ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳಿನ ಪತ್ತೆ ಸುಲಭ!

Last Updated 24 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಎಲ್ಲರಿಗೂ ಗೊತ್ತಿರುವ, ಒಪ್ಪಿಕೊಂಡಿರುವಂಥ ಒಂದು ವಿಷಯವನ್ನು ಮುಂಚೆಯೇ ತಿಳಿಸುವುದು ಒಳ್ಳೆಯದು. ನಾವು, ನೀವು, ಅವರು, ಇವರು, ಅಷ್ಟೇಕೆ ಸರಿಸುಮಾರು ಎಲ್ಲರೂ ಒಂದಿಲ್ಲೊಂದು ಸಂದರ್ಭದಲ್ಲಿ ಸುಳ್ಳು ಹೇಳಿದವರೇ! ಸುಳ್ಳು ಎಲ್ಲ ಕ್ಷೇತ್ರಗಳಲ್ಲಿ ಹರಡಿದೆ ಎನ್ನುವುದೂ ನಿಜವೇ. ವಿಷಯ ಚಿಕ್ಕದಾಗಿರಬಹುದು, ದೊಡ್ಡದಾಗಿರಬಹುದು. ಆದರೆ, ವಿಜ್ಞಾನಿಗಳು ನಾವೇಕೆ ಸುಳ್ಳು ಹೇಳುತ್ತೇವೆ ಎನ್ನುವುದನ್ನು ತಿಳಿಸುತ್ತಾರೆ. ಜೊತೆಗೆ ಇತರರು ಹೇಳುವ ಸುಳ್ಳನ್ನು ಪತ್ತೆ ಹಚ್ಚುವುದು ನಿಜಕ್ಕೂ ಸುಲಭವೆಂದು ವಿವರಿಸುತ್ತಾರೆ. ಇದಕ್ಕೆ ಒಂದಷ್ಟು ಸೂಕ್ಷ್ಮವಾಗಿರಬೇಕು ಜೊತೆಗೆ ಸತತ ಪ್ರಯತ್ನದ ಅಗತ್ಯವಿದೆ ಎನ್ನುವುದು ಅವರ ಅಭಿಪ್ರಾಯ.

ಸುಳ್ಳಿನ ಮಾತು ಕೇಳಿಸಿಕೊಳ್ಳಲು ಕನಿಷ್ಠ ಇನ್ನೊಬ್ಬ ವ್ಯಕ್ತಿ ಇರಬೇಕಾಗುತ್ತದೆ. ಕಾರಣವೇನೆಂದರೆ ಸುಳ್ಳಿಗೆ ತನ್ನದೇ ಆದ ಶಕ್ತಿ ಇರುವುದಿಲ್ಲ. ಅದಕ್ಕೆ ಶಕ್ತಿ ಬರುವುದು ಯಾರಾದರೂ ಅದನ್ನು ನಿಜ ಎಂದು ನಂಬಿದಾಗ. ಇಷ್ಟಕ್ಕೂ ಸುಳ್ಳು ಶಬ್ದದ ರೂಪದಲ್ಲಿಯೇ ಇರಬೇಕೆಂದಿಲ್ಲ. ಇತರ ಅಭಿವ್ಯಕ್ತಿ ಸ್ವರೂಪಗಳೂ ಇದಕ್ಕೆ ಅನ್ವಯಿಸುತ್ತವೆ. ಸಾಮಾನ್ಯವಾಗಿ ಸುಳ್ಳು ಹೇಳುವ ಕಾರಣ ಸ್ವಾರ್ಥಕ್ಕೆ, ಅಹಂಕಾರಕ್ಕೆ, ಪ್ರಭಾವ ಬೀರುವುದಕ್ಕೆ.ಇದರ ಪ್ರಯೋಗ ಆಪ್ತರು ವಿಶ್ವಾಸಿಗಳಿಗಿಂತ ದುಪ್ಪಟ್ಟು ಪ್ರಮಾಣ ಅಪರಿಚಿತರ ಮೇಲೆ ಜರುಗುತ್ತದೆ ಎನ್ನುತ್ತಾರೆ ಸಂಶೋಧಕರು. ಭಾವನಾತ್ಮಕ ನೆಲೆಯಾದರೆ ಕುಟುಂಬದಲ್ಲಂತೂ ಗಂಡ-ಹೆಂಡತಿ, ಅಪ್ಪ-ಅಮ್ಮ ಇತ್ಯಾದಿ ಪರಸ್ಪರರಲ್ಲಿ ಮೆಚ್ಚುಗೆ ಪಡೆಯುವುದಕ್ಕೆ, ಜಾಣ ಎನಿಸಿಕೊಳ್ಳುವುದಕ್ಕೆ ಸುಳ್ಳು ಹೆಚ್ಚು ಬಳಕೆಯಾಗುತ್ತದೆ. ಇದಕ್ಕೆ ಕಾರಣ ತಮಗೆ ಹತ್ತಿರದವರನ್ನು ಪ್ರೀತಿ, ಪ್ರೇಮ, ವಾತ್ಸಲ್ಯ ಮುಂತಾದವುಗಳ ವಿಷಯದಲ್ಲಿ ಭ್ರಾಮಕ ಸ್ಥಿತಿಯಲ್ಲಿಡುವುದಕ್ಕೆ. ಸ್ನೇಹಿತರು ಹಾಗೂ ಸಂಬಂಧಿಗಳ ನಡುವೆ ಪ್ರತಿಷ್ಠೆ, ಗೌರವ ಹೆಚ್ಚಿಸಿಕೊಳ್ಳುವುದಕ್ಕೆ. ಪ್ರಾಪಂಚಿಕ ನೆಲೆಯಲ್ಲಿ ಅಧಿಕಾರ, ಹಣ, ಸ್ಥಾನಮಾನ ಮುಂತಾದವುಗಳಿಗೂ ಅದರ ಬಳಕೆ ಯಥೇಚ್ಛ.

ಇವೆಲ್ಲ ದೊಡ್ಡವರದಾಯಿತು. ಮಕ್ಕಳು ಕೂಡ ಸುಳ್ಳು ಹೇಳುವುದುಂಟು. ಎಳೆಯ ಮಕ್ಕಳು ಸುಮ್ಮಸುಮ್ಮನೆ ಅತ್ತು ತಾಯಿಯ ಗಮನ ಸೆಳೆದರೆ, ಒಂದೂವರೆ/ಎರಡು ವರ್ಷದ ಮಕ್ಕಳು ಅಪೇಕ್ಷೆ ಪೂರೈಸಿಕೊಳ್ಳುವುದಕ್ಕೆ ಉಪಯೋಗಿಸುತ್ತವೆ. ಬೆಳೆದಂತೆಲ್ಲ ಸುಳ್ಳು ಹಬ್ಬುವುದು ಹಲವಾರು ಬಗೆಯಲ್ಲಿ ಎನ್ನುತ್ತಾರೆ ಸಂಶೋಧಕರು.

ರಾಜಕೀಯ ನೆಲೆಯಲ್ಲಿ ಉಪಯೋಗಿಸುವುದು ವಿಸ್ತಾರ ಮಟ್ಟದ್ದು ಮತ್ತು ಹೆಚ್ಚಿನ ಪ್ರಭಾವ ಬೀರುವಂಥದ್ದು.ಉದಾಹರಣೆಗೆ ಎರಡನೆ ಮಹಾಯುದ್ಧದ ಕಾಲದಲ್ಲಿ ಇಡೀ ಪ್ರಪಂಚವನ್ನು ಆಳಲು ಬಯಸಿದ್ದ ಜರ್ಮನಿಯ ಅಡಾಲ್ಫ್ ಹಿಟ್ಲರ್ ಒಂದೇ ಸುಳ್ಳನ್ನು ಹಲವಾರು ಬಾರಿ ಹೇಳಿದರೆ ನಿಜವೆನಿಸಿಕೊಳ್ಳುತ್ತದೆ ಎಂದು ಹೇಳಿದ್ದನ್ನೇ ಎಲ್ಲ ರಾಜಕಾರಣಿಗಳೂ ಈಗಲೂ ತಪ್ಪದೇ ಅನುಸರಿಸುತ್ತಿದ್ದಾರೆ. ಸುಳ್ಳು ಕ್ರೀಡಾ ಕ್ಷೇತ್ರವನ್ನೂ ಬಿಟ್ಟಿಲ್ಲ. ರಷ್ಯಾದ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ಮತ್ತು ಭಾರತದ ಶಾಟ್‌ಪಟ್ ಆಟಗಾರ್ತಿ ಮನ್‌ಪ್ರೀತ್ ಕೌರ್ ಇತ್ತೀಚಿನವರು. ಅಷ್ಟೇಕೆ ಮಹಾಭಾರತದಲ್ಲಿ ದ್ರೋಣಾಚಾರ್ಯರಿಗೆ ಅಶ್ವತ್ಥಾಮ ಹತನಾದನೆಂಬ ಸುಳ್ಳುಸಂದೇಶ ರವಾನಿಸಿ ದೃಷ್ಟದ್ಯುಮ್ನನಿಂದ ಅವರ ಸಂಹಾರಕ್ಕೆ ಕೃಷ್ಣ ಯೋಜನೆ ರೂಪಿಸಲಿಲ್ಲವೇ? ಹೀಗೆ ಇತರ ಕ್ಷೇತ್ರಗಳಲ್ಲಿ ಕೂಡ ಸುಳ್ಳು ಹಬ್ಬಿರುವುದುಂಟು.ಆದರೆ ಧಾರ್ಮಿಕ ಕ್ಷೇತ್ರದಲ್ಲಿ ಇದರ ಗುರಿ ಜನರ ನಂಬಿಕೆ ಹಾಗೂ ಭಾವನೆಗಳ ಮೇಲೆ. ಅದು ಜನಸಮುದಾಯದವರ ಬದುಕಿನ ಮೇಲೆ ತೀವ್ರ ಪ್ರಭಾವ ಬೀರುವಂಥದ್ದು.

ಸುಳ್ಳಿನಿಂದ ಒಳ್ಳೆಯದಾಗುವುದಕ್ಕೂ ಸಾಧ್ಯವಿದೆ. ಇದಕ್ಕಾಗಿಯೇ ಸುಳ್ಳು ಹೇಳಿಯಾದರೂ ಪ್ರಾಣ ಉಳಿಸುವುದನ್ನು ಮಾನವೀಯತೆ ಎನ್ನುವುದು. ತನ್ನನ್ನು ಬಿಟ್ಟು ಇತರರಿಗೆ ಉಪಯೋಗವಾಗುವ ಸುಳ್ಳಿಗೆ ಸಂಪೂರ್ಣ ಮಾಫಿ ಇದೆಯಲ್ಲವೇ?! ಪ್ರದರ್ಶಕ ಮಾಧ್ಯಮದಲ್ಲಿಯೂ ಸುಳ್ಳು ಪ್ರಸ್ತಾಪಿಸಲ್ಪಟ್ಟಿದೆ. ಯಜಮಾನನಿಗೆ ಸುಳ್ಳು ಹೇಳಿ ನೂರಾರು ಯಹೂದಿಗಳನ್ನು ಎರಡನೆ ಮಹಾಯುದ್ಧದ ಕಾಲದಲ್ಲಿ ರಕ್ಷಿಸಿದ್ದನ್ನು ಸ್ಪೀಲ್‌ಬರ್ಗ್ ‘ಶಿಂಡ್ಲರ್ ಲಿಸ್ಟಿ’ ಸಿನಿಮಾದಲ್ಲಿ ನಿರೂಪಿಸಿದ್ದಾರೆ. ನಾಟಕ ಕ್ಷೇತ್ರದಲ್ಲಿ ಫ್ರಾನ್ಸ್‌ನ ಪೆರ್ರಿ ಕಾರ‍್ನೀಲ್‌ನ ಪ್ರಖ್ಯಾತ ‘ದ ಲೈಯರ್ ಹಾಗೂ ನಮ್ಮವರೇ ಆದ ಸುಬ್ಬನರಸಿಂಹರ ‘ಸಮಯಕ್ಕೊಂದು ಸುಳ್ಳು’ ಮುಂತಾದ ಹಾಸ್ಯ ಪ್ರಧಾನ ಕೃತಿಗಳಿವೆ.

ಇನ್ನು ಸುಳ್ಳಿನ ಪತ್ತೆ ಹೇಗೆಂದು ತಿಳಿಯಬೇಕಲ್ಲವೇ? ಉದಾಹರಣೆಗಾಗಿ ಅಕ್ರಮ ಸಂಬಂಧ ಹೊಂದಿದ ಆರೋಪಕ್ಕೆ ಗುರಿಯಾದವನೊಬ್ಬನನ್ನು ನೋಡೋಣ. ಸರ್ವೇ ಸಾಮಾನ್ಯವಾಗಿ ಅವನು ಆ ಹೆಣ್ಣಿನ ಹೆಸರನ್ನೇ ಹೇಳುವುದಿಲ್ಲ. ಸತ್ಯವನ್ನೇ ಹೇಳುತ್ತಿದ್ದೇನೆ ಇದು ಸುಳ್ಳು ಆರೋಪ. ನಾನು ಮತ್ತೆ ಮತ್ತೆ ಹೇಳುತ್ತೇನೆ ಅವಳು ಯಾರು ಗೊತ್ತೇ ಇಲ್ಲವೆಂದು ಹೇಳುತ್ತಾನೆ. ಅವನುಹೇಳುವಾಗ ‘ಮತ್ತೆ, ಮತ್ತೆ ಹಾಗೂ ‘ಸತ್ಯಪದಗಳಿಗೆ ಹೆಚ್ಚು ಒತ್ತು ಕೊಡುತ್ತಾನೆ. ಇಂಥದ್ದರಲ್ಲಿ ಹೇಳುವಾತನ ದೇಹಭಾಷೆಯನ್ನು ಗಮನಿಸಬೇಕೆನ್ನತ್ತಾರೆ ಸಂಶೋಧಕರು. ಕುತೂಹಲದ ವಿಷಯವೆಂದರೆ ಇದಕ್ಕೆ ವಿಜ್ಞಾನ ತಳುಕು ಹಾಕಿಕೊಂಡಿದೆ. ಅದೇನೆಂದರೆ ನಾವು ಸಾಮಾನ್ಯವಾಗಿ ಸುಳ್ಳರು ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ, ಕೊಂಚ ನಸುನಗುತ್ತಲೇ ಮಾತನಾಡುತ್ತಾರೆ ಎಂದು ಭಾವಿಸಿರುವುದಕ್ಕೆ ವ್ಯತಿರಿಕ್ತವಾಗಿ ಸುಳ್ಳರು ಮಾಮೂಲಿಗಿಂತ ಹೆಚ್ಚು ಕ್ಷಣ ದಿಟ್ಟಿಸಿ ನೋಡುತ್ತಾರೆ, ವಿನಾಕಾರಣ ರೆಪ್ಪೆ ಮಿಟುಕಿಸುತ್ತಾರೆ ಮತ್ತು ಆಗಾಗ್ಗೆ ತುಟಿ ಬಿಗಿ ಹಿಡಿದು ನಸುನಗುತ್ತಾರೆ. ಇದನ್ನು ಸುಲಭವಾಗಿ ಗಮನಿಸಿ ಪತ್ತೆ ಹಚ್ಚಬಹುದು. ಜೊತೆಗೆ ಅಂಥವರ ಮುಖದ ಸ್ನಾಯುಗಳು ಸ್ವಲ್ಪ ಗಡುಸಾಗುತ್ತವೆ. ಇದನ್ನು ಅವರು ಪ್ರಯತ್ನಪಟ್ಟು ತಡೆಯಬಹುದಾದರೂ ಕಣ್ಣಿನ ಮೇಲೆ ನಿಯಂತ್ರಣ ಸಾಧ್ಯವಿಲ್ಲ. ಸಹಜ ನಗುವಿನ ಹೊಳಪನ್ನು ಅಲ್ಲಿ ಕಾಪಿ ಮಾಡಲಾಗುವುದಿಲ್ಲ. ಎಲ್ಲ ಬಟಾಬಯಲಾಗುತ್ತದೆ ಎಂದು ತಿಳಿಸುತ್ತಾರೆ.

ಪ್ರಾಮಾಣಿಕ ವ್ಯಕ್ತಿಯ ಮಾತುಗಳಲ್ಲಿ ಸಹಜ ಲಯಕ್ಕೆ ಪೂರಕವಾಗಿ ಉತ್ಸಾಹದ ಲೇಪವಿರುತ್ತದೆ. ಜೊತೆಗೆ ಸತ್ಯದ ಕಡೆ ಕರೆದೊಯ್ಯುವ ಸಹಕಾರ ಪ್ರವೃತ್ತಿ ಇರುತ್ತದೆ. ಆದರೆ ಸುಳ್ಳರ ಮಾತುಗಳಿಗೆ ಸಹಜವಾದ ಲಯವಿರುವುದಿಲ್ಲ. ಅಲ್ಲಲ್ಲಿ ಪದಗಳಿಗೆ ಅನಗತ್ಯ ಒತ್ತುಗಳಿದ್ದು ಗಮನ ಸೆಳೆಯುವ ಪ್ರಯತ್ನವಿರುತ್ತದೆ. ಅತಿಯಾದ ವೇಗ ಇಲ್ಲವೆ ಅತಿ ನಿಧಾನ ಗತಿಯಲ್ಲಿದ್ದು ಅನಗತ್ಯ ವಿವರಣೆಯಿಂದ ಕೂಡಿರುತ್ತದೆ. ಅವರು ಪ್ರಜ್ಞಾಪೂರ್ವಕವಾಗಿ ಹಾಗೆ ಮಾಡುವುದರಿಂದ ಹೇಳಿದ ವಿವರಗಳನ್ನು ಹಿಂದುಮುಂದಾಗಿ ಹೇಳುವಂತೆ ಮಾಡಿದರೆ ಎಲ್ಲವೂ ಬಯಲಾಗುತ್ತದೆ. ಈ ಪರೀಕ್ಷೆಯಲ್ಲಿ ವಿವರಗಳು, ಸಮಯ, ಸ್ಥಳ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಏರುಪೇರಾಗುತ್ತವೆ. ಪದಗಳು ಮಿಶ್ರಣಗೊಂಡು ಗಲಿಬಿಲಿಯಾಗುತ್ತದೆ. ಜೊತೆಗೆ ಮಾತುಗಳ ದೃಢತೆ ಇರುವುದಿಲ್ಲ. ಸಾಧ್ಯವಾದಷ್ಟೂ ವಿಷಯ ಬದಲಾವಣೆಗೆ ಪ್ರಯತ್ನಿಸುತ್ತಾರೆ. ಇವುಗಳಿಗೆ ಅಡಿಪಾಯವೆನ್ನುವ ಹಾಗೆ ತಮ್ಮದೇ ರೀತಿಯಲ್ಲಿ ಸಿಟ್ಟು, ಅಸೂಯೆ, ಕೀಳರಿಮೆ ಮುಂತಾದವು ಮುಖ ಚಹರೆ ಹಾಗೂ ವರ್ತನೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಪ್ರಾಮಾಣಿಕ ವ್ಯಕ್ತಿಗಳ ನಿಜದ ನಿರೂಪಣೆಯಲ್ಲಿ ಈ ಗೊಂದಲ ಉಂಟಾಗುವುದಿಲ್ಲ. ಎಲ್ಲ ನೇರ ಹಾಗೂ ಸ್ಪಷ್ಟವಾಗಿರುತ್ತದೆ ಎನ್ನುತ್ತಾರೆ.

ಇವು ಮಾತಿಗೆ ಸಂಬಂಧಿಸಿದ್ದಾದರೆ ಸುಳ್ಳರನ್ನು ಅವರ ವರ್ತನೆಯಲ್ಲಿ ಪತ್ತೆ ಹಚ್ಚಲು ಸಾಧ್ಯವೆನ್ನುತ್ತಾರೆ ಸಂಶೋಧಕರು. ಅವರ ವರ್ತನೆಗಳಲ್ಲಿ ಹಲವಾರು ವಿಧಗಳಿವೆ. ಅವರಿಗೆ ತಾವು ಮಾಡುತ್ತಿರುವುದರ ಬಗ್ಗೆ ಸುತಾರಾಂ ಪ್ರಜ್ಞೆ ಇರುವುದಿಲ್ಲ. ಜೊತೆಗೆ ಬೇರೆಯವರಿಗೂ ಅದರ ಬಗ್ಗೆ ಕಿಂಚಿತ್ ಗಮನವಿಲ್ಲವೆಂದೇ ಭಾವಿಸಿರುತ್ತಾರೆ. ಸಾಮಾನ್ಯವಾಗಿ ಅವರು ಮಾತುಗಳಿಗೆ ಹೊಂದಿಕೆಯಾಗದ ಹಾಗೆ ಭುಜ ಕುಣಿಸುತ್ತಾರೆ. ಇದೊಂದು ಬಗೆಯಾದರೆ ಭುಜಗಳನ್ನು ಕುಗ್ಗಿಸುವುದೂ ಅಷ್ಟೇ ಸಾಮಾನ್ಯ. ಕೆಲವರು ಕೈಗಳನ್ನು ಜೇಬಿಗೆ ಸೇರಿಸಿ ವಿಚಿತ್ರವೆನಿಸುತ್ತಾರೆ.ಮಾತಿನ ನಡುವೆ ಮೂಗಿನ ಹೊಳ್ಳೆಗೆ ಬೇಕೆಂದೇ ಬೆರಳು ತೂರಿಸುತ್ತಾರೆ. ಇನ್ನೂ ಕೆಲವರು ಸಾಧ್ಯವಾದಷ್ಟು ಮುಖ ಮರೆಮಾಚಲು ಅನಗತ್ಯವಾಗಿಅಂಗೈ ಅಡ್ಡವಾಗಿಸಿ ಸರಿಯಾಗಿರುವ ತಲೆಗೂದಲನ್ನೇ ಸರಿಪಡಿಸಿಕೊಳ್ಳುತ್ತಾರೆ. ಇನ್ನಷ್ಟು ಜನರು ಮುಖ ಕೆಳಗೆ ಮಾಡಿ ತಲೆಯನ್ನು ಪಕ್ಕಕ್ಕೆ ತಿರುಗಿಸುತ್ತಾರೆ. ಕೊಲೆಗಡುಕರು ಮತ್ತು ಇತರ ಭೀಕರ ಕೃತ್ಯಗಳನ್ನು ಮಾಡಿದವರು ಮೊಟ್ಟ ಮೊದಲಿಗೆ ತಾವು ನೂರಕ್ಕೆ ನೂರು ನಿರ್ದೋಷಿಗಳೆಂದು ತೋರಿಸಿಕೊಳ್ಳುವುದಕ್ಕೆ ಅಳತೆ ಮೀರಿ ಕೊಲೆಯಾದವರ ಬಗ್ಗೆ ವಿಷಾದ ಮತ್ತು ಅದಕ್ಕೆ ಪೂರಕವಾದ ಮುಖ ಚಹರೆಯನ್ನು ರೂಢಿಸಿಕೊಂಡಿರುವುದುಂಟು ಎನ್ನುವುದು ವಿಜ್ಞಾನಿಗಳ ಅಭಿಮತ. ಅಂಥವರು ಹೇಳುವ ಸುಳ್ಳಿನ ಪತ್ತೆಗೆಂದೇ ‘ಲೈ ಡಿಟೆಕ್ಟರ್’ ಮುಂತಾದ ಸಾಧನಗಳನ್ನು ಬಳಸುವುದು.

ಇವೆಲ್ಲ ವಿವಿಧ ಮಟ್ಟದಲ್ಲಿ ಸುಳ್ಳರು ನಡೆದುಕೊಳ್ಳುವ ರೀತಿಗೆ ಉದಾಹರಣೆಗಳಾಯಿತು. ಆದರೆ ಇತ್ತೀಚೆಗೆ ಗುರುತಿಸಲಾಗಿರುವಂತೆ ಕೇವಲ ಕಾಲಹರಣ ಮತ್ತು ವಿಚಿತ್ರ ಸಂತೋಷಕ್ಕಾಗಿ ಸುಳ್ಳು ಬಳಸುವರು ಅಸಂಖ್ಯ ಎನ್ನಲಾಗಿದೆ. ಇಂಥವರ ಪತ್ತೆಗೆ ಬೇರೆ ಸಾಧನ, ಸೂಚನೆಗಳೇ ಬೇಕಾಗಬಹುದು. ಆದರೆ ಈ ಅಭ್ಯಾಸದಲ್ಲಿ ತೊಡಗಿದವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ದೃಶ್ಯಮಾಧ್ಯಮದಲ್ಲಿ ಹೆಚ್ಚು ಕಾಣಬಹುದು ಎಂದು ಬೆಳಕಿಗೆ ಬಂದಿರುವ ಸಂಗತಿ ವಿಷಾದನೀಯ. ಸುಳ್ಳು ವ್ಯವಹಾರ ಮಾಡುವನನ್ನು ಪೊನ್ಜಿ ಸ್ಕೀಮಿನವನು ಎಂದು ಇದಕ್ಕಾಗಿ ಹೆಸರಾಗಿದ್ದ ಅಮೆರಿಕದ ಚಾರ್ಲ್ಸ್ ಪೆನ್ಜಿಯ ಹೆಸರಿನಲ್ಲಿ ಕರೆಯುತ್ತಾರೆ. ಕುತೂಹಲವೆಂದರೆ ‘ಪ್ರಪಂಚದ ಅತಿದೊಡ್ಡ ಸುಳ್ಳ ಎನ್ನುವ ಅಂತರರಾಷ್ಟ್ರೀಯ ಸ್ಪರ್ಧೆ ಇಂಗ್ಲೆಂಡಿನ ಸಾಂತಾಬ್ರಿಡ್ಜ್‌ನಲ್ಲಿ ಪ್ರತಿವರ್ಷ ಪ್ರಶಸ್ತಿ ವಿತರಣೆಯೂ ಸೇರಿದಂತೆ ಜರುಗುತ್ತದೆ!

ಇತ್ತೀಚೆಗೆ ತಾಂತ್ರಿಕ ಪ್ರಗತಿ ಎಷ್ಟು ಸಾಧಿಸಿದೆಯೆಂದರೆ ವ್ಯಕ್ತಿಯ ಅಗತ್ಯ ಭಾಗಗಳ ಎಂ.ಆರ್.ಐ ತೆಗೆದು ಪರಿಶೋಧನೆಗೆ ಗುರಿಪಡಿಸುತ್ತಾರೆ. ಇದಲ್ಲದೆ ವಿಶೇಷ ಕಿರಣಗಳ ಮೂಲಕ ಕಣ್ಣಿನ ಗುಡ್ಡೆಯ ಚಲನೆಯನ್ನು ಪರೀಕ್ಷಿಸುತ್ತಾರೆ. ಆದರೆ ಸುಳ್ಳು ಹೇಳಲೇಬೇಕು ಎನ್ನುವವರ ಸಂಕಲ್ಪಶಕ್ತಿಯನ್ನು ತಡೆಯುವುದು ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT