ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಗ್ರಪ್ಪ ಸ್ಪರ್ಧೆಗೆ ವಿರೋಧ’

Last Updated 22 ಫೆಬ್ರುವರಿ 2018, 10:29 IST
ಅಕ್ಷರ ಗಾತ್ರ

ಚಳ್ಳಕೆರೆ: ‘ವಿಧಾನ ಪರಿಷತ್ ಸದಸ್ಯರಾಗಿರುವ ವಿ.ಎಸ್.ಉಗ್ರಪ್ಪ ಮೊಳಕಾಲ್ಮುರು ವಿಧಾನ ಸಭೆ ಕ್ಷೇತ್ರದಲ್ಲಿ ಸ್ಪರ್ಧಿಸುವುದನ್ನು ವಿರೋಧಿ
ಸುತ್ತೇವೆ’ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂ.ವಿಜಯ ನಾಯಕ ತಿಳಿಸಿದರು. ನಗರದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮೊಳಕಾಲ್ಮುರು ವಿಧಾನಸಭೆ ಕ್ಷೇತ್ರಕ್ಕೆ ಈಚೆಗೆ ಬಂದಿದ್ದ ವಿ.ಎಸ್.ಉಗ್ರಪ್ಪ ತಾವು ಕಾಂಗ್ರೆಸ್‍ನಿಂದ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದಾರೆ. ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾಗಿರುವ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಸಮಂಜಸವಲ್ಲ. ಶಾಸಕರಾಗುವ ಇಚ್ಛೆಯಿದ್ದರೆ ಅವರು ವಾಸವಿರುವ ಎಚ್‌ಎಸ್‌ಆರ್ ಲೇಔಟ್‌ನ ಬೊಮ್ಮನಹಳ್ಳಿಯಲ್ಲಿ ಚುನಾವಣೆಗೆ ಸ್ಪರ್ಧಿಸಲಿ ಎಂದು ಹೇಳಿದರು.

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಭಾವವಿರುವ ಇವರು ಮೀಸಲು ಕ್ಷೇತ್ರ ಹೊರತು ಪಡಿಸಿ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲಿ. ಮೀಸಲು ಕ್ಷೇತ್ರಗಳಲ್ಲಿ ಹಲವಾರು ವರ್ಷಗಳಿಂದ ಪಕ್ಷಕ್ಕೆ ದುಡಿದಿರುವ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಲಿ ಎಂದರು.

ಬಳ್ಳಾರಿ ಗ್ರಾಮೀಣ ಶಾಸಕ ಎನ್.ವೈ.ಗೋಪಾಲಕೃಷ್ಣ ಕಳೆದ ಬಾರಿ ಮೊಳಕಾಲ್ಮುರು ವಿಧಾನಸಭೆ ಕ್ಷೇತ್ರದಲ್ಲಿ ಪರಾಜಯ ಹೊಂದಿದ್ದರು. ನಂತರ ಪಕ್ಷವೂ ಅವರನ್ನು ಬಳ್ಳಾರಿ ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ ನಿಲ್ಲಿಸಿ, ಗೆಲುವು ಸಾಧಿಸಲು ಸಹಕರಿಸಿತ್ತು. ಈ ಕಾರಣದಿಂದಾಗಿ ಬಳ್ಳಾರಿ ಕ್ಷೇತ್ರದ ಮತದಾರರ ಶ್ರಮ ಮತ್ತು ಪಕ್ಷದ ಋಣ ತೀರಿಸಲು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧಿಸಲಿ. ಮೊಳಕಾಲ್ಮುರಿನಿಂದ ಸ್ಪರ್ಧೆ ಮಾಡಬಾರದು ಎಂದು ತಿಳಿಸಿದರು.

‘ಮೊಳಕಾಲ್ಮುರು ಕ್ಷೇತ್ರದಲ್ಲಿ ನಾನು ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯ ಡಾ.ಬಿ.ಯೋಗೇಶ್‍ಬಾಬು ಟಿಕೆಟ್ ಆಕಾಂಕ್ಷಿಗಳಾಗಿದ್ದೇವೆ. ತಮಗೆ ಟಿಕೆಟ್ ನೀಡಿದರೆ, ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಿ ಅಧಿಕಾರ ಪಡೆಯುತ್ತೇವೆ. ವಿ.ಎಸ್.ಉಗ್ರಪ್ಪ ಅವರಿಗೆ ಟಿಕೆಟ್ ನೀಡಿದರೆ, ನಮ್ಮ ಬೆಂಬಲ ಇಲ್ಲ. ಈ ಬಗ್ಗೆ ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರು ಒಮ್ಮತದ ಅಭಿಪ್ರಾಯ ಹೊಂದಿದ್ದು, ಹೈಕಮಾಂಡ್ ಸೂಕ್ತ ವ್ಯಕ್ತಿಗೆ ಟಿಕೆಟ್ ನೀಡಬೇಕು’ ಎಂದು ಕೋರಿದರು.

ಕಾಂಗ್ರೆಸ್‍ಗಾಗಿ ಕಳೆದ 25 ವರ್ಷಗಳಿಂದ ದುಡಿದಿದ್ದು, ಪಕ್ಷ ನಮ್ಮ ಸೇವೆಯನ್ನು ಗುರುತಿಸಿ ಟಿಕೆಟ್ ನೀಡುವ ವಿಶ್ವಾಸ ಇದೆ. ಮೊಳಕಾಲ್ಮುರು ಕ್ಷೇತ್ರದಲ್ಲಿ ಸಹ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಲಾಗಿದ್ದು, ಪಕ್ಷದ ಗೆಲುವಿಗಾಗಿ ಶ್ರಮಿಸಲಾಗುತ್ತಿದೆ. ಆದ್ದರಿಂದ ಹೊಸಬರಿಗೆ ಟಿಕೆಟ್ ನೀಡುವ ಅಗತ್ಯವಿದೆ ಎಂದು ಒತ್ತಾಯಿಸಿದರು.

ಮುಖಂಡರಾದ ಮಂಜುನಾಥ, ಮಹದೇವಪ್ರಸಾದ್, ಚೌಳಕೆರೆ ಕರಿಬಸಪ್ಪ, ತಿಪ್ಪೇಶ್, ರಾಯಪುರ ಓಬಣ್ಣ, ಈರಣ್ಣ, ಮಲ್ಲೂರಹಳ್ಳಿ, ನಾಯಕನಹಟ್ಟಿ ಬೋರಯ್ಯ, ರಾಮಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT