ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿಬೆಟ್ಟದ ತಪ್ಪಲಲ್ಲಿ ಕಾಡ್ಗಿಚ್ಚು

ನೂರಾರು ಎಕರೆ ಪ್ರದೇಶದಲ್ಲಿ ಬಾದೆ ಹುಲ್ಲು ಭಸ್ಮ
Last Updated 22 ಫೆಬ್ರುವರಿ 2018, 16:47 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ನಂದಿಬೆಟ್ಟದ ತಪ್ಪಲಲ್ಲಿ ಗುರುವಾರ ಮಧ್ಯಾಹ್ನ ಕಾಡ್ಗಿಚ್ಚು ಕಾಣಿಸಿಕೊಂಡು ನೂರಾರು ಎಕರೆ ಪ್ರದೇಶದಲ್ಲಿದ್ದ ಬಾದೆ ಹುಲ್ಲು ಭಸ್ಮವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನು ನಂದಿಸಿ ಪರಿಸ್ಥಿತಿ ಹತೋಟಿಗೆ ತಂದರು.

ಬೆಟ್ಟದ ತಪ್ಪಲು ಪ್ರದೇಶಕ್ಕೆ ಹೊಂದಿಕೊಂಡಿರುವ ಅಂಗಟ್ಟ ಗ್ರಾಮದ ಬಳಿ ಬೆಂಕಿ ಹೊತ್ತಿಕೊಂಡಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಅರಣ್ಯ ಇಲಾಖೆಯ 25 ಸಿಬ್ಬಂದಿ ಮಧ್ಯಾಹ್ನ 1ರಿಂದ ರಾತ್ರಿ 7.30 ವರೆಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

‘ಬೆಟ್ಟದಲ್ಲಿ ಮಳೆಗಾಲದಲ್ಲಿ  ದನಕರು ಮೇಯಿಸಲು ಹುಲ್ಲು ಚೆನ್ನಾಗಿ ಬೆಳೆಯಲಿ ಎನ್ನುವ ಉದ್ದೇಶಕ್ಕೆ ರೈತರು ಆಗಾಗ ಅರಣ್ಯಕ್ಕೆ ಬೆಂಕಿ ಹಾಕುತ್ತಿರುತ್ತಾರೆ. ಆ ರೀತಿ ಇಲ್ಲಿ ಬೆಂಕಿ ಹಾಕಿರುವ ಸಾಧ್ಯತೆ ಇದೆ. ಬೆಂಕಿಯಿಂದ ಗಿಡಮರಗಳಿಗೆ ಹಾನಿ ಆಗಿಲ್ಲ. ಪಕ್ಷಿಗಳ ಗೂಡುಗಳು ಸುಟ್ಟಿರುವುದು ಹೊರತುಪಡಿಸಿದಂತೆ ಪ್ರಾಣಿ, ಪಕ್ಷಿಗಳು ಬೆಂಕಿಗೆ ಆಹುತಿ ಆಗಿಲ್ಲ’ ಎಂದು ವಲಯ ಅರಣ್ಯಾಧಿಕಾರಿ ವಿಕ್ರಂ ರೆಡ್ಡಿ ತಿಳಿಸಿದರು.


ಬೆಟ್ಟದ ತಪ್ಪಲಲ್ಲಿ ಹರಡುತ್ತಿರುವ ಬೆಂಕಿಯ ಕೆನ್ನಾಲಿಗೆ

‘ದಿನವೀಡಿ ಶ್ರಮಿಸಿ ಬೆಟ್ಟದಲ್ಲಿ ಬೆಂಕಿ ವ್ಯಾಪಿಸುವುದನ್ನು ತಡೆದಿದ್ದೇವೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬೆಟ್ಟದ ತುದಿಯಲ್ಲಿ ಮಾತ್ರ ಸ್ವಲ್ಪ ಬೆಂಕಿ ಉಳಿದಿದೆ. ಆದರೆ ನಾವು ಅಲ್ಲಿ ವರೆಗೆ ಏರಿ ಬೆಂಕಿ ನಂದಿಸಲು ಆಗುತ್ತಿಲ್ಲ. ರಾತ್ರಿ ಕಾಡ್ಗಿಚ್ಚಿನ ಸ್ಥಳದಲ್ಲಿಯೇ ಬೀಡು ಬಿಟ್ಟಿರುವ ನಮ್ಮ ಸಿಬ್ಬಂದಿ ಪರಿಸ್ಥಿತಿ ಮೇಲೆ ನೀಗಾ ಇಟ್ಟಿದ್ದಾರೆ ’ ಎಂದು ಹೇಳಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಅವರು ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT