ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರ ಆತ್ಮಹತ್ಯೆ’ ನಾಡಿನಲ್ಲಿ ‘ಕೈ’ ಕೋಟೆ ವಶಕ್ಕೆ ಕಾದಾಟ

Last Updated 22 ಫೆಬ್ರುವರಿ 2018, 7:07 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಾಗುವ ಕನಸು ಕಾಣುತ್ತಿರುವ ಶಿರಾ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಂತಿದೆ. ಜನತಾ ಪರಿವಾರದ ಅಭ್ಯರ್ಥಿಗಳು, ಪಕ್ಷೇತರರು ತಲಾ ಎರಡು ಸಲ ಗೆಲುವು ಸಾಧಿಸಿದ್ದಾರೆ. ಬಿಜೆಪಿಗೆ ಇನ್ನೂ ಖಾತೆ ತೆರೆಯಲು ಸಾಧ್ಯವಾಗಿಲ್ಲ.

ಕಳೆದ 13 ಚುನಾವಣೆಗಳಲ್ಲಿ 9 ಸಲ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಈ ಹಿಂದೆ ಇದ್ದ ಕಳ್ಳಂಬೆಳ್ಳ ಕ್ಷೇತ್ರ 2008ರ ಕ್ಷೇತ್ರ ಪುನರ್ ವಿಂಗಡಣೆ ವೇಳೆ ಶಿರಾ ಕ್ಷೇತ್ರದೊಂದಿಗೆ ವಿಲೀನವಾಯಿತು. ಕಳ್ಳಂಬೆಳ್ಳ ಕ್ಷೇತ್ರದಲ್ಲಿ ಶಾಸಕರಾಗಿದ್ದ ಟಿ.ಬಿ.ಜಯಚಂದ್ರ ಶಿರಾ ಕ್ಷೇತ್ರದಲ್ಲಿ ರಾಜಕೀಯ ಮುಂದುವರೆಸಿದ್ದಾರೆ.

1957ರಲ್ಲಿ  ಟಿ.ತಾರೇಗೌಡ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದರು. 1962ರಲ್ಲಿ ಪಕ್ಷೇತರ ಅಭ್ಯರ್ಥಿ ಸಿ.ಜೆ.ಮುಕ್ಕಣ್ಣಪ್ಪ ಅವರಿಗೆ  ಮತದಾರರು ಮಣೆ ಹಾಕಿದರು. ನಂತರ 1967ರಿಂದ ಮೂರು ಅವಧಿಗೆ ಕ್ಷೇತ್ರ ಕಾಂಗ್ರೆಸ್‌ ವಶದಲ್ಲಿತ್ತು. ಮತ್ತೆ  ಪಕ್ಷೇತರ ಅಭ್ಯರ್ಥಿ ಪಿ.ಮೂಡ್ಲೇಗೌಡ ಗೆಲುವು ಸಾಧಿಸಿದರು. ಇದಾದ ನಂತರ ಕಾಂಗ್ರೆಸ್‌ ತನ್ನ ಬಿಗಿ ಹಿಡಿತ ಕಳೆದುಕೊಂಡಿದ್ದು ಜನತಾಪರಿವಾರ ಮತ್ತು ಕಾಂಗ್ರೆಸ್‌ ನಡುವಿನ ಸೆಣೆಸಾಟ ಕಾಣುತ್ತದೆ. ಇದು ಈಗಲೂ ಮುಂದುವರೆದಿದೆ.

2013ರ ಚುನಾವಣೆ: ಕಾಂಗ್ರೆಸ್‌ನಿಂದ ಟಿ.ಬಿ.ಜಯಚಂದ್ರ, ಜೆಡಿಎಸ್‌ನಿಂದ ಬಿ.ಸತ್ಯನಾರಾಯಣ, ಬಿಜೆಪಿಯಿಂದ ಬಿ.ಕೆ.ಮಂಜುನಾಥ್‌ ಸ್ಪರ್ಧೆಯಲ್ಲಿದ್ದರು. ಮದಲೂರು ಕೆರೆಗೆ ಹೇಮಾವತಿ ನೀರು ತರುವುದಾಗಿ ನೀಡಿದ ಭರವಸೆ ಜಯಚಂದ್ರ ಅವರಿಗೆ ಉತ್ತಮ ಜನಬೆಂಬಲಕ್ಕೆ ಕಾರಣವಾಯಿತು.ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ಸಿಗಲಿದೆ. ಆ ನಂತರ ನೀರು ತರಲು ಸುಲಭವಾಗಲಿದೆ ಎಂದೇ ಪ್ರಚಾರ ನಡೆಸಿದ್ದರು. ಇದರ ಜತೆಗೆ ಹಿಂದಿನ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳು ಅವರಿಗೆ ಗೆಲುವು ತಂದುಕೊಟ್ಟವು.

2018ರ ಚುನಾವಣೆ: ಈ ಸಲವೂ ಟಿ.ಬಿ.ಜಯಚಂದ್ರ, ಬಿ.ಸತ್ಯನಾರಾಯಣ ಸ್ಪರ್ಧೆಯಲ್ಲಿದ್ದಾರೆ. ಬಿಜೆಪಿಯಲ್ಲಿ ಬಿ.ಕೆ.ಮಂಜುನಾಥ್‌, ತುಮುಲ್‌ ನಿರ್ದೇಶಕ ಎಸ್‌.ಆರ್‌.ಗೌಡ, ನಗರ ಬಿಜೆಪಿ ಅಧ್ಯಕ್ಷ ಬಿ.ಗೋವಿಂದಪ್ಪ, ರಿಯಲ್‌ ಎಸ್ಟೇಟ್‌ ಉದ್ಯಮಿ ಸಿ.ಎಂ.ನಾಗರಾಜ್‌, ಮಾಲಿ ಸಿ.ಎಲ್‌.ಗೌಡ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಯಾರಿಗೂ ಟೆಕೆಟ್‌ ನಿರ್ಧಾರವಾಗಿಲ್ಲ. ಹಾಗಾಗಿ ಬಿಜೆಪಿಯಲ್ಲಿ ಎಲ್ಲರೂ ಅವರವರ ಪಾಡಿಗೆ ಪ್ರಚಾರದಲ್ಲಿದ್ದಾರೆ. ಪರಿವರ್ತನಾ ಯಾತ್ರೆಯಲ್ಲಿ ಸೇರಿದ್ದ ಜನಸ್ತೋಮ ಆಕಾಂಕ್ಷಿಗಳಲ್ಲಿ ಹುಮ್ಮಸ್ಸು ಹೆಚ್ಚು ಮಾಡಿದೆ.

’ಟಿ.ಬಿ.ಜಯಚಂದ್ರ ಸ್ಥಳೀಯರಲ್ಲ. ಚಿಕ್ಕನಾಯಕನಳ್ಳಿ ತಾಲ್ಲೂಕಿನವರು. ಮುಸ್ಲಿಮರನ್ನು ಹೆಚ್ಚು ಓಲೈಸುತ್ತಾರೆ. ಎರಡನೇ ಹಂತದ ಮುಖಂಡರನ್ನು ಬೆಳೆಸುತ್ತಿಲ್ಲ. ಪಕ್ಷದ ಕಾರ್ಯಕರ್ತರನ್ನು ಚುನಾವಣೆ ಸಂದರ್ಭದಲ್ಲಿ ಮಾತ್ರ ಬಳಸಿಕೊಳ್ಳುತ್ತಾರೆ. ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ನಿಲ್ಲುವ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಶ್ರಮ ಹಾಕುವುದಿಲ್ಲ. ತಮ್ಮ ಚುನಾವಣೆಗಷ್ಟೇ ಗಮನ ಹರಿಸುತ್ತಾರೆ’ ಎಂಬ ಅಸಮಾಧಾನ
ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರಲ್ಲಿದೆ. 

ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸ, ಬರಗೂರು, ದೊಡ್ಡಬಾಣಗೆರೆಗೆ ಹೇಮಾವತಿ ನದಿ ನೀರು, ಭದ್ರಾ ಮೇಲ್ದಂಡೆ ಯೋಜನೆ ಜಾರಿ ವಿಷಯವನ್ನು ಜಯಚಂದ್ರ ಚುನಾವಣಾ ವಿಷಯವಾಗಿಸಿದ್ದಾರೆ.

ಸ್ಥಳೀಯರಿಗೆ ಆದ್ಯತೆ ನೀಡಿ. ಹೊರಗಿನವರಿಗೆ ಆದ್ಯತೆ ನೀಡಬೇಡಿ. ಕ್ಷೇತ್ರದಲ್ಲಿ ಭಷ್ಟಾಚಾರ ಹೆಚ್ಚಿದೆ ಹಾಗೂ ಕಳೆದ ಎರಡು ಸಲದ ಸೋಲಿನ ಅನು
ಕಂಪವನ್ನು ಮುಂದು ಮಾಡಿಕೊಂಡು ಜೆಡಿಎಸ್‌ ಪ್ರಚಾರದಲ್ಲಿದೆ. ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಸಿ.ಆರ್‌.ಉಮೇಶ್‌, ಚಿದಾನಂದ ಎಂ.ಗೌಡ ಅಸಮಾಧಾನಗೊಂಡಿದ್ದಾರೆ.

ಸತ್ಯನಾರಾಯಣ್‌ಗೆ ಟಿಕೆಟ್‌ ಎಂದು ಆ ಪಕ್ಷ ಪ್ರಕಟಿಸಿದ ಬಳಿಕವೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಆರ್‌. ಉಮೇಶ್‌ ಅವರು ಎಚ್‌.ಡಿ.ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರ ಚಿತ್ರ ಹಾಕಿಕೊಂಡು ತಾನೇ ಅಭ್ಯರ್ಥಿ ಎಂದು ಪ್ರಚಾರ ಮುಂದುವರೆಸಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಚಿದಾನಂದ ಗೌಡ ತಮ್ಮ ಹಿಂಬಾಲಕರ ಬಳಿ ಹೇಳಿಕೊಳ್ಳುತ್ತಿದ್ದಾರೆ.

ಬಿಜೆಪಿಯವರು ಸ್ಥಳೀಯವಾಗಿ ಯಾವುದೇ ವಿಷಯವನ್ನೂ ಈವರೆಗೂ ಚುನಾವಣಾ ವಿಷಯವಾಗಿಸಿಲ್ಲ. ಪ್ರಧಾನಿ ಮೋದಿ ಹೆಸರನ್ನು ಜಪ ಮಾಡುತ್ತಿದ್ದಾರೆ.
ಆಕಾಂಕ್ಷಿಗಳು ಹೆಚ್ಚಿರುವ ಕಾರಣ ಟಿಕೆಟ್‌ ಪ್ರಕಟವಾದ ಬಳಿಕ ಈ ಪಕ್ಷವೂ ಆಂತರಿಕ ಬೇಗುದಿ ಎದುರಿಸಬೇಕಾಗಬಹುದು.

ಶೇಂಗಾ ಬೆಲೆ ಮತ್ತು ಗೋಲಿಬಾರ್‌ ನೆನಪು

‘ಶೇಂಗಾ’ ಬೆಳೆ ಮೂಲಕ ಪ್ರಸಿದ್ಧಿಗೆ ಬಂದಿದ್ದರೂ ’ರೈತರ ಆತ್ಮಹತ್ಯೆಗಳ ನಾಡು’ ಎಂಬ ಅಪಖ್ಯಾತಿಗೆ ಶಿರಾ ಗುರಿಯಾಗಿದೆ. ಕಳೆದ ಐದಾರು ವರ್ಷಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೇಂಗಾ ಬೆಳೆಯ ಜೊತೆ ಜೂಜಾಟವೇ ಇದಕ್ಕೆ ಕಾರಣ.

ಸರಿಯಾದ ಬೆಲೆ ಸಿಗದ ಕಾರಣದಿಂದಲೂ ರೈತರು ತೀವ್ರ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಉತ್ತಮ ಬೆಲೆಗೆ ಆಗ್ರಹಿಸಿ 1998ರಲ್ಲಿ ನಡೆದಿದ್ದ ರೈತರ ಹೋರಾಟ ಗೋಲಿಬಾರ್‌ಗೂ ಕಾರಣವಾಗಿ ಇಬ್ಬರು ರೈತರು ಜೀವ ತೆತ್ತರು. 35ಕ್ಕೂ ಹೆಚ್ಚು ರೈತರ ಮೇಲೆ ಪ್ರಕರಣ ದಾಖಲಾಗಿಸಲಾಗಿತ್ತು. ಇಷ್ಟಾಗಿಯೂ ಇಲ್ಲಿನ ರೈತರ ಬದುಕು, ಶೇಂಗಾ ಬೆಲೆಯಲ್ಲಿ ಸುಧಾರಣೆ ಕಂಡಿಲ್ಲ.

ಈ ವರ್ಷವೂ ಶೇಂಗಾ ಬೆಲೆ ಕುಸಿದಿದೆ. ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರವನ್ನು ಆರಂಭಿಸಿದರೂ ಗುಣಮಟ್ಟದ ಶೇಂಗಾ ಇಲ್ಲ ಎಂಬ ಕಾರಣ ನೀಡಿ ಖರೀದಿ ನಡೆಯುತ್ತಿಲ್ಲ. ಖರೀದಿ ನೀತಿಯಲ್ಲಿ ಬದಲಾವಣೆ ಮಾಡುವಂತೆ ರೈತರ ಆಗ್ರಹಕ್ಕೆ ಸರ್ಕಾರ ಮನ್ನಣೆ ನೀಡಿಲ್ಲ. ಎಪಿಎಂಸಿಯಲ್ಲಿ ಆನ್‌ಲೈನ್‌ ವಹಿವಾಟು ಕಡತಕ್ಕೆ ಮಾತ್ರ ಸೀಮಿತವಾಗಿದೆ.

ಶೇಂಗಾ ಬಿಟ್ಟರೆ ದಾಳಿಂಬೆ, ಅಡಿಕೆ ಬೆಳೆಯತ್ತ ಹೆಚ್ಚು ರೈತರು ಆಸಕ್ತಿ ತೋರಿದ್ದಾರೆ. ಕೊಳವೆಬಾವಿಗಳು ಒಣಗುತ್ತಿವೆ. ಸೂಕ್ಷ್ಮ ಹಣಕಾಸು ಸಂಸ್ಥೆಗಳು ಸ್ತ್ರೀ ಶಕ್ತಿ ಗುಂಪುಗಳಿಗೆ ನೀಡುತ್ತಿರುವ ಕಿರು ಸಾಲವೂ ಸಮಸ್ಯೆಯಾಗಿದೆ. ಸಾಲದ ಬಡ್ಡಿ ಕಟ್ಟಲಾಗದೆ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವರು ಊರು ತೊರೆದಿದ್ದಾರೆ.

ವಸಂತನರಾಸಪುರದಲ್ಲಿ ಸ್ಥಾಪನೆಯಾಗುತ್ತಿರುವ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯಕ್ಕೆ (ನಿಮ್ಜ್‌) ಎರಡು ಸಾವಿರ ಎಕರೆ ಭೂಮಿಯನ್ನು ರೈತರು ಕಳೆದುಕೊಂಡಿದ್ದಾರೆ. ಇಲ್ಲಿ ಆರಂಭವಾಗಲಿರುವ ಕೈಗಾರಿಕೆಗಳಲ್ಲಿ ಕೆಲಸ ಸಿಗಬಹುದೆಂಬ ಆಸೆಗಣ್ಣಿನಿಂದ ಯುವಕರು ನೋಡುತ್ತಿದ್ದಾರೆ. ಖಾಸಗಿ ಸೋಲಾರ್‌ ಪಾರ್ಕ್‌ಗಳು, ರೈಲು ಯೋಜನೆ, ವಿದ್ಯುತ್‌ ಮಾರ್ಗಕ್ಕೆ ಸಾವಿರಾರು ಎಕರೆ ಭೂಮಿ ಹೋಗಿದೆ.

ಶಾಶ್ವತ ನೀರಿನ ಸಮಸ್ಯೆ ಕ್ಷೇತ್ರದ ಪ್ರಮುಖ ವಿಷಯ. ಹೇಮಾವತಿ ನದಿ ನೀರನ್ನು ಕೆರೆಗಳಿಗೆ ಹರಿಸುವ ಭರವಸೆ ಮೇಲೆಯೇ ರಾಜಕೀಯ ನಡೆಯುತ್ತಿದೆ. ಇದರ ಜತೆಗೆ ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆ ಜಾರಿ ಚುನಾವಣಾ ವಿಷಯಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT