ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆ.ಪಿ. ಪ್ರೇರಣೆಯೇ ‘ಜನಪ್ರತಿನಿಧಿ’ ಮಾಡಿತು

Last Updated 22 ಫೆಬ್ರುವರಿ 2018, 10:47 IST
ಅಕ್ಷರ ಗಾತ್ರ

ಶಿಗ್ಗಾವಿ: ‘ಮಾಜಿ ಮುಖ್ಯಮಂತ್ರಿ ಮಗನಾದರೂ, ರಾಜಕೀಯಕ್ಕೆ ಬರುತ್ತೇನೆ ಎಂದು ಭಾವಿಸಿರಲಿಲ್ಲ. ನಾನು, ಎಂಜಿನಿಯರಿಂಗ್ ಪದವಿ ಮುಗಿಸಿ, ಉದ್ಯೋಗ– ಉದ್ಯಮದಲ್ಲಿ ಮುಂದುವರಿಯುತ್ತಿದ್ದೆ. ಆದರೆ, ಲೋಕ ನಾಯಕ ಜಯಪ್ರಕಾಶ ನಾರಾಯಣ (ಜೆಪಿ) ವಿಚಾರಧಾರೆಗಳ ಪ್ರಭಾವ, ಗ್ರಾಮೀಣರ ಬದುಕಿನಲ್ಲಿ ಪರಿವರ್ತನೆಯ ತುಡಿತ, ಕೃಷಿಯಲ್ಲಿ ಕ್ರಾಂತಿ, ರೈತರ ಅಭ್ಯುದಯ, ಅಸಮಾನತೆ ನಿವಾರಣೆ ಮತ್ತಿತರ ಕನಸುಗಳು ನನ್ನನ್ನು ಜನಪರ ಹೋರಾಟಕ್ಕೆ ಸೆಳೆದು ತಂದಿತು. ನನ್ನನ್ನು ಜನ ‘ಪ್ರತಿನಿಧಿ’ ಮಾಡಿದರು.

ಮೊದಲ ಬಾರಿ ಶಾಸಕರಾದ ಅನುಭವದ ಕುರಿತು ‘ಪ್ರಜಾವಾಣಿ’ ಜೊತೆ ಶಾಸಕ, ಮಾಜಿ ಸಚಿವ ಬಸವರಾಜ ಬೊಮ್ಮಾಯಿ ನೆನಪುಗಳ ಬುತ್ತಿಯನ್ನು ಬಿಚ್ಚಿಟ್ಟರು. ಮಾಜಿ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ಪುತ್ರರಾದರೂ, ಕೇವಲ ನೆರಳಿನಲ್ಲಿ ಉಳಿಯದೇ ಜಲಸಂಪನ್ಮೂಲ, ಗ್ರಾಮೀಣ ಅಭಿವೃದ್ಧಿ, ಕೃಷಿ ಕ್ಷೇತ್ರದಲ್ಲಿ ಕೊಡುಗೆ ನೀಡಿದವರು. ವಿಧಾನ ಪರಿಷತ್ ಸದಸ್ಯರಾಗಿ, ವಿಧಾನಸಭೆಯ ಸದಸ್ಯರಾಗಿ, ಸಚಿವರಾಗಿ ಕ್ಷೇತ್ರ ಮತ್ತು ರಾಜ್ಯದಲ್ಲಿ ತಮ್ಮದೇ ಛಾಪು ಬೀರಿದವರು.

‘ನನಗೆ ಕಾಲೇಜಿನಲ್ಲಿ ಓದುತ್ತಿರುವಾಗಲೇ ಜೆ.ಪಿ. ಅವರ ಕ್ರಾಂತಿಕಾರಕ ವಿಚಾರಗಳು ಪ್ರೇರಣೆ ನೀಡಿದ್ದವು. ಹೀಗಾಗಿ 1997ರಲ್ಲಿ ಧಾರವಾಡದ ಸ್ಥಳೀಯಾಡಳಿತ ಸಂಸ್ಥೆಗಳ ಕ್ಷೇತ್ರದಿಂದ ಮೊದಲ ಬಾರಿಗೆ ಜನತಾ ದಳದಿಂದ (ಜೆಡಿ) ಅಭ್ಯರ್ಥಿಯಾಗಿ ವಿಧಾನ ಪರಿಷತ್‌ಗೆ ಸ್ಪರ್ಧಿಸಿದೆನು. ಆಗ, ನಮ್ಮ ವಿರುದ್ಧ ಸಾಕಷ್ಟು ಅಪಪ್ರಚಾರಗಳು ನಡೆಯಿತು. ಆಶ್ಚರ್ಯಕರ ರೀತಿಯಲ್ಲಿ ಅತಿ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಿದ್ದೆನು’ ಎಂದು ನೆನಪಿಸಿಕೊಂಡರು.

‘ಆಗ, ಕರ ಪತ್ರಗಳ ಮೂಲಕ ಪ್ರಚಾರ ಮಾಡುತ್ತಿದ್ದೆವು. ಕರಪತ್ರಗಳನ್ನು ಮತದಾರರ ಮನೆ ಮನೆಗೆ ತೆರಳಿ ನೀಡುತ್ತಿದ್ದೆವು. ವಾಹನ, ಧ್ವನಿವರ್ಧಕಗಳ ಅಬ್ಬರ ಇರಲಿಲ್ಲ. ಫ್ಲೆಕ್ಸ್ , ಬ್ಯಾನರ್‌ಗಳಿಲ್ಲ. ಹೀಗಾಗಿ, ಖರ್ಚು ವೆಚ್ಚಗಳು ತೀರಾ ಕಡಿಮೆ. ಬಹುತೇಕವಾಗಿ ಅಭ್ಯರ್ಥಿಗಳು ಸೇರಿದಂತೆ, ಮುಖಂಡರು, ಕಾರ್ಯಕರ್ತರೆಲ್ಲ ಆಗಾಗ್ಗೆ ಮುಖಾಮುಖಿ ಆಗುತ್ತಿದ್ದೆವು’ ಎಂದರು.

‘ಸತತ ಎರಡು ವಿಧಾನ ಪರಿಷತ್ ಸದಸ್ಯನಾದೆನು. ಆಗ ಜನರ ಒಡನಾಟ ಹೆಚ್ಚಿತ್ತು. ಜನರ ನಡುವೆ ರಾಜಕಾರಣದ ಆಯ್ಕೆ ಎದುರಾಯಿತು. 2008ರಲ್ಲಿ ಶಿಗ್ಗಾವಿ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಆಯ್ಕೆಯಾದೆನು. ‘ರಾಜಕಾರಣ’ ಎಂದರೆ ಜನರ ಒಡನಾಟದಲ್ಲಿ ಸದಾ ಕಾಲ ಇರುವುದಾಗಿದ್ದು, ಅದೇ ನನ್ನ ಬದುಕಾಯಿತು. ಶಿಗ್ಗಾವಿ–ಸವಣೂರ ಜನತೆಗೆ ನಾನು ಚಿರಋಣಿ’ ಎಂದು ಹೇಳಿದರು.

‘ನಾನು ಎದುರಿಸಿದ ವಿಧಾನ ಪರಿಷತ್ ಹಾಗೂ ವಿಧಾನ ಸಭೆಯ ಚುನಾವಣೆಗಳು ವಿಭಿನ್ನವಾಗಿದ್ದವು. ಒಂದು ದಶಕದ ಅಂತರವು ಇತ್ತು. ಹೀಗಾಗಿ ಇವೆರಡೂ ನನಗೆ ಮೊದಲ ಅನುಭವ ನೀಡಿದರೂ, ವಿಭಿನ್ನವಾಗಿತ್ತು. ಈಗ ಇನ್ನಷ್ಟು ಬದಲಾಗಿದೆ’ ಎಂದರು.

‘ಉತ್ತರ ಕರ್ನಾಟಕಕ್ಕೆ ಅನ್ಯಾಯ, ಅಸಮಾನತೆ ವಿರುದ್ಧದ ಹೋರಾಟ, ನಂಜುಂಡಪ್ಪ ಸಮಿತಿ ರಚನೆ ಪ್ರಯತ್ನ, ಬರ ನಿರ್ವಹಣೆಗೆ ಹೊಸ ಆಯಾಮ, ನೀರಾವರಿ ಯೋಜನೆಯಲ್ಲಿ ಹೊಸ ಆಯಾಮ, ಕಳಸಾ ಬಂಡೂರಿ ಯೋಜನೆಗೆ ಮೊದಲ ಬಾರಿಗೆ ಧ್ವನಿ ಎತ್ತಿದ ತೃಪ್ತಿ ಇದೆ’ ಎಂದು ಹೇಳಿದರು.

‘ಬೆಣ್ಣಿ ಹಳ್ಳ ತಿರುವು ಯೋಜನೆ, ಸವಣೂರ ಮೋತಿ ತಲಾಬ್‌ಗೆ ನೀರು. ಕಲಘಟಗಿ ತಾಲ್ಲೂಕಿನ ಗಳಗನಗಟ್ಟಿ ಏತ ನೀರಾವರಿ ಯೋಜನೆಗಳು ಸಾಧ್ಯವಾಯಿತು’ ಎಂದು ತಿಳಿಸಿದರು.

‘ಶಾಸಕನಾದ ಮೊದಲ ಅವಧಿಯಲ್ಲೇ ಜಲ ಸಂಪನ್ಮೂಲ ಸಚಿವನೂ ಆದೆನು. ಇಡೀ ರಾಜ್ಯ ನೀರಾವರಿ ಯೋಜನೆ ನೀಡಲು ಸಾಧ್ಯವಾಯಿತು. ಸುಮಾರು 7 ಲಕ್ಷ ಎಕರೆ ನೀರಾವರಿ ಭೂಮಿ ರೂಪಿಸಲಾಯಿತು. ನನಗುದಿಗೆ ಬಿದ್ದ 15 ಹಳೇ ಯೋಜನೆಗಳನ್ನು ಇತ್ಯರ್ಥ ಪಡಿಸಲಾಯಿತು. ಸುಮಾರು 19 ಹೊಸ ಯೋಜನೆಗಳನ್ನು ಆರಂಭಿಸಲಾಯಿತು. ಸುಮಾರು 2.5 ಲಕ್ಷ ಎಕರೆ ಸವಳು– ಜವಳು ಭೂಮಿಯನ್ನು ಸರಿಪಡಿಸಿ ಕೃಷಿಗೆ ಯೋಗ್ಯ ಮಾಡಿಕೊಡಲಾಯಿತು. ಶಿಗ್ಗಾವಿ ಏತ ನೀರಾವರಿ ಯೋಜನೆ ಮೂಲಕ ಸುಮಾರು 24ಸಾವಿರ ಎಕರೆ ಭೂಮಿಗೆ ಹನಿ ನೀರಾವರಿ ಅನುಷ್ಠಾನಗೊಳಿಸಲಯಿತು. ಸವಣೂರ ಏತ ನೀರಾವರಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳು ಸಾಧ್ಯವಾಯಿತು’ ಎಂದು ಹೇಳಿದರು.

‘‘ಕ್ಷೇತ್ರಕ್ಕೆ ಅಂಟಿದ ‘ಹಿಂದುಳಿದ ತಾಲ್ಲೂಕು’ ಎಂಬ ಹಣೆಪಟ್ಟಿಯನ್ನು ದೂರ ಮಾಡುವುದು ನನ್ನ ಮೊದಲ ಪ್ರಯತ್ನವಾಗಿತ್ತು. ಹೀಗಾಗಿ ನಮ್ಮ ಕ್ಷೇತ್ರವು ಅಭಿವೃದ್ಧಿ ಪಥದಲ್ಲಿದೆ. ಸಾಕಷ್ಟು ಸವಾಲುಗಳಿದ್ದು, ಎದುರಿಸಲು ಸನ್ನದ್ಧನಾಗಿದ್ದೇನೆ’’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾಧನೆಗಳ ಹಿಂದೆ...

ತಂದೆ ಎಸ್‌.ಆರ್‌.ಬೊಮ್ಮಾಯಿ ಕಾಯಕ ಬದ್ಧತೆ, ನಿಷ್ಠೆ, ಪ್ರಾಮಾಣಿಕತೆ ಹಾಗೂ ವೈಜಾರಿಕ ಮಾರ್ಗದರ್ಶನ ಹಾಗೂ ತಾಯಿ ಗಂಗಮ್ಮ ಅವರ ಆಧ್ಯಾತ್ಮಿಕ ಚಿಂತನೆಗಳು, ಉತ್ತಮ ಸಂಸ್ಕಾರಗಳು ವ್ಯಕ್ತಿತ್ವ ರೂಪಿಸಲು ಸಹಕಾರಿಯಾಯಿತು. ಎಂಜಿನಿಯರಿಂಗ್ ಶಿಕ್ಷಣ ಪಡೆದು, ಪುಣೆಯ ಟಾಟಾ ಮೋಟರ್ಸ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೆನು. ಬಳಿಕ ಸ್ವಂತ ಕೈಗಾರಿಕೆ ಆರಂಭಿಸಿದೆ. ಹೀಗೆ ಬದುಕಿನ ಬಂಡಿ ಸಾಗುತ್ತಿದೆ ಎಂದು ಮುಗುಳ್ನಕ್ಕರು.

* * 

ಎರಡು ದಶಕಗಳ ಹಿಂದೆ ಮೊದಲ ಬಾರಿ ಎದುರಿಸಿದ ಚುನಾವಣೆ ಹಾಗೂ ಇಂದಿನ ಚುನಾವಣೆಯ ಖರ್ಚು –ವೆಚ್ಚಗಳ ನಡುವೆ ಅಜ–ಗಜಾಂತರ ವ್ಯತ್ಯಾಸ
ಬಸವರಾಜ ಬೊಮ್ಮಾಯಿ
ಶಾಸಕರು, ಶಿಗ್ಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT