ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತ ಕಾಲವನ್ನು ನೆನೆದು ದುಃಖಿಸಬೇಡಿ

Last Updated 22 ಫೆಬ್ರುವರಿ 2018, 6:25 IST
ಅಕ್ಷರ ಗಾತ್ರ

ಮಂಗಳೂರು: ಸಂತುಲಿತವಾದ ಜೀವನ ವನ್ನು ನಡೆಸಬೇಕು ಎಂದೇ ನಮ್ಮಲ್ಲಿ ಹೆಚ್ಚಿನವರು ಬಯಸುವುದು. ಹಾಗೆ ಜೀವಿಸಬೇಕೆಂದರೆ ಅದಕ್ಕಾಗಿ ನಾವು ದೈಹಿಕ, ಮಾನಸಿಕ, ಭಾವುಕ ಮತ್ತು ಬೌದ್ಧಿಕ ನೆಲೆಗಳಲ್ಲಿ ಸಂತುಲಿತತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮಾತಾ ಅಮೃತಾನಂದಮಯಿ ಹೇಳಿದರು.

ಬ್ರಹ್ಮಸ್ಥಾನ ಮಹೋತ್ಸವದ ಅಂಗವಾಗಿ ಬುಧವಾರ ಬೋಳೂರಿನ ಅಮೃತಾನಂದಮಯಿ ಮಠದಲ್ಲಿ ಅವರು ಪ್ರವಚನ ನೀಡಿದರು. ಶಾಸ್ತ್ರಗಳಲ್ಲಿ ಇಂಥ ಜೀವನ ಶೈಲಿಯನ್ನು ‘ಮಧ್ಯಮ ಮಾರ್ಗ’, ‘ಮಿತ ಜೀವನ’ ಎಂದು ಕರೆದಿದ್ದಾರೆ. ಋಷಿಮುನಿಗಳು, ಆಚಾರ್ಯರೂ ದೈನಂದಿನ ಜೀವನದಲ್ಲಿ ಮನುಷ್ಯ ಮಾಡುವ ನಿದ್ರೆ, ವ್ಯಾಯಾಮ, ಮಾತು, ಕೆಲಸ, ಆಹಾರ, ಭಾವನೆ -ಇದೆಲ್ಲದರಲ್ಲಿ ಸಮತೋಲನ, ಸಂತುಲಿತತೆ ಇರಬೇಕು ಎಂದು ತಿಳಿಸಿದ್ದಾರೆ. ಯಾವುದು ಅತಿಯಾದರೂ ಅದು ನಮ್ಮ ದೌರ್ಬಲ್ಯವಾಗುತ್ತದೆ. ಮುಂದೆ ಇದೇ ದೌರ್ಬಲ್ಯ ನಮ್ಮ ಅವನತಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.

ನಮ್ಮ ಮನಸ್ಸು ನಮ್ಮ ಕೈಯ್ಯಲ್ಲಿಲ್ಲ. ಅದು ಸುತ್ತಲಿನ ಜನರಿಂದ ಬಹಳ ಸುಲಭವಾಗಿ ಪ್ರಭಾವಿತವಾಗುವುದು. ಮನಸ್ಸು ನಮ್ಮ ನಿಯಂತ್ರಣಕ್ಕೆ ಬರುವವರೆಗೂ ನಾವು ‘ಇಮ್ಮ್ಯೂನಿಟಿ’ ಕಡಿಮೆ ಇರುವ ಜನರ ಹಾಗೆ. ರೋಗ ಪ್ರತಿರೋಧ ಶಕ್ತಿ ಕಡಿಮೆ ಇರುವ ಜನ ಬೇಗನೆ ವೈರಸ್ ಅಥವಾ ಬ್ಯಾಕ್ಟೀರಿಯಾ ಸೋಂಕುಗಳಿಗೆ ಈಡಾಗುತ್ತಾರೆ. ಕಿಮೋಥೆರಪಿಗೆ ಒಳಗಾಗಿರುವ ರೋಗಿಯು ಸೋಂಕುಗಳನ್ನು ದೂರವಿಡಲು ಎಲ್ಲಿಗೆ ಹೋದರೂ ಮಾಸ್ಕ್ ಧರಿಸುವ ಹಾಗೆ, ನಾವೂ ನಮ್ಮಲ್ಲಿ ದುಷ್ಟಪ್ರವೃತ್ತಿಯನ್ನು ಪ್ರಚೋದಿಸುವ ಎಲ್ಲ ಸಂದರ್ಭಗಳನ್ನೂ ದೂರವಿಡಲೇಬೇಕು. ಸತ್ಸಂಗ ಮಾಡಿದರೆ ನಮಗೆ ಆಧ್ಯಾತ್ಮ ಮಾರ್ಗದಲ್ಲಿ ಮುಂದುವರೆಯಲು ಸ್ಫೂರ್ತಿ ಸಿಗುತ್ತದೆ ಎಂದು ಹೇಳಿದರು.

ನಾವು ನಕ್ಕರೂ ಸರಿ, ಅತ್ತರೂ ಸರಿ - ದಿನ ಕಳೆಯುತ್ತದೆ. ಹೀಗಿರುವಾಗ ನಾವು ನಗುನಗುತ್ತಲೇ ಇರಬಾರದೇಕೆ? ಎಲ್ಲ ತೀರ್ಮಾನಗಳ ಹಾಗೆ ಸಂತೋಷವೂ ಒಂದು ತೀರ್ಮಾನ. ಅದೊಂದು ದೃಢ ನಿರ್ಧಾರ. ‘ಏನಾದರೂ ಬರಲಿ. ನಾನಂತೂ ಸಂತೋಷವಾಗಿರುತ್ತೇನೆ. ನಾನು ಧೈರ್ಯವಾಗಿರುತ್ತೇನೆ. ನಾನು ಒಂಟಿಯಲ್ಲ, ದೇವರು ನನ್ನ ಜತೆಗಿದ್ದಾನೆ’ ಎಂಬ ಆತ್ಮವಿಶ್ವಾಸ ಇದ್ದಲ್ಲಿ ಬೇಕಾದ ಕೆಲಸವನ್ನು ಮಾಡಲು ನಮಗೆ ಶಕ್ತಿ ಬರುತ್ತದೆ ಎಂದು ಹೇಳಿದರು.

ಇದಕ್ಕೂ ಮೊದಲು ಮಾನಸ ಪೂಜೆ ಮತ್ತು ಅಮ್ಮನವರ ಅನುಗ್ರಹ ದರ್ಶನಕ್ಕೂ ಅವಕಾಶ ಕಲ್ಪಿಸಲಾಗಿತ್ತು. ನವಗ್ರಹ ಶಾಂತಿ ಹೋಮ, ಮಹಾ ಸುದರ್ಶನ ಹೋಮ, ಭಗವತಿ ಪೂಜೆ, ಅಲಂಕಾರ ಪೂಜೆ ಸಹಿತ ವಿವಿಧ ಅರ್ಚನೆಗಳು ನಡೆದವು. ಅಮ್ಮನ ದರ್ಶನ ಪಡೆಯಲು ಟೋಕನ್‌ಗಳನ್ನು ವಿತರಿಸಲಾಗಿತ್ತು. ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಜನರಿಗೆ ಬಸ್‌ ವ್ಯವಸ್ಥೆ ಮಾಡಲಾಗಿತ್ತು

* * 

ನಾವು ಸಹನೆ ತೋರಿಸಿದರೆ ಇನ್ನೊಬ್ಬರಲ್ಲಿ ಬದಲಾವಣೆ ತರುವುದು ಸಾಧ್ಯವಿದೆ. ಸಹನೆ ಎನ್ನುವುದು ಎಲ್ಲರಿಗೂ ಒಳ್ಳೆಯದು
ಮಾತಾ ಅಮೃತಾನಂದಮಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT