಎಚ್. ಪಟೇಲ್ ಸಂಪುಟದಲ್ಲಿ ಸಣ್ಣ ಕೈಗಾರಿಕೆ ಮತ್ತು ಉನ್ನತ ಶಿಕ್ಷಣದಂಥ ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಬಿ.ಎ.ಮೊಯಿದ್ದೀನ್ ಅವರನ್ನೂ ಇದೇ ಪಟ್ಟಿಗೆ ಸೇರಿಸಬಹುದು. ಅವರ ಸಮಾಜವಾದಿ ಹಿನ್ನೆಲೆ, ಎಲ್ಲ ಸಮುದಾಯಗಳಿಗೂ ಸಲ್ಲುವ ನಾಯಕತ್ವ ಗುಣ ಅವರಲ್ಲಿದ್ದರೂ ಅವರೊಬ್ಬ ಅಖಿಲ ಕರ್ನಾಟಕ ಮಟ್ಟದ ಮುಸ್ಲಿಂ ನಾಯಕನಾಗುವುದಕ್ಕೆ ಸಮುದಾಯವೇ ಸಮ್ಮತಿಸಲಿಲ್ಲ ಎಂಬಂತೆ ಕಾಣುತ್ತದೆ.

ಮುಸ್ಲಿಂ ರಾಜಕಾರಣಿಗಳು ಎದುರಿಸಬೇಕಾಗಿರುವ ದೊಡ್ಡ ಇಕ್ಕಟ್ಟು ಇದುವೇ. ಮೇಲ್ಜಾತಿ ಮತಗಳು ಹೆಚ್ಚಾಗಿರುವ ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ದಲಿತ ರಾಜಕಾರಣಿಗಳು ಅನುಭವಿಸುವಂಥದ್ದೇ ಇಕ್ಕಟ್ಟು. ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಎಲ್ಲರಿಗೂ ಸಲ್ಲಬೇಕು. ಹಾಗೆ ಎಲ್ಲರಿಗೂ ಸಲ್ಲುವ ವ್ಯಕ್ತಿತ್ವ ಬೆಳೆಸಿಕೊಂಡವರನ್ನು ಸಮುದಾಯ ತನ್ನ ನಾಯಕನೆಂದು ಸ್ವೀಕರಿಸುವುದಿಲ್ಲ. ಇನ್ನು ಮಧ್ಯಮ ಮಾರ್ಗವನ್ನು ತುಳಿದರೆ ತನ್ನ ಕ್ಷೇತ್ರದ ಆಚೆಗೆ ಯಾವ ಪ್ರಭಾವವೂ ಇರುವುದಿಲ್ಲ. ಕಳೆದ ನಾಲ್ಕು ಚುನಾವಣೆಗಳಲ್ಲಿ ಗೆಲ್ಲುತ್ತಾ ಬಂದಿರುವ ಹೆಚ್ಚಿನ ಮುಸ್ಲಿಂ ಶಾಸಕರಿಗೆ ಇರುವ ಮಿತಿ ಇದು. ಇವರೆಲ್ಲರೂ ಮಧ್ಯಮ ಮಾರ್ಗವನ್ನು ತುಳಿದವರು. ತಮ್ಮ ಕ್ಷೇತ್ರದಲ್ಲಿ ಎಲ್ಲವನ್ನೂ ನಿಭಾಯಿಸುತ್ತಾರೆ. ಮಂತ್ರಿಯಾದರೂ ರಾಜ್ಯ ಮಟ್ಟದ ನಾಯಕರಾಗುವುದಕ್ಕೆ ಇವರಿಗೆ ಸಾಧ್ಯವಾಗುವುದಿಲ್ಲ. ಅವರ ಸಾಮಾಜಿಕ ಹಿನ್ನೆಲೆಯೂ ಹೀಗಾಗುವುದಕ್ಕೆ ಸಹಕರಿಸುವುದಿಲ್ಲ.

2013ರ ಚುನಾವಣೆಗೆ ಹೋಲಿಸಿದರೆ 2018ರ ಚುನಾವಣಾ ಕಣ ಹೆಚ್ಚು ವಿಶಿಷ್ಟ. ಕಳೆದ ಚುನಾವಣೆಯಲ್ಲಿ ಮುಸ್ಲಿಂ ಮತಗಳ ಮೇಲೆ ಪರಿಣಾಮ ಬೀರುವ ಶಕ್ತಿಯುಳ್ಳ ಹೊಸ ಪಕ್ಷಗಳ ಬಲವೂ ಸಂಖ್ಯೆಯೂ ಕಡಿಮೆ ಇತ್ತು. ಈ ಬಾರಿ ಎಸ್‌ಡಿಪಿಐ ಮತ್ತು ಒವೈಸಿ ಸೋದರರ ಆಲ್ ಇಂಡಿಯಾ ಮಜ್ಲಿಸ್‌– ಎ– ಇತ್ತೆಹಾದುಲ್ ಮುಸ್ಲಿಮೀನ್‌ನಂಥ ಪಕ್ಷಗಳು ಕೆಲ ಮಟ್ಟಿಗೆ ಮುಸ್ಲಿಂ ಮತ ಬ್ಯಾಂಕ್‌ಗೆ ಕನ್ನ ಕೊರೆಯುವ ಸಾಧ್ಯತೆಗಳಿವೆ. ಕಾಂಗ್ರೆಸ್ ಸೇರಿದಂತೆ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಲ್ಲಿ ತಮಗೆ ಬೇಕಿರುವ ಪ್ರಾತಿನಿಧ್ಯ ದೊರೆಯುತ್ತಿಲ್ಲ ಮತ್ತು ಈ ಪಕ್ಷಗಳಲ್ಲಿರುವ ರಾಜಕಾರಣಿಗಳು ಮುಸ್ಲಿಮರ ಹಿತ ಕಾಯುತ್ತಿಲ್ಲ ಎಂಬ ಭಾವನೆಯೊಂದನ್ನು ಸಮುದಾಯದೊಳಗೆ ಹರಡುವಲ್ಲಿ ಈ ಎರಡೂ ಪಕ್ಷಗಳು ಕೆಲಮಟ್ಟಿಗೆ ಯಶಸ್ವಿಯಾಗಿವೆ. ಮುಸ್ಲಿಮರಿಗೆ ಮೂರನೇ ಆಯ್ಕೆಯಿಲ್ಲ ಎಂಬ ಕಾಂಗ್ರೆಸ್‌ನ ಸಮಾಧಾನವನ್ನು ಕೆಲವು ಕ್ಷೇತ್ರಗಳಲ್ಲಿಯಾದರೂ ಈ ಎರಡೂ ಪಕ್ಷಗಳು ಈ ಬಾರಿ ಕಿತ್ತುಕೊಳ್ಳುವ ಸಾಧ್ಯತೆಗಳಿವೆ.

ಭಿನ್ನ ಒಲವು; ಪೂರ್ವಗ್ರಹದ ನಿಲುವು

ಕರ್ನಾಟಕದ ರಾಜಕಾರಣದಲ್ಲಿ ಮುಸ್ಲಿಮರ ಪಾಲ್ಗೊಳ್ಳುವಿಕೆಯ ಕುರಿತಂತೆ ಅಧ್ಯಯನ ನಡೆಸಿರುವ ಖಾಜಿ ಅರ್ಷದ್ ಅಲಿ ಅವರು ಮುಸ್ಲಿಂ ನಾಯಕತ್ವ ಏಕೆ ಬೆಳೆಯಲಿಲ್ಲ ಎಂಬುದನ್ನು ವಿಶ್ಲೇಷಿಸುವುದು ಭಿನ್ನ ಬಗೆಯಲ್ಲಿ.

‘ಮುಸ್ಲಿಮರು ಒಂದು ಏಕರೂಪಿ ಸಮುದಾಯ ಎಂಬ ಪೂರ್ವಗ್ರಹದ ಜೊತೆಯೇ ಮುಸ್ಲಿಮರ ರಾಜಕೀಯ ಒಲವುಗಳ ವಿಶ್ಲೇಷಣೆ ನಡೆಯುತ್ತದೆ. ಕರ್ನಾಟಕದ ಪ್ರತಿಯೊಂದು ಪ್ರದೇಶದ ಮುಸ್ಲಿಮರೂ ಭಿನ್ನವಾಗಿ ಆಲೋಚಿಸುತ್ತಾರೆ. ಅವರ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸಮಸ್ಯೆಗಳು ಮತ್ತು ಒಲವುಗಳೂ ಭಿನ್ನವಾಗಿವೆ. ಹಾಗಾಗಿಯೇ ಇಡೀ ಕರ್ನಾಟಕದ ಮುಸ್ಲಿಮರನ್ನು ಪ್ರತಿನಿಧಿಸುವ ನಾಯಕತ್ವವೊಂದು ಬೆಳೆಯಲೇ ಇಲ್ಲ’ ಎಂದು ಅಭಿಪ್ರಾಯಪಡುವ ಅವರು ‘ಇದನ್ನೊಂದು ಸಾಧ್ಯತೆಯನ್ನಾಗಿ ಬಳಸಿಕೊಳ್ಳುವಷ್ಟು ರಾಜಕೀಯ ಸೃಜನಶೀಲತೆಯೂ ನಮ್ಮ ನಾಯಕರಲ್ಲಿ ಇಲ್ಲ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT