ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯತ್ ವ್ಯವಸ್ಥೆಗೆ ದ.ಕ. ಉಡಪಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ: ದಿನಕರ ಬಾಬು

Last Updated 24 ಫೆಬ್ರುವರಿ 2018, 6:01 IST
ಅಕ್ಷರ ಗಾತ್ರ

ಉಡುಪಿ: ‘ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಯಶಸ್ವಿಯಾಗಿ ಮುಂದುವರೆಯುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಉಡುಪಿ, ಕಾರ್ಕಳ, ಕುಂದಾಪುರ ತಾಲ್ಲೂಕು ಪಂಚಾಯಿತಿ, ಕುಂದಾಪುರ ತಾಲ್ಲೂಕು ಪಂಚಾಯತ್ ರಾಜ್ ಒಕ್ಕೂಟ ಹಾಗೂ ಗ್ರಾಮ ಪಂಚಾಯತ್‌ ಹಕ್ಕೊತ್ತಾಯ ಆಂದೋಲನ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ನಡೆದ 73ನೇ ಸಂವಿಧಾನ ತಿದ್ದುಪಡಿಯ 25 ವರ್ಷಾಚರಣೆ ‘ಗ್ರಾಮ ಸ್ವರಾಜ್ ಚಿಂತನ– ಮಂಥನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಲ್ಲಿನ ಆಡಳಿತ ವ್ಯವಸ್ಥೆ ಉತ್ತಮವಾಗಿರುವುದೇ ಈ ಯಶಸ್ಸಿಗೆ ಕಾರಣ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಗ್ರಾಮ ಸ್ವರಾಜ್ ಬಗ್ಗೆ ಚಿಂತನ– ಮಂಥನ ಕಾರ್ಯಕ್ರಮ ನಡೆಯುತ್ತಿರುವುದು ಒಳ್ಳೆಯ ಸಂಗತಿ. ಈ ಸಮಸ್ಯೆಯ ಬಗ್ಗೆ ಇಲ್ಲಿ ಸಂಪೂರ್ಣವಾಗಿ ಚರ್ಚಿಸಿ ಹೊರ ಹೊಮ್ಮುವ ಅಭಿಪ್ರಾಯಗಳನ್ನು ದಾಖಲೀಕರಣ ಮಾಡಿ ಸರ್ಕಾರಕ್ಕೆ ಕಳುಹಿಸುವ ಮೂಲಕ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿ ಮಾಡಿದರು. ರಾಜ್ಯಕ್ಕೆ ಬಂದಿದ್ದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಈ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ಅದನ್ನು ದೇಶದಲ್ಲಿ ಜಾರಿಗೊಳಿಸಲು ನಿರ್ಧರಿಸಿ ಸಂವಿಧಾನ ತಿದ್ದುಪಡಿಗೆ ಮುಂದಾದರು. ಆದರೆ ಅದು ತಿದ್ದುಪಡಿಯಾಗಿದ್ದು ನರಸಿಂಹ ರಾವ್ ಅವರ ಕಾಲದಲ್ಲಿ. ಆಗ ಜಾರಿ ಮಾಡಿದ ವ್ಯವಸ್ಥೆ ಅತ್ಯುತ್ತಮ ಅಲ್ಲ ಎಂಬುದು ಗೊತ್ತಿತ್ತು. ಆದರೆ ವ್ಯವಸ್ಥೆಯೊಂದು ಜಾರಿಯಾದರೆ ಅದನ್ನು ಸುಧಾರಿಸಿಕೊಳ್ಳಲು ಅವಕಾಶ ಇರುತ್ತದೆ ಎಂಬ ಕಾರಣಕ್ಕೆ ಒಪ್ಪಿಕೊಳ್ಳಲಾಯಿತು ಎಂದರು.

ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಬಂದ ಅನುದಾನವನ್ನು ಪಂಚಾಯಿತಿಯ ಇಷ್ಟದ ಹಾಗೆ ಬಳಸಿಕೊಳ್ಳಲು ಅವಕಾಶ ಇರಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನ ಸಂಖ್ಯೆ ಹೆಚ್ಚಾಗಿ ಇದ್ದಷ್ಟು ಯೋಜನೆ ರೂಪಿಸಿ ಜಾರಿ ಮಾಡಲು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಪಂಚಾಯಿತಿ ಅಂದರೆ ಅದು ಸ್ವಾಯತ್ತ ಸರ್ಕಾರ ಇದ್ದಂತೆ. ಅಧಿಕಾರವನ್ನು ಬಿಟ್ಟುಕೊಡದಿರುವುದು ಪಂಚಾಯತ್ ರಾಜ್ ವ್ಯವಸ್ಥೆಗೆ ದೊಡ್ಡ ತೊಡಕಾಗಿದೆ. ಗ್ರಾಮ ಪಂಚಾಯಿತಿ ಸದಸ್ಯ ಗ್ರಾಮಸಭೆಗೆ, ಶಾಸಕ ಗ್ರಾಮ ಪಂಚಾಯಿತಿ ಸದಸ್ಯನಿಗೆ ಹಾಗೂ ಸಂಸದ ಶಾಸಕನಿಗೆ ಅಧಿಕಾರ ಕೊಡುವುದಿಲ್ಲ. ಆದ್ದರಿಂದ ನಮಗೇ ಅಧಿಕಾರವಿದ್ದು ಅದನ್ನು ಬಿಟ್ಟುಕೊಡುವುದಿಲ್ಲ ಎಂಬ ಭಾವನೆ ಜನರಲ್ಲಿ ಬಂದಾಗ ಈ ವ್ಯವಸ್ಥೆ ಸರಿ ಹೋಗುತ್ತದೆ ಎಂದು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಸಮಿತಿ ಸದಸ್ಯೆ ನಂದನ ರೆಡ್ಡಿ ಹೇಳಿದರು.

ಸಂವಾದಲ್ಲಿ ಮಾತಾಡಿದ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಸದಸ್ಯ ಸಾಣೂರು ನರಸಿಂಹ ಕಾಮತ್, ಪಂಡಲ ಪಂಚಾಯತ್ ವ್ಯವಸ್ಥೆಯಲ್ಲಿದ್ದ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು. ದಾವಣಗೆರೆಯ ವಿಶ್ವನಾಥ್ ಮಾತನಾಡಿ, ತ್ರಿಸ್ತರ ಅಥವಾ ದ್ವಿಸ್ತರ ಪಂಚಾಯತ್ ವ್ಯವಸ್ಥೆ ಯಾವುದೇ ಇರಲಿ, ಆದರೆ ಅದು ರಬ್ಬರ್ ಸ್ಟಾಂಪ್ ಆಗದಿರಲಿ. ಪಂಚಾಯಿತಿಗೆ ಬರುವ ಅನುದಾನದಲ್ಲಿ ಮೊದಲು ವಿದ್ಯುತ್ ಶುಲ್ಕ ಪಾವತಿಸಬೇಕಾಗಿರುವುದರಿಂದ ಅಭಿವೃದ್ಧಿಗೆ ಹಣ ಉಳಿಯುವುದಿಲ್ಲ. ಈ ವ್ಯವಸ್ಥೆ ಬದಲಾಗಬೇಕು ಎಂದರು.

* * 

ಹಣಕಾಸು, ಕಾರ್ಯಕ್ರಮ ಮತ್ತು ಅಧಿಕಾರಿ ವರ್ಗ ಹೇಗೆ ವಿಕೇಂದ್ರೀಕರಣ ಆಗಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿ ನಿರ್ಣಯ ಮಾಡಿ.
ಪ್ರಿಯಾಂಕ ಮೇರಿ ಫ್ರಾನ್ಸಿಸ್
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT