ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಸಲ್ಲದು: ಭಾರತಕ್ಕೆ ಮಾಲ್ಡೀವ್ಸ್‌ ಎಚ್ಚರಿಕೆ

Last Updated 23 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಮಾಲೆ (ಪಿಟಿಐ): ತನ್ನ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಭಾರತಕ್ಕೆ ಮಾಲ್ಡೀವ್ಸ್‌ ಎಚ್ಚರಿಕೆ ನೀಡಿದೆ.

ಮಾಲ್ಡೀವ್ಸ್‌ನಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟಿನ ಕುರಿತು ಕಳವಳ ವ್ಯಕ್ತಪಡಿಸಿದ್ದ ಭಾರತಕ್ಕೆ ಈ ಮೂಲಕ ಅದು ಖಾರವಾಗಿ ಪ್ರತಿಕ್ರಿಯಿಸಿದೆ.

ಮಾಲ್ಡೀವ್ಸ್‌ ಅಧ್ಯಕ್ಷ  ಯಮೀನ್‌ ಅವರು 30 ದಿನಗಳ ಕಾಲ ತುರ್ತು ಪರಿಸ್ಥಿತಿ ವಿಸ್ತರಿಸುವುದು ಅಸಾಂವಿಧಾನಿಕ ಎಂದು ಗುರುವಾರ ಭಾರತ ಹೇಳಿತ್ತು.

‘ನಮ್ಮಲ್ಲಿನ ವಾಸ್ತವ ಸಂಗತಿಗಳನ್ನು ಗ್ರಹಿಸದೇ ಭಾರತ ಹೇಳಿಕೆ ನೀಡಿದೆ. ನಮ್ಮ ನೆಲದ ಕಾನೂನು ಹಾಗೂ ಸಂವಿಧಾನವನ್ನು ಪರಿಗಣಿಸದೇ ಅಭಿಪ್ರಾಯ ವ್ಯಕ್ತಪಡಿಸಿದ ಭಾರತದ ನಡೆಯನ್ನು ಖಂಡಿಸುತ್ತೇವೆ’ ಎಂದು ಮಾಲ್ಡೀವ್ಸ್‌ನ ವಿದೇಶಾಂಗ ಸಚಿವಾಲಯ ಹೇಳಿದೆ.

‘ಮಾಲ್ಡೀವ್ಸ್‌ ಅತ್ಯಂತ ಸಂಕಷ್ಟದ ಕಾಲಎದುರಿಸುತ್ತಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ, ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಅಡ್ಡಿಯಾ ಗದಂತೆ ಭಾರತವು ಸೇರಿದಂತೆ ಅಂತರ ರಾಷ್ಟ್ರೀಯ ಸಮುದಾಯ ನಡೆದುಕೊಳ್ಳುವುದು ಸೂಕ್ತ’ ಎಂದು ಅದು ತಿಳಿಸಿದೆ.

‘ಅಗತ್ಯವಿದ್ದರೆ, ದೇಶದ ಬೆಳವಣಿಗೆಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಭಾರತ ಹಾಗೂ ಇನ್ನಿತರ ರಾಷ್ಟ್ರಗಳ ಆತಂಕ ದೂರ ಮಾಡಲು ಅವುಗಳೊಂದಿಗೆ ಮಾತುಕತೆ ನಡೆಸಲು ಬದ್ಧರಾಗಿದ್ದೇವೆ’ ಎಂದೂ ಅದು ತಿಳಿಸಿದೆ.

ರಾಜಕೀಯ ಪ್ರಬಾವದಿಂದಾಗಿ ಭಿನ್ನಮತೀಯ ನಾಯಕರಿಗೆ ಶಿಕ್ಷೆ ನೀಡಲಾಗಿದೆ ಎಂದು ಇಲ್ಲಿನ ಸುಪ್ರೀಂ ಕೋರ್ಟ್‌ ಆದೇಶ ನೀಡಿ ಅವರನ್ನು ಬಿಡುಗಡೆ ಮಾಡಿತ್ತು.

ಅವರ ಮೇಲಿನ ‍ಪ್ರಕರಣಗಳನ್ನು ಮರುವಿಚಾರಣೆಗೆ ಒಳಪಡಿಸಬೇಕು ಎಂದು ಕೋರ್ಟ್‌ ಹೇಳಿತ್ತು. ಬಿಡುಗಡೆಯಾದವರಲ್ಲಿ ಮಾಜಿ ಅಧ್ಯಕ್ಷ ಮೊಹಮದ್‌ ನಷೀದ್‌ ಅವರೂ ಸೇರಿದ್ದರು.

ಈ ಆದೇಶವನ್ನು ಪಾಲಿಸಲು ನಿರಾಕರಿಸಿದ ಅಧ್ಯಕ್ಷ ಯಮೀನ್‌ ಅವರು  ಫೆಬ್ರುವರಿ 5ರಂದು 15 ದಿನಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಿದ್ದರು.

ಮಂಗಳವಾರದಂದು (ಫೆ. 20) ತುರ್ತು ಪರಿಸ್ಥಿತಿ ಕೊನೆಯಾಗಬೇಕಿತ್ತು. ಆದರೆ, ಯಮೀನ್‌ ಅವರು ಇನ್ನೂ 30 ದಿನಗಳವರೆಗೆ ತುರ್ತು ಪರಿಸ್ಥಿತಿ ವಿಸ್ತರಿಸಿದ್ದಾರೆ. ಈ ಪ್ರಕಾರ ಮಾರ್ಚ್‌ 22ರಂದು ತುರ್ತು ಪರಿಸ್ಥಿತಿ ಕೊನೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT