ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಸ್ಕಾಂ ಶಾಖಾಧಿಕಾರಿ ಕಚೇರಿ ಕಟ್ಟಡ ಕುಸಿತ

Last Updated 23 ಫೆಬ್ರುವರಿ 2018, 9:13 IST
ಅಕ್ಷರ ಗಾತ್ರ

ಕಮಲನಗರ: ಶಿಥಿಲಗೊಂಡು ಬಿದ್ದ ಶಾಖಾಧಿಕಾರಿ ಕಚೇರಿ ಕಟ್ಟಡ, ವಸತಿ ಗೃಹಗಳ ಸುತ್ತ ಬೆಳೆದು ನಿಂತ ಮುಳ್ಳು ಕಂಟಿ, ಕುಡಿಯುವ ನೀರಿಗೂ ಪರದಾಟ, ಅಗತ್ಯ ಮೂಲ ಸೌಕರ್ಯಗಳ ಮರೀಚಿಕೆ. ಇದು ಪಟ್ಟಣದ ಜೆಸ್ಕಾಂ ಕಚೇರಿಯ ಪ್ರಸ್ತುತ ಸ್ಥಿತಿ.

ಪಟ್ಟಣದ ಮಧ್ಯೆ ಭಾಗದಲ್ಲಿ 110 ಕೆ.ವಿ ಸಾಮರ್ಥ್ಯವುಳ್ಳ ಕೆಪಿಟಿಸಿಎಲ್‌ ಕಚೇರಿಯಿದೆ. ಮೂರು ಫೀಡರ್‌ಗಳನ್ನು ಹೊಂದಿದ್ದು, 42 ಗ್ರಾಮಗಳಿಗೆ ವಿದ್ಯುತ್‌ ಪೂರೈಸುತ್ತದೆ.

ದಶಕಗಳ ಹಿಂದೆ ಶಾಖಾಧಿಕಾರಿ ಕಚೇರಿ ನಿರ್ಮಿಸಲಾಗಿದೆ. ಕಟ್ಟಡ ಶಿಥಿಲಗೊಂಡ ಕಾರಣ ಸಂಪೂರ್ಣ ಬಿದ್ದಿದೆ. ಇದರಿಂದಾಗಿ ವಿದ್ಯುತ್‌ ಬಿಲ್‌ ಕಟ್ಟಲು ಬರುವ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಇದಕ್ಕಾಗಿ ಸಿಬ್ಬಂದಿ ವಸತಿ ಗೃಹವನ್ನೇ ಕಚೇರಿಯನ್ನಾಗಿ ಮಾರ್ಪಾಟು ಮಾಡಲಾಗಿದೆ.

ನಾಲ್ಕು ದಶಕಗಳ ಹಿಂದೆ ನಿರ್ಮಿಸಲಾಗಿದ್ದ 10 ಸಿಬ್ಬಂದಿ ವಸತಿ ಗೃಹಗಳು ಶಿಥಿಲಾವಸ್ಥೆಯಲ್ಲಿವೆ. ವಸತಿ ಗೃಹಗಳ ಮೇಲ್ಛಾವಣಿಯ ಪ್ಲಾಸ್ಟರ್‌ ಬಿದ್ದಿವೆ. ಕಬ್ಬಿಣದ ರಾಡುಗಳು ತೇಲುತ್ತಿವೆ. ಮಳೆ ಬಿದ್ದರೆ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ವಸತಿ ಗೃಹಗಳ ಸುತ್ತ ಮುಳ್ಳು ಕಂಟಿಗಳು ಬೆಳೆದು ನಿಂತಿವೆ. ರಾತ್ರಿ ವೇಳೆ ಹಾವು ಚೇಳು ಓಡಾಡುತ್ತವೆ. ಇದರಿಂದ ಇಲ್ಲಿ ವಾಸಿಸಲು ಸಿಬ್ಬಂದಿ ಭಯಪಡುತ್ತಾರೆ.

ವಸತಿ ಸಿಬ್ಬಂದಿಗೆ ನೀರು ಸರಬರಾಜು ಮಾಡಲು ಟ್ಯಾಂಕ್‌ ನಿರ್ಮಿಸಲಾಗಿದೆ. ಇದರ ಮೂಲಕ ಸಿಬ್ಬಂದಿಗಳ ವಸತಿ ಗೃಹಗಳಿಗೆ ನಲ್ಲಿ ಮೂಲಕ ನೀರು ಪೂರೈಸಲಾಗುತ್ತಿತ್ತು. ಆದರೆ ಟ್ಯಾಂಕ್‌ ಶಿಥಿಲಗೊಂಡ ಕಾರಣ ನಲ್ಲಿ ನೀರು ಪೂರೈಕೆ ನಿಂತಿದೆ. ಹೀಗಾಗಿ ಇಲಾಖೆ ವತಿಯಿಂದ ಇಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ. ಆದರೆ ಪದೇ ಪದೇ ಮೋಟಾರ್‌ ಕೆಡುತ್ತಿರುವ ಕಾರಣ ಸಿಬ್ಬಂದಿಗಳು ಹನಿ ನೀರಿಗೂ ಪರದಾಡುವ ಸ್ಥಿತಿಯಿದೆ.

2016–17 ನೇ ಸಾಲಿನಲ್ಲಿ ಜೆಸ್ಕಾಂ ಇಲಾಖೆಯು ಶಿಥಿಲಗೊಂಡ ಮೂರು ವಸತಿ ಗೃಹಗಳ ದುರಸ್ತಿಗೊಳಿಸಿ, ಬಣ್ಣ ಹಚ್ಚಿದೆ. ವಸತಿ ಗೃಹಗಳಲ್ಲಿ ಶೌಚಾಲಯ ನಿರ್ಮಾಣ ಹಾಗೂ ಕುಡಿಯುವ ನೀರು ಸರಬರಾಜು ಕಾಮಗಾರಿ ಕೈಗೊಂಡಿಲ್ಲ. ದುರಸ್ತಿ ಹೆಸರಲ್ಲಿ ಸರ್ಕಾರದ ಲಕ್ಷಾಂತರ ಹಣ ದುರಪಯೋಗವಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಸೂಕ್ತ ಮೇಲುಸ್ತುವಾರಿ ಇಲ್ಲದ ಕಾರಣ ಸಾರ್ವಜನಿಕರು ಜೆಸ್ಕಾಂ ಕಚೇರಿ ಆವರಣದಲ್ಲಿಯೇ ಮಲ ಮೂತ್ರ ವಿಸರ್ಜಿಸುತ್ತಾರೆ. ಇದರಿಂದ ಇಲ್ಲಿನ ವಾತಾವರಣ ಹದಗೆಟ್ಟಿದೆ. ಶೀಘ್ರದಲ್ಲಿ ಜೆಸ್ಕಾಂ ಕಚೇರಿಗೆ ಕಾಯಕಲ್ಪ ಒದಗಿಸಲು ಸಂಬಂಧಪಟ್ಟವರು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಶಾಂತ್‌ ಮಠಪತಿ

* * 

ಜೆಸ್ಕಾಂ ಸಿಬ್ಬಂದಿ ತೊಂದರೆಯಲ್ಲಿದ್ದು, ಅಗತ್ಯ ಮೂಲ ಸೌಕರ್ಯ ಒದಗಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು
ಬಾಲಾಜಿ ತೇಲಂಗ್‌, ಮುಖಂಡ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT