ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ 1ರಿಂದ ‘ಇ–ವೇ ಬಿಲ್‌’

Last Updated 25 ಫೆಬ್ರುವರಿ 2018, 16:13 IST
ಅಕ್ಷರ ಗಾತ್ರ

ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ಅಂತರರಾಜ್ಯ ಸರಕುಗಳ ಸುಗಮ ಸಾಗಾಣಿಕೆಗೆ ಅನುವು ಮಾಡಿಕೊಡುವ ಇ–ವೇ ಬಿಲ್‌ ವ್ಯವಸ್ಥೆಯು ಏಪ್ರಿಲ್‌ 1 ರಿಂದ ದೇಶದಾದ್ಯಂತದಿಂದ ಜಾರಿಗೆ ಬರಲಿದೆ.

‘ರಾಜ್ಯ ಹಣಕಾಸು ಸಚಿವರ ತಂಡವು ಶನಿವಾರ ಈ ಶಿಫಾರಸು ಮಾಡಿದೆ. ₹ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸರಕಿನ ಅಂತರರಾಜ್ಯ ಸಾಗಣೆಯನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು’ ಎಂದು ಈ ಸಚಿವರ ತಂಡದ ಅಧ್ಯಕ್ಷರಾಗಿರುವ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಹೇಳಿದ್ದಾರೆ.

‘ಸಚಿವರ ತಂಡದ ಈ ಶಿಫಾರಸನ್ನು ಮಾರ್ಚ್‌ 10ರಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯು ಅಂಗೀಕರಿಸಲಿದೆ’ ಎಂದು ಮೋದಿ ಹೇಳಿದ್ದಾರೆ. ತೆರಿಗೆ ತಪ್ಪಿಸುವುದನ್ನು ತಡೆಗಟ್ಟಲಿರುವ ಇ–ವೇ ಬಿಲ್‌ ವ್ಯವಸ್ಥೆಯಿಂದ ವರಮಾನ ಕೂಡ ಶೇ 15 ರಿಂದ ಶೇ 20ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

‘ಇ–ವೇ ಬಿಲ್‌’ ಪಡೆದ ಸರಕು ಸಾಗಿಸುವವರು ಮತ್ತು ತೆರಿಗೆದಾರರು ಯಾವುದೇ ತೆರಿಗೆ ಕಚೇರಿಗೆ ಅಥವಾ ಚೆಕ್‌ಪೋಸ್ಟ್‌ಗೆ ಭೇಟಿ ನೀಡುವ ಅಗತ್ಯ ಇರುವುದಿಲ್ಲ. ಇ–ವೇ ಬಿಲ್‌ ವಿದ್ಯುನ್ಮಾನ ರೂಪದಲ್ಲಿ ಇರಲಿದೆ.

ಏನಿದು ವ್ಯವಸ್ಥೆ?: ಜಿಎಸ್‌ಟಿ ವ್ಯವಸ್ಥೆಯಲ್ಲಿ, ಸರಕುಗಳನ್ನು ರಾಜ್ಯದ ಒಳಗೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಸಾಗಿಸಲು ಇ–ವೇ ಬಿಲ್ ವ್ಯವಸ್ಥೆ ರೂಪಿಸಲಾಗಿದೆ. ₹ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸರಕುಗಳನ್ನು 10 ಕಿ.ಮೀ ಆಚೆಗೆ ಸಾಗಿಸುವ ಮುಂಚೆಯೇ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸುವುದು (ಇ–ವೇ ಬಿಲ್‌ ಪಡೆಯುವುದು) ಕಡ್ಡಾಯವಾಗಿರಲಿದೆ. ಸರಕು ಸಾಗಿಸುವ ದೂರ ಆಧರಿಸಿ 1ರಿಂದ 20 ದಿನಗಳವರೆಗೆ ಸಿಂಧುತ್ವ ಹೊಂದಿರುವ ಇ–ವೇ ಬಿಲ್‌ಗಳನ್ನು ಜಿಎಸ್‌ಟಿಎನ್‌ ವಿತರಿಸಲಿದೆ.

ಸರಕುಗಳನ್ನು ಸಾಗಿಸುವವರು ತಮ್ಮ ಜತೆ ಸರಕುಪಟ್ಟಿ ಪೂರೈಕೆ ಬಿಲ್‌ ಅಥವಾ ಇ–ವೇ ಬಿಲ್‌ ಹೊಂದಿರಬೇಕು. ತೆರಿಗೆ ಅಧಿಕಾರಿಗಳು ಮಾರ್ಗಮಧ್ಯೆ ತಪಾಸಣೆ ನಡೆಸುವ ಅಧಿಕಾರ ಹೊಂದಿರುತ್ತಾರೆ.

ಅಂತರ್‌ ರಾಜ್ಯ ಸರಕುಗಳ ಸಾಗಾಣಿಕೆ ಮೇಲೆ ನಿಗಾ ಇಡಲು ನೆರವಾಗಲಿದೆ. ತೆರಿಗೆ ತಪ್ಪಿಸುವ ಪ್ರವೃತ್ತಿಗೂ ಕಡಿವಾಣ ಹಾಕಲು ಇದರಿಂದ ಸಾಧ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT