ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಗಳ ಪ್ರಗತಿಗೆ ತಂತ್ರಜ್ಞಾನದ ಬಳಕೆ ಅಗತ್ಯ

Last Updated 24 ಫೆಬ್ರುವರಿ 2018, 7:06 IST
ಅಕ್ಷರ ಗಾತ್ರ

ಕೊಪ್ಪಳ: ‘ಕುಡಿಯುವ ನೀರು ಪೂರೈಕೆ ಮತ್ತು ಶೌಚಾಲಯ ನಿರ್ಮಾಣದಲ್ಲಿ ಗ್ರಾಮೀಣ ಭಾಗದಲ್ಲಿ ಕ್ರಾಂತಿಯಾಗಲು ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ಗದಗನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಹೇಳಿದರು.

ಇಲ್ಲಿನ ಗವಿಸಿದ್ದೇಶ್ವರ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಆಶ್ರಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ರಾಷ್ಟ್ರಮಟ್ಟದ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನದಲ್ಲಿ ಶುಕ್ರವಾರ ಅವರು ಮಾತನಾಡಿದರು.

‘ತಂತ್ರಜ್ಞಾನ ಬಳಕೆಯಲ್ಲಿ ತೊಡಕುಗಳು ಇವೆ. ಆದರೆ, ತಂತ್ರಜ್ಞಾನದಿಂದ ಅಭಿವೃದ್ಧಿ ಕಾರ್ಯಗಳು ವೇಗ ಪಡೆಯುತ್ತವೆ. ಸ್ಪರ್ಧಾತ್ಮಕವಾಗಿ ಬೆಳೆಯಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಭಾರತ ಹಳ್ಳಿಗಳ ದೇಶ. ಸುಂದರವಾದ ಹಳ್ಳಿಗಳು ನಿರ್ಮಾಣ ಮಾಡಿದರೆ ಮಾತ್ರ ದೇಶದ ಅಭಿವೃದ್ಧಿ ಆಗುತ್ತದೆ. ಗಾಂಧೀಜಿ ಗ್ರಾಮಾಭಿವೃದ್ಧಿಯ ಕನಸು ಕಂಡಿದ್ದರು. ಅವರು ಕನಸು ನನಸಾಗಿಸಲು ಸರ್ಕಾರಗಳು ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಇಂಥ ಕಾರ್ಯಕ್ರಮಗಳಲ್ಲಿ ತಂತ್ರಜ್ಞಾನ ಹೆಚ್ಚು ಬಳಕೆ ಆಗಬೇಕು’ ಎಂದರು.

‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ವಿಶ್ವವಿದ್ಯಾಲಯವು ಇದೇ ಉದ್ದೇಶ ಹೊಂದಿದೆ. ಗ್ರಾಮಗಳಲ್ಲಿನ ಮಾನವ ಸಂಪನ್ಮೂಲ ಬಲರ್ಧನೆಗೊಳಿಸುವುದು ಹಾಗೂ ವಿವಿಧ ಹಂತದ ಜನಪ್ರತಿನಿಧಿಗಳಿಗೆ ತರಬೇತಿ ನೀಡುವುದು ನಮ್ಮ ಹೊಣೆಯಾಗಿದೆ. ಸಶಕ್ತ ಗ್ರಾಮಗಳ ನಿರ್ಮಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ’ ಎಂದು ಹೇಳಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ‘ದೇಶವು ಶೇ 100ರಷ್ಟು ಸಾಕ್ಷರತೆ ಸಾಧಿಸಲು ಆಗಿಲ್ಲ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಕೆ ಮಾಡಿದರೆ ನಾವು ಸಾಕ್ಷರತೆಯಲ್ಲಿ ಬಹಳ ಹಿಂದಿದ್ದೇವೆ. ಈ ವ್ಯತ್ಯಾಸ ಸರಿಪಡಿಸಬೇಕಾಗಿದೆ’ ಎಂದರು.

‘ಶಿಕ್ಷಣವೂ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಜಾತಿ ವ್ಯವಸ್ಥೆ ನಿರ್ಮೂಲನೆ ಶಿಕ್ಷಣದಿಂದ ಸಾಧ್ಯವಿದೆ. ಭಾರತ ವಿಶ್ವದ ಗುರುವಾಗಬೇಕು. ಈ ಸಾಧನೆಯಲ್ಲಿ ವಿಜ್ಞಾನಿಗಳ ಪಾತ್ರ ಮಹತ್ವದ್ದಾಗಿದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಶಿಕ್ಷಣ ಮತ್ತು ತಂತಜ್ಞಾನ ವಲಯಕ್ಕೆ ಹೆಚ್ಚಿನ ನೆರವು ನೀಡಿದೆ. ನಿರುದ್ಯೋಗ ನಿವಾರಣೆಗೆ ಯೋಜನೆಗಳನ್ನು ರೂಪಿಸಲಾಗಿದೆ. ಕೌಶಲ ತರಬೇತಿ ಕೇಂದ್ರಗಳ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುವುದು’ ಎಂದರು.

ಬಳ್ಳಾರಿಯ ಕೃಷ್ಣದೇವರಾಯ ವಿ.ವಿಯ ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್ ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಡಾ.ಎಸ್‌.ಕೆ.ಶಿವಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಎಸ್‌.ಎ.ಪಾಟೀಲ, ಕಾಲೇಜಿನ ಪ್ರಾಂಶುಪಾಲ ಪ್ರೊ. ಮನೋಹರ್ ಎಸ್‌. ದಾದ್ಮಿಮ ಆಡಳಿತಾಧಿಕಾರಿ ಮರೀಗೌಡ, ಸಿ.ಪಿ.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT