ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಕಾರ್ಯಕರ್ತರಲ್ಲಿ ಪುಟಿದೆದ್ದ ಉತ್ಸಾಹ

Last Updated 24 ಫೆಬ್ರುವರಿ 2018, 6:10 IST
ಅಕ್ಷರ ಗಾತ್ರ

ವಿಜಯಪುರ: ಎಐಸಿಸಿ ಅಧ್ಯಕ್ಷರಾದ ಬಳಿಕ ರಾಹುಲ್‌ಗಾಂಧಿ ಫೆ. 24ರ ಶನಿವಾರ, 25ರ ಭಾನುವಾರ ವಿಜಯಪುರ ಜಿಲ್ಲೆಗೆ ಮೊದಲ ಭೇಟಿ ನೀಡಲಿದ್ದು, ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಂಡಿದೆ.

ಪಕ್ಷದ ಅಗ್ರೇಸರನ ಸಾರಥ್ಯದಲ್ಲಿ ನಡೆಯಲಿರುವ ಜನಾಶೀರ್ವಾದ ಯಾತ್ರೆಯ ಸರಣಿ ಕಾರ್ಯಕ್ರಮ ಯಶಸ್ವಿಗೊಳಿಸಲಿಕ್ಕಾಗಿ ಜಿಲ್ಲಾ ಕಾಂಗ್ರೆಸ್‌ನ ವಿವಿಧ ಘಟಕಗಳು, ಶಾಸಕರು, ಸಚಿವರು, ಚುನಾಯಿತ ಜನಪ್ರತಿನಿಧಿಗಳು ಅಹೋರಾತ್ರಿ ಸಭೆ ನಡೆಸಿ, ಬಲ ಪ್ರದರ್ಶನಕ್ಕೆ ವೇದಿಕೆ ಸಿದ್ಧಗೊಳಿಸಿದ್ದಾರೆ.

ತಿಕೋಟಾದಲ್ಲಿ ಶನಿವಾರ ಮಧ್ಯಾಹ್ನ ನಡೆಯಲಿರುವ ಮಹಿಳಾ ಕಾಂಗ್ರೆಸ್‌ ಸಮಾವೇಶದ ಸಿದ್ಧತೆಗಳು ಬಿರುಸಿನಿಂದ ನಡೆದಿವೆ. ವೇದಿಕೆ ನಿರ್ಮಾಣ, ಪೆಂಡಾಲ್‌ ಪೂರ್ಣಗೊಂಡಿದ್ದು, ಯುವರಾಜನ ಸ್ವಾಗತಕ್ಕೆ 21 ಸಾವಿರಕ್ಕೂ ಹೆಚ್ಚು ಮಹಿಳೆಯರು ಪೂರ್ಣ ಕುಂಭ ದೊಂದಿಗೆ ಸಜ್ಜಾಗಿದ್ದಾರೆ. ಐದು ಕಿ.ಮೀ. ಸುತ್ತಳತೆಯಲ್ಲಿ ಕಾಂಗ್ರೆಸ್‌ ಮುಖಂಡರ ಕಟೌಟ್‌ಗಳು ರಾರಾಜಿಸುತ್ತಿವೆ.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೊರವಿಯಿಂದ ಗಾಂಧಿಚೌಕ್‌ವರೆಗೂ ರಾಹುಲ್‌ ರೋಡ್‌ ಶೋ ನಡೆಸಲಿದ್ದು, ಯುವರಾಜನ ಗಮನ ಸೆಳೆಯಲು ರಸ್ತೆ ಬದಿಯ ಇಕ್ಕೆಲಗಳಲ್ಲೂ ಮುಂಬರುವ ವಿಧಾನಸಭಾ ಚುನಾವಣೆಯ ಟಕೆಟ್‌ ಆಕಾಂಕ್ಷಿಗಳು, ಮುಖಂಡರು, ಕಾರ್ಯ ಕರ್ತರು ಬೃಹತ್‌ ಬ್ಯಾನರ್‌, ಜಾಹೀರಾತು ಫಲಕ ಅಳವಡಿಸಿದ್ದಾರೆ.

ನಗರದ ಗಾಂಧಿ ರಸ್ತೆಯಿಂದ ಅಥಣಿ ರಸ್ತೆಯ ನೂತನ ಪ್ರವಾಸಿ ಮಂದಿರ ದವರೆಗೆ ಸಾಲು ಸಾಲು ಫ್ಲೆಕ್ಸ್‌ಗಳು, ಸ್ವಾಗತ ಕಮಾನುಗಳು ರಾರಾಜಿಸುತ್ತಿವೆ. ಗಾಂಧಿವೃತ್ತದಿಂದ ಶಿವಾಜಿ ವೃತ್ತದವರೆಗೆ ರಸ್ತೆಯ ಎರಡೂ ಬದಿಯಲ್ಲಿಯೂ ಕಾಂಗ್ರೆಸ್ ಬಾವುಟಗಳು ಹಾರಾಡುತ್ತಿವೆ.

ಫೆ. 25ರ ಭಾನುವಾರ ನಸುಕಿನಲ್ಲಿ ಎಐಸಿಸಿ ಅಧ್ಯಕ್ಷರು ವೃಕ್ಷ ಅಭಿಯಾನ ಟ್ರಸ್ಟ್‌ ಆಯೋಜಿಸಿರುವ ಹಾಫ್‌ ಮ್ಯಾರಾಥಾನ್‌ಗೆ ಹಸಿರು ನಿಶಾನೆ ತೋರಲಿದ್ದಾರೆ. ನಂತರ ಬಾಗಲಕೋಟೆ ಜಿಲ್ಲೆಯ ವಿವಿಧೆಡೆಯ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡು ಮಧ್ಯಾಹ್ನ 12ರ ವೇಳೆಗೆ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಳವಾಡದಲ್ಲಿ ನಡೆಯಲಿರುವ ಜನಾಶೀರ್ವಾದ ಯಾತ್ರೆಯ ‘ಕಾರ್ನರ್‌ ಮೀಟಿಂಗ್‌’ನಲ್ಲಿ ಭಾಗಿಯಾಗಲಿದ್ದಾರೆ. ರಾಹುಲ್‌ ಭೇಟಿ ಹಿನ್ನೆಲೆಯಲ್ಲಿ ಮುಳವಾಡವೂ ನವ ವಧುವಿನಿಂತೆ ಶೃಂಗಾರಗೊಂಡಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಜನಾಶೀರ್ವಾದ ಯಾತ್ರೆಗೆ ಅಪಾರ ಜನ ಸೇರಿಸಿ, ಯಶಸ್ವಿಗೊಳಿಸಲು ಜಿಲ್ಲೆಯ ‘ಕೈ’ ನಾಯಕರು ಹೊಸ ಹುರುಪಿನಿಂದ ಸರಣಿ ಸಭೆಗಳನ್ನು ನಡೆಸಿ ಸಿದ್ಧತೆ ಕೈಗೊಂಡಿದ್ದಾರೆ. ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಇಂಧನ ಸಚಿವ ಡಿ.ಕೆ.ಶಿವಕುಮಾರ, ಕೆಪಿಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಚಿವ ಎಂ.ಬಿ.ಪಾಟೀಲ ತಿಕೋಟಾದಲ್ಲಿ ನಡೆಯಲಿರುವ ಸಮಾವೇಶ ಸ್ಥಳಕ್ಕೆ ತೆರಳಿ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದರು.

ಪ್ರವಾಸ ಪಟ್ಟಿ: ತಿಕೋಟಾದ ಬಿಎಲ್‌ಡಿಇ ಸ್ಕೂಲ್ ಕ್ಯಾಂಪಸ್‌ನಲ್ಲಿ ಫೆ. 24ರ ಮಧ್ಯಾಹ್ನ 3ಕ್ಕೆ ನಡೆಯಲಿರುವ ಸ್ತ್ರೀಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ರಾಹುಲ್‌ ಮಹಿಳೆಯರೊಂದಿಗೆ ಸಂವಾದ ನಡೆಸುವರು. ಸಂಜೆ 5.20ಕ್ಕೆ ರಸ್ತೆ ಮೂಲಕ ತೊರವಿಗೆ ಆಗಮಿಸಿ, ಅಲ್ಲಿಂದ ವಿಜಯಪುರದ ಹೃದಯ ಭಾಗ ಗಾಂಧಿಚೌಕ್‌ ತನಕ ರೋಡ್ ಶೋ ನಡೆಸುವರು.

ಸಂಜೆ 6.30ರಿಂದ ಸರ್ಕಾರಿ ಅತಿಥಿಗೃಹದಲ್ಲಿ ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಸಭೆ ನಡೆಸುವರು. ಸಂಜೆ 7ರಿಂದ ವಿಜಯಪುರ, ಚಿಕ್ಕೋಡಿ ಭಾಗದ ಹಿರಿಯ ನಾಯಕರೊಂದಿಗೆ ಸಭೆ ನಡೆಸಿ ವಿಜಯಪುರದಲ್ಲೇ ವಾಸ್ತವ್ಯ ಹೂಡುವರು.

ಫೆ. 25ರ ಬೆಳಿಗ್ಗೆ 7.30ಕ್ಕೆ ವೃಕ್ಷೋತ್ಥಾನ ಅಭಿಯಾನದ ಅಂಗವಾಗಿ 2018ರ ಹಾಫ್ ಮ್ಯಾರಥಾನ್‌ಗೆ ಚಾಲನೆ ನೀಡುವರು. ನಂತರ ಬಾಗಲಕೋಟ ಜಿಲ್ಲೆಗೆ ತೆರಳುವರು. ಮಧ್ಯಾಹ್ನ 12ಕ್ಕೆ ಮುಳವಾಡಕ್ಕೆ ಬಂದು, ಜನಾಶೀರ್ವಾದ ಯಾತ್ರೆಯ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾ
ಡುವರು ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಮೂರು ಹೆಲಿಪ್ಯಾಡ್‌: ಅಥಣಿ ಯಿಂದ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಪ್ರಮುಖ ಸಚಿವರು ತಿಕೋಟಾಗೆ ಮೂರು ಹೆಲಿಕಾಪ್ಟರ್‌ಗಳಲ್ಲಿ ಬರಲಿದ್ದು, ಕಾರ್ಯಕ್ರಮದ ಸ್ಥಳದಲ್ಲಿ ಎರಡು, ಸೋಮದೇವರಹಟ್ಟಿ ತಾಂಡಾ ಬಳಿ ಒಂದು ಹೆಲಿಪ್ಯಾಡ್‌ ನಿರ್ಮಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಮಹಿಳಾ ಸಬಲೀಕರಣದ ಹೆಜ್ಜೆಯಾಗಿ ಸಮಾವೇಶ: ಜಿ.ಪರಮೇಶ್ವರ್

ತಿಕೋಟಾದಲ್ಲಿ ನಡೆಯಲಿರುವ ಮಹಿಳಾ ಸಮಾವೇಶ, ಮಹಿಳಾ ಸಬಲೀಕರಣದ ಮಹತ್ವದ ಹೆಜ್ಜೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ವ್ಯಾಖ್ಯಾನಿಸಿದರು.

ಅಂತಿಮ ಸಿದ್ಧತೆಗಳನ್ನು ಶುಕ್ರವಾರ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಮಹಿಳಾ ಸಬಲೀಕರಣಕ್ಕಾಗಿ ವಿಜಯಪುರದಲ್ಲಿ ರಾಜ್ಯ ಮಹಿಳಾ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲಾಗಿತ್ತು. ಅಂದು ಎಐಸಿಸಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಸಮಾರಂಭ ಉದ್ಘಾಟಿಸಿದ್ದರು. ಮಹಿಳಾ ಸಬಲೀಕರಣವನ್ನೇ ಧ್ಯೇಯವಾಗಿರಿಸಿಕೊಂಡು ಸಂಘಟಿಸಲಾಗುತ್ತಿರುವ ಸಮಾವೇಶಕ್ಕೆ ಪ್ರಸ್ತುತ ಎಐಸಿಸಿ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ ಚಾಲನೆ ನೀಡಲಿದ್ದಾರೆ.

‘ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ’, ಮಹಿಳಾ ಸಬಲೀಕರಣದ ಮಹತ್ವದ ಕುರಿತು ರಾಹುಲ್ ಗಾಂಧಿ ತಮ್ಮ ವಿಚಾರ ವ್ಯಕ್ತಪಡಿಸಲಿದ್ದಾರೆ’ ಎಂದು ಹೇಳಿದರು.

* *

ರಾಹುಲ್‌ ಜನಾಶೀರ್ವಾದ ಯಾತ್ರೆಗೆ ಸ್ಥಳೀಯರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಮುಳವಾಡ ಕಾರ್ಯಕ್ರಮದಲ್ಲಿ 40 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಲಿದ್ದಾರೆ
ಎಸ್‌.ಆರ್‌.ಪಾಟೀಲ ಕಾರ್ಯಾಧ್ಯಕ್ಷ, ಕೆಪಿಸಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT