ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡಲೇಬೇಕಾದ ಸಿನಿಮಾ

Last Updated 22 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಭಿನ್ನ ವಿಭಿನ್ನ ಕಥಾನಕಗಳನ್ನೊಳಗೊಂಡ ಪ್ರಪಂಚದ ಅತ್ಯುತ್ತಮ ಸಿನಿಮಾಗಳನ್ನು ನೋಡಬಹುದು ಎನ್ನುವ ಕಾರಣಕ್ಕೆ ಸಿನಿಮಾ ಉತ್ಸವಗಳು ಮಹತ್ವ ಎನಿಸುತ್ತವೆ. 10ನೇ ಅಂತರರಾಷ್ಟ್ರೀಯ ಸಿನಿಮೋತ್ಸವ ಕೂಡ ಅಂಥ ಅನೇಕ ಚಿತ್ರಗಳನ್ನು ಮೊಗೆದುಕೊಡಲಿದೆ.

ಮೊದಲ ದಿನ ಅಂದರೆ ಫೆಬ್ರುವರಿ 23ರಂದು ಅನೇಕ ಉತ್ತಮ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಅದರಲ್ಲಿ ನನ್ನ ಆಯ್ಕೆ ಅಬಚೂರಿನ ಪೋಸ್ಟ್‌ ಆಫೀಸ್‌, ಆಫ್ಟರ್‌ ದಿ ವಾರ್‌ ಹಾಗೂ ಹೈ ನೂನ್‌ ಸ್ಟೋರಿ. ಈ ಮೂರೂ ಚಿತ್ರಗಳನ್ನು ನಾನು ನೋಡಿ ಮೆಚ್ಚಿಕೊಂಡಿದ್ದೇನೆ. ಚಿತ್ರದ ಕಥೆ, ಗಟ್ಟಿ ನಿರೂಪಣೆ, ಸಾಂಸ್ಕೃತಿ ಹಾಗೂ ಸಂಘರ್ಷದ ಚಿತ್ರಣವನ್ನು ಕಟ್ಟಿಕೊಟ್ಟ ರೀತಿ ಈ ಚಿತ್ರಗಳಲ್ಲಿ ಬಹು ಸೊಗಸಾಗಿದೆ.

ಅಬಚೂರಿನ ಪೋಸ್ಟ್‌ ಆಫೀಸ್‌

ಇದು ಕನ್ನಡದ ಸಿನಿಮಾ. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ ಚಿತ್ರ ಎಂಬ ಖ್ಯಾತಿ ಘಟಶ್ರಾದ್ಧ ಚಿತ್ರಕ್ಕಿದೆ. ಆದರೆ ಅದಕ್ಕಿಂತಲೂ ಮುಂಚೆ ಹೊಸ ಅಲೆಯ ಚಿತ್ರಗಳಿಗೆ ದಾರಿ ಮಾಡಿಕೊಟ್ಟ ಚಿತ್ರ ‘ಅಬಚೂರಿನ ಪೋಸ್ಟ್‌ ಆಫೀಸ್‌’. ವಿಭಿನ್ನ ದೃಶ್ಯ ಮಾಧ್ಯಮ, ನುಡಿಗಟ್ಟಿನ ಮೂಲಕ ದೃಶ್ಯವನ್ನು ಇಲ್ಲಿ ಕಟ್ಟಿಕೊಟ್ಟವರು ಎನ್‌.ಲಕ್ಷ್ಮಿನಾರಾಯಣ ಅವರು. ಭಾವಾತಿರೇಕವಿಲ್ಲದ, ಅತ್ಯಂತ ಸೊಗಸಾದ ನಿರೂಪಣೆ ಈ ಚಿತ್ರದ ಜೀವಾಳ. ಅಬಚೂರಿನಂಥ ಪುಟ್ಟ ಪ್ರದೇಶಕ್ಕೆ, ಆಧುನಿಕತೆ ಪ್ರವೇಶವಾಗುವ ರೀತಿಯನ್ನು, ಕ್ರಮಗಳನ್ನು ವಾಸ್ತವಿಕ ನೆಲೆಯಲ್ಲಿ, ಅತಿರೇಕಗಳಿಲ್ಲದೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಕಾದಂಬರಿಯನ್ನು ಇಟ್ಟುಕೊಂಡು ದೃಶ್ಯ ಮಾಧ್ಯಮದಲ್ಲಿ ಹೊಸ ಆವಿಷ್ಕಾರಗಳೊಂದಿಗೆ ಕಟ್ಟಿಕೊಡುವ ರೀತಿ ತುಂಬಾ ಚೆನ್ನಾಗಿದೆ.

ಆಫ್ಟರ್‌ ದ ವಾರ್‌

ಫ್ರಾನ್ಸ್‌ನಲ್ಲಿ ತಲ್ಲಣಗಳು ಮಾಮೂಲಿ. ಕಾಲಕಾಲಕ್ಕೆ ಆಗುವ ಘರ್ಷಣೆಗಳು ಇತಿಹಾಸದ ನೆನಪುಗಳಿಗೆ ಹೇಗೆ ಜೀವ ಕೊಡುತ್ತವೆ ಎನ್ನುವ ವಿಷಯ ಇದರಲ್ಲಿದೆ. ಎಡಪಂಥೀಯ ವಿರೋಧಿ ಸಿದ್ಧಾಂತವನ್ನು ಈ ಚಿತ್ರದಲ್ಲಿ ಅಭಿವ್ಯಕ್ತಿಗೊಳಿಸಲಾಗಿದೆ. ಸೈದ್ಧಾಂತಿಕವಾಗಿ ಯಾವತ್ತೂ ಒಂದು ತಳಮಳ ಎನ್ನುವುದು ಇತಿಹಾಸವನ್ನು ಸೃಷ್ಟಿಸುತ್ತಲೇ ಇರುತ್ತದೆ ಎನ್ನುವುದನ್ನು ಸಮಗ್ರವಾಗಿ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ನಾನಾ ಕಾಲಘಟ್ಟದಲ್ಲಿ ಹಳೆಯ ನೆನಪುಗಳು ನಾನಾ ರೀತಿಯಲ್ಲಿ ಎದ್ದು ಬರುತ್ತಲೇ ಇರುತ್ತವೆ, ಸಮಾಜ ಯಾವಾಗಲೂ ಸಂಕ್ರಮಣಾವಸ್ಥೆಯಲ್ಲಿಯೇ ಇರುತ್ತದೆ, ಹೊಸ ಸಂಘರ್ಷಗಳು ಹಳೆಯ ಸಂಕಷ್ಟಗಳ ನೆನಪುಗಳಿಂದ ಹುಟ್ಟುತ್ತವೆ ಎನ್ನುವುದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ಹೈ ನೂನ್‌ ಸ್ಟೋರಿ

ಈ ಚಿತ್ರ ಕೂಡ ಸಂಘರ್ಷದ ಬಗೆಗೇ ಹೇಳುತ್ತದೆ. 1980ರ ಹೊತ್ತಿಗೆ ಇರಾನ್‌ನಲ್ಲಿ ಇಸ್ಲಾಮಿಕ್‌ ಕ್ರಾಂತಿ ಆಗುತ್ತೆ. ನಂತರ ಬೇನಿ ಸದರ್‌ ಇರಾನ್‌ ಅಧ್ಯಕ್ಷರಾಗುತ್ತಾರೆ. ಇರಾನ್‌ನ ರಾಜಕೀಯ ತಳಮಳಗಳು, ಸಮಾಜವನ್ನು ಹೇಗೆ ಬುಡಮೇಲು ಮಾಡುತ್ತದೆ ಎನ್ನುವ ವಿಷಯವನ್ನು ತುಂಬಾ ಗಟ್ಟಿಯಾಗಿ ಈ ಚಿತ್ರದಲ್ಲಿ ನಿರೂಪಿಸಲಾಗಿದೆ.

ಮೊಹ್‌ಸೇನ್‌ ಮೊಹ್ಮಲ್‌ ಬಫ್ಸ್‌ ‘ಬಾಯ್ಕಾಟ್‌’ ಸಿನಿಮಾದಲ್ಲಿ ಇಂಥದ್ದೇ ಸಂಘರ್ಷಗಳನ್ನು ತುಂಬಾ ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದರು. ಸಂಘರ್ಷದ ಎಲ್ಲಾ ಮಜಲುಗಳನ್ನು ಸಮರ್ಥವಾಗಿ, ಗಟ್ಟಿ ನೆಲೆಯಲ್ಲಿ ನಿರೂಪಣೆ ಮಾಡಿದ ಬಾಯ್ಕಾಟ್‌ನಂಥದ್ದೇ ಮತ್ತೊಂದು ಸಿನಿಮಾವೇ ಈ ಹೈ ನೂನ್‌ ಸ್ಟೋರಿ.

(ಎನ್‌. ಮನು ಚಕ್ರವರ್ತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT