ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖರ್ಚಿಗೆ ರೊಕ್ಕ ಕೊಟ್ರ ವಾಪಸ್‌ ಕೊಟ್ಟವ್ರ ಹೆಚ್ಚು!

Last Updated 22 ಫೆಬ್ರುವರಿ 2018, 7:16 IST
ಅಕ್ಷರ ಗಾತ್ರ

ವಿಜಯಪುರ: ‘ನಮ್ದು ರೈತ ಕುಟುಂಬ. ಸೊಲ್ಲಾಪುರದಲ್ಲಿ ಜವಳಿ ಅಂಗಡಿ, ವಿಜಯಪುರದಲ್ಲಿ ಅಡತಿ ಅಂಗಡಿಯಿತ್ತು. ಸಾಕಷ್ಟು ಅನುಕೂಲವಿತ್ತು. ನಿತ್ಯ ಜನ್ರ ಒಡನಾಟವಿತ್ತು. ನಾನೂ ಯಾಕ ಎಂಎಲ್‌ಎ ಆಗ್ಬಾರದು ಅಂದ್ಕೊಂಡೆ. ರಾಜರಾಮ್‌ ಗಿರಿಧರಲಾಲ್‌ ದುಬೆ ಆಗ ಕಾಂಗ್ರೆಸ್‌ನಲ್ಲಿ ದೊಡ್ಡ ನಾಯಕರು. ಅವರ ಗರಡಿ ಸೇರಿದೆ. ಕಾಂಗ್ರೆಸ್‌ನಿಂದ 1967, 1972ರಲ್ಲಿ ಟಿಕೆಟ್‌ ಕೊಟ್ರು. ಆದ್ರೂ ಸ್ವತಂತ್ರ ಪಕ್ಷದ ಅಭ್ಯರ್ಥಿ ಎಂ.ಕೆ.ಸುರಪುರ ವಿರುದ್ಧ ಸೋತೆ'.

"ಸುರಪುರ ಅವರದ್ದು ದೊಡ್ಡ ಮನೆತನ. ಇಂಡಿಯಲ್ಲಿ ಬೃಹತ್‌ ವ್ಯಾಪಾರಿ. ಬಿ.ಡಿ.ಜತ್ತಿ ಜತೆ ಆತ್ಮೀಯತೆ ಹೊಂದಿದ್ದವರು. ಚುನಾವಣಾ ಸಮಯದಲ್ಲಿ ಪ್ರಚಾರ ನಡೆಸುವಾಗ ‘ಆರ್‌.ಆರ್.ಕಲ್ಲೂರ ಏನೇ ಮಾಡಿದ್ರೂ; ನಾ ಬದುಕಿರೋ ತನ್ಕ ಶಾಸಕನಾಗಲ್ಲ. ನಾ ಸತ್ತ ಮೇಲೆ ಅವ್ನೇ ಇಂಡಿ ಶಾಸಕ ಅನ್ತಿದ್ರು.’ ನಾ ಅವರಿಗೆ ಸಿಕ್ಕಿದಾಗ್ಲೂ ಕಲ್ಲೂರ ನಾ ಜೀವಂತ ಇರೋ ತನ್ಕ ಕಷ್ಟ ಪಡಬ್ಯಾಡ. ಆಮೇಲೆ ನೀನೇ ಶಾಸಕ ಆಗ್ತೀಯಾ ಕಣೋ ಅನ್ನೋರು'.

"1977ರ ಆಸುಪಾಸಿನಲ್ಲಿ ಸುರಪುರ ಮೃತಪಟ್ಟರು. 1978ರಲ್ಲಿ ಚುನಾವಣೆ ಘೋಷಣೆಯಾಯ್ತು. ವಿಜಾಪುರ ಜಿಲ್ಲೆಯಲ್ಲಿ ಜನತಾ ಪರಿವಾರದ ಅಲೆಯಿತ್ತು. ಯಾಡ್‌ ಬಾರಿ ಸೋತಿದ್ದರಿಂದ ಜನರ ಅನುಕಂಪವೂ ನನ್ನ ಮೇಲಿತ್ತು. ನಾವ್‌ ಐದಾರು ಮಂದಿ ಜನತಾ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸಿ, ಶಾಸಕರಾಗಿ ಆಯ್ಕೆಯಾದ್ವಿ’ ಎಂದು ಇಂಡಿ ವಿಧಾನಸಭಾ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದ ಮಾಜಿ ಶಾಸಕ ರೇವಣಸಿದ್ದಪ್ಪ ಆರ್‌.ಕಲ್ಲೂರ ತಾವು ಮೊದಲ ಬಾರಿಗೆ ಶಾಸಕನಾಗಿ ಆಯ್ಕೆ ಯಾದ ಅನುಭವವನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

ಮುಖ್ಯಮಂತ್ರಿಗಳ ಒಡನಾಡಿ: ‘ನಾ ಮೊದಲ ಬಾರಿ ಶಾಸಕ ನಾಗಿ ಆಯ್ಕೆ ಆದಾಗಿನಿಂದ ಮೂರನೇ ಬಾರಿ ಶಾಸಕನಾಗಿ ಆಯ್ಕೆಯಾದಾಗಲೂ ಮುಖ್ಯಮಂತ್ರಿಗಳ ಜತೆ ಚಲೋ ಒಡನಾಟ ಹೊಂದಿದ್ದೆ. ನೇರ ಸಂಪರ್ಕವಿತ್ತು.

ಮೊದ್ಲು ಶಾಸಕನಾದಾಗ ಜನತಾಪಕ್ಷದ ಸದಸ್ಯ. ಕಾಂಗ್ರೆಸ್‌ ಸರ್ಕಾರ ಅಸ್ತಿತ್ವದಲ್ಲಿತ್ತು. ಗುಂಡೂರಾವ್ ಮುಖ್ಯಮಂತ್ರಿ. ನಮ್ಮನ್ನು ಗೌರವ ಪೂರ್ವಕವಾಗಿ ನಡೆಸಿಕೊಂಡು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡ್ರು. ಕಲ್ಲೂರ ನೀ ಚಲೋ ಇದ್ದೀ. ಮಂತ್ರಿಯಾಗು ಅಂದಿದ್ರು. ಅದ್ಕೆ ನಾ ದುಬೆ ಶಿಷ್ಯ ಇದ್ದೀನಿ. ಮಂತ್ರಿ
ಯಾಗೋನಲ್ಲ. ಮಂತ್ರಿ ಮಾಡೋನು ಎಂದಿದ್ದೆ. ನಮ್ಮ ಬಿ.ಎಂ.ಪಾಟೀಲರನ್ನು ಮಂತ್ರಿಯನ್ನಾಗಿ ಮಾಡಿ ಅಂದಿದ್ದೆ’ ಎಂದು ಆರ್‌.ಆರ್‌.ಕಲ್ಲೂರ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

‘1983ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆಗ ನಾ ಕಾಂಗ್ರೆಸ್‌ ಎಂಎಲ್‌ಎ. ಬಳ್ಳೊಳ್ಳಿ ಮೀಸಲು ಕ್ಷೇತ್ರದಿಂದ ರಮೇಶ ಜಿಗಜಿಣಗಿ ಗೆದ್ದಿದ್ದ. ಬಾಂಬೆ ಕರ್ನಾಟಕ ಭಾಗದ ದಲಿತರನ್ನು ಯಾವೊಬ್ಬ ಮುಖ್ಯಮಂತ್ರಿಯೂ ಮಂತ್ರಿ ಮಾಡಿಲ್ಲ. ನೀವೂ ರಮೇಶನನ್ನು ಮಂತ್ರಿ ಮಾಡಿ ಎಂದು ಹೇಳಿದ್ದೆ’ ಎಂದರು.

‘1985ರಲ್ಲಿ ಕೆ.ಎಚ್‌.ಪಾಟೀಲ ಕೆಪಿಸಿಸಿ ಅಧ್ಯಕ್ಷ. ನಂಗೆ ಟಿಕೆಟ್‌ ತಪ್ಪಿಸಿದ್ರು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿತು. ಜನತಾಪಕ್ಷದ ಖೇಡ ಶಾಸಕರಾದ್ರು. 1989ರಲ್ಲಿ ವೀರೇಂದ್ರ ಪಾಟೀಲ ಕೆಪಿಸಿಸಿ ಅಧ್ಯಕ್ಷರಿದ್ದರು. ಇಂಡಿ ಟಿಕೆಟ್‌ ನಂಗೆ ಮತ್ತೆ ನೀಡಿದರು. 8,716 ಮತಗಳಿಂದ ಶಾಸಕನಾಗಿ ಮೂರನೇ ಬಾರಿಗೆ ಆಯ್ಕೆಯಾದೆ. ವೀರೇಂದ್ರ ಪಾಟೀಲರಿಗೆ ತುಂಬಾ ನಿಷ್ಠೆಯಿಂದ ಇದ್ದೆ. ಅಧಿಕಾರ ಕಳೆದುಕೊಂಡು, ಕಾಂಗ್ರೆಸ್‌ನಿಂದ ಸಸ್ಪೆಂಡ್‌ ಆದ್ರೂ ಅವರ ಜತೆಗೆ ಇದ್ದೆ. ಗುಂಡೂರಾವ್‌, ಬಂಗಾರಪ್ಪ, ಮೊಯ್ಲಿ, ಖರ್ಗೆ, ಧರ್ಮಸಿಂಗ್ ಬಂದು ಹೇಳಿದ್ರೂ ನಾ ಕೇಳಿರಲಿಲ್ಲ. ಪಕ್ಷದ ಹೈಕಮಾಂಡ್‌ ನಿನ್ನ ಸಸ್ಪೆಂಡ್‌ ಮಾಡ್ತೀವಿ ಅಂತ ನೋಟಿಸ್ ಪತ್ರ ಕಳಿಸಿದ ಮೇಲೆ ಪಾಟೀಲರ ಸಹವಾಸ ಬಿಟ್ಟೆ’ ಎಂದು ನೆನಪಿಸಿಕೊಂಡ ಅವರು, ‘1994ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದೆ. ಜಾತಿ ರಾಜಕಾರಣ ಪ್ರವೇಶಿಸಿತು. ಸೋತೆ. ನಂತರ ಸಕ್ರಿಯ ರಾಜಕಾರಣದಿಂದ ದೂರವುಳಿದೆ’ ಎಂದರು.

‘ನನ್ನನ್ನು ಪಂಪ್‌ಸೆಟ್‌ ಕಲ್ಲೂರ ಅಂತ ಕರೆಕ ಶುರು ಮಾಡಿದ್ರು...‘

‘ತೆರೆದ ಬಾವಿಯ ನೀರಾವರಿ ಆಸರೆ ಹೊಂದಿದ್ದ ರೈತರು 1970–80ರ ದಶಕದಲ್ಲಿ ಪಂಪ್‌ಸೆಟ್‌ ಕೂರಿಸುವುದು ಚಾಲ್ತಿಯಾಗಿತ್ತು. ಇದಕ್ಕೆ ಸರ್ಕಾರ ಮೀಟರ್‌ ಅಳವಡಿಸಿ, ರೈತರಿಂದ ಶುಲ್ಕ ವಸೂಲಿ ಮಾಡುತ್ತಿತ್ತು. ದೊಡ್ಡ ರೈತರಿಗೆ ಹೊರೆಯಾಗ್ತಿರಲಿಲ್ಲ. ಸಣ್ಣ, ಮಧ್ಯಮ ರೈತರು ತ್ರಾಸಿಗೆ ಸಿಲುಕಿದ್ದರು.

ಒಮ್ಮೆ ಗುಂಡೂರಾವ್‌ ವಿಭಾಗ ಮಟ್ಟದ ಅಧಿಕಾರಿಗಳ ಸಭೆ ನಡೆಸುವ ಸಂದರ್ಭ, ಪಂಪ್‌ಸೆಟ್‌ನ ವಿದ್ಯುತ್‌ ಶುಲ್ಕ ಕಟ್ಟಲು ತ್ರಾಸಾಗುತ್ತೆ ಎಂದು ಮನವರಿಕೆ ಮಾಡಿಕೊಟ್ಟೆ.

ಏನ್‌ ಮಾಡಿದ್ರೇ ಒಳ್ಳೆದಾಗುತ್ತೆ ಕಲ್ಲೂರ ಅಂಥ ನನ್ನನ್ನೇ ಕೇಳಿದ್ರು. ವರ್ಷಕ್ಕಿಷ್ಟು ಅಂಥ ಶುಲ್ಕ ನಿಗದಿಪಡಿಸಿ. ರೈತರು ಅದನ್ನು ಕಟ್ಟಿಕೊಂಡು ನಿರುಮ್ಮಳರಾಗಿ ನೀರಾವರಿಯಲ್ಲಿ ಬೆಳೆ ಬೆಳೆಯುತ್ತಾರೆ ಅಂದೆ. ಅದರಂತೆ ಬಾವಿಯಿಂದ ನೀರೆತ್ತಲು ಐದು ಎಚ್‌.ಪಿ. ಒಳಗಿನ ಪಂಪ್‌ಸೆಟ್‌ ಬಳಸುವ ರೈತರಿಗೆ ವಾರ್ಷಿಕ ಒಂದು ಎಚ್‌.ಪಿ.ಗೆ ₹ 50 ನಿಗದಿ ಪಡಿಸಿದರು. ಇದು ರಾಜ್ಯದ ಎಲ್ಲೆಡೆ ಅನುಷ್ಠಾನಗೊಂಡಿತು. ಅಂದಿನಿಂದ ಎಲ್ಲರೂ ನನ್ನನ್ನು ‘ಪಂಪ್‌ಸೆಟ್‌ ಕಲ್ಲೂರ’ ಎಂದು ಕರೆಯಲಾರಂಭಿಸಿದರು.

ಇದರ ಸವಿ ನೆನಪಿಗಾಗಿ 1982ರಲ್ಲಿ ಇಂಡಿಯಲ್ಲಿ ಬೃಹತ್ ಸಮಾರಂಭ ಆಯೋಜಿಸಿದೆ. ಹಲವು ಎಡರು ತೊಡರುಗಳ ನಡುವೆ ಗುಂಡೂರಾವ್ ಭಾಗಿಯಾದರು. ಅವರಿಗೆ 9 ಕೆ.ಜಿ. ತೂಕದ ಬೆಳ್ಳಿಯ ಪಂಪ್‌ಸೆಟ್‌ ನೀಡಿ ಗೌರವಿಸಿದೆವು. ಇಂದಿಗೂ ಬೆಳ್ಳಿ ಪಂಪ್‌ಸೆಟ್‌ ಗುಂಡೂರಾವ್‌ ಮನೆಯಲ್ಲಿದೆ’ ಎಂದು ಕಲ್ಲೂರ ಹೇಳಿದರು.

‘ಗಾಣಿಗ ಸಮುದಾಯ 2 ಎ ಗೆ ಸೇರ್ಪಡೆ’

‘ಎಂ.ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಿದ್ದರು. ಮೀಸಲಾತಿ ವರ್ಗೀಕರಣ ನಡೆದಿತ್ತು. ವಿಜಾಪುರಕ್ಕೆ ಸರ್ಕಾರಿ ಕಾರ್ಯಕ್ರಮದ ಅಂಗವಾಗಿ ಬಂದಿದ್ದರು. ಊಟಕ್ಕೆ ಮನೆಗೆ ಕರೆದಿದ್ದೆ. ಹೇಳಿದಂತೆ ಮೊಯ್ಲಿ ಬಂದರು. ಊಟದ ಬಳಿಕ ಕುಶಲೋಪರಿ ಮಾತನಾಡುವಾಗ ಮೀಸಲಾತಿ ವರ್ಗೀಕರಣ ವಿಷಯ ಪ್ರಸ್ತಾಪಿಸಿದೆ.

ಗಾಣಿಗ ಸಮುದಾಯವನ್ನು 2 ಎಗೆ ಸೇರ್ಪಡೆ ಮಾಡಬೇಕು ಎಂದು ಮನವಿ ಮಾಡಿದೆ. ಆಗ ನನ್ನ ಜತೆಯಲ್ಲಿದ್ದ ಸಮಾಜದ ಮುಖಂಡರಾದ ವಕೀಲ ಎನ್‌.ಎಸ್‌.ಲೋಣಿ, ಕೊಲ್ಹಾರದ ಅಣ್ಣಾಸಾಬ್‌ ಎಸ್.ದೇಸಾಯಿ ದನಿ ಗೂಡಿಸಿದರು. ಮೊಯ್ಲಿ ಒಪ್ಪಿದರು.

ಯಾವುದೇ ಹೋರಾಟ, ಮುಷ್ಕರ, ಪ್ರತಿಭಟನೆ, ಮನವಿಯಿಲ್ಲದೆ ಗಾಣಿಗ ಸಮುದಾಯ 2 ಎ ಪಟ್ಟಿಗೆ ಸೇರಿತು. ಅಂದಿನಿಂದಲೂ ಸಮಾಜಕ್ಕೆ ಸರ್ಕಾರಿ ಸೌಲಭ್ಯ ಸಿಕ್ಕಿವೆ. ಇದು ನನ್ನ ಜೀವನದಲ್ಲಿ ಸಮಾಜಕ್ಕೆ ನೀಡಿದ ದೊಡ್ಡ ಕೊಡುಗೆ ಎಂದರೂ ತಪ್ಪಾಗಲಾರದು’ ಎಂದು ಕಲ್ಲೂರ ಹಿಂದಿನ ಘಟನಾವಳಿಗಳನ್ನು ಸ್ಮರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT