ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಟರ್ಸ್‌ ಕ್ರೀಡಾಕೂಟ: ಸಂಘಟಕರೊಂದಿಗೆ ಅಥ್ಲೀಟ್‌ಗಳ ವಾಗ್ವಾದ

Last Updated 23 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ಪರ್ಧೆಗಳಿಗೆ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿ  ಮಾಸ್ಟರ್ಸ್‌ ಕ್ರೀಡಾಕೂಟದ ಅಥ್ಲೀಟ್‌ಗಳು ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಘಟಕರೊಂದಿಗೆ ವಾಗ್ವಾದ ನಡೆಸಿದರು.

ಅಡ್ವೊಕೇಟ್ಸ್ ಮಾಸ್ಟರ್ಸ್‌ ಸ್ಪೋರ್ಟ್ಸ್ ಫೆಡರೇಷನ್ ಆಫ್ ಇಂಡಿಯಾ ಮತ್ತು ಮಾಸ್ಟರ್ಸ್‌ ಅಥ್ಲೆಟಿಕ್ ಫೆಡರೇಷನ್‌ ಆಫ್‌ ಇಂಡಿಯಾ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಹಿರಿಯರ ರಾಷ್ಟ್ರೀಯ 39ನೇ ಕ್ರೀಡಾಕೂಟ 21ರಿಂದ ಇಲ್ಲಿ ನಡೆಯುತ್ತಿದೆ. 25ರಂದು ಮುಕ್ತಾಯಗೊಳ್ಳಲಿದೆ.

ಎರಡು ದಿನ ಟ್ರ್ಯಾಕ್ ಸ್ಪರ್ಧೆಗಳು ನಡೆದಿದ್ದವು. ಮೂರನೇ ದಿನವಾದ ಶುಕ್ರವಾರ ಬೆಳಿಗ್ಗೆ ಫೀಲ್ಡ್ ಸ್ಪರ್ಧೆಗಳು ಆರಂಭವಾಗುತ್ತಿದ್ದಂತೆ ಸಮಸ್ಯೆ ತಲೆದೋರಿತು. ಶಾಟ್‌ಪಟ್‌ ಸ್ಪರ್ಧೆಯನ್ನು ಕ್ರೀಡಾಂಗಣದ ನಿಗದಿತ ಜಾಗದಲ್ಲಿ ನಡೆಸಲು ಅವಕಾಶ ಸಿಗದ ಕಾರಣ ಸೆಂಟ್ರಲ್‌ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲು ಸಂಘಟಕರು ನಿರ್ಧರಿಸಿದರು.

ಇದಕ್ಕೆ ಕ್ರೀಡಾಪಟುಗಳು ವಿರೋಧ ವ್ಯಕ್ತಪಡಿಸಿದರು. ಸಂಘಟಕರೊಂದಿಗೆ ವಾಗ್ವಾದ ಹೆಚ್ಚಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಸೌಲಭ್ಯ ಕೊರತೆಯ ಆರೋಪ: ಕ್ರೀಡಾಕೂಟಕ್ಕೆ ಸೂಕ್ತ ಸಿದ್ಧತೆ ಮಾಡಿಕೊಳ್ಳದ ಕಾರಣ ಸೌಲಭ್ಯಗಳ ಕೊರತೆ ಕಾಡುತ್ತಿದೆ ಎಂದು ಕೆಲ ಕ್ರೀಡಾಪಟುಗಳು ಆರೋಪಿಸಿದರು.

‘ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ವಿವಿಧ ರಾಜ್ಯಗಳಿಂದ ಅಥ್ಲೀಟ್‌ಗಳು ಬಂದಿದ್ದಾರೆ. ಆದರೆ ನೀರು, ಶೌಚಾಲಯ ಇತ್ಯಾದಿ ಕೊರತೆ ಕಾಡುತ್ತಿದೆ. ಹಿರಿಯ ನಾಗರಿಕರಿಗೆ ಈ ರೀತಿ ತೊಂದರೆ ಕೊಡುವುದು ಎಷ್ಟು ಸರಿ’ ಎಂದು ಮಹಾರಾಷ್ಟ್ರದಿಂದ ಬಂದಿರುವ ಅಂಜಲಿ ಶಾ ಕೇಳಿದರು. ಅವರ ಆರೋಪಕ್ಕೆ ರಾಜ್ಯದ ಜ್ಯೋತಿ ಉದಯಕುಮಾರ್ ದನಿಗೂಡಿಸಿದರು.

ಸಮಸ್ಯೆ ಪರಿಹರಿಸಲಾಗಿದೆ: ಕ್ರೀಡಾಪಟುಗಳು ಒಂದು ಹಂತದಲ್ಲಿ ಬೇಸರ ವ್ಯಕ್ತಪಡಿಸಿದ್ದು ನಿಜ. ಆದರೆ ಸ್ವಲ್ಪ ಸಮಯದಲ್ಲೇ ಅವರ ಸಮಸ್ಯೆ ಪರಿಹರಿಸಲಾಗಿದೆ. ಕ್ರೀಡಾಪಟುಗಳು ಅಭ್ಯಾಸ ಮಾಡುವ ಜಾಗದಲ್ಲಿ ಕೆಲವು ಸ್ಪರ್ಧೆಗಳನ್ನು ನಡೆಸಲು ಮುಂದಾದಾಗ ಅಥ್ಲೀಟ್‌ಗಳು ಪ್ರತಿರೋಧ ವ್ಯಕ್ತಪಡಿಸಿದರು. ನಂತರ ಸೆಂಟ್ರಲ್‌ ಕಾಲೇಜು ಮೈದಾನದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲು ಒಪ್ಪಿಕೊಂಡರು’ ಎಂದು ಅಖಿಲ ಭಾರತ ಹಿರಿಯರ ಅಥ್ಲೆಟಿಕ್‌ ಸಂಸ್ಥೆಯ ಕಾರ್ಯದರ್ಶಿ ಡೇವಿಡ್ ಪ್ರೇಮನಾಥನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT