ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನಿ ಸಿನಿಮಾ ನೋಡುವಾಸೆ

Last Updated 22 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಜಾಗತಿಕ ಮಟ್ಟದ ಅತ್ಯುತ್ತಮ ಸಿನಿಮಾಗಳನ್ನು ವೀಕ್ಷಿಸಲು ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಉತ್ತಮ ವೇದಿಕೆ. ಈ ಉತ್ಸವದಿಂದ ಕನ್ನಡ ಚಿತ್ರರಂಗವು ಹಲವು ಆಯಾಮಗಳಲ್ಲಿ ಲಾಭಗಳಿದೆ. ಸಿನಿಮಾದ ಬಗ್ಗೆ ಆಸಕ್ತಿ ಇರುವ ಯುವಜನಾಂಗ ಸಿನಿಮೋತ್ಸವದಲ್ಲಿ ಅಪ್‌ಡೇಟ್ ಆಗುತ್ತದೆ. ಬೇರೆ ದೇಶಗಳಲ್ಲಿ ಚಿತ್ರಕತೆಯ ಆಯ್ಕೆ ಹೇಗಿರುತ್ತೆ? ಅಲ್ಲಿನ ನಿರ್ದೇಶನ ಯಾವ ರೀತಿ ಇರುತ್ತದೆ... ಇತ್ಯಾದಿ ಬಗ್ಗೆ ಅರಿಯಬಹುದು.

ನಮ್ಮಲ್ಲಿ ಸಿನಿಮಾ ಅಂದರೆ ಬರೀ ಕಮರ್ಷಿಯಲ್ ಅಂತ ಭಾವಿಸುವ ಪರಿಪಾಠವಿದೆ. ಆದರೆ, ಇದನ್ನು ಹೊರತುಪಡಿಸಿಯೂ ಬೇರೆ ರೀತಿಯ ಸಿನಿಮಾಗಳಿವೆ ಎಂದು ಸಿನಿಮೋತ್ಸವದಿಂದ ತಿಳಿಯುತ್ತದೆ. ಪ್ರತಿವರ್ಷವೂ ಸಿನಿಮೋತ್ಸವದಲ್ಲಿ ಆಯಾ ವರ್ಷದ ವಿಶ್ವದ ಅತ್ಯುತ್ತಮ ಮತ್ತು ಜನಪ್ರಿಯ ಸಿನಿಮಾಗಳನ್ನು ಆಯ್ಕೆ ಮಾಡಿರುತ್ತಾರೆ. ಇಂಥ ಕೆಲ ಸಿನಿಮಾಗಳನ್ನು ಆನ್‌ಲೈನ್‌ನಲ್ಲಿ ನೋಡಬಹುದಾದರೂ ಸಿನಿಮಾ ಮಂದಿರಗಳಲ್ಲಿ ದೊಡ್ಡ ಪರದೆಯಲ್ಲಿ ನೋಡುವ ಖುಷಿಯೇ ಬೇರೆ. ಅಂಥ ಸಂಭ್ರಮವನ್ನು ಸಿನಿಮೋತ್ಸವದಲ್ಲಿ ಅನುಭವಿಸಬಹುದು.

ಈ ಬಾರಿ ಚಿತ್ರಕಥಾ ಕಮ್ಮಟ ನಡೆಯುತ್ತಿದೆ. ಇದು ಒಳ್ಳೆಯ ಕ್ರಮ. ಒಬ್ಬೊಬ್ಬರಿಗೂ ಕಥಾ ರಚನೆಯಲ್ಲಿ ಒಂದೊಂದು ಶೈಲಿಯಿದೆ. ಒಂದೇ ರೀತಿಯ ಚಿತ್ರಕಥೆಗಳನ್ನು ಬರೆಯುವುದಕ್ಕಿಂತ ವಿಭಿನ್ನ ರೀತಿಯಾಗಿ ಹೇಗೆ ಕಥೆ ರೂಪಿಸಬಹುದು ಎಂಬುದನ್ನು ಕಮ್ಮಟದಲ್ಲಿ ಕಲಿಯಬಹುದು.

ಕಳೆದ ಬಾರಿ ಅಷ್ಟೂ ದಿನಗಳ ಕಾಲ ಸಿನಿಮೋತ್ಸವದಲ್ಲಿ ಪಾಲ್ಗೊಂಡಿದ್ದೆ. ಈ ಬಾರಿ ನಾಲ್ಕು ದಿನಗಳ ಕಾಲ ಮಾತ್ರ ಭಾಗವಹಿಸಲು ಆಗುತ್ತೆ ಅನಿಸುತ್ತೆ. ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವುದರಿಂದ ಸಿನಿಮೋತ್ಸವದಲ್ಲಿ ಪೂರ್ತಿಯಾಗಿ ಪಾಲ್ಗೊಳ್ಳಲಾಗುತ್ತಿಲ್ಲ.

ಪ್ರತಿ ಬಾರಿಯೂ ಇರಾನಿಯನ್ ಸಿನಿಮಾಗಳನ್ನು ವೀಕ್ಷಿಸುವುದು ನನಗೆ ಅತ್ಯಂತ ಖುಷಿಯ ಸಂಗತಿ. ಏಕೆಂದರೆ ಕಥೆ, ಸಿನಿಮಾ ಮಾಡುವ ರೀತಿ, ನಿರ್ದೇಶನ, ಪಾತ್ರ ವರ್ಗದ ಆಯ್ಕೆ ಭಿನ್ನವಾಗಿರುತ್ತದೆ. ಹಾಗಾಗಿ, ಇರಾನಿ ಸಿನಿಮಾಗಳೆಂದರೆ ನನಗಿಷ್ಟ. ಈ ಬಾರಿ ಮಜೀದ್ ಮಜೀದಿ ಅವರ ಸಿನಿಮಾ ಬಂದಿದ್ದರೆ ತಪ್ಪದೇ ನೋಡ್ತೀನಿ.

ವರ್ಷದಿಂದ ವರ್ಷಕ್ಕೆ ಸಿನಿಮೋತ್ಸವದ ಸಂಘಟನೆ ಉತ್ತಮಗೊಳ್ಳುತ್ತಿದೆ. ಈ ಬಾರಿಯೂ ಒರಾಯನ್ ಮಾಲ್ ಪಿವಿಆರ್‌ನ 11 ಸ್ಕ್ರೀನ್‌ಗಳಲ್ಲಿ ಸಿನಿಮಾ ನೋಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿಗೆ ಮೆಟ್ರೊ ರೈಲು ಸಂಪರ್ಕ ಇರುವುದರಿಂದ ಸಿನಿಪ್ರಿಯರಿಗೆ ಅನುಕೂಲವಾಗಬಹುದು. ಜನಪ್ರತಿನಿಧಿಗಳಿಗೂ ಸಿನಿಮಾ ನೋಡಲು ಪ್ರತ್ಯೇಕ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ. ಇತರ ದೇಶದ ಉತ್ತಮ ಸಿನಿಮಾಗಳಂತೇ ನಮ್ಮಲ್ಲೂ ಸಿನಿಮಾಗಳನ್ನು ನಿರ್ಮಿಸಬೇಕೆನ್ನುವವರಿಗೆ ಜನಪ್ರತಿನಿಧಿಗಳು ಸಹಾಯ ಹಸ್ತ ಚಾಚುವ ಮನಸು ಮಾಡಬಹುದು.

–ಪವನ್ ಕುಮಾರ್, ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT