ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಕೆಜಿ ಅಕ್ಕಿ,100 ಗ್ರಾಂ ಕೊತ್ತಂಬರಿ ಪುಡಿ; ಕಳ್ಳತನ ಆರೋಪದಲ್ಲಿ ಜನರಿಂದ ಹಲ್ಲೆಗೊಳಗಾಗಿ ಮೃತಪಟ್ಟ ಮಧುವಿನ ಚೀಲದಲ್ಲಿದ್ದದ್ದು ಇಷ್ಟೇ!

Last Updated 24 ಫೆಬ್ರುವರಿ 2018, 12:30 IST
ಅಕ್ಷರ ಗಾತ್ರ

ಪಾಲಕ್ಕಾಡ್: ಎರಡು ಕೆಜಿ ಅಕ್ಕಿ, 100 ಗ್ರಾಂ ಕೊತ್ತಂಬರಿ ಪುಡಿ, ಪುಟ್ಟ ಟಾರ್ಚ್, ಒಂದು ಮೊಬೈಲ್ ಚಾರ್ಜರ್... ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಜನರ ಗುಂಪು ಆದಿವಾಸಿ ಯುವಕ ಮಧು ಮೇಲೆ ಹಲ್ಲೆ ನಡೆಸುವಾಗ ಆತನ ಚೀಲದಲ್ಲಿ ಇದ್ದ ವಸ್ತುಗಳು ಇವು. ಈ ವಸ್ತುಗಳನ್ನು ಮಧು ಕದ್ದಿದ್ದಾನೆ ಎಂದು ಆರೋಪಿಸಿ ಜನರ ಗುಂಪೊಂದು ಆತನ ಮೇಲೆ ಗಂಭೀರ ಹಲ್ಲೆ ನಡೆಸಿತ್ತು. ಆದರೆ ಮಧು ಕಳ್ಳತನ ಮಾಡಿದ್ದಾನೆ ಎಂಬುದಕ್ಕೆ ಸಾಕ್ಷ್ಯವೇನು ಎಂದು ಕೇಳಿದರೆ ಅದಕ್ಕೆ ಯಾವುದೇ ಉತ್ತರವಿಲ್ಲ.

ಕಳೆದ ಎರಡು ವರ್ಷ ಅವಧಿಯಲ್ಲಿ ಮುಕ್ಕಾಲಿ ಮತ್ತು ಅಲ್ಲಿನ ಸುತ್ತಲಿನ ಪ್ರದೇಶಗಳಲ್ಲಿನ ಅಂಗಡಿಯಿಂದ ಆಹಾರ ವಸ್ತುಗಳು ಕಳವು ಆಗುತ್ತಿತ್ತು. ಈ ಕಳ್ಳತನದ ಆರೋಪ ಮಧುವಿನ ಮೇಲೆ ಹೊರಿಸಲಾಗಿದೆ. 

ಕಳೆದೆರಡು ದಿನಗಳ ಹಿಂದೆ ಈ ಪ್ರದೇಶದಲ್ಲಿನ ಅಂಗಡಿಯೊಂದರಿಂದ ಅಕ್ಕಿ ಕಳ್ಳತನವಾಗಿದೆ ಎಂದು ಆರೋಪಿಸಿ ಮಧು ವಾಸಿಸುತ್ತಿದ್ದ  ಸ್ಥಳದಿಂದ ಮುಕ್ಕಾಲಿ ಗ್ರಾಮಕ್ಕೆ ಕರೆದುಕೊಂಡು ಬರಲಾಗಿತ್ತು. ಮಧುವನ್ನು ಮುಕ್ಕಾಲಿಗೆ ನಡೆಸಿಕೊಂಡೇ ಬಂದ ಜನರ ಗುಂಪು ದಾರಿ ಮಧ್ಯೆಯೂ ಹಲ್ಲೆ ಮಾಡಿತ್ತು. ಮುಕ್ಕಾಲಿಗೆ ತಲುಪಿದ ನಂತರ ಮಧು ಉಟ್ಟಿದ್ದ ಲುಂಗಿಯನ್ನು ಬಿಚ್ಚಿ ಆತನ ಕೈ ಕಟ್ಟಿ ಹಾಕಿ ಹಿಗ್ಗಾಮುಗ್ಗ ಥಳಿಸಲಾಗಿತ್ತು. ಅಲ್ಲಿನ ಗ್ರಾಮಸ್ಥರು ಸುಮಾರು ಎರಡು ಗಂಟೆಗಳ ಕಾಲ ಮಧುವಿನ ಮೇಲೆ ಹಲ್ಲೆ ನಡೆಸಿ ನಂತರ ಪೊಲೀಸರಿಗೊಪ್ಪಿಸಿದ್ದರು.

ಮಧು ಸಾಕ್ಷ್ಯ ನುಡಿದದ್ದು ಎಫ್‍ಐಆರ್‍‍ನಲ್ಲಿದ್ದರೂ ಆರೋಪಿಗಳನ್ನು ಬಂಧಿಸಲು ವಿಳಂಬ ಮಾಡಿದ್ದು ಯಾಕೆ?
ತನ್ನ ಮೇಲೆ ಹಲ್ಲೆ ನಡೆಸಿದವರ ಬಗ್ಗೆ ಮಧು ಪೊಲೀಸರಿಗೆ ಸಾಕ್ಷ್ಯ ನುಡಿದಿದ್ದಾರೆ ಎಂದು ಎಫ್‌ಐಆರ್‍‍ನಲ್ಲಿ ಹೇಳಿದ್ದರೂ ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಳಂಬ ಮಾಡಿರುವುದು ಯಾಕೆ ಎಂಬ ಪ್ರಶ್ನೆ ಎದ್ದಿದೆ. ತನ್ನನ್ನು ಸೆರೆ ಹಿಡಿದ ಯುವಕರ ಗುಂಪೊಂದು ತೀವ್ರ ಹಲ್ಲೆ ನಡೆಸಿದೆ ಎಂದು ಕೊನೆಯುಸಿರೆಳೆಯುವ ಮುನ್ನ ಮಧು ಪೊಲಿಸರಿಗೆ ಹೇಳಿದ್ದರು. ಹಲ್ಲೆ ಮಾಡಿದವರ ಹೆಸರನ್ನು ಆತ ಹೇಳಿದ್ದರೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು  ವಿಳಂಬ ಮಾಡಿದ್ದಾರೆ.

ಗುರುವಾರ ಸಂಜೆ 5.30ರ ಹೊತ್ತಿಗೆ ಎಫ್‍ಐಆರ್ ದಾಖಲಾಗಿದೆ. ಮಧುವನ್ನು ಜೀಪಿನಲ್ಲಿ ಕರೆದುಕೊಂಡು ಬಂದವರ ಹೆಸರು ಮತ್ತು ಮೊಬೈಲ್ ಸಂಖ್ಯೆಗಳೂ ಎಫ್‌ಐಆರ್‍‍ನಲ್ಲಿದೆ. ಇಂಥಾ ಪ್ರಕರಣಗಳಲ್ಲಿ ಎಸ್‍ಸಿಎಸ್‍ಟಿ ಕಾಯ್ದೆಯಡಿ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಮಧುವಿನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಮತ್ತು ಹಲ್ಲೆ ನಡೆಸಿದವರ ಫೇಸ್‍ಬುಕ್ ಪ್ರೊಫೈಲ್‍ ವಿವರಗಳು ಫೆಬ್ರುವರಿ 22ರಂದು ರಾತ್ರಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದವು. ಹೀಗಿದ್ದರೂ ಸುದ್ದಿ ಮಾಧ್ಯಮಗಳು ಸುದ್ದಿ ಬಿತ್ತರಿಸಿದ ನಂತರವೇ ಮೇಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿದ್ದು ಎಂಬ ಆಕ್ಷೇಪವೂ ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT