ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ ಸುರಿದು ಪ್ರತಿಭಟನೆಯ ಎಚ್ಚರಿಕೆ

Last Updated 24 ಫೆಬ್ರುವರಿ 2018, 9:10 IST
ಅಕ್ಷರ ಗಾತ್ರ

ಹಾವೇರಿ: ಮಾರ್ಚ್‌ 10ರೊಳಗಾಗಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸದಿದ್ದರೆ ಜಿಲ್ಲಾಡಳಿತ ಹಾಗೂ ನಗರಸಭೆಯ ಮುಂಭಾಗದಲ್ಲೇ ಮಲ ಸುರಿದುಕೊಂಡು ಪ್ರತಿಭಟನೆ ನಡೆಸುತ್ತೇವೆ ಎಂದು ನಗರದ ಭಂಗಿ ಕುಟುಂಬದ (ಮ್ಯಾನುವಲ್‌ ಸ್ಕ್ಯಾವೆಂಜರ್ಸ್) ಸದಸ್ಯರು ಶುಕ್ರವಾರ ಎಚ್ಚರಿಕೆ ನೀಡಿದರು.

ನಗರದಲ್ಲಿ 27 ಭಂಗಿ ಕುಟುಂಬಗಳಿದ್ದು, ಬೇರೆ ವೃತ್ತಿ ಇಲ್ಲದ ಕಾರಣ ‘ಮಲ ಹೊರುವ ಪದ್ಧತಿ’ಯ ಪ್ರತಿರೂಪದಂತಿರುವ ಹೊಂಡದಿಂದ ಮಲ ವಿಲೇವಾರಿ, ಮಲದ ಚರಂಡಿ ಸ್ವಚ್ಛತೆ, ಬಳಸಿದ ಶೌಚಾಲಯಗಳ ದುರಸ್ತಿ ಮತ್ತು ಸ್ವಚ್ಛತೆಯ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಈ ಬಗ್ಗೆ ನಗರಸಭೆ, ಜಿಲ್ಲಾಡಳಿತ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಾಗೂ ವಿವಿಧ ಆಯೋಗಗಳಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಸ್ವ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯವನ್ನೂ ನೀಡುತ್ತಿಲ್ಲ ಎಂದು ಸಮುದಾಯದ ಸುಭಾಸ್ ಎನ್. ಬೆಂಗಳೂರ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಮ್ಯಾನುವಲ್ ಸ್ಕ್ಯಾವೆಂಜರ್ಸ್ ನೇಮಕಾತಿ ಮತ್ತು ಅವರ ಪುನರ್ ವಸತಿ ಅಧಿನಿಯಮ 2013’ರ ಅನ್ವಯ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸುವಂತೆ ಹಲವಾರು ಬಾರಿ ಮನವಿ ನೀಡಲಾಗಿದೆ. ಸಫಾಯಿ ಕರ್ಮಚಾರಿ ಆಯೋಗವೂ ಸೂಚಿಸಿದೆ. ಆದರೆ, ಈ ತನಕವೂ ಗುರುತಿನ ಚೀಟಿ, ವಸತಿ, ಸಾಲಸೌಲಭ್ಯ ಸೇರಿದಂತೆ ಯಾವುದೇ ಪುನರ್ವಸತಿ ಸೌಕರ್ಯಗಳನ್ನು ಅಧಿಕಾರಿಗಳು ಕಲ್ಪಿಸಿಲ್ಲ’ ಎಂದು ದೂರಿದರು.

ಸವಣೂರಿನಲ್ಲಿ ಮೈ ಮೇಲೆ ಮಲ ಸುರಿದು ಪ್ರತಿಭಟನೆ ನಡೆದಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತವು ಭಂಗಿ ಸಮುದಾಯಕ್ಕೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವುದಾಗಿ 2010ರಲ್ಲಿ ಭರವಸೆ ನೀಡಿತ್ತು. ಆದರೆ, ಈ ತನಕವೂ ಯಾವುದೇ ಸೌಲಭ್ಯ ಕಲ್ಪಿಸಿಲ್ಲ ಎಂದು ದೂರಿದರು.

ಮೀಸಲಾತಿಯಲ್ಲೂ ವಂಚನೆ: ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ 108 ಉಪಜಾತಿಗಳಿವೆ. ಹೀಗಾಗಿ ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಹಾಗೂ ಇತರ ಅಧಿಕಾರ, ಅವಕಾಶ, ಸೌಲಭ್ಯಗಳನ್ನು ಬಲಾಢ್ಯ ಸಮುದಾಯಗಳೇ ಕಬಳಿಸುತ್ತಿದ್ದಾರೆ. ಭಂಗಿ ವೃತ್ತಿಯನ್ನು ಎಲ್ಲ ಮಾದಿಗರು ಮಾಡದಿದ್ದರೂ, ನಮ್ಮನ್ನು ಪ್ರತ್ಯೇಕವಾಗಿ ಪರಿಗಣಿಸಿಲ್ಲ. ಹೀಗಾಗಿ ‘ಮೀಸಲಾತಿ’ಯಲ್ಲೂ ಸತತ ವಂಚನೆ ಆಗುತ್ತಿದೆ ಎಂದು ಸುಭಾಸ್‌ ಎನ್. ಬೆಂಗಳೂರ ಹೇಳಿದರು. ರವಿ ಕೊಂಡಿ, ಯುವರಾಜ ಭಂಡಾರಿ, ಶ್ರೀನಿವಾಸ ಕೊಂಡಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT