ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟನೆಗಾಗಿ ಮಿಡಿದ ಶ್ರುತಿ

Last Updated 22 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬಿಗ್‌ಬಾಸ್‌ ಮನೆ ನನಗೆ ತಾಳ್ಮೆ ಬಗ್ಗೆ ಬಹುದೊಡ್ಡ ಪಾಠ ಕಲಿಸಿದೆ. ನಾನೆಂದಿಗೂ ಅದನ್ನು ಮರೆಯುವುದಿಲ್ಲ’

ಹೀಗೆಂದು ಒಂದೇ ಸಾಲಿನಲ್ಲಿ ಬಿಗ್‌ಬಾಸ್‌ ಪಯಣದ ಕಥೆ ಹೇಳಿದರು ಶ್ರುತಿ ಪ್ರಕಾಶ್‌. ಮನುಷ್ಯ ಜೀವನದ ಯಶಸ್ಸಿನ ಶೃಂಗವೇರಲು ಛಲ, ಪರಿಶ್ರಮವೊಂದೇ ಸಾಲುವುದಿಲ್ಲ. ತಾಳ್ಮೆಯೆಂಬ ಸದ್ಗುಣವೂ ಅತಿಮುಖ್ಯ. ಮೇಲ್ನೋಟಕ್ಕೆ ತಾಳ್ಮೆ ಕಹಿ ಗುಳಿಗೆ ಇದ್ದಂತೆ. ಆದರೆ, ಅದು ನೀಡುವ ಫಲ ಸಿಹಿಯಿಂದ ಕೂಡಿರುತ್ತದೆ ಎಂಬ ಅನುಭವ ಅವರ ಮಾತುಗಳಲ್ಲಿತ್ತು.

ಸ್ಪರ್ಧೆಯ ಬಳಿಕ ಅವರು ಮೊದಲು ತೆರಳಿದ್ದು ತುಮಕೂರಿನಲ್ಲಿರುವ ಅಜ್ಜಿ ಮನೆಗೆ. ಆ ಮನೆಯಲ್ಲಿ ಬಾಲ್ಯ ಕಳೆದ ಕ್ಷಣಗಳನ್ನು ಮೆಲುಕು ಹಾಕುವುದೆಂದರೆ ಅವರಿಗಿಷ್ಟವಂತೆ. ಈಗ ಬೆಂಗಳೂರಿಗೆ ಮರಳಿರುವ ಅವರಿಗೆ ಸಿನಿಮಾಗಳಲ್ಲಿ ನಟಿಸಲು ಅವಕಾಶಗಳ ಹೆಬ್ಬಾಗಿಲು ತೆರೆದಿದೆ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ನಟಿಸುವಂತೆ ನಿರ್ದೇಶಕರು, ನಿರ್ಮಾಪಕರು ದುಂಬಾಲು ಬಿದ್ದಿದ್ದಾರೆ.

ಚಿತ್ರರಂಗ ಪ್ರವೇಶಿಸಲು ಅವಕಾಶದ ಬಾಗಿಲು ತೆರೆದರೂ ಪಾತ್ರಗಳ ಆಯ್ಕೆಯಲ್ಲಿ ಅವರು ಸಾಕಷ್ಟು ಚೂಸಿ. ‘ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಬಂದಿರುವುದು ನಿಜ. ಒಳ್ಳೆಯ ಬ್ಯಾನರ್‌ನಡಿ ಕೆಲಸ ಮಾಡುವ ಆಸೆ ಇದೆ. ಸವಾಲಿನ ಪಾತ್ರಗಳೆಂದರೆ ನಂಗಿಷ್ಟ. ಪ್ರಯೋಗಾತ್ಮಕ ಚಿತ್ರಗಳ ಭಾಗವಾಗಲೂ ನಾನು ಸಿದ್ಧ. ಆದರೆ, ಕಥೆ ಚೆನ್ನಾಗಿದ್ದರೆ ಮಾತ್ರ ಒ‍‍ಪ್ಪಿಕೊಳ್ಳುತ್ತೇನೆ’ ಎಂಬ ಸ್ಪಷ್ಟ ನುಡಿ ಅವರದ್ದು.

ಶ್ರುತಿ ಅವರದು ಮೂಲತಃ ಬೆಳಗಾವಿ. ತಂದೆ ಕರ್ನಲ್‌ ಪ್ರಕಾಶ್‌. ತಾಯಿ ಸವಿತಾ ಪ್ರಕಾಶ್‌. ಬ್ಯುಸಿನೆಸ್‌ ವಿಷಯದಲ್ಲಿ ಪದವಿ ಪೂರೈಸಿರುವ ಅವರು ಗಾಯಕಿಯೂ ಹೌದು. ಅವರು ನಟನೆ ಆರಂಭಿಸಿದ್ದು ಚಾನೆಲ್‌ ವಿ ಇಂಡಿಯಾದ ‘ಇಸ್ಕ್‌ ಅನ್‌ಪ್ಲಗ್ಡ್‌’ ಧಾರಾವಾಹಿ ಮೂಲಕ. ಬಳಿಕ ಸ್ಟಾರ್‌ಪ್ಲಸ್‌ನ ‘ಸಾಥ್‌ ನಿಭಾನಾ ಸಾಥಿಯಾ’ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ನಿಭಾಯಿಸಿದರು. ಬಳಿಕ ಬಿಗ್‌ಬಾಸ್‌ ಸೀಸನ್‌ 5 ಸ್ಪರ್ಧೆಗೆ ಹೆಜ್ಜೆ ಇಟ್ಟರು.

‘ಬಿಗ್‌ಬಾಸ್‌ಗೆ ಹೋಗುವ ಮೊದಲು ಸಾಕಷ್ಟು ತಾಳ್ಮೆಗೆಡುತ್ತಿದ್ದೆ. ಅಲ್ಲಿ ಎಲ್ಲರೊಂದಿಗೆ ಬೆರೆತು ತಾಳ್ಮೆಯ ಮಹತ್ವ ಅರಿತಿದ್ದೇನೆ. ನನಗೆ ಅಡುಗೆ ಮಾಡುವುದು ಬರುತ್ತಿರಲಿಲ್ಲ. ಈಗ ಅಡುಗೆ ಮಾಡುತ್ತೇನೆ. ಡಾನ್ಸ್‌ ಮಾಡುವುದೆಂದರೆ ನಂಗಿಷ್ಟ. ಬಿಡುವಿನ ವೇಳೆಯನ್ನು ಡಾನ್ಸ್‌ಗಾಗಿ ಮೀಸಲಿಡುತ್ತೇನೆ’ ಎಂದು ವಿವರಿಸುತ್ತಾರೆ.

ಸ್ಪಷ್ಟವಾಗಿ ಕನ್ನಡ ಮಾತನಾಡಲು ಬಿಗ್‌ಬಾಸ್‌ ಮನೆ ಅವರಿಗೆ ನೆರವಾಗಿದೆಯಂತೆ. ಸ್ಪರ್ಧೆಗೆ ತೆರಳುವ ಮೊದಲು ಸ್ಪಷ್ಟವಾಗಿ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಈಗ ಧೈರ್ಯವಾಗಿ ಎಲ್ಲರೊಂದಿಗೂ ಮಾತೃಭಾಷೆಯಲ್ಲಿ ಮಾತನಾಡುವ ವಿಶ್ವಾಸ ಅವರದು.

ಬಿಗ್‌ಬಾಸ್‌ನಲ್ಲಿ ಜೆಕೆ ಮತ್ತು ಶ್ರುತಿ ಹೆಚ್ಚು ಫೋಕಸ್‌ ಆಗಿದ್ದು ಸುದ್ದಿಯಾಗಿತ್ತು. ಇದು ಸಾಮಾಜಿಕ ಜಾಲತಾಣಿಗರ ಚರ್ಚೆಗೆ ಆಹಾರವಾಗಿತ್ತು. ಇದು ಅವರಿಗೂ ಗೊತ್ತಿದೆ. ‘ಜಯರಾಂ ಕಾರ್ತಿಕ್‌ ಮತ್ತು ನನ್ನ ಬಗ್ಗೆ ಜನರು ತಿಳಿದುಕೊಂಡಿರುವುದು ತಪ್ಪು. ಸ್ಪರ್ಧೆಯಲ್ಲಿದ್ದ ಎಲ್ಲರೊಟ್ಟಿಗೂ ನಾನು ಸ್ನೇಹದಿಂದ ಇದ್ದೆ. ಇಪ್ಪತ್ತನಾಲ್ಕು ಗಂಟೆ ನಡೆಯುವ ಕಥೆಯನ್ನು ವಾಹಿನಿಯವರು ಒಂದು ಗಂಟೆಯ ಚೌಕಟ್ಟಿನೊಳಗೆ ಹೇಳುವಾಗ ಇಂತಹ ಅನರ್ಥಗಳು ಸೃಷ್ಟಿಯಾಗುತ್ತವೆ. ಇದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ’ ಎನ್ನುತ್ತಾರೆ ಅವರು.

‘ಇದು ಪ್ರೇಕ್ಷಕರನ್ನು ಸೆಳೆಯಲು ವಾಹಿನಿಗಳು ಮಾಡುವ ತಂತ್ರದ ಭಾಗವಷ್ಟೇ. ಇಂತಹ ವಿಷಯಕ್ಕೆ ಜನರು ಪ್ರತಿಕ್ರಿಯಿಸುವುದು ಸಹಜ. ಅದರ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ’ ಎಂಬುದು ಅವರ ವಿವರಣೆ.

ಭಿನ್ನ ಪಾತ್ರಗಳ ಮೂಲಕ ತಮ್ಮ ಬಣ್ಣದ ಬದುಕು ಆರಂಭಿಸುವ ಕನಸು ಅವರಿಗಿದೆ. ಜೊತೆಗೆ, ತನ್ನೊಳಗಿರುವ ಗಾಯಕಿಯನ್ನೂ ಜೀವಂತವಾಗಿಡುವ ಬಯಕೆ ಅವರ ಕಣ್ಣುಗಳಲ್ಲಿ ಇಣುಕುತ್ತದೆ.⇒ v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT