ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಮತಶಕ್ತಿ, ಪ್ರಾತಿನಿಧ್ಯ ಎಲ್ಲಿ?

Last Updated 22 ಫೆಬ್ರುವರಿ 2018, 20:23 IST
ಅಕ್ಷರ ಗಾತ್ರ

ಅಸ್ತಿತ್ವದಲ್ಲಿರುವ 14ನೇ ರಾಜ್ಯ ವಿಧಾನಸಭೆಯಲ್ಲಿ ಈಗ ಇರುವ ಶಾಸಕಿಯರ ಸಂಖ್ಯೆ ಕೇವಲ 8. ಈ ಪೈಕಿ ಬೆಂಗಳೂರಿನವರಾದ ವಿನಿಶಾ ಎಲಿಜಬೆತ್ ನೀರೊ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದವರಲ್ಲ. ನಾಮನಿರ್ದೇಶಿತ ಶಾಸಕಿ. ಈ ನಾಮನಿರ್ದೇಶಿತ ಶಾಸಕಿಯೂ ಸೇರಿದರೆ, 225 ಸದಸ್ಯಬಲದ ವಿಧಾನಸಭೆ ನಮ್ಮದು. ಹೀಗಾಗಿ ಇಲ್ಲಿರುವ ಮಹಿಳಾ ಪ್ರಾತಿನಿಧ್ಯದ ಪ್ರಮಾಣ ಕೇವಲ ಶೇ 3. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ 34 ಸಚಿವರನ್ನೊಳಗೊಂಡ ಸಂಪುಟದಲ್ಲಿರುವುದು ಕೇವಲ ಇಬ್ಬರು ಸಚಿವೆಯರು. ಈವರೆಗೆ ಏಕೈಕ ಮಹಿಳೆ ಇದ್ದ ಸಂಪುಟ ಇದಾಗಿತ್ತು.

ತೇರದಾಳದಿಂದ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾದ ಉಮಾಶ್ರೀ ಅವರಿಗೆ ಸಚಿವೆಯಾಗುವ ಅದೃಷ್ಟ ಸಿಕ್ಕಿದೆ. ಸಚಿವರಾಗಿದ್ದ ಮಹದೇವ ಪ್ರಸಾದ್ ಅವರು ನಿಧನರಾದ ನಂತರ ನಡೆದ ಉಪಚುನಾವಣೆಯಲ್ಲಿ ಗೆದ್ದ ಅವರ ಪತ್ನಿ ಮೋಹನ ಕುಮಾರಿಯವರಿಗೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸಚಿವ ಸ್ಥಾನ ಒಲಿದಿದ್ದರಿಂದಾಗಿ ಮಹಿಳಾ ಸಚಿವರ ಸಂಖ್ಯೆ ಎರಡಾಗಿದೆ. 2013ರಲ್ಲಿ ಒಟ್ಟು ಜನಸಂಖ್ಯೆಯ ಅರ್ಧದಷ್ಟಿದ್ದ ಎಂದರೆ ಸುಮಾರು 1.5 ಕೋಟಿಯಷ್ಟಿದ್ದ ಮಹಿಳಾ ಮತದಾರರು ಆಯ್ಕೆ ಮಾಡಿದ ಸರ್ಕಾರದಲ್ಲಿ ಇಬ್ಬರು ಸಚಿವೆಯರ ಪ್ರಾತಿನಿಧ್ಯ ಇದ್ದರೆ ಸಾಕೇ? ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯ ಸ್ಥಿತಿಗತಿ ಹೇಗಿದೆ ಎಂಬುದನ್ನು ಹೇಳಲು ಈ ಅಂಕಿಅಂಶ ಸಾಕಲ್ಲವೇ? ಇದು ಎಷ್ಟು ಶೋಚನೀಯವಾಗಿದೆ ಎಂಬುದನ್ನು ಮತ್ತೆ ಬಿಡಿಸಿ, ವಿವರಿಸಿ ಹೇಳಬೇಕೇ?

ರಾಜಕೀಯ ಸಮಾನತೆಯನ್ನು ಎಲ್ಲಾ ಪುರುಷ ಹಾಗೂ ಮಹಿಳೆಗೆ ಭಾರತ ಸಂವಿಧಾನದ 325 ಹಾಗೂ 326ನೇ ವಿಧಿಗಳು ನೀಡಿವೆ. ಆದರೆ ಸಂವಿಧಾನಕ್ಕೆ ಬದ್ಧರಾಗಿ ಕೆಲಸ ಮಾಡಬೇಕಾದ ನಮ್ಮ ರಾಜಕೀಯ ಪಕ್ಷಗಳ ನೇತಾರರೇ ಈ ಸಮಾನತೆಯ ತತ್ವವನ್ನು ಜಾರಿಗೊಳಿಸಲು ಬಿಡುತ್ತಿಲ್ಲ. ಸಂಸತ್‌ನಲ್ಲಿ ನನೆಗುದಿಗೆ ಸಿಲುಕಿರುವ ಮಹಿಳಾ ಮೀಸಲು ಮಸೂದೆ ಅನುಷ್ಠಾನಗೊಂಡರೆ ನಮ್ಮ 224 ಸದಸ್ಯ ಬಲದ ವಿಧಾನಸಭೆಯಲ್ಲಿ ಕನಿಷ್ಠ 75 ಶಾಸಕಿಯರಿಗೆ ಸ್ಥಾನ ಸಿಗುತ್ತದೆ.

ಆದರೆ ಈ ರಾಜಕೀಯ ಅಧಿಕಾರವನ್ನು ಬಿಟ್ಟುಕೊಡುವುದು ಪುರುಷ ರಾಜಕಾರಣಿಗಳಿಗೆ ಅಷ್ಟು ಸುಲಭವೇ? ಹೀಗಾಗಿ ಬಾಯಿ ಮಾತಿನಲ್ಲಿ ಮಹಿಳಾ ಕಾಳಜಿಯ ಮಾತಾಡಿದರೂ ರಾಜಕೀಯ ಅಧಿಕಾರವನ್ನು ಮಹಿಳೆ ಜೊತೆಗೆ ಹಂಚಿಕೊಳ್ಳುವ ನೈಜ ಕಾಳಜಿಯನ್ನು ರಾಜಕೀಯ ಪಕ್ಷಗಳು ತೋರದಿರುವುದನ್ನು ನೋಡುತ್ತಲೇ ಬರುತ್ತಿದ್ದೇವೆ. 1996ರಲ್ಲಿ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಸಂಸತ್‌ನಲ್ಲಿ ಮಹಿಳಾ ಮೀಸಲು ಮಸೂದೆ ಮೊದಲ ಬಾರಿಗೆ ಮಂಡನೆಯಾಯಿತು. ನಂತರ 2010ರಲ್ಲಿ ಮಹಿಳಾ ಮೀಸಲು ಮಸೂದೆಯನ್ನು ರಾಜ್ಯಸಭೆ ಅಂಗೀಕರಿಸಿಯೂ ಬಿಟ್ಟಿತು. ಆದರೇನು? 2014ರಲ್ಲಿ 15ನೇ ಲೋಕಸಭೆ ವಿಸರ್ಜನೆಯೊಂದಿಗೆ ಮಸೂದೆಯೂ ಅಸ್ತಿತ್ವ ಕಳೆದುಕೊಂಡು ಮತ್ತೊಮ್ಮೆ ಮರಳುಗಾಡಿನ ಮೃಗಜಲವಾಗಿ ಹೋಯಿತು.

ಅಧಿಕಾರದ ಮೊಗಸಾಲೆಗಳಲ್ಲಿ ಮಹಿಳಾ ರಾಜಕಾರಣಿಗಳ ಸಂಖ್ಯೆ  ಬೆರಳೆಣಿಕೆಗೇ ಮುಗಿದು ಹೋಗುತ್ತದೆ. ಆದರೆ ಮತಗಟ್ಟೆಗಳಲ್ಲಿ ಉದ್ದುದ್ದ ಸಾಲುಗಳಲ್ಲಿ ನಿಂತು ನೇತಾರರನ್ನು ಆಯ್ಕೆ ಮಾಡುವ ಮತದಾನ ಎಂಬ ಪವಿತ್ರ ಕಾರ್ಯದಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಲೇ ಇದ್ದಾರೆ. ಇತ್ತೀಚಿನ ವರ್ಷಗಳಲ್ಲಂತೂ ಅನೇಕ ರಾಜ್ಯಗಳಲ್ಲಿ ಮಹಿಳೆಯರ ಮತದಾನದ ಪ್ರಮಾಣ ಪುರುಷರಿಗಿಂತ ಹೆಚ್ಚಿರುವು
ದನ್ನು ಅಂಕಿಅಂಶಗಳು ಹೇಳುತ್ತಿವೆ.

ನಮ್ಮ ರಾಜ್ಯದ್ದೇ ಅಂಕಿ ಅಂಶಗಳನ್ನು ನೋಡಿ: ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ (2013) ಪ್ರತೀ 1000 ಪುರುಷ ಮತದಾರರಿಗೆ 958 ಮಹಿಳಾ ಮತದಾರರಿದ್ದರು. ಈ ಬಾರಿ ಸಿದ್ಧಪಡಿಸಲಾಗಿರುವ ಮತದಾರ ಪಟ್ಟಿಯ ಪ್ರಕಾರ ಪ್ರತೀ 1000 ಪುರುಷರಿಗೆ 972 ಮಹಿಳೆಯರಿದ್ದಾರೆ. ಈಗ ಸಿದ್ಧವಾಗಿರುವ ತಾತ್ಕಾಲಿಕ ಮತದಾರ ಪಟ್ಟಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 4.96 ಕೋಟಿ ಮತದಾರರಿದ್ದಾರೆ. ಈ ಪೈಕಿ 2.51 ಕೋಟಿ ಪುರುಷರು ಹಾಗೂ 2.44 ಕೋಟಿ ಮಹಿಳೆಯರು ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಹೇಳಿದ್ದಾರೆ. ಮಹಿಳಾ ಮತದಾರರು ಹೆಚ್ಚಿರುವ ಪ್ರದೇಶಗಳಲ್ಲಿ ಸಾಂಕೇತಿಕವಾಗಿ ಸರ್ವ ಮಹಿಳಾ ಮತಗಟ್ಟೆಗಳನ್ನು ರೂಪಿಸುವ ಯೋಜನೆಯೂ ಇದೆ.

ಪ್ರಾಯೋಗಿಕವಾಗಿ ರೂಪಿಸಲಾಗುವ ಈ ಮತಗಟ್ಟೆಗಳಲ್ಲಿ ಮಹಿಳಾ ಮತಗಟ್ಟೆ ಅಧಿಕಾರಿಗಳು ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿ ಇರುತ್ತಾರೆ ಎಂದಿದ್ದಾರೆ ಅವರು. ಚುನಾವಣೆ ಪ್ರಕ್ರಿಯೆಯಲ್ಲಿ ಅಧಿಕಾರಿ, ಸಿಬ್ಬಂದಿಗಳಾಗಿ ಹಲವು ಹಂತಗಳಲ್ಲಿ ಮಹಿಳೆಯರು ದುಡಿಯುತ್ತಲೇ ಬಂದಿದ್ದಾರೆ. ಆದರೆ ಎಲ್ಲರ ಬದುಕಿನ ಮೇಲೆ ಪರಿಣಾಮ ಬೀರುವಂತಹ ನೀತಿಗಳನ್ನು ರೂಪಿಸುವ, ನಿರ್ಧಾರಗಳನ್ನು ಕೈಗೊಳ್ಳುವ ನಮ್ಮ
ಶಾಸನಸಭೆಗಳೊಳಗೆ ಮಾತ್ರ ಬೆರಳೆಣಿಕೆಯ ಶಾಸಕಿಯರಿರುತ್ತಾರೆ. ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಳಲ್ಲಿ ಮಹಿಳೆಗೆ ಇಷ್ಟು ದಕ್ಕಿದರೆ ಸಾಕೇ?

2013ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಒಟ್ಟು 2,945 ಅಭ್ಯರ್ಥಿಗಳಲ್ಲಿ 175 ಮಹಿಳೆಯರಿದ್ದರು. ಕೇವಲ 8 ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿತ್ತು.  ಬಿಜೆಪಿಯಿಂದ 7 ಮಹಿಳೆಯರು ಚುನಾವಣೆಗೆ ಸ್ಪರ್ಧಿಸಿದ್ದರು. ಈ ಏಕ ಅಂಕಿಯ ಬೆರಳೆಣಿಕೆ ಲೆಕ್ಕಾಚಾರದಲ್ಲಿ ಜೆಡಿಎಸ್ ತುಸು ಹೆಚ್ಚು ಎಂದರೆ 12 ಮಹಿಳೆಯರನ್ನು ಚುನಾವಣಾ ಕಣಕ್ಕಿಳಿಸಿತ್ತು. ಹಲವರು ಪಕ್ಷೇತರರಾಗಿ ಸ್ಪರ್ಧಿ
ಸಿದ್ದರು. ರಾಜಕೀಯ ಪಕ್ಷಗಳಿಂದ ಟಿಕೆಟ್ ಪಡೆದುಕೊಳ್ಳುವುದೂ ಎಷ್ಟೊಂದು ಕಷ್ಟದ ವಿಚಾರ ಎಂಬುದನ್ನು ಈ ಅಂಕಿಅಂಶಗಳು ಹೇಳುತ್ತಿವೆ.

ತೆನೆಹೊತ್ತ ಮಹಿಳೆಯ ಚಿತ್ರವನ್ನು ಪಕ್ಷದ ಚಿಹ್ನೆಯಾಗಿ ಹೊಂದಿರುವ ಜೆಡಿಎಸ್ ಮಹಿಳಾ ಸಮಾವೇಶವನ್ನು ಕಳೆದ ವರ್ಷ ಜುಲೈ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಸಲಾಗಿತ್ತು. ಆಗಷ್ಟೇ ಮಹಿಳಾ ಮೀಸಲು ಮಸೂದೆ ಜಾರಿಗೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಜೆಡಿಎಸ್ ನಾಯಕ ಎಚ್. ಡಿ. ದೇವೇಗೌಡರು ಪತ್ರ ಬರೆದಿದ್ದರು. ಹೀಗಾಗಿ ರಾಜ್ಯದಲ್ಲಿ ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ವೇಳೆಗೇ ಮಹಿಳಾ ಮೀಸಲು ಮಸೂದೆ ಜಾರಿಯಾಗಿರುತ್ತದೆ ಎಂಬಂಥ ಆಶಾಭಾವವನ್ನು ಆ ಸಮಾವೇಶದಲ್ಲಿ ದೇವೇಗೌಡರು ವ್ಯಕ್ತಪಡಿಸಿದ್ದರು. ಆದರೆ ಅದು ಅಷ್ಟು ಸುಲಭವಲ್ಲ ಎಂಬುದು ಈ 22 ವರ್ಷಗಳ ಮಹಿಳಾ ಮೀಸಲು ಮಸೂದೆಯ ಕಥನ ನೋಡಿದರೆ ಯಾರಿಗಾದರೂ ತಿಳಿಯುವಂತಹದ್ದು.

ಆದರೆ ನಿಜಕ್ಕೂ ಮಹಿಳಾ ಪರ ಕಾಳಜಿಗೆ ರಾಜಕೀಯ ಪಕ್ಷಗಳು ಬದ್ಧವಾಗಿದ್ದರೆ ಮೀಸಲಾತಿಗೆ ಕಾಯದೆ ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಸ್ವತಃ ತಾವೇ ಟಿಕೆಟ್ ನೀಡುವ ಔದಾರ್ಯವನ್ನು ಪ್ರದರ್ಶಿಸುವ ಅವಕಾಶ ಇದ್ದೇ ಇದೆ. ‘ಮಹಿಳಾ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸವನ್ನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮಾಡಬೇಕು’ ಎಂದೂ ದೇವೇಗೌಡರು ಆ ಸಭೆಯಲ್ಲಿ ಹೇಳಿದ್ದರು. ಈಗ ರಾಜ್ಯದಲ್ಲಿ ಇನ್ನೆರಡು ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಕಂತನ್ನು ಬಿಡುಗಡೆ ಮಾಡಲಾಗಿದೆ. 126 ಅಭ್ಯರ್ಥಿಗಳ ಪೈಕಿ ನಾಲ್ವರು ಮಹಿಳೆಯರಿಗಷ್ಟೇ ಸ್ಥಾನ ಸಿಕ್ಕಿದೆ. ಇದು ಬದಲಾಗದ ಕಥನ ಎಂಬಂತಾಗಿಬಿಟ್ಟಿದೆ. ಸಾಮಾನ್ಯವಾಗಿ ಒಂದು ಕುಂಟು ನೆಪವನ್ನು ರಾಜಕೀಯ ಪಕ್ಷಗಳು ಹೇಳುತ್ತವೆ. ಮಹಿಳೆಯರ ಗೆಲುವಿನ ಸಾಮರ್ಥ್ಯದ ಕುರಿತಾದ ಸಂಶಯ ಅದು. ಆದರೆ ಹಲವು ರಾಜ್ಯಗಳಲ್ಲಿ ಗೆಲುವಿನ ಪ್ರಮಾಣದಲ್ಲಿ ಪುರುಷರಿಗಿಂತ ಮಹಿಳಾ ಅಭ್ಯರ್ಥಿಗಳೇ ಮುಂದು ಎಂಬುದನ್ನು ಚುನಾವಣಾ ಫಲಿತಾಂಶಗಳ ವಿಶ್ಲೇಷಣೆಗಳು ತೋರಿಸಿಕೊಟ್ಟಿವೆ.

ರಾಜ್ಯದಲ್ಲಿ 2008ರ ಚುನಾವಣೆಯಲ್ಲಿ 107 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇವರಲ್ಲಿ 41 ಮಂದಿ ಪಕ್ಷೇತರರಾಗಿದ್ದರು. ಎಂದರೆ ಕೇವಲ 66 ಮಹಿಳೆಯರು ರಾಜಕೀಯ ಪಕ್ಷಗಳಿಂದ ಟೆಕೆಟ್ ಪಡೆದುಕೊಂಡಿದ್ದರು. ಆಗ ಕಣದಲ್ಲಿದ್ದ ಒಟ್ಟು ಅಭ್ಯರ್ಥಿಗಳು 2,242. ಇವರಲ್ಲಿ 944 ಮಂದಿ ಪಕ್ಷೇತರರು. ನಂತರ ಗೆಲುವು ಸಾಧಿಸಿ ಶಾಸಕಿಯರಾದವರು ಮೂವರು ಮಾತ್ರ. 1967ರಿಂದ 50 ವರ್ಷಗಳ ಅಂಕಿ ಅಂಶಗಳನ್ನು ನೋಡಿದಲ್ಲಿ, ಮಹಿಳಾ ಪ್ರಾತಿನಿಧ್ಯ ಹೀಗೆ ಏಕ ಅಂಕಿಯಲ್ಲೇ ಕುಂಟುತ್ತಾ ಸಾಗಿರುವುದನ್ನು ಕಾಣುತ್ತೇವೆ.

ಆಸಕ್ತಿಯ ಸಂಗತಿ ಎಂದರೆ, 1972ರ ವಿಧಾನಸಭೆಯಲ್ಲಿ ಶಾಸಕಿಯರೇ ಇರಲಿಲ್ಲ. ಆಗ 28 ಮಹಿಳೆಯರು ಸ್ಪರ್ಧಿಸಿದ್ದರೂ ಯಾರೂ ಗೆಲುವು ಸಾಧಿಸಲಾಗಲಿಲ್ಲ. ಆದರೆ 1950 ಹಾಗೂ 1960ರ ದಶಕಗಳಲ್ಲಿ ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಈಗಿನ ಸಂದರ್ಭಕ್ಕೆ ಹೋಲಿಸಿದಲ್ಲಿ ಹೆಚ್ಚಿತ್ತು ಎಂಬುದು ಸೋಜಿಗದ ಸಂಗತಿ. 1962ರ ವಿಧಾನಸಭೆಯಲ್ಲಿ 18 ಶಾಸಕಿಯರಿದ್ದರು. 1957ರಲ್ಲಿ 179 ಕ್ಷೇತ್ರಗಳಿದ್ದಾಗ, 13 ಮಹಿಳೆಯರು ಗೆದ್ದಿದ್ದರು. ವಿಧಾನಸಭೆಯಲ್ಲಿ ಮಹಿಳೆಯರ ಸಂಖ್ಯಾಬಲ ಇಳಿಮುಖವಾಗಲು ಕಾರಣವೇನು? ಬಹುಶಃ ರಾಜಕೀಯ ಕ್ಷೇತ್ರದಲ್ಲಿ ಹಣ ಹಾಗೂ ತೋಳ್ಬಲ ಮೆರೆಯುವುದು ಹೆಚ್ಚಾದ ನಂತರ ಮಹಿಳೆಯ ರಾಜಕೀಯ ಪ್ರವೇಶ ಕ್ಲಿಷ್ಟವಾಗತೊಡಗಿತು. ರಾಜಕೀಯ ಎಂಬುದು ಪುರುಷರ ಕೋಟೆ ಎಂಬಂತಾಯಿತು.

1984ರ ಲೋಕಸಭಾ ಚುನಾವಣೆಯ ವೇಳೆ ‘ಮಹಿಳಾ ಮತ’ ಎಂಬುದು ಪ್ರತ್ಯೇಕ ಅಸ್ತಿತ್ವವಾಗಿ ಗೋಚರಕ್ಕೆ ಬಂದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಇಂದಿರಾ ಗಾಂಧಿ ಹತ್ಯೆ ನಂತರ ನಡೆದ ಈ ಚುನಾವಣೆಯ ವೇಳೆ ಬೀಸಿದ ಅನುಕಂಪದ ಅಲೆಯು ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳಲು ಪ್ರೇರಕ ಆಗಿತ್ತು. 1950ರ ದಶಕದಲ್ಲಿ ಶೇ 38.8ರಷ್ಟಿದ್ದ ಮಹಿಳಾ ಮತದಾನದ ಪ್ರಮಾಣ 1990ರ ದಶಕದಲ್ಲಿ ಬಹುತೇಕ ಶೇ 60ಕ್ಕೆ ಏರಿಕೆ ಕಂಡಿತು. 1962ರಿಂದ ಪುರುಷ ಹಾಗೂ ಮಹಿಳಾ ಮತದಾರರ ಮಧ್ಯದ ಅಂತರ ಸ್ಥಿರವಾಗಿ ಕಡಿಮೆ­ಯಾಗುತ್ತಲೇ ಬರುತ್ತಿರುವುದನ್ನು ನಾವು ಗಮನಿ­ಸಬಹುದು. 2009ರ ಸಂಸತ್ ಚುನಾ­ವಣೆ ಸಂದರ್ಭದಲ್ಲಿ ಈ ಅಂತರ ಅತ್ಯಂತ ಕಡಿಮೆ ಇತ್ತು ಎಂದು ಚುನಾವಣಾ ಆಯೋಗ ಹೇಳಿದೆ.

16ನೇ ಲೋಕಸಭೆಗೆ ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾ­ವಣೆಗಳಲ್ಲಿ ಮಹಿಳಾ ಮತದಾನದ ಪ್ರಮಾಣ ಶೇ 65.81 ರಷ್ಟಿತ್ತು. ಸಂಸದೀಯ ಚುನಾವಣೆಯಲ್ಲಿ ಈ ಪ್ರಮಾಣದಲ್ಲಿ ರಾಜ್ಯದ ಮಹಿ­ಳೆ­ಯರು ಮತ ಚಲಾಯಿಸಿರುವುದು ಅತ್ಯಂತ ಹೆಚ್ಚಿನದು ಎಂದು ಚುನಾವಣಾ ಆಯೋಗ ಹೇಳಿದೆ. ದಕ್ಷಿಣ ಕನ್ನಡ ಕ್ಷೇತ್ರ­ದ­ಲ್ಲಂತೂ ಪುರುಷರಿಗಿಂತ ಮಹಿಳೆಯರ ಮತದಾನದ ಪ್ರಮಾಣ ಜಾಸ್ತಿ ಇತ್ತು. ಈ ಕ್ಷೇತ್ರದಲ್ಲಿ ಮಹಿಳಾ ಮತದಾನದ ಪ್ರಮಾಣ ಶೇ 77.39­ರಷ್ಟಿ­ದ್ದರೆ, ಪುರುಷರ ಮತದಾನದ ಪ್ರಮಾಣ ಶೇ 76.97 ಇತ್ತು. ಹೀಗಿದ್ದೂ ಶೋಭಾ ಕರಂದ್ಲಾಜೆ (ಬಿಜೆಪಿ) ಅವರು 16ನೇ ಲೋಕಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ 28 ಲೋಕಸಭಾ ಸದಸ್ಯರ ಪೈಕಿ ಏಕೈಕ ಮಹಿಳೆ.

ಮಹಿಳಾ ಮತದಾರರ ಪ್ರಮಾಣ ಹೆಚ್ಚಳ ಸಕಾರಾತ್ಮಕ ಸಂಕೇತ ಎಂಬುದು ನಿಜ. ಆದರೆ ಮತದಾನದ ಈ ಅರಿವು, ಮಹಿಳಾ ಪರ ಕಾರ್ಯಸೂಚಿಯಾಗಿ ಬದಲಾಗಬೇಕಿದೆ. ದೀರ್ಘಕಾಲದಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಮಹಿಳೆಯರ ಕಾಳಜಿಗಳಿಗೆ ಇದು ದಾರಿಯಾಗಬೇಕು. ತಮ್ಮ ಹಿತಾಸಕ್ತಿಗಳಿಗೆ ಲಾಬಿ ಮಾಡುವಂತಹ ಮತ ಬ್ಯಾಂಕ್ ಆಗಿ ರೂಪುಗೊಳ್ಳುವುದು ಮಹಿಳಾ ಸಮೂಹಕ್ಕೆ ಸಾಧ್ಯವೇ ಎಂಬುದು ಪ್ರಶ್ನೆ. ಏಕೆಂದರೆ, ಮಹಿಳೆಯರೆಂದಾಕ್ಷಣ ಅವರು ಏಕಸಮುದಾಯಕ್ಕೆ ಸೇರುವುದಿಲ್ಲ. ಅನೇಕ ಜಾತಿ, ಧರ್ಮ, ವರ್ಗಗಳು ಇಲ್ಲಿವೆ. ಮಹಿಳಾ ಮೀಸಲು ಮಸೂದೆ ವಿಚಾರದಲ್ಲಿ ಪ್ರಸ್ತಾಪವಾದ ಒಳಮೀಸಲಾತಿ ವಾದವನ್ನೇ ಗಮನಿಸಬಹುದು. ಹೀಗಿದ್ದೂ ಲಿಂಗ ತಾರತಮ್ಯದ ವಿಚಾರಗಳೂ  ಚುನಾವಣಾ ಸೋಲು ಗೆಲುವುಗಳಿಗೆ ನಿರ್ಣಾಯಕವಾಗುವ ಸ್ಥಿತಿ ಸೃಷ್ಟಿಸುವಂತಹ ಮತಶಕ್ತಿಯಾಗಿ ಮಹಿಳೆಯರು ರೂಪುಗೊಳ್ಳಬೇಕಿದೆ. ಮಹಿ­ಳೆ­ಯರ ಬೇಡಿಕೆಗಳಿಗೆ ಕಿವಿಗೊಡುವ ದಿನಗಳು ಭಾರತದ ರಾಜಕಾರಣಿಗಳಿಗೆ ಅನಿವಾ­ರ್ಯ­ವಾಗುವ ದಿನಗಳು ಹತ್ತಿರವಾಗಲಿದೆಯೇ ಎಂಬುದನ್ನು ಕಾದು ನೋಡಬೇಕು.

ಪುರುಷ ರಾಜಕಾರಣಿಗಳಷ್ಟೇ ಮಹಿಳೆಯರೂ ಜಡವಾಗಿರಬಹುದು, ಸಾಂಪ್ರದಾಯಿಕ ಜಡ ದೃಷ್ಟಿಕೋನಗಳನ್ನೇ ಅವರೂ ಹೊಂದಿರಬಹುದು, ಇದರಿಂದಾಗಿ ರಾಜಕೀಯದಲ್ಲಿ ಏನೂ ಬದಲಾಗದು ಎಂಬಂಥ ವಾದಗಳ ಮೂಲಕ ಮಹಿಳಾ ರಾಜಕಾರಣಿಗಳ ಬಗ್ಗೆ ನಿರಾಶೆ ವ್ಯಕ್ತಪಡಿಸುವವರೂ ಇದ್ದಾರೆ. ಆದರೆ ನಾಯಕತ್ವದ ಮಾದರಿಗಳಲ್ಲಿ ಮಹಿಳೆಯ ಹಾಜರಿ ಸಮಾಜದ ಮೇಲೆ ಬೀರುವ ಪರಿಣಾಮ ಸಕಾರಾತ್ಮಕವಾದದ್ದು. ಆರಂಭದ ತೊಡಕುಗಳು ಇರುವುದು ಸಹಜ. ಆದರೆ ಮಹಿಳೆ ಜೊತೆ ರಾಜಕೀಯ ಅಧಿಕಾರ ಹಂಚಿಕೆಗೆ ಪುರುಷ ರಾಜಕಾರಣಿಗಳು ಕಿವಿಗೊಡುತ್ತಿಲ್ಲ. ಅವರಿಗೆ ತಮ್ಮ ಅಧಿಕಾರ ಕೈತಪ್ಪುವ ಭೀತಿ. ಹೀಗಿದ್ದೂ ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು ಮತ ಹಾಕುತ್ತಿರುವ ಮಹಿಳೆಯರಿಂದ ಹೊರಹೊಮ್ಮುತ್ತಿರುವ ಸಂದೇಶ ಸ್ಪಷ್ಟ. ಸಾರ್ವಜನಿಕ ಬದುಕಲ್ಲಿ ಮಹಿಳೆಗೆ ತನ್ನ ಮಾತು ಕೇಳಿಸಬೇಕಿದೆ.

ಇತಿಹಾಸ ಬರೆದವರು
ಈ ಹಿಂದೆ ಅನೇಕ ಮಹಿಳಾ ರಾಜಕಾರಣಿಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಪಾನನಿಷೇಧವನ್ನು ರದ್ದು ಮಾಡಿದ್ದು ವಿರೋಧಿಸಿ ಯಶೋಧರಮ್ಮ ದಾಸಪ್ಪ ಅವರು ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 1999–2004ರಲ್ಲಿ ಎಸ್.ಎಂ. ಕೃಷ್ಣ ಅವರ ಅಧಿಕಾರ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿದ್ದ ಮೋಟಮ್ಮ ಅವರು ರಾಜ್ಯದಲ್ಲಿ ಸ್ತ್ರೀಶಕ್ತಿ ಸಂಘಗಳ ಸ್ಥಾಪನೆಗೆ ಕಾರಣರಾಗಿದ್ದರು. ಅವರು ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕಿಯಾಗಿ ಕಾರ್ಯ ನಿರ್ವಹಿಸಿದ ಏಕೈಕ ಮಹಿಳೆ.

ಇನ್ನು 1972ರಲ್ಲೇ ವಿಧಾನಸಭಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು 1978ರವರೆಗೆ ಈ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಿದವರು ಕೆ.ಎಸ್. ನಾಗರತ್ನಮ್ಮ. ಆ ನಂತರ ಈವರೆಗೂ ಯಾವ ಮಹಿಳೆಯೂ ಈ ಹುದ್ದೆಗೆ ಏರುವುದು ಸಾಧ್ಯವಾಗಿಲ್ಲ ಎಂಬುದು ವಿಪರ್ಯಾಸ.

ಮೊಸಳೆ ಕಣ್ಣೀರು...

ಮತಶಕ್ತಿಯಾಗಿ ಮಹಿಳೆ ಹೊರಹೊಮ್ಮುತ್ತಿರುವುದರಿಂದ ಆಕೆಯ ಪರವಾಗಿ ರಾಜಕೀಯ ಪಕ್ಷಗಳು ಮೊಸಳೆ ಕಣ್ಣೀರು ಸುರಿಸುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಯಾವ ರಾಜಕೀಯ ಪಕ್ಷವೂ ಮಹಿಳೆಯನ್ನು ಕಡೆಗಣಿಸುವುದು ಈಗ ಸಾಧ್ಯವಿಲ್ಲ. ಕಳೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸ್ತ್ರೀಶಕ್ತಿ ಗುಂಪುಗಳಲ್ಲಿನ ನಾಯಕತ್ವವನ್ನು ಮಹಿಳಾ ಮತದಾರರ ಓಲೈಕೆಗಾಗಿ ವಿವಿಧ ರಾಜಕೀಯ ಪಕ್ಷಗಳು ದುರುಪಯೋಗಪಡಿಸಿಕೊಂಡಿದ್ದು ಟೀಕೆಗೊಳಗಾಯಿತು.

ರಾಜಕೀಯ ಚುನಾವಣಾ ಪ್ರಣಾಳಿಕೆಗಳಲ್ಲಂತೂ ಮಹಿಳಾ ಪರ ಘೋಷಣೆಗಳು ತುಂಬಿರುತ್ತವೆ. ಕಳೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಶೇ 60ರಷ್ಟು ಮಹಿಳೆಯರು ಮತದಾನ ಮಾಡಿದರು. ಇದು ನಿತೀಶ್ ಕುಮಾರ್ ಗೆಲುವಿಗೆ ಸಹಕಾರಿಯಾಯಿತು ಎಂಬುದನ್ನು ಮರೆಯುವಂತಿಲ್ಲ. ಇದಕ್ಕೆ ತದ್ವಿರುದ್ಧವಾಗಿ ಅಲ್ಲಿ ಪುರುಷ ಮತದಾನದ ಪ್ರಮಾಣ ಶೇ 54ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT